ಪುನೀತ್​ ಸಾವಿನಲ್ಲೂ ಲಾಭ ಮಾಡಲು ಪ್ರಯತ್ನಿಸಿದ್ರಾ ರಜನಿಕಾಂತ್​? ಸಿಟ್ಟಾದ ಜನರಿಂದ ಕಟು ಟೀಕೆ

| Updated By: ಮದನ್​ ಕುಮಾರ್​

Updated on: Nov 11, 2021 | 8:29 AM

Rajinikanth: ತಮ್ಮ ಪುತ್ರಿಯ ಹೊಸ ಆ್ಯಪ್​ ಅನ್ನು ಪ್ರಮೋಟ್​ ಮಾಡುವ ಸಲುವಾಗಿ ಅದರಲ್ಲೇ ಪುನೀತ್ ರಾಜ್​ಕುಮಾರ್​​ಗೆ ರಜನಿಕಾಂತ್​ ಶ್ರದ್ಧಾಂಜಲಿ ಅರ್ಪಿಸಿದ್ದಾರೆ. ಇದನ್ನು ನೆಟ್ಟಿಗರು ತೀವ್ರವಾಗಿ ವಿರೋಧಿಸಿದ್ದಾರೆ.

ಪುನೀತ್​ ಸಾವಿನಲ್ಲೂ ಲಾಭ ಮಾಡಲು ಪ್ರಯತ್ನಿಸಿದ್ರಾ ರಜನಿಕಾಂತ್​? ಸಿಟ್ಟಾದ ಜನರಿಂದ ಕಟು ಟೀಕೆ
ರಜನಿಕಾಂತ್​, ಪುನೀತ್​ ರಾಜ್​ಕುಮಾರ್​
Follow us on

ಡಾ. ರಾಜ್​ಕುಮಾರ್​ (Dr. Rajkumar) ಕುಟುಂಬದ ಜೊತೆಗೆ ನಟ ರಜನಿಕಾಂತ್​ (Rajinikanth) ಅವರಿಗೆ ಇರುವ ಬಾಂಧವ್ಯ ಎಂಥದ್ದು ಎಂಬುದನ್ನು ಹೊಸದಾಗಿ ಹೇಳಬೇಕಾದ್ದಿಲ್ಲ. ಬಹುಕಾಲದಿಂದಲೂ ಅಣ್ಣಾವ್ರ ಫ್ಯಾಮಿಲಿ ಜೊತೆ ತಲೈವಾ ಅತ್ಮೀಯವಾಗಿದ್ದಾರೆ. ಆದರೆ ಈಗ ಪುನೀತ್​ ರಾಜ್​ಕುಮಾರ್​ (Puneeth Rajkumar) ಅಭಿಮಾನಿಗಳು ರಜನಿಕಾಂತ್​ ವಿರುದ್ಧ ತಿರುಗಿ ಬಿದ್ದಿದ್ದಾರೆ. ಹೃದಯಾಘಾತದಿಂದ ನಿಧನರಾದ ಪುನೀತ್​ಗೆ ಸಂತಾಪ ಸೂಚಿಸುವ ಭರದಲ್ಲಿ ರಜನಿ ಒಂದು ಎಡವಟ್ಟು ಮಾಡಿದ್ದಾರೆ. ಅದು ನೆಟ್ಟಿಗರಿಗೆ ಕಿಂಚಿತ್ತೂ ಹಿಡಿಸಿಲ್ಲ. ಹಾಗಾಗಿ ಸೋಶಿಯಲ್​ ಮೀಡಿಯಾದಲ್ಲಿ ಹಿಗ್ಗಾಮುಗ್ಗಾ ಕ್ಲಾಸ್​ ತೆಗೆದುಕೊಳ್ಳಲಾಗುತ್ತಿದೆ. ಇಷ್ಟೆಲ್ಲಾ ವಿವಾದಕ್ಕೆ ಕಾರಣ ಆಗಿರುವುದು ರಜನಿಕಾಂತ್​ ಪುತ್ರಿ ಸೌಂದರ್ಯಾ ಅವರ Hoote ಆ್ಯಪ್​!

ಪುನೀತ್​ ರಾಜ್​ಕುಮಾರ್​ ಇಹಲೋಕ ತ್ಯಜಿಸಿದ ಸಂದರ್ಭದಲ್ಲಿ ರಜನಿಕಾಂತ್​ ಅವರು ಚೆನ್ನೈನ ಕಾವೇರಿ ಆಸ್ಪತ್ರೆಯಲ್ಲಿ ಶಸ್ತ್ರ ಚಿಕಿತ್ಸೆಗೆ ಒಳಗಾಗಿದ್ದರು. ಹಾಗಾಗಿ ಅವರು ಬೆಂಗಳೂರಿಗೆ ಬರಲು ಸಾಧ್ಯವಾಗಿರಲಿಲ್ಲ. ಈಗ ಅವರು ಚೇತರಿಸಿಕೊಂಡಿದ್ದು, ಪುನೀತ್​ ನಿಧನಕ್ಕೆ ಸಂತಾಪ ಸೂಚಿಸಿದ್ದಾರೆ. ಆದರೆ ಅದಕ್ಕಾಗಿ ಅವರು ಆಯ್ಕೆ ಮಾಡಿಕೊಂಡಿರುವುದು ಪುತ್ರಿಯ Hoote ಆ್ಯಪ್. ಮಗಳ ಆ್ಯಪ್​ ಪ್ರಮೋಟ್​ ಮಾಡುವ ಸಲುವಾಗಿ ಅದರಲ್ಲೇ ಪುನೀತ್​ಗೆ ರಜನಿಕಾಂತ್​ ಶ್ರದ್ಧಾಂಜಲಿ ಅರ್ಪಿಸಿರುವುದನ್ನು ನೆಟ್ಟಿಗರು ವಿರೋಧಿಸಿದ್ದಾರೆ. ‘ನಿಮ್ಮಂಥ ದಿಗ್ಗಜ ನಟರಿಂದ ಇದನ್ನು ನಾವು ನಿರೀಕ್ಷಿಸಿರಲಿಲ್ಲ’ ಎಂದು ಜನರು ನೇರವಾಗಿ ಟೀಕಿಸಿದ್ದಾರೆ.

ರಜನಿಕಾಂತ್​ ಅವರಿಗೆ ದಾದಾಸಾಹೇಬ್​ ಫಾಲ್ಕೆ ಪ್ರಶಸ್ತಿ ಪ್ರದಾನ ಮಾಡಲಾದ ದಿನವೇ Hoote ಆ್ಯಪ್ ಲಾಂಚ್​ ಆಗಿತ್ತು. ಇದೊಂದು ವಾಯ್ಸ್​ ಬೇಸ್ಡ್​ ಸೋಶಿಯಲ್​ ಮೀಡಿಯಾ ಆ್ಯಪ್​ ಆಗಿದ್ದು, ಧ್ವನಿ ಮೂಲಕ ನಮ್ಮ ಆಲೋಚನೆಗಳನ್ನು ಹಂಚಿಕೊಳ್ಳಬಹುದು. ಇದರ ಮೂಲಕವೇ ಪುನೀತ್​ಗೆ ರಜನಿಕಾಂತ್​ ಶ್ರದ್ಧಾಂಜಲಿ ಅರ್ಪಿಸಿ, ಅದರ ಲಿಂಕ್​ ಅನ್ನು ಟ್ವಿಟರ್​ನಲ್ಲಿ ಶೇರ್​ ಮಾಡಿಕೊಂಡಿದ್ದಾರೆ.

‘ಪುನೀತ್​ ನನ್ನ ಕಣ್ಣಮುಂದೆ ಬೆಳೆದ ಪ್ರೀತಿಪಾತ್ರ ಮತ್ತು ಪ್ರತಿಭಾವಂತ ಮಗು. ಯಶಸ್ಸಿನ ಉತ್ತುಂಗದಲ್ಲಿ ಇರುವಾಗಲೇ ನಮ್ಮನ್ನು ಅವರು ಅಗಲಿದರು. ಕನ್ನಡ ಚಿತ್ರರಂಗಕ್ಕೆ ಇದು ತುಂಬಲಾರದ ನಷ್ಟ. ಅವರ ಕುಟುಂಬಕ್ಕೆ ಸಾಂತ್ವನ ಹೇಳಲು ಮಾತುಗಳೇ ಬರುತ್ತಿಲ್ಲ. ಪುನೀತ್​ ಆತ್ಮಕ್ಕೆ ಶಾಂತಿ ಸಿಗಲಿ’ ಎಂದು ರಜನಿಕಾಂತ್​ ಹೇಳಿದ್ದಾರೆ. ಆದರೆ ಇದಕ್ಕಾಗಿ ಅವರು ಬೇರೆಲ್ಲಾ ಸೋಶಿಯಲ್​ ಮೀಡಿಯಾ ಬಿಟ್ಟು, ಪುತ್ರಿಯ Hoote ಆ್ಯಪ್​ ಬಳಸಿರುವುದು ಸ್ವಾರ್ಥ ಮತ್ತು ಲಾಭದ ಉದ್ದೇಶದಿಂದ ಎಂದು ಜನರು ಟೀಕಿಸುತ್ತಿದ್ದಾರೆ.

ಪುನೀತ್​ ನಿಧನದ ಬಳಿಕ ಕೆಲವು ಡೈಯಾಗ್ನಾಸ್ಟಿಕ್​ ಕೇಂದ್ರಗಳು ಕೂಡ ಇದೇ ರೀತಿ ಲಾಭ ಪಡೆಯಲು ಪ್ರಯತ್ನಿಸಿದ್ದವು. ಬ್ಯಾನರ್​ ಮೂಲಕ ಪುನೀತ್​ ರಾಜ್​ಕುಮಾರ್​ಗೆ ಶ್ರದ್ಧಾಂಜಲಿ ಅರ್ಪಿಸಿ, ಅದೇ ಬ್ಯಾನರ್​ನಲ್ಲಿ ತಮ್ಮ ಡೈಯಾಗ್ನಾಸ್ಟಿಕ್​ ಕೇಂದ್ರದಲ್ಲಿ ಹೃದಯಕ್ಕೆ ಸಂಬಂಧಿಸಿದ ಪರೀಕ್ಷೆಗಳಿಗೆ ಎಷ್ಟೆಷ್ಟು ದರ ಇದೆ ಎಂಬ ಜಾಹೀರಾತನ್ನು ಪ್ರಕಟಿಸಿದ್ದರು. ಅದು ಕೂಡ ಜನರ ಆಕ್ರೋಶಕ್ಕೆ ಕಾರಣ ಆಗಿತ್ತು.

ಇದನ್ನೂ ಓದಿ:

Rajinikanth: ರಜನಿಕಾಂತ್​ಗೆ ಹೃದಯದ ಸಮಸ್ಯೆ; ಆಸ್ಪತ್ರೆಗೆ ದಾಖಲಾಗಿರುವ ತಲೈವಾ ಆರೋಗ್ಯ ಸ್ಥಿತಿ ಈಗ ಹೇಗಿದೆ?

‘ಅಪ್ಪು ಸರ್​ ವಿಚಾರದಲ್ಲಿ ಮರಣ ಎಂಬ ಪದ ಬಳಸೋಕೆ ನಾನು ಇಷ್ಟಪಡಲ್ಲ’: ರಚಿತಾ ರಾಮ್​​

Published On - 7:51 am, Thu, 11 November 21