ಮೈಸೂರಿನಲ್ಲಿ ರಜನೀಕಾಂತ್, ಅಣ್ಣಾವ್ರ ಹಿಟ್ ಸಿನಿಮಾ ಚಿತ್ರೀಕರಿಸಿದ ಸ್ಥಳದಲ್ಲೇ ಚಿತ್ರೀಕರಣ

Rajinikanth: ರಜನೀಕಾಂತ್​ ಬೆಂಗಳೂರಿಗೆ ಆಗಾಗ್ಗೆ ಬರುತ್ತಲೇ ಇರುತ್ತಾರೆ. ಇಲ್ಲಿ ಅವರ ಆತ್ಮೀಯ ಗೆಳೆಯರಿದ್ದಾರೆ. ಇದೀಗ ರಜನೀಕಾಂತ್ ಮೈಸೂರಿಗೆ ಬಂದಿದ್ದಾರೆ. ಮೈಸೂರಿಗೆ ಬಂದಿರುವುದು ಸಿನಿಮಾ ಚಿತ್ರೀಕರಣಕ್ಕಾಗಿ. ಮೈಸೂರಿನ ಬಳಿ ಹುಲ್ಲೇನಹಳ್ಳಿಯಲ್ಲಿ ಸಿನಿಮಾದ ಚಿತ್ರೀಕರಣದಲ್ಲಿ ಭಾಗಿ ಆಗಿದ್ದಾರೆ. ವಿಶೇಷವೆಂದರೆ ಅಣ್ಣಾವ್ರ ಸೂಪರ್ ಹಿಟ್ ಸಿನಿಮಾದ ಚಿತ್ರೀಕರಣವೂ ಇದೇ ಸ್ಥಳದಲ್ಲಿ ಆಗಿತ್ತು.

ಮೈಸೂರಿನಲ್ಲಿ ರಜನೀಕಾಂತ್, ಅಣ್ಣಾವ್ರ ಹಿಟ್ ಸಿನಿಮಾ ಚಿತ್ರೀಕರಿಸಿದ ಸ್ಥಳದಲ್ಲೇ ಚಿತ್ರೀಕರಣ
Jailer

Updated on: Jun 20, 2025 | 4:01 PM

ನಟ ರಜನೀಕಾಂತ್​ಗೂ (Rajinikanth) ಕರ್ನಾಟಕಕ್ಕೂ ಕರುಳು-ಬಳ್ಳಿ ಸಂಬಂಧ. ಕರ್ನಾಟದವರೇ ಆಗಿರುವ ರಜನೀಕಾಂತ್ ನೆಲೆ ಕಂಡುಕೊಂಡಿದ್ದು ತಮಿಳುನಾಡಿನಲ್ಲಿ. ಆದರೆ ಕರ್ನಾಟಕವನ್ನು ವಿಶೇಷವಾಗಿ ಬೆಂಗಳೂರನ್ನು ಅವರು ಮರೆತಿಲ್ಲ. ರಜನೀಕಾಂತ್ ಅವರ ಬಾಲ್ಯ, ಯೌವ್ವನ ಕಳೆದ ಬೆಂಗಳೂರಿಗೆ ಆಗಾಗ್ಗೆ ಭೇಟಿ ನೀಡುತ್ತಿರುತ್ತಾರೆ. ತಮ್ಮ ಹಳೆಯ ಗೆಳೆಯರೊಟ್ಟಿಗೆ ಸಮಯ ಕಳೆಯುತ್ತಿರುತ್ತಾರೆ. ಇದೀಗ ರಜನೀಕಾಂತ್ ಮೈಸೂರಿಗೆ ಬಂದಿದ್ದಾರೆ. ಈ ಬಾರಿ ಬಂದಿರುವುದು ಸಿನಿಮಾ ಚಿತ್ರೀಕರಣಕ್ಕಾಗಿ. ಅದೂ ಅಣ್ಣಾವ್ರ ಸೂಪರ್ ಹಿಟ್ ಸಿನಿಮಾ ಒಂದರ ಚಿತ್ರೀಕರಣ ನಡೆದ ಜಾಗದಲ್ಲಿಯೇ ರಜನೀಕಾಂತ್ ಚಿತ್ರೀಕರಣ ನಡೆಸುತ್ತಿದ್ದಾರೆ.

‘ಜೈಲರ್ 2’ ಸಿನಿಮಾದ ಚಿತ್ರೀಕರಣಕ್ಕಾಗಿ ರಜನೀಕಾಂತ್ ಅವರು ಮೈಸೂರಿಗೆ ಬಂದಿದ್ದಾರೆ. ಮೈಸೂರಿನ ಬಳಿಯ ಹುಲ್ಲೇನಹಳ್ಳಿ ಬಳಿ ಸೇತುವೆಯ ಮೇಲೆ ಚಿತ್ರೀಕರಣ ನಡೆಯುತ್ತಿದೆ. ಇಲ್ಲಿ ಆಕ್ಷನ್ ಸೀನ್ ಒಂದರ ಚಿತ್ರೀಕರಣ ಚಾಲ್ತಿಯಲ್ಲಿದ್ದು, ಸುಮಾರು ಮೂರು-ನಾಲ್ಕು ದಿನಗಳ ಕಾಲ ಸಿನಿಮಾದ ಚಿತ್ರೀಕರಣ ಇದೇ ಸ್ಥಳದಲ್ಲಿ ನಡೆಯಲಿದೆ ಎನ್ನಲಾಗುತ್ತಿದೆ.

ಹುಲ್ಲೇನಹಳ್ಳಿಯ ಸೇತುವೆಯ ಮೇಲೆ ಚಿತ್ರೀಕರಣ ನಡೆಯುತ್ತಿದ್ದು, ವಿಶೇಷವೆಂದರೆ ಸುಮಾರು 40 ವರ್ಷದ ಹಿಂದೆ ಇದೇ ಸ್ಥಳದಲ್ಲಿ ಡಾ ರಾಜ್​​ಕುಮಾರ್ ನಟನೆಯ ಬ್ಲಾಕ್ ಬಸ್ಟರ್ ಸಿನಿಮಾ ‘ಹೊಸಬೆಳಕು’ ಚಿತ್ರೀಕರಣ ನಡೆದಿತ್ತು. ಹೊಸಬೆಳಕು ಸಿನಿಮಾದ ಹಾಡೊಂದರ ಚಿತ್ರೀಕರಣವನ್ನು ಇದೇ ಹುಲ್ಲೇನಹಳ್ಳಿ ಸೇತುವೆಯ ಬಳಿ ಮಾಡಲಾಗಿತ್ತು. ಇದೀಗ ರಜನೀಕಾಂತ್ ಅವರು ‘ಜೈಲರ್ 2’ ಸಿನಿಮಾದ ಚಿತ್ರೀಕರಣವನ್ನು ಅದೇ ಸ್ಥಳದಲ್ಲಿ ಮಾಡುತ್ತಿದ್ದಾರೆ.

‘ಜೈಲರ್’ ಸಿನಿಮಾದ ಮೊದಲ ಭಾಗದ ಕೆಲ ದೃಶ್ಯಗಳ ಚಿತ್ರೀಕರಣವನ್ನು ಮಂಡ್ಯದಲ್ಲಿ ಮಾಡಲಾಗಿತ್ತು. ಆ ಚಿತ್ರೀಕರಣದಲ್ಲಿ ನಟ ಶಿವರಾಜ್ ಕುಮಾರ್ ಸಹ ಭಾಗವಹಿಸಿದ್ದರು. ಈಗ ನಡೆಯುತ್ತಿರುವ ಚಿತ್ರೀಕರಣದಲ್ಲಿ ಶಿವಣ್ಣ ಭಾಗವಹಿಸುತ್ತಾರೆಯೋ ಇಲ್ಲವೇ ಎಂಬ ಬಗ್ಗೆ ಖಾತ್ರಿ ಇಲ್ಲ. ಕೆಲ ವಾರಗಳ ಹಿಂದೆ ಇದೇ ಸಿನಿಮಾದ ಚಿತ್ರೀಕರಣ ಕೇರಳದಲ್ಲಿ ನಡೆದಿತ್ತು. ಕೇರಳದಲ್ಲಿ ರಜನೀಕಾಂತ್, ರಮ್ಯಕೃಷ್ಣ ಇನ್ನೂ ಹಲವಾರು ಕಲಾವಿದರು ಚಿತ್ರೀಕರಣದಲ್ಲಿ ಭಾಗಿ ಆಗಿದ್ದರು.

ಇದನ್ನೂ ಓದಿ:ರಜನೀಕಾಂತ್ ಆಪ್ತ, ಹಿರಿಯ ನಟ ರಾಜೇಶ್ ನಿಧನ

‘ಜೈಲರ್’ ಸಿನಿಮಾ 2023 ರಲ್ಲಿ ಬಿಡುಗಡೆ ಆಗಿ ದೊಡ್ಡ ಹಿಟ್ ಆಗಿತ್ತು. ಆ ಸಿನಿಮಾನಲ್ಲಿ ರಜನೀಕಾಂತ್ ಜೊತೆಗೆ ಶಿವರಾಜ್ ಕುಮಾರ್, ಮೋಹನ್​​ಲಾಲ್, ಜಾಕಿ ಶ್ರಾಫ್, ಕಿಶೋರ್, ತಮನ್ನಾ ಭಾಟಿಯಾ, ಸುನಿಲ್ ಇನ್ನೂ ಹಲವಾರು ನಟರು ನಟಿಸಿದ್ದರು. ‘ಜೈಲರ್ 2’ ಸಿನಿಮಾನಲ್ಲಿಯೂ ಶಿವಣ್ಣ, ಮೋಹನ್​ಲಾಲ್, ಜಾಕಿ ಶ್ರಾಫ್ ಅವರುಗಳು ಇರಲಿದ್ದು, ಇವರ ಜೊತೆಗೆ ಬಾಲಕೃಷ್ಣ ಸಹ ಇರಲಿದ್ದಾರೆ ಎನ್ನಲಾಗುತ್ತಿದೆ. ಸಿನಿಮಾವನ್ನು ನೆಲ್ಸನ್ ನಿರ್ದೇಶನ ಮಾಡುತ್ತಿದ್ದಾರೆ. ಅನಿರುದ್ಧ್ ರವಿಚಂದ್ರನ್ ಸಂಗೀತ ನಿರ್ದೇಶನ ಮಾಡುತ್ತಿದ್ದಾರೆ. ಬಂಡವಾಳ ತೊಡಗಿಸಿರುವುದು ಕಲಾನಿಧಿ ಮಾರನ್.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ