ರಜನೀಕಾಂತ್ಗೆ ಜೂ ಎನ್ಟಿಆರ್-ಹೃತಿಕ್ ರೋಷನ್ ಎದುರಾಳಿ
Rajinikanth: ರಜನೀಕಾಂತ್, ಉಪೇಂದ್ರ, ಅಕ್ಕಿನೇನಿ ನಾಗಾರ್ಜುನ ಒಟ್ಟಿಗೆ ನಟಿಸಿರುವ ‘ಕೂಲಿ’ ಸಿನಿಮಾದ ಬಿಡುಗಡೆ ದಿನಾಂಕ ಘೋಷಣೆಯಾಗಿದೆ. ಈ ಸಿನಿಮಾ ಆಗಸ್ಟ್ 14 ರಂದು ಬಿಡುಗಡೆ ಆಗಲಿದೆ. ಅದೇ ದಿನ ಹೃತಿಕ್ ರೋಷನ್, ಜೂ ಎನ್ಟಿಆರ್ ಒಟ್ಟಿಗೆ ನಟಿಸಿರುವ ‘ವಾರ್ 2’ ಸಿನಿಮಾ ಸಹ ತೆರೆಗೆ ಬರಲಿದ್ದು, ಸ್ಟಾರ್ ನಟರ ನಡುವೆ ಬಾಕ್ಸ್ ಆಫೀಸ್ನಲ್ಲಿ ಸ್ಪರ್ಧೆ ಏರ್ಪಡಲಿದೆ.

ಪ್ಯಾನ್ ಇಂಡಿಯಾ (Pan India) ಸಿನಿಮಾಗಳು ಹೆಚ್ಚಾದ ಬಳಿಕ ಸ್ಟಾರ್ ನಟರ ಸಿನಿಮಾಗಳು ಒಂದೇ ದಿನ ಬಿಡುಗಡೆ ಆಗದಂತೆ ಎಚ್ಚರಿಕೆ ವಹಿಸಲಾಗುತ್ತಿದೆ. ಹಬ್ಬಗಳ ಸಂದರ್ಭ, ರಜೆಯ ಸಂದರ್ಭದಲ್ಲಿಯೂ ಸಹ ಒಂದೆರಡು ದಿನದ ಅಂತರವಾದರೂ ಇರುವಂತೆ ನೋಡಿಕೊಳ್ಳಲಾಗುತ್ತಿದೆ. ನಿರ್ಮಾಪಕರು, ನಟರುಗಳು ಮೊದಲಿಗಿಂತಲೂ ಎಚ್ಚರಿಕೆಯಿಂದ ಸಿನಿಮಾ ಬಿಡುಗಡೆಗಳನ್ನು ಪ್ಲ್ಯಾನ್ ಮಾಡುತ್ತಿದ್ದಾರೆ. ಇದೀಗ ರಜನೀಕಾಂತ್ ನಟನೆಯ ‘ಕೂಲಿ’ (Coolie) ಸಿನಿಮಾದ ಬಿಡುಗಡೆ ದಿನಾಂಕ ಘೋಷಣೆ ಆಗಿದೆ. ಅದೇ ದಿನ ಹೃತಿಕ್ ರೋಷನ್-ಜೂ ಎನ್ಟಿಆರ್ (Jr NTR) ನಟನೆಯ ಸಿನಿಮಾ ಸಹ ಬಿಡುಗಡೆ ಆಗಲಿದೆ.
ರಜನೀಕಾಂತ್ ನಟನೆಯ ‘ಕೂಲಿ’ ಸಿನಿಮಾ ಆಗಸ್ಟ್ 14 ರಂದು ಬಿಡುಗಡೆ ಆಗಲಿದೆ. ಲೋಕೇಶ್ ಕನಗರಾಜು ನಿರ್ದೇಶನ ಮಾಡಿರುವ ಈ ಸಿನಿಮಾನಲ್ಲಿ ಕನ್ನಡದ ನಟ ಉಪೇಂದ್ರ ಹಾಗೂ ತೆಲುಗಿನ ಅಕ್ಕಿನೇನಿ ನಾಗಾರ್ಜುನ ಸಹ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಅನಿರುದ್ಧ್ ಸಂಗೀತ ನೀಡಿದ್ದಾರೆ. ಸಿನಿಮಾ ಬಿಡುಗಡೆ ದಿನಾಂಕ ಇಂದಷ್ಟೆ ಘೋಷಣೆ ಆಗಿದ್ದು, ಆಗಸ್ಟ್ 14ಕ್ಕೆ ಪ್ಯಾನ್ ಇಂಡಿಯಾ ಲೆವೆಲ್ನಲ್ಲಿ ಸಿನಿಮಾ ಬಿಡುಗಡೆ ಆಗಲಿದೆ.
ವಿಶೇಷವೆಂದರೆ ಅದೇ ದಿನ ಹೃತಿಕ್ ರೋಷನ್ ಮತ್ತು ಜೂ ಎನ್ಟಿಆರ್ ಮೊದಲ ಬಾರಿಗೆ ಒಟ್ಟಿಗೆ ನಟಿಸಿರುವ ‘ವಾರ್ 2’ ಸಿನಿಮಾ ಬಿಡುಗಡೆ ಆಗಿದೆ. ಆ ಸಿನಿಮಾ ಸಹ ಪ್ಯಾನ್ ಇಂಡಿಯಾ ಲೆವೆಲ್ನಲ್ಲಿ ತೆರೆಗೆ ಬರಲಿದೆ. ಎರಡು ಬಿಗ್ ಬಜೆಟ್, ದೊಡ್ಡ ಸ್ಟಾರ್ ನಟರ ಸಿನಿಮಾಗಳು ಏಕಕಾಲಕ್ಕೆ ತೆರೆಗೆ ಬರುತ್ತಿದ್ದು, ಬಾಕ್ಸ್ ಆಫೀಸ್ ಚಿಂದಿ ಆಗುವುದು ಪಕ್ಕಾ ಎನ್ನಲಾಗುತ್ತಿದೆ. ಆದರೆ ಈ ಫೈಟ್ನಿಂದ ನಿರ್ಮಾಪಕರಿಗೆ ಹೊಡೆತ ಬೀಳುವ ಸಾಧ್ಯತೆ ಇದೆ.
ಇದನ್ನೂ ಓದಿ:ಭಾರತದ ಶ್ರೀಮಂತ ಹಾಸ್ಯ ನಟ ಇವರೇ, ರಜನೀಕಾಂತ್ಗಿಂತಲೂ ಶ್ರೀಮಂತ
ರಜನೀಕಾಂತ್ ದಕ್ಷಿಣದಲ್ಲಿ ದೊಡ್ಡ ಸ್ಟಾರ್, ಉತ್ತರ ಭಾರತದಲ್ಲಿಯೂ ಅವರಿಗೆ ದೊಡ್ಡ ಸಂಖ್ಯೆಯ ಅಭಿಮಾನಿಗಳಿದ್ದಾರೆ. ಮಾತ್ರವಲ್ಲದೆ ಮಲೇಷ್ಯಾ, ಅಮೆರಿಕ, ದುಬೈ ಇನ್ನಿತರೆ ಕಡೆಗಳಲ್ಲಿಯೂ ದೊಡ್ಡ ಸಂಖ್ಯೆಯ ಅಭಿಮಾನಿಗಳನ್ನು ಹೊಂದಿದ್ದಾರೆ. ಹಾಗಾಗಿ ಭಾರತದ ಜೊತೆಗೆ ಹೊರದೇಶಗಳಲ್ಲಿಯೂ ಸಹ ‘ಕೂಲಿ’ ಹಾಗೂ ‘ವಾರ್ 2’ ನಡುವೆ ಸ್ಪರ್ಧೆ ಏರ್ಪಡಲಿದೆ.
‘ವಾರ್ 2’ ಸಿನಿಮಾ ಪಕ್ಕಾ ಆಕ್ಷನ್ ಥ್ರಿಲ್ಲರ್ ಸಿನಿಮಾ ಆಗಿದ್ದು, ಮೊದಲ ಬಾರಿಗೆ ಜೂ ಎನ್ಟಿಆರ್ ಹಿಂದಿಯಲ್ಲಿ ನಟಿಸಿದ್ದಾರೆ. ಹೃತಿಕ್ ರೋಷನ್ ಈ ಹಿಂದೆ ‘ವಾರ್’ ಸಿನಿಮಾನಲ್ಲಿ ಟೈಗರ್ ಶ್ರಾಫ್ ಜೊತೆ ನಟಿಸಿದ್ದರು. ಈಗ ಜೂ ಎನ್ಟಿಆರ್ ಜೊತೆ ನಟಿಸಿದ್ದಾರೆ. ‘ಆರ್ಆರ್ಆರ್’ ರೀತಿಯಲ್ಲಿಯೇ ಈ ಸಿನಿಮಾದಲ್ಲಿಯೂ ಸಹ ಹೃತಿಕ್ ಮತ್ತು ಜೂ ಎನ್ಟಿಆರ್ ನಡುವೆ ಡ್ಯಾನ್ಸ್ ಫೈಟ್ ಒಂದು ಇರಲಿದೆಯಂತೆ. ‘ವಾರ್ 2’ ಸಿನಿಮಾ, ಹಿಂದಿಯ ಜೊತೆಗೆ ತೆಲುಗು ರಾಜ್ಯಗಳಲ್ಲಿಯೂ ಭಾರಿ ದೊಡ್ಡ ಪ್ರಮಾಣದಲ್ಲಿ ಬಿಡುಗಡೆ ಆಗಲಿದೆ. ‘ಕೂಲಿ’ ಅಥವಾ ‘ವಾರ್2’ ಯಾವ ಸಿನಿಮಾ ಗೆಲ್ಲಲಿದೆ ಎಂಬುದನ್ನು ಕಾಲವೇ ಉತ್ತರಿಸಲಿದೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ