ಸಲ್ಮಾನ್ ಖಾನ್-ರಶ್ಮಿಕಾ ನಡುವಿನ 31 ವರ್ಷ ವಯಸ್ಸಿನ ಅಂತರ ಸಮರ್ಥಿಸಿಕೊಂಡ ಅಮೀಶಾ ಪಟೇಲ್
ಹಲವು ನೆಗೆಟಿವ್ ಕಾರಣಗಳಿಂದಾಗಿ ಸಲ್ಮಾನ್ ಖಾನ್ ಅವರ ‘ಸಿಕಂದರ್’ ಸಿನಿಮಾವನ್ನು ಜನರು ಟ್ರೋಲ್ ಮಾಡಿದ್ದಾರೆ. ರಶ್ಮಿಕಾ ಮಂದಣ್ಣ ಮತ್ತು ಸಲ್ಮಾನ್ ಖಾನ್ ನಡುವೆ 31 ವರ್ಷಗಳ ವಯಸ್ಸಿನ ಅಂತರವಿದೆ ಎಂಬ ಕಾರಣಕ್ಕೆ ಕೆಲವರು ಟೀಕೆ ಮಾಡಿದ್ದಾರೆ. ಈ ಬಗ್ಗೆ ಬಾಲಿವುಡ್ ನಟಿ ಅಮೀಶಾ ಪಟೇಲ್ ಅವರು ಈಗ ಪ್ರತಿಕ್ರಿಯೆ ನೀಡಿದ್ದಾರೆ.

ನಟ ಸಲ್ಮಾನ್ ಖಾನ್ (Salman Khan) ಅವರಿಗೆ 59 ವರ್ಷ ವಯಸ್ಸಾಗಿದೆ. ಅವರು ನಟಿಸಿದ ‘ಸಿಕಂದರ್’ ಸಿನಿಮಾಗೆ 28ರ ಪ್ರಾಯದ ರಶ್ಮಿಕಾ ಮಂದಣ್ಣ (Rashmika Mandanna) ಅವರು ಜೋಡಿ ಆಗಿದ್ದಾರೆ. ಇಬ್ಬರ ನಡುವೆ 31 ವರ್ಷಗಳ ವಯಸ್ಸಿನ ಅಂತರ ಇದೆ. ಈ ವಿಷಯವನ್ನು ಇಟ್ಟುಕೊಂಡು ಅನೇಕರು ಟ್ರೋಲ್ ಮಾಡಿದ್ದಾರೆ. ಆದರೆ ಈ ಬಗ್ಗೆ ಸಲ್ಮಾನ್ ಖಾನ್ ಅವರಾಗಲಿ, ರಶ್ಮಿಕಾ ಮಂದಣ್ಣ ಅವರಾಗಲಿ ತಲೆ ಕೆಡಿಸಿಕೊಂಡಿಲ್ಲ. ಅಲ್ಲದೇ, ಚಿತ್ರರಂಗದ ಅನೇಕರು ಕೂಡ ಈ ವಿಷಯವನ್ನು ಸಮರ್ಥಿಸಿಕೊಂಡಿದ್ದಾರೆ. ಬಾಲಿವುಡ್ನ ಖ್ಯಾತ ನಟಿ ಅಮೀಶಾ ಪಟೇಲ್ (Ameesha Patel) ಕೂಡ ಈ ಬಗ್ಗೆ ತಮ್ಮ ಅನಿಸಿಕೆ ತಿಳಿಸಿದ್ದಾರೆ.
ಮುಂಬೈನಲ್ಲಿ ಪಾಪರಾಜಿಗಳ ಜೊತೆ ಮಾತನಾಡುವಾಗ ಅಮೀಶಾ ಪಟೇಲ್ ಅವರು ಹಲವು ವಿಷಯಗಳ ಬಗ್ಗೆ ಚರ್ಚೆ ಮಾಡಿದರು. ಈ ವೇಳೆ ‘ಸಿಕಂದರ್’ ಸಿನಿಮಾದ ಬಗ್ಗೆ ಹಬ್ಬಿರುವ ನೆಗೆಟಿವ್ ಟಾಕ್ ಬಗ್ಗೆ ಕೇಳಲಾಯಿತು. ಸಲ್ಮಾನ್ ಖಾನ್ ಮತ್ತು ರಶ್ಮಿಕಾ ಮಂದಣ್ಣ ನಡುವಿನ ವಯಸ್ಸಿನ ಅಂತರದ ಬಗ್ಗೆಯೂ ಪ್ರಶ್ನೆ ಕೇಳಿಬಂತು. ಅದಕ್ಕೆ ಅವರು ತುಂಬ ಪಾಸಿಟಿವ್ ಆಗಿ ಉತ್ತರಿಸಿದ್ದಾರೆ.
ಅಮೀಶಾ ಪಟೇಲ ಅವರು ‘ಗದರ್’ ಸಿನಿಮಾದ ಉದಾಹರಣೆಯನ್ನು ನೀಡಿದ್ದಾರೆ. ‘ನನ್ನ ಮತ್ತು ಸನ್ನಿ ಡಿಯೋಲ್ ಅವರ ನಡುವೆ 20 ವರ್ಷಗಳ ವಯಸ್ಸಿನ ಅಂತರ ಇದೆ. ಜೋಡಿ ಹಿಟ್ ಆದರೆ ಯಾರೂ ಕೂಡ ಏನನ್ನೂ ಹೇಳುವಂತಿಲ್ಲ’ ಎಂದು ಅಮೀಶಾ ಪಟೇಲ್ ಹೇಳಿದ್ದಾರೆ. 2023ರಲ್ಲಿ ಸೂಪರ್ ಹಿಟ್ ಆದ ‘ಗದರ್ 2’ ಸಿನಿಮಾದಲ್ಲಿ ಕೂಡ ಅಮೀಶಾ ಪಟೇಲ್ ಹಾಗೂ ಸನ್ನಿ ಡಿಯೋಲ್ ಅವರು ಜೋಡಿಯಾಗಿ ನಟಿಸಿದ್ದರು.
ಇದನ್ನೂ ಓದಿ: ವಿದೇಶದಲ್ಲಿ ಹುಟ್ಟುಹಬ್ಬ ಆಚರಿಸಿಕೊಳ್ಳಲಿರುವ ರಶ್ಮಿಕಾ, ಯಾರ ಜೊತೆಗೆ?
ಸಿನಿಮಾ ಬಗ್ಗೆ ನೆಗೆಟಿವ್ ಮಾತುಗಳನ್ನು ಆಡುವವರ ಬಗ್ಗೆ ತಲೆ ಕೆಡಿಸಿಕೊಳ್ಳಬಾರದು ಎಂದು ಅಮೀಶಾ ಪಟೇಲ್ ಹೇಳಿದ್ದಾರೆ. ‘ಜನರು ಏನಾದರೂ ಹೇಳುತ್ತಲೇ ಇರುತ್ತಾರೆ. ಅದೇ ಅವರ ಕೆಲಸ. ಅವರ ಮಾತುಗಳಿಗೆಲ್ಲ ಅರ್ಥ ಇಲ್ಲ’ ಎಂದಿದ್ದಾರೆ ಅಮೀಶಾ ಪಟೇಲ್. ಬಾಲಿವುಡ್ನಲ್ಲಿ ಹಲವು ವರ್ಷಗಳಿಂದ ಅಮೀಶಾ ಅವರು ಬ್ಯುಸಿ ಆಗಿದ್ದಾರೆ. ಅವರಿಗೆ ಈಗ 49 ವರ್ಷ ವಯಸ್ಸು. ಈ ಪ್ರಾಯದಲ್ಲಿ ಕೂಡ ಅವರು ಗ್ಲಾಮರ್ ಕಾಪಾಡಿಕೊಂಡಿದ್ದಾರೆ. ಅವರ ಫೋಟೋಗಳು ಆಗಾಗ ವೈರಲ್ ಆಗುತ್ತವೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.