‘ಅಪ್ಪು’ ಚಿತ್ರದ ನಿರ್ದೇಶಕನ ಜತೆ ವಿಜಯ್ ಸೇತುಪತಿ ಹೊಸ ಪ್ಯಾನ್ ಇಂಡಿಯಾ ಸಿನಿಮಾ
ಪುರಿ ಜಗನ್ನಾಥ್ ಅವರು ಹೊಸ ಸಿನಿಮಾ ಅನೌನ್ಸ್ ಮಾಡಿದ್ದಾರೆ. ಯುಗಾದಿ ಹಬ್ಬದ ಪ್ರಯುಕ್ತ ಹೊಸ ಸುದ್ದಿ ನೀಡಲಾಗಿದೆ. ವಿಜಯ್ ಸೇತುಪತಿ ನಟಿಸಲಿರುವ ಹೊಸ ಪ್ಯಾನ್ ಇಂಡಿಯಾ ಸಿನಿಮಾಗೆ ಪುರಿ ಜಗನ್ನಾಥ್ ನಿರ್ದೇಶನ ಹಾಗೂ ನಿರ್ಮಾಣ ಮಾಡಿದ್ದಾರೆ. ಹಲವು ಭಾಷೆಗಳಲ್ಲಿ ಈ ಸಿನಿಮಾ ಮೂಡಿಬರಲಿದೆ.

ಪುನೀತ್ ರಾಜ್ಕುಮಾರ್ ನಟನೆಯ ಮೊದಲ ಸಿನಿಮಾ ‘ಅಪ್ಪು’ (Appu) ಇತ್ತೀಚೆಗೆ ಮರುಬಿಡುಗಡೆಯಾಗಿ ಸದ್ದು ಮಾಡಿತು. ಆ ಚಿತ್ರಕ್ಕೆ ನಿರ್ದೇಶನ ಮಾಡಿದ್ದ ಪುರಿ ಜಗನ್ನಾಥ್ (Puri Jagannadh) ಅವರ ಬಗ್ಗೆ ಪ್ರೇಕ್ಷಕರು ಮತ್ತೊಮ್ಮೆ ಮಾತನಾಡುವಂತಾಯಿತು. ಟಾಲಿವುಡ್ನಲ್ಲಿ ಸಖತ್ ಫೇಮಸ್ ಆಗಿರುವ ಪುರಿ ಜಗನ್ನಾಥ್ ಅವರು ಸ್ಟಾರ್ ನಿರ್ದೇಶಕನಾಗಿ ಹೆಸರು ಮಾಡಿದ್ದಾರೆ. ಆದರೆ ಇತ್ತೀಚಿನ ವರ್ಷಗಳಲ್ಲಿ ಅವರಿಗೆ ಯಾಕೋ ಅದೃಷ್ಟ ಸ್ವಲ್ಪ ಕೈಕೊಟ್ಟಂತಿದೆ. ಆದರೂ ಕೂಡ ಅವಕಾಶಗಳು ಕಡಿಮೆ ಆಗಿಲ್ಲ. ಅವರ ಜೊತೆ ಸಿನಿಮಾ ಮಾಡಲು ಸ್ಟಾರ್ ನಟರು ಮುಂದೆಬರುತ್ತಿದ್ದಾರೆ. ಈಗ ವಿಜಯ್ ಸೇತುಪತಿ (Vijay Sethupathi) ಅವರು ಪುರಿ ಜಗನ್ನಾಥ್ ಜೊತೆ ಸಿನಿಮಾ ಮಾಡುವುದು ಖಚಿತವಾಗಿದೆ. ಇದು ಪ್ಯಾನ್ ಇಂಡಿಯಾ ಸಿನಿಮಾ ಆಗಿರಲಿದೆ.
ಯುಗಾದಿ ಹಬ್ಬದ ಪ್ರಯುಕ್ತ ಈ ಸುದ್ದಿ ನೀಡಲಾಗಿದೆ. ಪುರಿ ಜಗನ್ನಾಥ್ ಮತ್ತು ವಿಜಯ್ ಸೇತುಪತಿ ಅವರು ಜೊತೆಯಾಗಿ ಸಿನಿಮಾ ಮಾಡುತ್ತಾರೆ ಎಂಬ ಗುಸುಗುಸು ಹಲವು ದಿನಗಳಿಂದ ಕೇಳಿಬರುತ್ತಿತ್ತು. ಆದರೆ ಈಗ ಆ ಸುದ್ದಿ ಅಧಿಕೃತವಾಗಿದೆ. ಈ ಸಿನಿಮಾವನ್ನು ಸ್ವತಃ ಪುರಿ ಜಗನ್ನಾಥ್ ಅವರು ನಿರ್ಮಾಣ ಮಾಡಲಿದ್ದಾರೆ. ಅವರಿಗೆ ಚಾರ್ಮಿ ಕೌರ್ ಸಾಥ್ ನೀಡಲಿದ್ದಾರೆ.
‘ಪುರಿ ಕನೆಕ್ಟ್ಸ್’ ಬ್ಯಾನರ್ ಮೂಲಕ ಈ ಸಿನಿಮಾವನ್ನು ನಿರ್ಮಾಣ ಮಾಡಲಾಗುವುದು. ಜೂನ್ ತಿಂಗಳಲ್ಲಿ ಶೂಟಿಂಗ್ ಆರಂಭ ಆಗಲಿದೆ. ಭಾರತದ ಎಲ್ಲ ಭಾಷೆಗಳಲ್ಲಿ ಈ ಸಿನಿಮಾ ಮೂಡಿಬರಲಿದೆ ಎಂದು ಸೋಶಿಯಲ್ ಮೀಡಿಯಾದಲ್ಲಿ ಮಾಹಿತಿ ನೀಡಲಾಗಿದೆ. ಪುರಿ ಜಗನ್ನಾಥ್, ವಿಜಯ್ ಸೇತುಪತಿ ಹಾಗೂ ಚಾರ್ಮಿ ಕೌರ್ ಅವರು ಜೊತೆಯಾಗಿ ಇರುವ ಫೋಟೋ ಹಂಚಿಕೊಳ್ಳಲಾಗಿದೆ.
2022ರಲ್ಲಿ ಪುರಿ ಜಗನ್ನಾಥ್ ಅವರು ನಿರ್ಮಾಣದ ಜೊತೆ ನಿರ್ದೇಶನ ಮಾಡಿದ್ದ ‘ಲೈಗರ್’ ಸಿನಿಮಾ ಮೇಲೆ ಭಾರಿ ನಿರೀಕ್ಷೆ ಇಟ್ಟುಕೊಳ್ಳಲಾಗಿತ್ತು. ವಿಜಯ್ ದೇವರಕೊಂಡ ಅವರು ಆ ಸಿನಿಮಾದಲ್ಲಿ ನಟಿಸಿದ್ದರು. ಪ್ಯಾನ್ ಇಂಡಿಯಾ ಮಟ್ಟದಲ್ಲಿ ಮೂಡಿಬಂದಿದ್ದ ‘ಲೈಗರ್’ ಅಟ್ಟರ್ ಫ್ಲಾಪ್ ಆಯಿತು. ಬಳಿಕ ಪುರಿ ಜಗನ್ನಾಥ್ ಅವರು ನಿರ್ದೇಶಿಸಿ ನಿರ್ಮಾಣ ಮಾಡಿದ ‘ಡಬಲ್ ಇಸ್ಮಾರ್ಟ್’ ಸಿನಿಮಾ ಕೂಡ ಸೋತಿತು. ಈಗ ಅವರು ವಿಜಯ್ ಸೇತುಪತಿ ಜೊತೆಗಿನ ಸಿನಿಮಾ ಮೂಲಕ ಯಶಸ್ಸಿನ ಟ್ರ್ಯಾಕ್ಗೆ ಮರಳುವ ನಿರೀಕ್ಷೆಯಲ್ಲಿದ್ದಾರೆ.
ಇದನ್ನೂ ಓದಿ: ಸತತ ಸೋಲು, ತಮಿಳು ಹೀರೋ ಕೈಹಿಡಿದ ಪುರಿ ಜಗನ್ನಾಥ್, ಶೈಲಿಯೂ ಬದಲು
ವಿಜಯ್ ಸೇತುಪತಿ ಅವರು ಎಂಥ ಪಾತ್ರ ಕೊಟ್ಟರೂ ತುಂಬ ಚೆನ್ನಾಗಿ ನಿಭಾಯಿಸುತ್ತಾರೆ. ವಿಶೇಷವಾದ ಪಾತ್ರಗಳನ್ನು ಸೃಷ್ಟಿ ಮಾಡುವಲ್ಲಿ ಪುರಿ ಜಗನ್ನಾಥ್ ಫೇಮಸ್. ಈಗ ಇವರಿಬ್ಬರು ಕೈ ಜೋಡಿಸಿರುವುದರಿಂದ ಅಭಿಮಾನಿಗಳಿಗೆ ಭಾರಿ ನಿರೀಕ್ಷೆ ಮೂಡಿದೆ. ಸಿನಿಮಾ ಬಗ್ಗೆ ಮುಂದಿನ ದಿನಗಳಲ್ಲಿ ಹೆಚ್ಚಿನ ಅಪ್ಡೇಟ್ ನೀಡಲಾಗುವುದು ಎಂದು ನಿರ್ಮಾಣ ಸಂಸ್ಥೆ ತಿಳಿಸಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.