
ರಾಜ್ಕುಮಾರ್ (Rajkumar) ಅವರಿಗೆ ಇಂದು (ಏಪ್ರಿಲ್ 24) ಜನ್ಮದಿನ. ಇದು ಅಭಿಮಾನಿಗಳ ಪಾಲಿಗೆ ವಿಶೇಷ ದಿನ ಎಂದೇ ಹೇಳಬಹುದು. ಅವರನ್ನು ಆರಾಧಿಸುವವರು ಈ ದಿನವನ್ನು ವಿಶೇಷವಾಗಿ ಆಚರಿಸುತ್ತಿದ್ದಾರೆ. ಸಾಮಾಜಿಕ ಕೆಲಸಗಳು ನಡೆಯುತ್ತಿವೆ. ರಾಜ್ಕುಮಾರ್ ಅವರನ್ನು ಕಂಡರೆ ಅಭಿಮಾನಿಗಳಿಗೆ ಎಲ್ಲಿಲ್ಲದ ಪ್ರೀತಿ. ರಾಜ್ಕುಮಾರ್ ಅವರಿಗೂ ಅದೇ ರೀತಿ. ಇನ್ನು ಕುಟುಂಬ ಎನ್ನುವ ವಿಚಾರಕ್ಕೆ ಬಂದರೆ ರಾಜ್ಕುಮಾರ್ ಸಾಕಷ್ಟು ಪ್ರಾಮುಖ್ಯತೆ ನೀಡುತ್ತಿದ್ದರು. ಪಾರ್ವತಮ್ಮ ಅವರ ಬಳಿ ರಾಜ್ಕುಮಾರ್ ಏನನ್ನೂ ಮುಚ್ಚಿ ಇಡುತ್ತಲೇ ಇರಲಿಲ್ಲ. ಆದರೆ, ಒಂದು ವಿಚಾರವನ್ನು ಅವರು ಪಾರ್ವತಮ್ಮ ಅವರಿಂದ ಮುಚ್ಚಿಟ್ಟಿದ್ದರು.
ಮುಖ್ಯಮಂತ್ರಿ ಚಂದ್ರು ಹಾಗೂ ರಾಜ್ಕುಮಾರ್ ಹಲವು ಸಿನಿಮಾಗಳಲ್ಲಿ ಒಟ್ಟಾಗಿ ಕೆಲಸ ಮಾಡಿದ್ದಾರೆ. ಈ ಕಾರಣಕ್ಕೆ ಇಬ್ಬರ ಮಧ್ಯೆ ಒಳ್ಳೆಯ ಒಡನಾಟ ಇದೆ. ಈ ಒಡನಾಟದ ಬಗ್ಗೆ ಅವರು ‘ಕಲಾ ಮಾಧ್ಯಮ ಯೂಟ್ಯೂಬ್ ಚಾನೆಲ್’ಗೆ ನೀಡಿದ ಸಂದರ್ಶನದಲ್ಲಿ ವಿವರಿಸಿದ್ದರು. ಪಾರ್ವತಮ್ಮ ಅವರಿಂದ ಮುಚ್ಚಿಟ್ಟ ವಿಚಾರ ಏನು ಎಂಬುದು ಕೂಡ ಇಲ್ಲಿ ರಿವೀಲ್ ಆಗಿತ್ತು.
ರಾಜ್ಕುಮಾರ್ ಅವರಿಗೆ ತಿಂಡಿ ಬಗ್ಗೆ ಸಾಕಷ್ಟು ಪ್ರೀತಿ. ಒಮ್ಮೆ ಬಿಡದಿಯಲ್ಲಿ ಶೂಟ್ ಇತ್ತು. ಮುಖ್ಯಮಂತ್ರಿ ಚಂದ್ರು ಜೊತೆ ಸೇರಿ ರಾಜ್ಕುಮಾರ್ ಶೂಟಿಂಗ್ ಸ್ಥಳಕ್ಕೆ ಹೊರಟರು. ಈ ವೇಳೆ ಬಿಡದಿ ಬಳಿ ಇಡ್ಲಿ, ಚಿತ್ರಾನ್ನ, ವಡೆ ತೆಗೆದುಕೊಂಡು ಪಾರ್ಸಲ್ ಮಾಡಿಕೊಂಡು ತಿಂದರು. ಆ ಬಳಿಕ ನೇರವಾಗಿ ಶೂಟಿಂಗ್ ಸೆಟ್ಗೆ ಹೋದರು.
ಇದನ್ನೂ ಓದಿ: ಮಂತ್ರಾಲಯದ ಗರ್ಭಗುಡಿಯಲ್ಲಿ ಮಲಗಿದ್ದ ರಾಜ್ಕುಮಾರ್; ಆ ಬಳಿಕ ನಡೆದಿದ್ದು ಏನು?
ರಾಜ್ಕುಮಾರ್ ಹೊರಟಿದ್ದ ಸಿನಿಮಾದ ಶೂಟ್ಗೆ ಪಾರ್ವತಮ್ಮ ಅವರದ್ದೇ ಬಂಡವಾಳ ಇತ್ತು. ಹೀಗಾಗಿ, ತಿಂಡಿ ವ್ಯವಸ್ಥೆಯನ್ನು ಅವರೇ ಮಾಡಿಸಿದ್ದರು. ಈಗ ಹೊರಗೆ ತಿಂದು ಬಂದರೆ ಪಾರ್ವತಮ್ಮ ಬೈಯ್ಯುತ್ತಾರೆ ಎಂಬುದು ಅಣ್ಣಾವ್ರಿಗೆ ತಿಳಿದಿತ್ತೆನ್ನಿ. ‘ಸೆಟ್ನಲ್ಲಿ ಊಟ ಇದ್ದರೂ ಹೊರೆ ತಿಂದು ಬರೋದೇಕೆ’ ಎಂದು ಅವರು ಪ್ರಶ್ನೆ ಮಾಡುವ ಸಾಧ್ಯತೆ ಇರುತ್ತದೆ. ಈ ಕಾರಣದಿಂದಲೇ ರಾಜ್ಕುಮಾರ್ ಅವರು ಈ ವಿಚಾರವನ್ನು ಎಲ್ಲಿಯೂ ಹೇಳುತ್ತಿರಲಿಲ್ಲ. ಮುಖ್ಯಮಂತ್ರಿ ಚಂದ್ರು ಹಾಗೂ ಕಾರು ಚಾಲಕನಿಗೂ ಈ ಬಗ್ಗೆ ಸ್ಟ್ರಿಕ್ಟ್ ಆಗಿ ರಾಜ್ಕುಮಾರ್ ಅವರು ಹೇಳಿರುತ್ತಿದ್ದರು. ಸೆಟ್ಗೆ ಬಂದ ಬಳಿಕ ಸ್ವಲ್ಪ ತಿಂಡಿ ತಿನ್ನುತ್ತಿದ್ದ ಅವರು, ಅಡುಗೆಯವರನ್ನು ಹೊಗಳುತ್ತಿದ್ದರು. ಬಟ್ಟಲಿಗೆ ಹಾಕಿಕೊಂಡು ಹೋದ ಬಳಿಕ ಅವರು 15 ನಿಮಿಷ ಬರುತ್ತಿರಲಿಲ್ಲ. ಬೇಗ ಬಂದರೆ ಹೆಚ್ಚು ತಿಂದಿಲ್ಲ ಅನ್ನೋದು ಗೊತ್ತಾಗುತ್ತಿತ್ತು ಎಂಬುದು ರಾಜ್ಕುಮಾರ್ ಅಭಿಪ್ರಾಯ ಆಗಿತ್ತು.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.