‘ರಿಚರ್ಡ್ ಆಂಟೊನಿ’ ಸಿನಿಮಾ ನಿಂತು ಹೋಯ್ತೆ? ರಕ್ಷಿತ್ ಹೇಳಿದ್ದೇನು?

Rakshit Shetty movie: ರಿಷಬ್ ಶೆಟ್ಟಿ, ರಾಜ್ ಬಿ ಶೆಟ್ಟಿ ಸಿನಿಮಾಗಳ ಮೂಲಕ ಪ್ಯಾನ್ ಇಂಡಿಯಾ ಸ್ಟಾರ್​​ಗಳಾಗಿದ್ದಾರೆ. ಆದರೆ ಅವರ ಗೆಳೆಯ ರಕ್ಷಿತ್ ಶೆಟ್ಟಿ ಮಾತ್ರ ಯಾಕೋ ಒಂದು ಸಿನಿಮಾ ಮಾಡಲು ವರ್ಷಾನುಗಟ್ಟಲೆ ಸಮಯ ತೆಗೆದುಕೊಳ್ಳುತ್ತಿದ್ದಾರೆ. ರಕ್ಷಿತ್ ಘೋಷಿಸಿದ್ದ ‘ರಿಚರ್ಡ್ ಆಂಟೊನಿ’ ಸಿನಿಮಾ ನಿಂತೇ ಹೋಯ್ತು ಎನ್ನಲಾಗುತ್ತಿರುವ ಸಮಯದಲ್ಲಿಯೇ ಸಿನಿಮಾ ಬಗ್ಗೆ ರಕ್ಷಿತ್ ಶೆಟ್ಟಿ ಮಾತನಾಡಿದ್ದಾರೆ.

‘ರಿಚರ್ಡ್ ಆಂಟೊನಿ’ ಸಿನಿಮಾ ನಿಂತು ಹೋಯ್ತೆ? ರಕ್ಷಿತ್ ಹೇಳಿದ್ದೇನು?
Rakshit Shetty
Edited By:

Updated on: Sep 05, 2025 | 3:28 PM

ಕನ್ನಡ ಚಿತ್ರರಂಗಕ್ಕೆ ಶೆಟ್ಟಿ ಗ್ಯಾಂಗ್ ಹೊಸ ನೀರು ತಂದಿದೆ. ಹೊಸ ರೀತಿಯ ಪ್ರಯತ್ನಗಳನ್ನು ಮಾಡುತ್ತಾ ಕೆಲ ಒಳ್ಳೆಯ ಸಿನಿಮಾಗಳನ್ನು ಚಿತ್ರರಂಗಕ್ಕೆ ನೀಡುತ್ತಿದೆ. ಆದರೆ ಪ್ರಸ್ತುತ ಈ ಶೆಟ್ಟಿ ಗ್ಯಾಂಗ್​​ನಲ್ಲಿ ಹೆಚ್ಚು ಸಕ್ರಿಯರಾಗಿರುವುದು ರಿಷಬ್ ಶೆಟ್ಟಿ ಮತ್ತು ರಾಜ್ ಬಿ ಶೆಟ್ಟಿ. ಆದರೆ ಈ ಶೆಟ್ಟಿ ಗ್ಯಾಂಗ್​​ನ ಮೂಲ ಪುರುಷ ರಕ್ಷಿತ್ ಶೆಟ್ಟಿ ಯಾಕೋ ತುಸು ಮಂಕಾಗಿದ್ದಾರೆ.

‘ಸಪ್ತ ಸಾಗರದಾಚೆ ಎಲ್ಲೊ’ ಸಿನಿಮಾದಂಥಹಾ ಕಲ್ಟ್ ಸಿನಿಮಾನಲ್ಲಿ ನಟಿಸಿದ ರಕ್ಷಿತ್ ಶೆಟ್ಟಿ ಆ ನಂತರ ಕಾಣೆಯೇ ಆಗಿಬಿಟ್ಟಿದ್ದಾರೆ. ತಾವು ಇನ್ನು ಮುಂದೆ ಸಿನಿಮಾ ನಿರ್ದೇಶನದ ಮೇಲೆ ಹೆಚ್ಚು ಗಮನಹರಿಸುವುದಾಗಿ ರಕ್ಷಿತ್ ಹೇಳಿದ್ದರು. ಆದರೆ ಅವರು ತಮ್ಮ ಸಿನಿಮಾ ‘ರಿಚರ್ಡ್ ಆಂಟೊನಿ’ ಘೋಷಣೆ ಮಾಡಿ ವರ್ಷಗಳೇ ಕಳೆದು ಹೋಗಿವೆ. ಅದರ ಬಗ್ಗೆ ಸಣ್ಣ ಅಪ್​ಡೇಟ್ ಸಹ ಇಲ್ಲ.

ರಕ್ಷಿತ್ ಶೆಟ್ಟಿ ನಿರ್ದೇಶನ ಮಾಡಿದ್ದ ಕಲ್ಟ್ ಸಿನಿಮಾ ‘ಉಳಿದವರು ಕಂಡಂತೆ’ಯ ರಿಚ್ಚಿ ಪಾತ್ರವನ್ನೇ ಇರಿಸಿಕೊಂಡು ‘ರಿಚರ್ಡ್ ಆಂಟೊನಿ’ ಸಿನಿಮಾ ಮಾಡಲು ರಕ್ಷಿತ್ ಮುಂದಾಗಿದ್ದರು. ಸಿನಿಮಾದ ಘೋಷಣೆ ಆಗಿ ನಾಲ್ಕು ವರ್ಷಗಳಾಗಿವೆ. ಸಿನಿಮಾಕ್ಕೆ ಹೊಂಬಾಳೆ ಫಿಲಮ್ಸ್ ಬಂಡವಾಳ ತೊಡಗಿಸುತ್ತಿದ್ದಾರೆ. ಆದರೆ ಸಿನಿಮಾದ ಶೂಟಿಂಗ್ ಶುರುವಾಗಿರುವುದು ಸಹ ಅನುಮಾನವೇ. ಏಕೆಂದರೆ ಸಿನಿಮಾದ ಒಂದೇ ಒಂದು ಅಪ್​ಡೇಟ್ ಸಹ ಹೊರಬಿದ್ದಿಲ್ಲ. ಹಾಗಾಗಿ ಸಿನಿಮಾ ನಿಂತು ಹೋಗಿದೆ, ಹೊಂಬಾಳೆ ಫಿಲಮ್ಸ್ ಸಿನಿಮಾದಿಂದ ಹಿಂದೆ ಸರಿದಿದೆ ಎಂಬ ಸುದ್ದಿಗಳು ಹರಿದಾಡಲು ಆರಂಭವಾಗಿತ್ತು.

ಇದನ್ನೂ ಓದಿ:ರಕ್ಷಿತ್ ಶೆಟ್ಟಿ ಜನ್ಮದಿನ: ನಟನ ಎದುರು ಇರೋ ಪ್ರಶ್ನೆಗೆ ಸಿಗುತ್ತಾ ಉತ್ತರ?

ಆದರೆ ಇದೀಗ ರಕ್ಷಿತ್ ಶೆಟ್ಟಿ ಈ ಬಗ್ಗೆ ಉತ್ತರಿಸಿದ್ದಾರೆ. ಅಮೆರಿಕದಲ್ಲಿ ನಡೆದ ನಾವಿಕ ಕನ್ನಡಿಗ ಸಮ್ಮೇಳನದಲ್ಲಿ ಮಾತನಾಡಿದ ರಕ್ಷಿತ್ ಶೆಟ್ಟಿ, ‘ಕೆಲವೊಮ್ಮೆ ದೊಡ್ಡ ಕೆಲಸ ಮಾಡುವಾಗ ಹೆಚ್ಚು ಸಮಯ ತೆಗೆದುಕೊಳ್ಳುತ್ತದೆ’ ಎಂದಿದ್ದಾರೆ. ಅಸಲಿಗೆ ರಕ್ಷಿತ್ ವೇದಿಕೆ ಮೇಲೆ ಕನ್ನಡ ಭಾಷೆಯ ಮಹತ್ವ, ಪ್ರೀತಿ ಇನ್ನಿತರೆ ವಿಷಯಗಳ ಬಗ್ಗೆ ಮಾತನಾಡಿದರು. ಭಾಷಣ ಮುಗಿದ ಬಳಿಕ ನೆರೆದಿದ್ದ ಜನ ‘ರಿಚರ್ಡ್ ಆಂಟೊನಿ’ ಸಿನಿಮಾ ಬಗ್ಗೆ ಪ್ರಶ್ನೆ ಮಾಡಿದಾಗ ಮತ್ತೆ ಮೈಕ್ ಹಿಡಿದು ಮೇಲಿನಂತೆ ಹೇಳಿದರು.

ಈಗಾಗಲೇ ಸಿನಿಮಾ ಘೋಷಣೆ ಮಾಡಿ ನಾಲ್ಕು ವರ್ಷಗಳಾಗಿವೆ. ಆಗಲೇ ಅವರು ಹೇಳಿದ್ದಂತೆ ಕತೆ ರೆಡಿಯಿತ್ತು ಆದರೂ ಸಹ ಸಿನಿಮಾದ ಚಿತ್ರೀಕರಣ ಪ್ರಾರಂಭವಾಗಿಲ್ಲ. ಸಿನಿಮಾದ ಕತೆಯಲ್ಲಿ ಸಾಕಷ್ಟು ಬದಲಾವಣೆಗಳನ್ನು ರಕ್ಷಿತ್ ಮಾಡಿದ್ದು, ಸಿನಿಮಾ ಅನ್ನು ಅಂತರಾಷ್ಟ್ರೀಯ ಗುಣಮಟ್ಟದಲ್ಲಿ ಕಟ್ಟಲು ರಕ್ಷಿತ್ ಮುಂದಾಗಿದ್ದಾರೆ ಎನ್ನಲಾಗುತ್ತಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 11:09 am, Thu, 4 September 25