ಯೂಟ್ಯೂಬರ್ ಪಾತ್ರದಲ್ಲಿ ಸಿದ್ದು ಮೂಲಿಮನಿ: ಬಿಡುಗಡೆಗೆ ಸಜ್ಜಾಗುತ್ತಿದೆ ‘ಸೀಟ್ ಎಡ್ಜ್’ ಸಿನಿಮಾ
ನಟ ಸಿದ್ದು ಮೂಲಿಮನಿ ಅವರು ಬೇರೆ ಬೇರೆ ರೀತಿಯ ಸಿನಿಮಾಗಳನ್ನು ಮಾಡುತ್ತಿದ್ದಾರೆ. ಈಗ ಅವರು ಯುವ ಪ್ರೇಕ್ಷಕರಿಗೆ ಇಷ್ಟ ಆಗುವಂತಹ ಕಥಾಹಂದರದ ಚಿತ್ರದಲ್ಲಿ ನಟಿಸಿದ್ದಾರೆ. ಈ ಸಿನಿಮಾದ ಹೆಸರು ‘ಸೀಟ್ ಎಡ್ಜ್’. ಈ ಸಿನಿಮಾದಲ್ಲಿ ಸಿದ್ದು ಮೂಲಿಮನಿ ಅವರು ಯೂಟ್ಯೂಬರ್ ಪಾತ್ರವನ್ನು ಮಾಡಿದ್ದಾರೆ.

ಕನ್ನಡದ ‘ಸೀಟ್ ಎಡ್ಜ್’ ಸಿನಿಮಾ (Seat Edge Kannada Movie) ಬಿಡುಗಡೆಗೆ ಸಜ್ಜಾಗುತ್ತಿದೆ. ಶೀರ್ಷಿಕೆಗೆ ತಕ್ಕಂತೆಯೇ ಈ ಸಿನಿಮಾದಲ್ಲಿ ಒಂದು ಥ್ರಿಲ್ಲಿಂಗ್ ಕಹಾನಿ ಇದೆ ಎಂದು ಚಿತ್ರತಂಡ ಹೇಳಿದೆ. ಈ ಸಿನಿಮಾದಲ್ಲಿ ನಟ ಸಿದ್ದು ಮೂಲಿಮನಿ (Siddu Moolimani) ಅವರು ಹೀರೋ ಆಗಿ ನಟಿಸಿದ್ದಾರೆ. ಡಾರ್ಕ್ ಕಾಮಿಡಿಯ ಜೊತೆಗೆ ಹಾರರ್-ಥ್ರಿಲ್ಲರ್ ಶೈಲಿಯಲ್ಲಿ ಈ ಚಿತ್ರ ಮೂಡಿಬರುತ್ತಿದೆ. ಈ ಸಿನಿಮಾದಲ್ಲಿ ರವೀಕ್ಷಾ ಶೆಟ್ಟಿ ಅವರು ನಾಯಕಿಯಾಗಿದ್ದಾರೆ. ಗಿರೀಶ್ ಶಿವಣ್ಣ, ರಘು ರಾಮನಕೊಪ್ಪ, ಮಿಮಿಕ್ರಿ ಗೋಪಿ, ಲಕ್ಷ್ಮಿ ಸಿದ್ದಯ್ಯ, ಪುನೀತ್ ಬಾಬು, ಕಿರಣ್, ತೇಜು ಪೊನ್ನಪ್ಪ, ಮನಮೋಹನ್ ರೈ ಮುಂತಾದವರು ಕೂಡ ಪಾತ್ರವರ್ಗದಲ್ಲಿ ಇದ್ದಾರೆ.
ಚೇತನ್ ಶೆಟ್ಟಿ ಅವರು ‘ಸೀಟ್ ಎಡ್ಜ್’ ಸಿನಿಮಾಕ್ಕೆ ಕಥೆ, ಚಿತ್ರಕಥೆ ಬರೆದು ನಿರ್ದೇಶನ ಮಾಡಿದ್ದಾರೆ. ಈ ಮೊದಲು ‘ಕೆಮಿಸ್ಟ್ರೀ ಆಫ್ ಕರಿಯಪ್ಪ’, ‘ಕ್ರಿಟಿಕಲ್ ಕೀರ್ತನೆಗಳು’ ಮುಂತಾದ ಸಿನಿಮಾಗಳಲ್ಲಿ ಅವರು ಸಹ-ನಿರ್ದೇಶಕರಾಗಿ ಕೆಲಸ ಮಾಡಿದ ಅನುಭವ ಪಡೆದಿದ್ದಾರೆ. ‘ಸೀಟ್ ಎಡ್ಜ್’ ಸಿನಿಮಾಗೆ ‘ಎನ್.ಆರ್. ಸಿನಿಮಾ ಪ್ರೊಡಕ್ಷನ್ಸ್’ ಮೂಲಕ ಗಿರಿಧರ ಟಿ. ವಸಂತಪುರ ಅವರು ಬಂಡವಾಳ ಹೂಡಿದ್ದಾರೆ.

Seat Edge Movie Team
ಈ ಸಿನಿಮಾದ ಪೋಸ್ಟ್ ಪ್ರೊಡಕ್ಷನ್ ಕೆಲಸಗಳು ನಡೆಯುತ್ತಿವೆ. ‘ವ್ಲಾಗ್ 1 ದಿ ಲೂಪ್’ ಹೆಸರಿನಲ್ಲಿ ಟೀಸರ್ ಬಿಡುಗಡೆ ಮಾಡಲಾಗಿದೆ. ಈ ವೇಳೆ ನಟ ಸಿದ್ದು ಮೂಲಿಮನಿ ಅವರು ಮಾತನಾಡಿದರು. ‘ಇದು ಸಸ್ಪೆನ್ಸ್ ಥ್ರಿಲ್ಲರ್ ಸಿನಿಮಾ. ಮೊದಲ ಬಾರಿಗೆ ನಾನು ಯುಟ್ಯೂಬ್ ವ್ಲಾಗರ್ ಪಾತ್ರ ಮಾಡಿದ್ದೇನೆ. ಯಾರೂ ಹೋಗದ ಭಯಾನಕ ಜಾಗವನ್ನು ಪ್ರೇಕ್ಷಕರಿಗೆ ಪರಿಚಯಿಸಬೇಕು ಎಂದು ಹಠಕ್ಕೆ ಬಿದ್ದ ನಾನು, ಘೋಸ್ಟ್ ಟೌನ್ಗೆ ಹೋಗಿ ಘೋಸ್ಟ್ ಹಂಟಿಂಗ್ ವೀಡಿಯೋ ಮಾಡಲು ನಿರ್ಧರಿಸುತ್ತೇನೆ’ ಎಂದು ಕತೆಯ ಎಳೆ ಬಗ್ಗೆ ಅವರು ಮಾಹಿತಿ ನೀಡಿದರು.
ನಟಿ ರವೀಕ್ಷಾ ಶೆಟ್ಟಿ ಅವರು ಕಾಲೇಜು ಹುಡುಗಿಯ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ‘ಎರಡು ಶೇಡ್‌ಗಳಿರುವ ಪಾತ್ರ ನನಗೆ ಸಿಕ್ಕಿದೆ. ಈ ಸಿನಿಮಾದಿಂದ ನಾನು ಸಾಕಷ್ಟು ವಿಷಯಗಳನ್ನು ಕಲಿತಿದ್ದೇನೆ. ಒಳ್ಳೆಯ ಕಥೆ, ಹಾಡು, ಕಾಮಿಡಿ, ಡ್ಯಾನ್ಸ್, ಸೆಂಟಿಮೆಂಟ್, ಸಸ್ಪೆನ್ಸ್-ಥ್ರಿಲ್ಲರ್ ಹೀಗೆ.. ಪ್ರೇಕ್ಷಕರು ಬಯಸುವ ಎಲ್ಲ ಅಂಶಗಳು ನಮ್ಮ ಸಿನಿಮಾದಲ್ಲಿ ಇವೆ’ ಎಂದು ಅವರು ಹೇಳಿದರು.
ಇದನ್ನೂ ಓದಿ: ಸಿದ್ದು ಮೂಲಿಮನಿ ಹೊಸ ಹಾಡು ‘ಹಂಗೋ ಹಿಂಗೋ’: ಸೀಟ್ ಎಡ್ಜ್ ಚಿತ್ರದಲ್ಲಿ ರವೀಕ್ಷಾ ಜೋಡಿ
‘ಇದು ಎಲ್ಲರಿಗೂ ಕನೆಕ್ಟ್ ಆಗುವಂತಹ ಸಿನಿಮಾ. ನಮಗೆ ಗೊತ್ತಿಲ್ಲದ ವಿಷಯದಲ್ಲಿ ದುಸ್ಸಾಹಸ ಮಾಡಿದರೆ ಏನೆಲ್ಲ ಆಗಬಹುದು ಎಂಬುದನ್ನು ಈ ಚಿತ್ರದಲ್ಲಿ ತೋರಿಸುತ್ತಿದ್ದೇವೆ’ ಎಂದು ನಿರ್ದೇಶಕ ಚೇತನ್ ಶೆಟ್ಟಿ ಹೇಳಿದ್ದಾರೆ. ‘ಮನೆಮಂದಿ ಒಟ್ಟಾಗಿ ಕೂತು ನೋಡುವಂಥ ಸಿನಿಮಾ ಮಾಡಿದ್ದೇವೆ’ ಎಂದಿದ್ದಾರೆ ನಿರ್ಮಾಪಕ ಗಿರಿಧರ ಟಿ. ವಸಂತಪುರ. ಆಕಾಶ್ ಪರ್ವ ಅವರು ಸಂಗೀತ ನಿರ್ದೇಶನ ಮಾಡಿದ್ದಾರೆ. ದೀಪಕ್ ಕುಮಾರ್ ಜೆ.ಕೆ. ಅವರು ಛಾಯಾಗ್ರಹಣ ಮಾಡಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Published On - 8:52 pm, Wed, 3 September 25




