ರಮ್ಯಾ, ಉಪೇಂದ್ರ ನಟನೆಯ ‘ರಕ್ತ ಕಾಶ್ಮೀರ’ ಸಿನಿಮಾ ಶೀಘ್ರದಲ್ಲೇ ಬಿಡುಗಡೆ

ಬಹಳ ವರ್ಷಗಳ ಹಿಂದೆಯೇ ಈ ಸಿನಿಮಾ ಸೆಟ್ಟೇರಿತ್ತು. ಆಗ ಸಿನಿಮಾದ ಶೀರ್ಷಿಕೆ ಬೇರೆ ಇತ್ತು. ಶೂಟಿಂಗ್​ ಕೂಡ ಭರ್ಜರಿಯಾಗಿ ಮಾಡಲಾಗಿತ್ತು. ಆದರೆ ಬಿಡುಗಡೆ ತಡವಾಗಿತ್ತು. ಈಗ ಚಿತ್ರತಂಡದವರು ಎಲ್ಲ ಕೆಲಸಗಳನ್ನು ಮುಗಿಸಿಕೊಳ್ಳುವ ಹಂತದಲ್ಲಿದ್ದು, ಶೀಘ್ರದಲ್ಲೇ ರಿಲೀಸ್ ಮಾಡಲಿದ್ದಾರೆ. ರಮ್ಯಾ ದಿವ್ಯ ಸ್ಪಂದನಾ, ಉಪೇಂದ್ರ ಅವರು ಈ ಸಿನಿಮಾದಲ್ಲಿ ಪ್ರಮುಖ ಪಾತ್ರಗಳನ್ನು ಮಾಡಿದ್ದಾರೆ.

ರಮ್ಯಾ, ಉಪೇಂದ್ರ ನಟನೆಯ ‘ರಕ್ತ ಕಾಶ್ಮೀರ’ ಸಿನಿಮಾ ಶೀಘ್ರದಲ್ಲೇ ಬಿಡುಗಡೆ
ರಮ್ಯಾ, ಉಪೇಂದ್ರ
Follow us
ಮದನ್​ ಕುಮಾರ್​
|

Updated on: Dec 04, 2024 | 3:35 PM

ನಟಿ ರಮ್ಯಾ ಅವರು ಸಿನಿಮಾವನ್ನು ಬಿಟ್ಟರೂ ಅವರನ್ನು ಸಿನಿಮಾ ಬಿಡುತ್ತಿಲ್ಲ. ಹೌದು, ರಮ್ಯಾ ನಟಿಸಿರುವ ಒಂದು ಸಿನಿಮಾ ಈಗ ಬಿಡುಗಡೆ ಸಜ್ಜಾಗಿದೆ. ಇದನ್ನು ಹೊಸ ಸಿನಿಮಾ ಎನ್ನಬೇಕೋ ಅಥವಾ ಹಳೇ ಸಿನಿಮಾ ಎನ್ನಬೇಕು ಎಂಬುದು ಪ್ರೇಕ್ಷಕರಿಗೆ ಬಿಟ್ಟಿದ್ದು. ಯಾಕೆಂದರೆ, ಈ ಸಿನಿಮಾ ಸೆಟ್ಟೇರಿದ್ದು ಹಲವು ವರ್ಷಗಳ ಹಿಂದೆ. ಒಂದಷ್ಟು ಕಾರಣಗಳಿಂದ ಈ ಚಿತ್ರದ ಕೆಲಸಗಳು ಬಿಳಂಬ ಆಗಿದ್ದವು. ಈಗ ತೆರೆಗೆ ಬರಲು ಸಜ್ಜಾಗಿದೆ. ‘ರಕ್ತ ಕಾಶ್ಮೀರ’ ಎಂಬ ಶೀರ್ಷಿಕೆ ಇರುವ ಈ ಚಿತ್ರದಲ್ಲಿ ಉಪೇಂದ್ರ ಮತ್ತು ರಮ್ಯಾ ಅವರು ಜೋಡಿಯಾಗಿ ನಟಿಸಿದ್ದಾರೆ.

‘ಎಂಡಿಎಂ ಪ್ರೊಡಕ್ಷನ್’ ಬ್ಯಾನರ್​ನಲ್ಲಿ ‘ರಕ್ತ ಕಾಶ್ಮೀರ’ ಸಿನಿಮಾ ನಿರ್ಮಾಣ ಆಗಿದೆ. ಹಿರಿಯ ನಿರ್ದೇಶಕ ಎಸ್.ವಿ. ರಾಜೇಂದ್ರ ಸಿಂಗ್ ಬಾಬು ಅವರು ನಿರ್ದೇಶನ ಮಾಡಿದ್ದಾರೆ. ಉಪೇಂದ್ರ ಮತ್ತು ರಮ್ಯಾ ಮುಖ್ಯಪಾತ್ರದಲ್ಲಿ ನಟಿಸಿದ್ದು, ಈಗ ಸಿನಿಮಾದ ಕೆಲಸಗಳು ಕೊನೇ ಹಂತದಲ್ಲಿ ಇವೆ. ಆದಷ್ಟು ಬೇಗ ಸಿನಿಮಾವನ್ನು ಬಿಡುಗಡೆ ಮಾಡಬೇಕು ಎಂದು ಚಿತ್ರತಂಡ ನಿರ್ಧರಿಸಿದೆ.

ಪಾಕ್ ಆಕ್ರಮಿತ ಕಾಶ್ಮೀರವನ್ನು ವಾಪಸ್ ಪಡೆಯುವ ಬಗ್ಗೆ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ನೀಡಿದ ಹೇಳಿಕೆಯನ್ನು ‘ರಕ್ತ ಕಾಶ್ಮೀರ’ ಸಿನಿಮಾದಲ್ಲಿ ಬಳಸಿಕೊಳ್ಳಲಾಗಿದೆ ಎಂದು ಚಿತ್ರತಂಡ ತಿಳಿದಿದೆ. ಇದು ಈ ಸಿನಿಮಾದ ಮುಖ್ಯ ಕಥಾಹಂದರ ಕೂಡ ಹೌದು. ದೇಶದ ಗಡಿಯಲ್ಲಿ ಮಾತ್ರವಲ್ಲದೇ ಬೆಂಗಳೂರಿನಲ್ಲೂ ಉಗ್ರಗಾಮಿಗಳ ಹಾವಳಿ ಇದೆ. ಅದರ ನಿರ್ಮೂಲನೆಯ ಕುರಿತ ಕಥೆಯನ್ನು ‘ರಕ್ತ ಕಾಶ್ಮೀರ’ ಸಿನಿಮಾದಲ್ಲಿ ತೋರಿಸಲಾಗುವುದು.

ಇದನ್ನೂ ಓದಿ: ಮದುವೆ ವದಂತಿ ಬಗ್ಗೆ ಮೌನ ಮುರಿದ ರಮ್ಯಾ; ಸ್ಯಾಂಡಲ್​ವುಡ್​ ಕ್ವೀನ್​ ಹೇಳಿದ್ದೇನು?

‘ರಕ್ತ ಕಾಶ್ಮೀರ’ ಸಿನಿಮಾಗೆ ಎಸ್.ವಿ. ರಾಜೇಂದ್ರ ಸಿಂಗ್ ಬಾಬು ಅವರು ನಿರ್ದೇಶನ ಮಾಡುವುದರ ಜೊತೆಗೆ ಕಥೆ, ಚಿತ್ರಕಥೆ ಬರೆದಿದ್ದಾರೆ. ಎಂ.ಎಸ್. ರಮೇಶ್ ಅವರ ಸಂಭಾಷಣೆ ಈ ಸಿನಿಮಾಗಿದೆ. ಗುರುಕಿರಣ್ ಅವರು ಸಂಗೀತ ನಿರ್ದೇಶನ ಮಾಡಿದ್ದಾರೆ. ಉಪೇಂದ್ರ, ರಮ್ಯಾ ದಿವ್ಯ ಸ್ಪಂದನಾ ಜೊತೆ ದೊಡ್ಡಣ್ಣ, ಕುರಿ ಪ್ರತಾಪ್, ಓಂ ಪ್ರಕಾಶ್ ರಾವ್ ಮುಂತಾದವರು ಅಭಿನಯಿಸಿದ್ದಾರೆ. ಈ ಮೊದಲು ಈ ಚಿತ್ರಕ್ಕೆ ‘ಭೀಮೂಸ್​ ಬ್ಯಾಂಗ್ ಬ್ಯಾಂಗ್ ಕಿಡ್ಸ್’ ಎಂದು ಶೀರ್ಷಿಕೆ ಇಡಲಾಗಿತ್ತು. ಈಗ ‘ರಕ್ತ ಕಾಶ್ಮೀರ’ ಎಂದು ಟೈಟಲ್​ ಬದಲಾಯಿಸಲಾಗಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.