Ramya: ಬಜರಂಗದಳ ನಿಷೇಧ ವಿಚಾರ: ರಮ್ಯಾ ಭಿನ್ನ ಅಭಿಪ್ರಾಯ

|

Updated on: May 03, 2023 | 11:26 PM

Ban on Bajrang Dal: ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಬಜರಂಗ ದಳ ಸಂಘಟನೆಯನ್ನು ಬ್ಯಾನ್ ಮಾಡುತ್ತಾರೆ ಎನ್ನಲಾಗುತ್ತಿರುವ ಸುದ್ದಿಗಳ ಬಗ್ಗೆ ನಟಿ ರಮ್ಯಾ ಪ್ರತಿಕ್ರಿಯಿಸಿದ್ದಾರೆ.

Ramya: ಬಜರಂಗದಳ ನಿಷೇಧ ವಿಚಾರ: ರಮ್ಯಾ ಭಿನ್ನ ಅಭಿಪ್ರಾಯ
ರಮ್ಯಾ
Follow us on

ಸಂವಿಧಾನ ವಿಧಿಗಳನ್ನು ಬಜರಂಗ ದಳ, ಪಿಎಫ್​ಐ ಸೇರಿದಂತೆ ಬಹುಸಂಖ್ಯಾತ, ಅಲ್ಪಸಂಖ್ಯಾತರು ಯಾರೇ ಉಲ್ಲಂಘಿಸಿದರೂ ಕಠಿಣ ಕ್ರಮ ಜರುಗಿಸುತ್ತೇವೆ, ಸಂವಿಧಾನಕ್ಕೆ ಧಕ್ಕೆ ತರುವ ಸಂಘಟನೆಗಳ ನಿಷೇಧ ಮಾಡುತ್ತೇವೆಂದು ಕಾಂಗ್ರೆಸ್ (Congress) ಪಕ್ಷ ಚುನಾವಣಾ ಪ್ರಣಾಳಿಕೆಯಲ್ಲಿ (Election Manifesto) ತಿಳಿಸಿದೆ. ಇದೀಗ ಬಿಜೆಪಿಯ ಕೆಲ ಮುಖಂಡರು ”ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಭಜರಂಗದಳವನ್ನು ಬ್ಯಾನ್ ಮಾಡಲಿದೆ” ಎಂದು ಕೈ ನಾಯಕರ ವಿರುದ್ಧ ಹರಿಹಾಯ್ದಿದ್ದಾರೆ. ಬಜರಂಗ ದಳದ (bajrang dal) ಸದಸ್ಯರು ಕೆಲವೆಡೆ ಕಾಂಗ್ರೆಸ್ ವಿರುದ್ಧ ಪ್ರತಿಭಟನೆಯನ್ನೂ ಮಾಡಿದ್ದಾರೆ. ಇದೀಗ ಈ ವಿಷಯವಾಗಿ ನಟಿ, ಕಾಂಗ್ರೆಸ್ ಸ್ಟಾರ್ ಪ್ರಚಾರಕಿ (Star Campaigner) ರಮ್ಯಾ (Ramya) ಪ್ರತಿಕ್ರಿಯೆ ನೀಡಿದ್ದಾರೆ.

ಬನ್ನೂರಿನಲ್ಲಿ ಕಾಂಗ್ರೆಸ್ ಪರ ಪ್ರಚಾರ ಮಾಡಿ ಮಾಧ್ಯಮಗಳೊಟ್ಟಿಗೆ ಮಾತನಾಡಿದ ನಟಿ ರಮ್ಯಾ, ”ಬ್ಯಾನ್ ಎಂಬುವುದು ನನಗೆ ವೈಯಕ್ತಿಕವಾಗಿ ಇಷ್ಟವಿಲ್ಲ. ಒಂದನ್ನು ಬ್ಯಾನ್ ಮಾಡಿದರೆ ಇನ್ನೊಂದು ಬರುತ್ತದೆ. ದ್ವೇಷ ಭಾಷಣ ಮಾಡುವವರ ವಿರುದ್ದ ಕ್ರಮ ತೆಗೆದುಕೊಳ್ಳಲು ಸುಪ್ರಿಂ ಕೋರ್ಟ್ ನಲ್ಲಿ ಕಾನೂನು ಇದೆ. ಪೊಲೀಸರು ಜವಾಬ್ದಾರಿ ತೆಗೆದುಕೊಂಡು ದ್ವೇಷ ಭಾಷಣ ಮಾಡುವವರ ವಿರುದ್ಧ ದೂರು ದಾಖಲಿಸಿಕೊಳ್ಳಬೇಕು ಎಂದು ನ್ಯಾಯಾಲಯ ಸೂಚಿಸಿದೆ ಅದನ್ನು ಜಾರಿಗೊಳಿಸಬೇಕು ಅಷ್ಟೇ. ಬ್ಯಾನ್ ಮಾಡುವುದರಿಂದ ಏನೂ ಪ್ರಯೋಜನ ಇಲ್ಲ. ನಾವು ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿದ್ದೇವೆ, ನಾವು ಕಾನೂನು ಪಾಲಿಸುವುದು ಮುಖ್ಯ, ಕಾನೂನು ಜಾರಿಗೊಳಿಸುತ್ತೇವೆ ಅಂತಾ ಹೇಳುವ ಬದಲು, ಬಜರಂಗ ದಳ ಬ್ಯಾನ್ ಅಂತಾ ಹೇಳಿದ್ದಾರೆ ಅನಿಸುತ್ತದೆ ನಾನು ಪ್ರಣಾಳಿಕೆ ನೋಡಿಲ್ಲ ಕೇಳಿದ್ದೇನೆ, ಇದನ್ನು ಬದಲಾಯಿಸಿ ಸ್ಪಷ್ಟವಾಗಿ ಬರೆಯಬೇಕು ಎಂದಿದ್ದಾರೆ ನಟಿ ರಮ್ಯಾ.

ಪ್ರಚಾರದ ಬಗ್ಗೆ ಮಾತನಾಡಿದ ರಮ್ಯಾ, ಪ್ರಚಾರ ತುಂಬಾ ಚೆನ್ನಾಗಿದೆ ಇಲ್ಲಿಗೆ ಬೈಕ್‌ನಲ್ಲಿ ಬಂದೆ. ಬನ್ನೂರಲ್ಲಿ ತುಂಬಾ ಜೋಶ್ ಇದೆ, ಜನ ತುಂಬಾ ಪ್ರೀತಿ ಗೌರವ ಕೊಟ್ಟಿದ್ದಾರೆ ತುಂಬಾ ಖುಷಿಯಾಗಿದೆ. ಗೋಬಿ, ಟೀ ಬೀಡಾ ಎಲ್ಲಾ ಕೊಟ್ಟಿದ್ದಾರೆ, ಕಾಂಗ್ರೆಸ್ ಗೆಲ್ಲುವ ಬಗ್ಗೆ ವಿಶ್ವಾಸವಿದೆ, ವರುಣ ಕ್ಷೇತ್ರದಲ್ಲಿ ಸಿದ್ದರಾಮಯ್ಯ ಗೆದ್ದೇ ಗೆಲ್ಲುತ್ತಾರೆ, ಅವರು ದೊಡ್ಡ ನಾಯಕರು ಸಿಎಂ ಆಗಿರುವಾಗ ಬಹಳ ಒಳ್ಳೆಯ ಕೆಲಸಗಳನ್ನು ಮಾಡಿದ್ದಾರೆ. ಸಿದ್ದರಾಮಯ್ಯ ಒಳ್ಳೆ ಮನುಷ್ಯರು, ಲಿಂಗಾಯತ ಸಿಎಂ ಬಗ್ಗೆ ಸಿದ್ದು ಹೇಳಿಕೆ ವಿಚಾರದ ಬಗ್ಗೆ ಪ್ರತಿಕ್ರಿಯಿಸಿದ ರಮ್ಯಾ, ”ಅವರು ಬೊಮ್ಮಾಯಿ ಬಗ್ಗೆ ಹೇಳಿದ್ದಾರೆ ಅಷ್ಟೇ” ಎಂದಿದ್ದಾರೆ.

ಇದನ್ನೂ ಓದಿ:ಅಂಬರೀಶ್ ನಿಧನರಾದಾಗ ಅಂತಿಮ ದರ್ಶನಕ್ಕೆ ಬರಲಿಲ್ಲವೇಕೆ? ರಮ್ಯಾ ಕೊಟ್ಟರು ಉತ್ತರ

ನಟಿ ರಮ್ಯಾ, ಕಾಂಗ್ರೆಸ್ ಸ್ಟಾರ್ ಪ್ರಚಾರಕಿ ಆಗಿದ್ದು, ನಿನ್ನೆ ಮಂಡ್ಯ, ಇಂದು ಮೈಸೂರಿನ ವಿಧಾನಸಭಾ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳ ಪರವಾಗಿ ಪ್ರಚಾರ ಮಾಡುತ್ತಿದ್ದಾರೆ. 2019 ರ ಲೋಕಸಭೆ ಚುನಾವಣೆ ಬಳಿಕ ರಮ್ಯಾ ಕಾಂಗ್ರೆಸ್ ನಿಂದ ಅಂತರ ಕಾಯ್ದುಕೊಂಡಿದ್ದರು. ಈ ಹಿಂದೆ ಸಂಸದೆಯಾಗಿದ್ದ ರಮ್ಯಾ 2014 ರ ಬಳಿಕ ರಾಷ್ಟ್ರೀಯ ಕಾಂಗ್ರೆಸ್​ನ ಸಾಮಾಜಿಕ ಜಾಲತಾಣ ವಿಭಾಗದ ಮುಖ್ಯಸ್ಥೆಯಾಗಿ ಕೆಲಸ ಮಾಡಿದ್ದರು.

ಸಿನಿಮಾ ಹಾಗೂ ರಾಜಕೀಯ ಎರಡರಿಂದಲೂ ಅಂತರ ಕಾಯ್ದುಕೊಂಡಿದ್ದ ರಮ್ಯಾ ಇದೀಗ ಎರಡೂ ಕ್ಷೇತ್ರಗಳಿಗೆ ಮರು ಪ್ರವೇಶ ಮಾಡಿದ್ದಾರೆ. ಸಿನಿಮಾದಲ್ಲಿಯೂ ಮರಳಿ ಸಕ್ರಿಯರಾಗಿರುವ ರಮ್ಯಾ, ಆಪಲ್ ಬಾಕ್ಸ್ ಹೆಸರಿನ ಸಿನಿಮಾ ನಿರ್ಮಾಣ ಸಂಸ್ಥೆ ತೆರೆದಿದ್ದು ಸ್ವಾತಿ ಮುತ್ತಿನ ಮಳೆ ಹನಿಯೆ ಹೆಸರಿನ ಸಿನಿಮಾ ನಿರ್ಮಾಣ ಮಾಡಿದ್ದಾರೆ. ಸಿನಿಮಾದಲ್ಲಿ ರಾಜ್ ಬಿ ಶೆಟ್ಟಿ ನಾಯಕ. ಇದರ ಜೊತೆಗೆ ಡಾಲಿ ಧನಂಜಯ್, ಶಿವರಾಜ್ ಕುಮಾರ್ ನಟಿಸಿರುವ ಉತ್ತರಕಾಂಡ ಸಿನಿಮಾದಲ್ಲಿ ನಟಿಸಿದ್ದಾರೆ ಸಹ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ