
ವಿಷ್ಣುವರ್ಧನ್ (Vishnuvardhan) ಜನ್ಮದಿನ ಸಮೀಪಿಸಿದೆ. ಸೆಪ್ಟೆಂಬರ್ 18 ವಿಷ್ಣು ಜನ್ಮದಿನ. ಅವರು ಇದ್ದಿದ್ದರೆ ಇಂದಿಗೆ 75ನೇ ವರ್ಷದ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿದ್ದರು. ಆದರೆ, ಇಂದು ಅವರು ನಮ್ಮ ಜೊತೆ ಇಲ್ಲ. ಅವರ ನೆನಪುಗಳು ಸದಾ ನಮ್ಮ ಜೊತೆ ಇರುವಂಥದ್ದು. ಅವರ ಬರ್ತ್ಡೇ ಸಮೀಪಿಸುತ್ತಿದ್ದಂತೆ ಅವರನ್ನು ನೆನಪಿಸಿಕೊಳ್ಳುವ ಕೆಲಸ ಆಗುತ್ತಿದೆ. ಒಂದೇ ವೇದಿಕೆ ಮೇಲೆ ವಿಷ್ಣುವರ್ಧನ್, ರಾಜ್‌ಕುಮಾರ್, ಅಂಬರೀಷ್ ಕಾಣಿಸಿಕೊಂಡಿದ್ದರು. ಈ ಅಪೂರ್ವ ಸಂಗದಮ ವಿಡಿಯೋ ಇಲ್ಲಿದೆ.
ರಾಜ್‌ಕುಮಾರ್ ಹಾಗೂ ವಿಷ್ಣುವರ್ಧನ್ ಮಧ್ಯೆ ಯಾವುದೂ ಸರಿ ಇಲ್ಲ ಎಂಬ ವದಂತಿ ಚಿತ್ರರಂಗದಲ್ಲಿ ಚಾಲ್ತಿಯಲ್ಲಿ ಇತ್ತು. ಆ ಮಾತು ಈಗಲೂ ನಂಬಿಕೆಗೆ ಅರ್ಹವಾದುದ್ದು ಅಲ್ಲ. ಏಕೆಂದರೆ ವೇದಿಕೆ ಮೇಲೆ ಸಿಕ್ಕಾಗ ವಿಷ್ಣು ಹಾಗೂ ರಾಜ್ ಆಪ್ತತೆಯಿಂದಲೇ ಮಾತನಾಡುತ್ತಿದ್ದರು. ಅದಕ್ಕೆ ಈ ವಿಡಿಯೋ ಉತ್ತಮ ಉದಾಹರಣೆ.
ರಾಜ್‌ಕುಮಾರ್ ಅವರಿಗೆ ಪದ್ಮಭೂಷಣ ಪ್ರಶಸ್ತಿಯನ್ನು ನೀಡಿ ಕೇಂದ್ರ ಸರ್ಕಾರ ಗೌರವಿಸಿತ್ತು. ಈ ಗೌರವದ ಬಳಿಕ ರಾಜ್‌ಕುಮಾರ್ ಅವರಿಗೆ ಸನ್ಮಾನ ಮಾಡುವ ಕಾರ್ಯಕ್ರಮ ನಡೆಯಿತು. ಈ ಕಾರ್ಯಕ್ರಮದಲ್ಲಿ ಒಂದೇ ವೇದಿಕೆ ಮೇಲೆ ಅಂಬರೀಷ್, ವಿಷ್ಣುವರ್ಧನ್ ಹಾಗೂ ರಾಜ್‌ಕುಮಾರ್ ಇದ್ದರು.
ರಾಜ್‌ಕುಮಾರ್ ಬಗ್ಗೆ ವಿಷ್ಣು ಮಾತನಾಡಿದ್ದರು. ‘ನಮ್ಮ ನೆಚ್ಚಿನ ರಾಜಣ್ಣ ಅವರು ಇಂದಿನ ಕಾರ್ಯಕ್ರಮದ ಕೇಂದ್ರ ಬಿಂದು. ಭಾವನೆ ಮಿತಿ ಮೀರಿದಾಗ, ಮನಸ್ಸು ತುಂಬಿ ಬಂದಾಗ ಮಾತು ಬರೋದಿಲ್ಲ. ರಾಜಣ್ಣಗೆ ಸನ್ಮಾನ ಮಾಡಿದ ಸರ್ಕಾರಕ್ಕೆ ಅಭಿನಂದನೆ ಹೇಳುತ್ತೇನೆ. ನನಗೆ ಮಾತನಾಡಲು ಬಾಯೇ ಬರುತ್ತಿಲ್ಲ’ ಎಂದು ವಿಷ್ಣುವರ್ಧನ್ ಮಾತು ಮುಗಿಸಿದ್ದರು.
ಇದನ್ನೂ ಓದಿ: ಹಠ ಮಾಡಿ ವಿಷ್ಣುವರ್ಧನ್ ಸಿನಿಮಾದಲ್ಲಿ ನಟಿಸಿದ್ದ ಬಾಲಿವುಡ್ ನಟ ಅಕ್ಷಯ್ ಕುಮಾರ್
ವಿಷ್ಣುವರ್ಧನ್ ಅವರು ಚಿತ್ರರಂಗದಲ್ಲಿ ಸಾಕಷ್ಟು ಹೆಸರು ಮಾಡಿದ್ದರು. ಹಲವು ಸಿನಿಮಾಗಳನ್ನು ಕೂಡ ಅವರಿಗೆ ನೀಡಲಾಗಿದೆ. ಈ ವರ್ಷ ಅವರಿಗೆ ಕರ್ನಾಟಕ ರತ್ನ ಅವಾರ್ಡ್ ಕೂಡ ನೀಡಲಾಗಿದೆ ಎಂಬುದು ವಿಶೇಷ. ಈ ಕಾರಣದಿಂದಲೂ ಅವರ ಜನ್ಮದಿನ ಸಾಕಷ್ಟು ವಿಶೇಷ ಎನಿಸಿಕೊಂಡಿದೆ. ಅವರ ಸ್ಮಾರಕ ವಿವಾದ ಒಂದು ಬಗೆಹರಿದರೆ ಅವರ ಅಭಿಮಾನಿಗಳಿಗೂ ನೆಮ್ಮದಿ ಸಿಕ್ಕಂತಾಗುತ್ತದೆ. ಈ ವರ್ಷ ಅವರ ಜನ್ಮದಿನವನ್ನು ಅದ್ದೂರಿಯಾಗಿ ಆಚರಿಸಲು ನಿರ್ಧರಿಸಲಾಗಿದೆ. ಇದಕ್ಕೆ ಅವರ ಅಭಿಮಾನಿ ಬಳಗ ರೆಡಿ ಆಗಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Published On - 7:37 am, Tue, 16 September 25