‘ಸುಳಿ’ ಶೀರ್ಷಿಕೆಯಲ್ಲಿ ಸಿನಿಮಾ ಆಗುತ್ತಿದೆ ತಮಿಳಿನ ಜನಪ್ರಿಯ ಕಾದಂಬರಿ
ರಶ್ಮಿ ಎಸ್. ನಿರ್ದೇಶನದ ‘ಸುಳಿ’ ಸಿನಿಮಾಗೆ ಬೆಟ್ಟಸ್ವಾಮಿ ಗೌಡ ಅವರು ಬಂಡವಾಳ ಹೂಡಿದ್ದಾರೆ. ಈ ಸಿನಿಮಾದಲ್ಲಿ ಸನತ್, ಸಂಜನಾ ನಾಯ್ಡು, ಚೈತ್ರಾ ಸಾಕೇಲ್ ಮುಂತಾದವರು ನಟಿಸಿದ್ದಾರೆ. ಕಾದಂಬರಿ ಆಧಾರಿತ ಈ ಸಿನಿಮಾದ ಟ್ರೇಲರ್ ಮತ್ತು ಹಾಡುಗಳ ಬಿಡುಗಡೆ ಮಾಡಲಾಗಿದೆ. ಆ ಬಗ್ಗೆ ಇಲ್ಲಿದೆ ಮಾಹಿತಿ..

ಚಿನ್ನಪ್ಪ ಭಾರತಿ ಅವರ ‘ಪವಳಾಯಿ’ ತಮಿಳು (Tamil) ಕಾದಂಬರಿ 1970ರ ದಶಕದಲ್ಲಿ ಪ್ರಕಟವಾಗಿತ್ತು. ಕೆಲವು ವರ್ಷಗಳ ಹಿಂದೆ ಕನ್ನಡ ಭಾಷೆಗೂ ಅನುವಾದ ಆಯಿತು. ಈಗ ಅದೇ ಕಾದಂಬರಿಯನ್ನು ಆಧರಿಸಿದ ‘ಸುಳಿ’ ಸಿನಿಮಾ (Suli Kannada Movie) ಮಾಡಲಾಗುತ್ತಿದೆ. 2022ರಲ್ಲಿಯೇ ಈ ಸಿನಿಮಾದ ಕೆಲಸ ಆರಂಭ ಆಗಿತ್ತು. ಈಗ ಬಹುತೇಕ ಶೂಟಿಂಗ್ ಮುಗಿದಿದೆ. ಇತ್ತೀಚೆಗೆ ಈ ಚಿತ್ರದ ಟ್ರೇಲರ್ ಮತ್ತು ಆಡಿಯೋ ಬಿಡುಗಡೆ ಮಾಡಲಾಯಿತು. ನಿರ್ದೇಶಕಿ ರಶ್ಮಿ ಎಸ್. (ಸಾಯಿ ರಶ್ಮಿ) ಅವರು ‘ಸುಳಿ’ ಸಿನಿಮಾಗೆ ಆ್ಯಕ್ಷನ್-ಕಟ್ ಹೇಳುತ್ತಿದ್ದಾರೆ.
‘ಸಹಸ್ರಕೋಟಿ ಮೂವೀ ಎಂಟರ್‌ಟೈನ್ಮೆಂಟ್’ ಮೂಲಕ ಬೆಟ್ಟಸ್ವಾಮಿ ಗೌಡ ಅವರು ‘ಸುಳಿ’ ಸಿನಿಮಾವನ್ನು ನಿರ್ಮಾಣ ಮಾಡುತ್ತಿದ್ದಾರೆ. ಸನತ್, ಚೈತ್ರಾ ಸಾಕೇಲ್, ಸಂಜನಾ ನಾಯ್ಡು, ಸೌಭಾಗ್ಯ, ಶಿವಕುಮಾರ್ ಆರಾಧ್ಯ, ಸಿದ್ದು ಮಂಡ್ಯ, ಬೆಟ್ಟಸ್ವಾಮಿ ಗೌಡ, ಶಂಕರ ನಾರಾಯಣ, ಕಾವ್ಯಾ, ಹರಿಹರನ್ ಮುಂತಾದವರು ಈ ಸಿನಿಮಾದ ಪಾತ್ರವರ್ಗದಲ್ಲಿ ಇದ್ದಾರೆ.
‘ಸುಳಿ’ ಸಿನಿಮಾದ ಟ್ರೇಲರ್ ಹಾಗೂ ಹಾಡುಗಳ ಬಿಡುಗಡೆ ಕಾರ್ಯಕ್ರಮಕ್ಕೆ ಲೇಖಕಿ ಬಿ.ಟಿ. ಲಲಿತಾ ನಾಯಕ್, ನಟಿ ಭವ್ಯ, ನಟ ಸುಚೇಂದ್ರ ಪ್ರಸಾದ್ ಮುಂತಾದವರು ಹಾಜರಿ ಹಾಕಿದ್ದರು. ಸಿನಿಮಾದ ಬಗ್ಗೆ ಅವರೆಲ್ಲ ಮಾತನಾಡಿದರು. ‘ಹೆಣ್ಣು ಮತ್ತು ಗಂಡಿನ ಕೂಡಿಕೆ ಪ್ರಕೃತಿ ಸಹಜವಾದದ್ದು. ಅದನ್ನು ಸಮಾಜ ನೋಡುವ ದೃಷ್ಟಿಕೋನ ಬೇರೆ ಬೇರೆ ಆಗಿರುತ್ತದೆ. ಇಂಥದ್ದೊಂದು ಕೂಡಿಕೆಯ ಕಥೆಯನ್ನು ಪ್ರೇಕ್ಷಕರ ಮುಂದೆ ತರುತ್ತಿರುವ ಚಿತ್ರತಂಡದ ಪ್ರಯತ್ನ ಸ್ವಾಗತಾರ್ಹ’ ಎಂದು ಹೇಳಿದರು.
‘ಸಾಮಾನ್ಯವಾಗಿ ಚಿತ್ರರಂಗ ಪುರುಷ ಪ್ರಧಾನ ಆಗಿರುತ್ತದೆ. ಇಂಥ ಕ್ಷೇತ್ರದಲ್ಲಿ ಮಹಿಳಾ ನಿರ್ದೇಶಕರೊಬ್ಬರು ಇಂಥದ್ದೊಂದು ಕಥೆಯನ್ನು ಸಿನಿಮಾ ಮಾಡುತ್ತಿರುವುದು ನಿಜಕ್ಕೂ ಎಲ್ಲರಿಗೂ ಸ್ಫೂರ್ತಿಯಾಗುವಂಥ ವಿಷಯ’ ಎಂದು ಭವ್ಯ ಹೇಳಿದರು. ‘ಜನಪ್ರಿಯವಾದ ಕೃತಿಯೊಂದನ್ನು ದೃಶ್ಯರೂಪಕ್ಕೆ ಇಳಿಸುವುದು ನಿಜಕ್ಕೂ ಸವಾಲಿನ ಕೆಲಸ. ಸುಳಿ ಚಿತ್ರತಂಡ ಅಂಥದ್ದೊಂದು ಸವಾಲಿನ ಕೆಲಸವನ್ನು ಸಲೀಸಾಗಿ ಮಾಡಿ ಮುಗಿಸಿದೆ. ಇಂಥ ಪ್ರಯತ್ನಗಳು ಮುಂದೆ ಅನೇಕರಿಗೆ ಪ್ರೇರಣೆಯಾಗುತ್ತದೆ’ ಎಂದರು ಸುಚೇಂದ್ರ ಪ್ರಸಾದ್.
ಇದನ್ನೂ ಓದಿ: ಅಭಿಮಾನಿಗಳಿಂದ ಇನ್ನಷ್ಟು ದೂರ ಸರಿದ ನಟಿ ಅನುಷ್ಕಾ ಶೆಟ್ಟಿ
ನಿರ್ದೇಶಕಿ ರಶ್ಮಿ ಎಸ್. ಅವರು ಮಾತನಾಡಿ, ‘ಹೆಣ್ಣಿನ ಅಂತರಂಗದ ಭಾವನೆಗಳು, ಸಾಮಾಜಿಕ ಮೌಲ್ಯಗಳು ಎಲ್ಲವನ್ನೂ ಈ ಸಿನಿಮಾದಲ್ಲಿ ತೆರೆಮೇಲೆ ತರುವ ಪ್ರಯತ್ನ ಮಾಡಿದ್ದೇವೆ. ಮಂಡ್ಯದ ಗ್ರಾಮೀಣ ಪರಿಸರವನ್ನು ಹಿನ್ನೆಲೆಯಾಗಿ ಇಟ್ಟುಕೊಂಡು ಸಿನಿಮಾದ ಕಥೆ ಸಾಗುತ್ತದೆ’ ಎಂದರು. ನಟ ಸನತ್ ಅವರು ಈ ಸಿನಿಮಾದಲ್ಲಿ ಮಂಡ್ಯ ಹಿನ್ನೆಲೆಯ ಹಳ್ಳಿ ಹುಡುಗನಾಗಿ ಕಾಣಿಸಿಕೊಂಡಿದ್ದಾರೆ. ಇಂಥ ಸಿನಿಮಾದಲ್ಲಿ ನಟಿಸಿದ್ದಕ್ಕೆ ಚೈತ್ರಾ ಸಾಕೇಲ್ ಹಾಗೂ ಸಂಜನಾ ನಾಯ್ಡು ಅವರಿಗೆ ಖುಷಿ ಇದೆ.
‘ಹಲವು ಸಾಮಾಜಿಕ ಹೋರಾಟಗಳಲ್ಲಿ ತೊಡಗಿಸಿಕೊಂಡಿರುವ ನನಗೆ ಚಿತ್ರರಂಗದಲ್ಲಿ ಇದು ಮೊದಲ ಅನುಭವ. ಸಿನಿಮಾದ ಕಥೆ ಇಷ್ಟವಾಗಿದ್ದರಿಂದ ಅದನ್ನು ಸಿನಿಮಾ ಮಾಡಿ ತೆರೆಮೇಲೆ ತರುವ ಕೆಲಸಕ್ಕೆ ಕೈ ಹಾಕಿದ್ದೇನೆ. ಸಿನಿಮಾ ನಾವಂದುಕೊಂಡಂತೆ ಬಹಳ ಚೆನ್ನಾಗಿ ಮೂಡಿಬಂದಿದೆ’ ಎಂದು ನಿರ್ಮಾಪಕ ಬೆಟ್ಟಸ್ವಾಮಿ ಗೌಡ ಹೇಳಿದರು. ಮದ್ದೂರು, ಆಲಭುಜನಹಳ್ಳಿ, ನಗರಕೆರೆ, ಮಾಲಗಾರನಹಳ್ಳಿ, ಕೆ.ಎಂ. ದೊಡ್ಡಿ (ಭಾರತೀನಗರ) ಸೇರಿದಂತೆ ಹಲವು ಕಡೆಗಳಲ್ಲಿ ಈ ಸಿನಿಮಾಗೆ ಶೂಟಿಂಗ್ ಮಾಡಲಾಗಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.




