AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ರಾಜಮೌಳಿಯ ಭೇಟಿಯಾಗದೆ ಓಡಿ ಹೋಗಿದ್ದ ತರುಣ್ ಸುಧೀರ್

Tharun Sudhir: ತರುಣ್ ಸುಧೀರ್ ಕನ್ನಡದ ಯಶಸ್ವಿ ನಿರ್ದೇಶಕ ಮತ್ತು ನಿರ್ಮಾಪಕ ಸಹ. ಅವರು ನಿರ್ದೇಶನ ಮಾಡಿರುವ ಮೂರು ಸಿನಿಮಾಗಳು ಸೂಪರ್ ಹಿಟ್ ಆಗಿವೆ. ನಿರ್ಮಾಣ ಮಾಡಿರುವ ಎರಡು ಸಿನಿಮಾಗಳು ಸಹ ಸೂಪರ್ ಹಿಟ್ ಆಗಿವೆ. ಅವರು ರಾಜಮೌಳಿಯ ದೊಡ್ಡ ಅಭಿಮಾನಿ. ಆದರೆ ಅವರನ್ನು ಭೇಟಿ ಆಗುವ ಅವಕಾಶ ಸಿಕ್ಕಾಗ ಮಾತ್ರ, ಅಲ್ಲಿಂದ ಯಾರಿಗೂ ಹೇಳದೆ ಪರಾರಿ ಆಗಿದ್ದರಂತೆ. ಅದಕ್ಕೆ ಕಾರಣ ಏನೆಂದು ಅವರೇ ವಿವರಿಸಿದ್ದಾರೆ.

ರಾಜಮೌಳಿಯ ಭೇಟಿಯಾಗದೆ ಓಡಿ ಹೋಗಿದ್ದ ತರುಣ್ ಸುಧೀರ್
Tarun Sudhir Rajamouli
ಮಂಜುನಾಥ ಸಿ.
|

Updated on: Sep 12, 2025 | 12:33 PM

Share

ತರುಣ್ ಸುಧೀರ್ (Tarun Sudhir) ಕನ್ನಡದ ಯಶಸ್ವಿ ಸಿನಿಮಾ ನಿರ್ದೇಶಕ. ಅವರು ನಿರ್ದೇಶನ ಮಾಡಿರುವ ‘ಚೌಕ’, ‘ರಾಬರ್ಟ್’, ‘ಕಾಟೇರ’ ಸಿನಿಮಾಗಳು ಸೂಪರ್ ಹಿಟ್ ಆಗಿವೆ. ಸಿನಿಮಾ ನಿರ್ಮಾಪಕರೂ ಆಗಿರುವ ತರುಣ್ ಸುಧೀರ್, ಇತ್ತೀಚೆಗಷ್ಟೆ ನಿರ್ಮಾಣ ಮಾಡಿರುವ ‘ಏಳುಮಲೆ’ ಸಿನಿಮಾ ಸಹ ಬಾಕ್ಸ್ ಆಫೀಸ್​​ನಲ್ಲಿ ಭರ್ಜರಿ ಪ್ರದರ್ಶನ ಕಾಣುತ್ತಿದೆ. ತರುಣ್ ಸುಧೀರ್ ನಟರಾಗಿಯೂ ಹೆಸರು ಮಾಡಿದ್ದಾರೆ. ತರುಣ್ ಸುಧೀರ್, ಕಚೇರಿಯಲ್ಲಿ ಹಲವು ಖ್ಯಾತ ನಿರ್ದೇಶಕರ ಚಿತ್ರಗಳನ್ನು ಹಾಕಿಕೊಂಡಿದ್ದಾರೆ. ಅವರು ನಿರ್ದೇಶಕ ರಾಜಮೌಳಿಯ ದೊಡ್ಡ ಅಭಿಮಾನಿ ಸಹ. ಆದರೆ ಅವರನ್ನು ಭೇಟಿ ಆಗುವ ಅವಕಾಶ ಬಂದಾಗ ಸ್ಥಳದಿಂದ ಓಡಿ ಹೋಗಿದ್ದರಂತೆ ತರುಣ್.

‘ಏಳುಮಲೆ’ ಸಿನಿಮಾದ ಪ್ರಚಾರದ ವೇಳೆ ಸಂದರ್ಶನವೊಂದರಲ್ಲಿ ಮಾತನಾಡಿರುವ ತರುಣ್ ಸುಧೀರ್ ಈ ವಿಷಯ ಹಂಚಿಕೊಂಡಿದ್ದಾರೆ. ‘ರನ್ನ’ ಸಿನಿಮಾದ ಶೂಟಿಂಗ್ ವೇಳೆ ಹೈದರಾಬಾದ್​​ನಲ್ಲಿ ಶೂಟಿಂಗ್ ಮಾಡುವಾಗ ರಾಜಮೌಳಿ ಅವರು ಸಹ ಅಲ್ಲಿಯೇ ಬೇರ್ಯಾವುದೋ ಶೂಟಿಂಗ್​​ಗೆಂದು ಬಂದಿದ್ದರಂತೆ. ಆ ವೇಳೆ ಸುದೀಪ್ ಅವರು ತರುಣ್ ಸುಧೀರ್, ‘ರನ್ನ’ ಸಿನಿಮಾ ನಿರ್ದೇಶಿಸುತ್ತಿದ್ದ ನಂದ ಮತ್ತು ಸಹ ನಿರ್ಮಾಪಕರಾದ ಸುಧಾಕರ್ ಎಂಬುವರನ್ನು ರಾಜಮೌಳಿಯವರ ಭೇಟಿ ಮಾಡಿಸಲು ಕರೆದುಕೊಂಡು ಹೋಗಿದ್ದರಂತೆ. ರಾಜಮೌಳಿಯ ದೊಡ್ಡ ಅಭಿಮಾನಿ ಆಗಿದ್ದ ತರುಣ್ ಬಹಳ ಖುಷಿಯಲ್ಲಿ ಸುದೀಪ್ ಅವರ ಜೊತೆಗೆ ಹೋದರಂತೆ.

ಅದರಂತೆ ಮೊದಲಿಗೆ ಸುದೀಪ್ ಅವರು ಹೋಗಿ ರಾಜಮೌಳಿ ಬಳಿ ಮಾತನಾಡಿ, ಮೊದಲಿಗೆ ನಂದ ಅವರನ್ನು ಪರಿಚಯಿಸಿ, ‘ಅತ್ತಾರಿಂಟಿಕಿ ದಾರೇದಿ’ ರೀಮೇಕ್ ಮಾಡುತ್ತಿದ್ದೀವಿ, ಇವರು ನಿರ್ದೇಶಕರು ಈ ಹಿಂದಿನ ಇವರ ಕೆಲ ಸಿನಿಮಾಗಳು ಚೆನ್ನಾಗಿ ಹೋಗಿವೆ ಎಂದು ಪರಿಚಯಿಸಿದರಂತೆ. ಸುಧಾಕರ್ ಅವರನ್ನು ಸಹ ರಾಜಮೌಳಿ ಅವರಿಗೆ ಪರಿಚಯಿಸಿ, ನಿರ್ಮಾಪಕರು ಇತ್ಯಾದಿ ಏನೋ ಹೇಳಿದರಂತೆ. ಅವರ ಬಳಿಕ ತರುಣ್ ಸುಧೀರ್ ಅವರನ್ನು ಕರೆಯಬೇಕು ಎನ್ನುವಷ್ಟರಲ್ಲಿ ತರುಣ್ ಅವರು ಅಲ್ಲಿಂದ ಪರಾರಿ ಆಗಿದ್ದರಂತೆ.

ಇದನ್ನೂ ಓದಿ:ದರ್ಶನ್ ವಿಷ ಕೇಳಿದ ಬಗ್ಗೆ ಗೆಳೆಯ ತರುಣ್ ಸುಧೀರ್ ಪ್ರತಿಕ್ರಿಯೆ

ತರುಣ್ ಅವರು ಹೇಳಿರುವಂತೆ, ಅಣ್ಣ ನಂದನನ್ನು ನಿರ್ದೇಶಕ ಎಂದು ಪರಿಚಯ ಮಾಡಿಸಿದರು. ಆದರೆ ನನ್ನನ್ನು ಪರಿಚಯ ಮಾಡಿಸಲು ಅವರಿಗೆ ಯಾವ ಕಾರಣವೂ ಇರಲಿಲ್ಲ. ಪರಿಚಯ ಮಾಡಿಸಿದ್ದರೂ ಏನೆಂದು ಹೇಳುತ್ತಿದ್ದರು, ‘ನಂದ ಕಿಶೋರ್ ತಮ್ಮ’ ಎಂಬುದು ಬಿಟ್ಟರೆ ನನ್ನ ಪರಿಚಯ ಹೇಳಲು ಯಾವ ಕಾರಣವೂ ಇರಲಿಲ್ಲ. ನಾನು ಯಾವ ಸಾಧನೆಯನ್ನೂ ಮಾಡಿರಲಿಲ್ಲ. ಹಾಗಾಗಿ ಅಂದು ನಾನು ಅವರಿಗೆ ಹೇಳದೆ ಕೇಳದೆ ಅಲ್ಲಿಂದ ಹೊರಟು ಬಿಟ್ಟೆ. ಹೋಗಿ ರಾಜಮೌಳಿ ಅವರ ಕ್ಯಾರವ್ಯಾನ್​​ನ ಹಿಂದೆ ನಿಂತುಬಿಟ್ಟಿದ್ದೆ’ ಎಂದು ತರುಣ್ ಹೇಳಿಕೊಂಡಿದ್ದಾರೆ.

ಆದರೆ ಈಗ ತರುಣ್ ಸುಧೀರ್ ಕನ್ನಡ ಚಿತ್ರರಂಗದ ಯಶಸ್ವಿ ನಿರ್ದೇಶಕ ಮತ್ತು ನಿರ್ಮಾಪಕ ಸಹ. ಅವರು ನಿರ್ದೇಶಿಸಿರುವ ಮೂರು ಸಿನಿಮಾಗಳು ಸೂಪರ್ ಹಿಟ್ ಆಗಿವೆ. ನಿರ್ಮಾಣ ಮಾಡಿರುವ ‘ಗುರು ಶಿಷ್ಯರು’ ಮತ್ತು ‘ಏಳುಮಲೆ’ ಎರಡೂ ಸಿನಿಮಾಗಳು ಸೂಪರ್ ಹಿಟ್ ಆಗಿವೆ. ಸೈಮಾ, ಫಿಲಂ ಫೇರ್ ಪ್ರಶಸ್ತಿಗಳನ್ನು ಸಹ ಅವರು ಪಡೆದುಕೊಂಡಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ