
ರವಿಚಂದ್ರನ್ (Ravichandran) ಅವರನ್ನು ‘ಕನಸುಗಾರ’ ಎಂದು ಕರೆಯಲಾಗುತ್ತದೆ. ಹೀಗೆ ಹೆಸರು ಬರಲು ಅವರು ಪ್ರೇಮಾ ಜೊತೆಗೆ ನಟಿಸಿದ್ದ ‘ಕನಸುಗಾರ’ ಸಿನಿಮಾ ಕಾರಣವಲ್ಲ. ಬದಲಿಗೆ ಅವರು ಸಿನಿಮಾಗಳ ಬಗ್ಗೆ ಕಾಣುವ ಕನಸುಗಳು ಕಾರಣ. ಎಲ್ಲರೂ ಸಿದ್ಧ ಮಾದರಿಯಲ್ಲಿ ಸಿನಿಮಾ ಮಾಡುವಾಗ ಬೃಹತ್ ಕನಸು ಕಂಡು ಅದನ್ನು ನನಸು ಮಾಡಿದವರು ರವಿಚಂದ್ರನ್. ಒಂದು ಸಾಧಾರಣ ಸಿನಿಮಾ ಸೆಟ್ನಲ್ಲಿ ಇಡೀ ಸಿನಿಮಾದ ಚಿತ್ರೀಕರಣವನ್ನೇ ಮುಗಿಸುತ್ತಿದ್ದ ಕಾಲದಲ್ಲಿ ಒಂದು ಹಾಡಿಗೆ ಹತ್ತಾರು ಸೆಟ್ಟುಗಳನ್ನು ಹಾಕಿದ ಧೈರ್ಯವಂತ ರವಿಚಂದ್ರನ್. ಚಿತ್ರರಂಗಕ್ಕೆ ಬಂದು ದಶಕಗಳಾಗಿದ್ದರೂ ಸಹ ಈಗಲೂ ಅವರು ಕನಸು ಕಾಣುವುದು ನಿಲ್ಲಿಸಿಲ್ಲ ಹಾಗೂ ಆ ಕನಸನ್ನು ನನಸು ಮಾಡುವ ಪ್ರಯತ್ನವನ್ನೂ ನಿಲ್ಲಿಸಿಲ್ಲ.
ಇದೀಗ ರವಿಚಂದ್ರನ್ ಅವರು ಮತ್ತೊಂದು ಸಿನಿಮಾ ಸಾಹಸಕ್ಕೆ ಕೈ ಹಾಕಿದ್ದಾರೆ. ಕನ್ನಡ ಚಿತ್ರರಂಗಕ್ಕೆ ಹಲವುಯ ಮೊದಲುಗಳನ್ನು ತಂದ ರವಿಚಂದ್ರನ್, ಈಗ ಮತ್ತೊಂದು ಮೊದಲನ್ನು ತರುವ ಪ್ರಯತ್ನದಲ್ಲಿದ್ದಾರೆ. ಕಾಲಕ್ಕೆ ತಕ್ಕಂತೆ ತಮ್ಮನ್ನು ಒಗ್ಗಿಸಿಕೊಳ್ಳುತ್ತಾ ಎಐ ತಂತ್ರಜ್ಞಾನದ ನೆರವಿನಿಂದ ಒಂದು ಬೃಹತ್ ಸಿನಿಮಾದ ಚಿತ್ರೀಕರಣವನ್ನು ಬಹುತೇಕ ಪೂರ್ಣ ಮಾಡಿದ್ದಾರಂತೆ. ಸಿನಿಮಾದ ಹೆಸರು ‘ಐ ಆಮ್ ಗಾಡ್’.
ಇತ್ತೀಚೆಗೆ ಭಾಗಿ ಆಗಿದ್ದ ಕಾರ್ಯಕ್ರಮವೊಂದರಲ್ಲಿ ಮಾತನಾಡಿರುವ ರವಿಚಂದ್ರನ್, ತಮ್ಮ ಹೊಸ ಸಾಹಸವಾದ ‘ಐ ಆಮ್ ಗಾಡ್’ ಸಿನಿಮಾದ ಬಗ್ಗೆ ಮಾತನಾಡಿದರು. ‘ಈ ಸಿನಿಮಾಕ್ಕಾಗಿ 400 ದಿನ ಶೂಟಿಂಗ್ ಮಾಡಿದ್ದೇನೆ. ಆ ನಾನ್ನೂರು ದಿನಗಳಲ್ಲಿ ಸುಮಾರು 200 ದಿನಗಳ ಕಾಲ ಸುಮಾರು 18 ಮಂದಿ ಮಕ್ಕಳ ಜೊತೆಗೆ ಶೂಟಿಂಗ್ ಮಾಡಿದ್ದೇನೆ. ಈ ಸಿನಿಮಾ ಅನ್ನು ಆರು ಭಾಷೆಗಳಲ್ಲಿ ರಿಲೀಸ್ ಮಾಡಲಿದ್ದೇನೆ. ಕನ್ನಡದ ಸಿನಿಮಾನಲ್ಲಿ 30 ಹಾಡುಗಳಿದ್ದರೆ ಉಳಿದ ಸಿನಿಮಾಗಳಲ್ಲಿ 150 ಹಾಡುಗಳು ಇರಲಿವೆ’ ಎಂದರು.
ಇದನ್ನೂ ಓದಿ:ಬಾಲ್ಯದ ಗೆಳೆಯನಿಗೆ ಡಿಕೆಶಿ ‘ಉಡುಗೊರೆ’: ರಾಜಕೀಯಕ್ಕೆ ರವಿಚಂದ್ರನ್?
‘ಪ್ರತಿ ಭಾಷೆಗೂ ಸಹ ಭಿನ್ನ ಹಾಡುಗಳನ್ನು ಮಾಡಿದ್ದೇನೆ. ಕೆಲವು ಹಾಡುಗಳಷ್ಟೆ ಎಲ್ಲ ಭಾಷೆಯಲ್ಲೂ ಒಂದೇ ಇರಲಿದೆ. ಪ್ರತಿಯೊಂದು ಭಾಷೆಗೂ ಭಿನ್ನ ಎಡಿಟಿಂಗ್ ಮಾಡುತ್ತೇನೆ. ಪ್ರತಿ ಭಾಷೆಗೂ ಬೇರೆ ಬೇರೆ ಸಿನಿಮಾಗಳನ್ನು ಕೊಡಲಿದ್ದೀನಿ. ಚಿತ್ರಮಂದಿರಗಳಲ್ಲಿ 3 ಗಂಟೆ ಅವಧಿಯ ಸಿನಿಮಾ ರಿಲೀಸ್ ಮಾಡುತ್ತೇನೆ ಮತ್ತು ಒಟಿಟಿಗೆ ಬೇರೆ ಅವಧಿಯ ಸಿನಿಮಾ ರಿಲೀಸ್ ಮಾಡುತ್ತೀನಿ. ಸಿನಿಮಾದ ಚಿತ್ರೀಕರಣ ಪೂರ್ಣ ಮುಗಿಸಿದ್ದೀನಿ, ಈಗ ಸಿನಿಮಾದ ಎಡಿಟಿಂಗ್ ಶುರು ಮಾಡಲಿದ್ದೀನಿ’ ಎಂದಿದ್ದಾರೆ ರವಿಚಂದ್ರನ್.
‘ಇಷ್ಟು ದೊಡ್ಡ ಸಿನಿಮಾ ಮಾಡುತ್ತಿದ್ದರೂ ಸಹ ಒಬ್ಬ ಸಹಾಯಕನನ್ನೂ ಇರಿಸಿಕೊಂಡಿಲ್ಲ. ನನ್ನ ಸಿನಿಮಾಕ್ಕೆ ಆಕ್ಷನ್ ಡೈರೆಕ್ಟರ್ ಇಲ್ಲ, ಡ್ಯಾನ್ಸ್ ಡೈರೆಕ್ಟರ್ ಇಲ್ಲ ಎಲ್ಲವನ್ನೂ ನಾನೊಬ್ಬನೇ ಮಾಡಿದ್ದೀನಿ. ನನ್ನ ಏಕೈಕ ಸಹಾಯಕ ಎಂದರೆ ನನ್ನ ಮೊಬೈಲ್. ಎಐ ಬಳಸಿಕೊಂಡು ನಾನು ಇದನ್ನೆಲ್ಲ ಮಾಡಿದ್ದೇನೆ. ಎಐ ಕಲಿತು, ಅದರೊಂದಿಗೆ ಪದೇ ಪದೇ ಚರ್ಚೆ ನಡೆಸಿ-ನಡೆಸಿ ನಾನು ಈ ಸಿನಿಮಾ ಮಾಡುತ್ತಿದ್ದೇನೆ. ಈ ಹಂತದಲ್ಲಿ ಎಐ ನನ್ನನ್ನು ಅಣ್ಣ ಅನ್ನಲು ಪ್ರಾರಂಭಿಸಿದೆ’ ಎಂದಿದ್ದಾರೆ ರವಿಚಂದ್ರನ್.
‘ಈ ಸಿನಿಮಾದ ಎಲ್ಲ ವಿಭಾಗಗಳಲ್ಲಿಯೂ ನಾನೊಬ್ಬನೇ ಕೆಲಸ ಮಾಡಿದ್ದೇನೆ. ಸಿನಿಮಾಕ್ಕೆ ಸಿಜಿಐ ಸಹ ನಾನೇ ಮಾಡಿದ್ದೇನೆ. ಪರದೆಯ ಮೇಲೆ ಒಂದು ಅದ್ಭುತವಾದ ಲೋಕವನ್ನು ಪ್ರೇಕ್ಷಕರು ನೋಡುತ್ತಾರೆ. ಇದೊಂದು ಅದ್ಭುತದಂತೆ ಭಾಸವಾಗುತ್ತದೆ. ಸಿನಿಮಾದ ಟ್ಯಾಗ್ಲೈನ್ ಸಹ ‘ಮ್ಯಾಜಿಕಲ್, ಮ್ಯೂಸಿಕಲ್, ಮಿರಾಕಲ್’ ಎಂದಿದೆ ಎಂದಿದ್ದಾರೆ ರವಿಚಂದ್ರನ್.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ