RCB-Hombale: ಬೆಂಗಳೂರಿನ ಖದರ್ ವಿಶ್ವಕ್ಕೆ ಪಸರಿಸಲು ಹೊಂಬಾಳೆ ಜೊತೆ ಕೈಜೋಡಿಸಿದ ಆರ್ಸಿಬಿ
ಬೆಂಗಳೂರಿನ ಎರಡು ಪವರ್ಹೌಸ್ಗಳಾದ ಆರ್ಸಿಬಿ ಹಾಗೂ ಹೊಂಬಾಳೆ ಪರಸ್ಪರ ಕೈಜೋಡಿಸಿವೆ. ಅಭಿಮಾನಿಗಳ ನಿರೀಕ್ಷೆಗಳು ಬೆಟ್ಟದಷ್ಟು...
ಐಪಿಎಲ್ (IPL) ಹೊಸ ಸೀಸನ್ ಶುರುವಾಗಿದೆ. ಇಂದು (ಏಪ್ರಿಲ್ 2) ಈ ಸೀಸನ್ನ ಮೊದಲ ಪಂದ್ಯವನ್ನು ಆರ್ಸಿಬಿ ಆಡಲಿದೆ, ಅದೂ ಬೆಂಗಳೂರಿನಲ್ಲಿ. ಪಂದ್ಯ ಶುರುವಾಗಲು ಅಭಿಮಾನಿಗಳು ಕಾಯುತ್ತಿದ್ದು, ಪಂದ್ಯ ಶುರುವಾಗುವ ಮುನ್ನ ಆರ್ಸಿಬಿ ಸಿಹಿ ಸುದ್ದಿಯೊಂದನ್ನು ಅಭಿಮಾನಿಗಳಿಗೆ ನೀಡಿದೆ. ಈ ಸೀಸನ್ನಿಂದ ಆರ್ಸಿಬಿಯು ರಾಷ್ಟ್ರಮಟ್ಟದಲ್ಲಿ ಛಾಪು ಮೂಡಿಸಿರುವ ಕರ್ನಾಟಕದ ಹೆಮ್ಮೆಯ ನಿರ್ಮಾಣ ಸಂಸ್ಥೆಯಾದ ಹೊಂಬಾಳೆ ಫಿಲಮ್ಸ್ (Hombale Films) ಜೊತೆ ಕೈಜೋಡಿಸಿದೆ. ಈ ಮಾಹಿತಿಯನ್ನು ಆರ್ಸಿಬಿಯ ಅಧಿಕೃತ ಟ್ವಿಟ್ಟರ್ ಖಾತೆಯಲ್ಲಿ ಹಂಚಿಕೊಳ್ಳಲಾಗಿದೆ.
”ನಾವು ಹೊಂಬಾಳೆ ಜೊತೆ ಕೈ ಜೋಡಿಸಿದ್ದೇವೆ, ಈಗಿನಿಂದ ಹೊಂಬಾಳೆಯು ನಮ್ಮ ಅಧಿಕೃತ ಡಿಜಿಟಲ್ ಪಾರ್ಟನರ್. ಆರ್ಸಿಬಿಯ ಎಲ್ಲ ಅಧಿಕೃತ ವಿಡಿಯೋ ನಿರ್ಮಾಣ ಹಾಗೂ ಪ್ರಸಾರವನ್ನು ಇನ್ನು ಮುಂದೆ ಹೊಂಬಾಳೆ ಫಿಲಮ್ಸ್ ಮಾಡಲಿದೆ. ಹೊಂಬಾಳೆ ಹಾಗೂ ಆರ್ಸಿಬಿ ಕಡೆಯಿಂದ ಹೊಸ ಕಂಟೆಂಟ್ ಹೊರಗೆ ಬರುವುದನ್ನು ನಿರೀಕ್ಷಿಸಿ. ಬೆಂಗಳೂರಿನಲ್ಲಿ ಜನಿಸಿ ಭಾರತವನ್ನು ರಂಜಿಸುತ್ತಿದ್ದೇವೆ (Born In Bengaluru To Thrill The Nation)’ ಎಂಬ ಕ್ಯಾಚಿ ಟ್ಯಾಗ್ ಲೈನ್ ಅನ್ನು ಸಹ ಆರ್ಸಿಬಿ ಹಂಚಿಕೊಂಡಿದೆ.
ಹೊಂಬಾಳೆ ಹಾಗೂ ಆರ್ಸಿಬಿ ಕೈಜೋಡಿಸಿರುವ ಸುದ್ದಿಯಿಂದ ಥ್ರಿಲ್ ಆಗಿರುವ ಅಭಿಮಾನಿಗಳು ಖುಷಿಯಿಂದ ಕಮೆಂಟ್ ಮಾಡಿದ್ದಾರೆ. ‘ಸ್ವರ್ಗದಲ್ಲೇ ನಿಶ್ಚಯವಾದ ಜೋಡಿ ಇದು’, ‘ಬೆಂಗಳೂರಿಗೆ ಹೆಮ್ಮೆ ಮೂಡಿಸುತ್ತಿರುವ ಹೊಂಬಾಳೆ, ಆರ್ಸಿಬಿ ಒಂದಾಗಿರುವುದು ಅದ್ಭುತ’, ‘ಆರ್ಸಿಬಿಗೆ ಇನ್ನು ಮುಂದೆ ಹಿಟ್ ಮೇಲೆ ಹಿಟ್’, ‘ಎರಡು ಪವರ್ಹೌಸ್ಗಳು ಒಂದಾಗಿ ಸುನಾಮಿ ಸೃಷ್ಟಿಸಲಿವೆ’ ಇನ್ನೂ ಅನೇಕ ತರಹೇವಾರಿ ಕಮೆಂಟ್ಗಳನ್ನು ಅಭಿಮಾನಿಗಳು ಮಾಡಿದ್ದಾರೆ.
ಈ ಹಿಂದೆ ಕೆಜಿಎಫ್ 2 ಸಿನಿಮಾ ಬಿಡುಗಡೆ ಆಗಿದ್ದಾಗ ಆರ್ಸಿಬಿ ತಂಡಕ್ಕಾಗಿ ವಿಶೇಷ ಪ್ರದರ್ಶನವನ್ನು ಹೊಂಬಾಳೆ ಫಿಲಮ್ಸ್ ಹಂಚಿಕೊಂಡಿತ್ತು. ಅಂದು ಕೆಜಿಎಫ್ 2 ಸಿನಿಮಾ ನೋಡಿ ಆಟಗಾರರು ಥ್ರಿಲ್ ಆಗಿದ್ದರು. ಇದೀಗ ಹೊಂಬಾಳೆ-ಆರ್ಸಿಬಿ ಜೊತೆ ಟೀಮಪ್ ಆಗಿದ್ದು ಹೊಸ ಮಾದರಿಯ ಕಂಟೆಂಟ್ ಅನ್ನು ವಿಡಿಯೋಗಳನ್ನು ಅಭಿಮಾನಿಗಳು ನಿರೀಕ್ಷಿಸುತ್ತಿದ್ದಾರೆ.
ಇದನ್ನೂ ಓದಿ: Sapthami Gowda: ‘ಯುವ’ ಚಿತ್ರಕ್ಕೆ ಸಪ್ತಮಿ ಗೌಡ ನಾಯಕಿ: ‘ಹೊಂಬಾಳೆ ಫಿಲ್ಮ್ಸ್’ ಜೊತೆ ಮತ್ತೆ ಕೈ ಜೋಡಿಸಿದ ‘ಕಾಂತಾರ’ ನಟಿ
ಆರ್ಸಿಬಿಯು ಹಲವು ವಿಧವಾದ ವಿಡಿಯೋಗಳನ್ನು ಬಿಡುಗಡೆ ಮಾಡುತ್ತಲೇ ಇರುತ್ತದೆ. ಆಟಗಾರರ ಸಂದರ್ಶನ, ಡ್ರೆಸ್ಸಿಂಗ್ ರೂಮ್ನಲ್ಲಿ ನಡೆವ ಫನ್ ಘಟನೆಗಳ ವಿಡಿಯೋ, ಆಟಗಾರರ ಪ್ರಾಕ್ಟೀಸ್ ವಿಡಿಯೋಗಳು ಇವುಗಳ ಜೊತೆಗೆ ಮಿಸ್ಟರ್ ನ್ಯಾಗ್ಸ್ ವಿಡಿಯೋವನ್ನು ಸಹ ಬಿಡುಗಡೆ ಮಾಡುತ್ತಾ ಅಭಿಮಾನಿಗಳೊಟ್ಟಿಗೆ ಸಂಪರ್ಕದಲ್ಲಿರುತ್ತದೆ. ಇದೀಗ ಹೊಂಬಾಳೆಯು ಆರ್ಸಿಬಿಯ ವಿಡಿಯೋವನ್ನು ಮಾಡಲಿದ್ದು ಬೇರೆ ಏನು ನೀಡಬಹುದು ಎಂಬ ಕುತೂಹಲ ಮೂಡಿದೆ.
ಹೊಂಬಾಳೆಯು ಅತ್ಯಂತ ಕಡಿಮೆ ಅವಧಿಯಲ್ಲಿ ಭಾರತದ ಟಾಪ್ ನಿರ್ಮಾಣ ಸಂಸ್ಥೆಗಳಲ್ಲಿ ಒಂದಾಗಿ ಸ್ಥಾನಪಡೆದುಕೊಂಡಿದೆ. ಪುನೀತ್ ರಾಜ್ಕುಮಾರ್ ನಟನೆಯ ನಿನ್ನಿಂದಲೆ ಸಿನಿಮಾ ಮೂಲಕ ನಿರ್ಮಾಣ ಆರಂಭಿಸಿ, ಈ ವರೆಗೆ ಏಳು ಸಿನಿಮಾಗಳನ್ನು ನಿರ್ಮಾಣ ಮಾಡಿದೆ. ಪ್ರಸ್ತುತ ಹಲವು ಪ್ರಾಜೆಕ್ಟ್ಗಳಲ್ಲಿ ಹೊಂಬಾಳೆ ಬಂಡವಾಳ ಹೂಡಿದ್ದು, ಪ್ರಭಾಸ್ ನಟನೆಯ ಸಲಾರ್, ರಿಷಬ್ ಶೆಟ್ಟಿಯ ಕಾಂತಾರ 2, ಜಗ್ಗೇಶ್ ನಟನೆಯ ರಾಘವೇಂದ್ರ ಸ್ಟೋರ್ಸ್, ಶ್ರೀಮುರಳಿ ನಟನೆಯ ಬಘೀರ, ಫಹಾದ್ ಫಾಸಿಲ್ ನಟನೆಯ ಬಹುಭಾಷಾ ಸಿನಿಮಾ ಧೂಮಂ, ರಕ್ಷಿತ್ ಶೆಟ್ಟಿ ನಟಿಸಿ ನಿರ್ದೇಶನ ಮಾಡುತ್ತಿರುವ ರಿಚರ್ಡ್ ಆಂಟೊನಿ, ಮಲಯಾಳಂನ ಪೃಥ್ವಿರಾಜ್ ಸುಕುಮಾರ್ ನಿರ್ದೇಶನ ಮಾಡುತ್ತಿರುವ ಟೈಸನ್ ಸಿನಿಮಾಗಳ ಮೇಳೆ ಬಂಡವಾಳ ಹೂಡಿದೆ. ಇದರ ಜೊತೆಗೆ ಹಿಂದಿಯಲ್ಲಿಯೂ ಸಿನಿಮಾ ಒಂದನ್ನು ನಿರ್ಮಿಸಲು ಮುಂದಾಗಿದೆ.