ವಿಚಾರಣೆ ವೇಳೆ ಖುದ್ದು ಹಾಜರಿರಬೇಕೆಂದ ದರ್ಶನ್, ಹಲವು ಆಯ್ಕೆ ಕೊಟ್ಟ ಹೈಕೋರ್ಟ್

ರೇಣುಕಾ ಸ್ವಾಮಿ ಕೊಲೆ ಪ್ರಕರಣದ ವಿಚಾರಣೆ ಚಾಲ್ತಿಯಲ್ಲಿದ್ದು, ವಿಚಾರಣೆ ವೇಳೆ ತಾವು ಖುದ್ದಾಗಿ ನ್ಯಾಯಾಲಯದಲ್ಲಿ ಹಾಜರಿರಲು ಅನುಮತಿ ನೀಡಬೇಕೆಂದು ನಟ ದರ್ಶನ್ ಅರ್ಜಿ ಸಲ್ಲಿಸಿದ್ದರು. ಅರ್ಜಿಯ ವಿಚಾರಣೆ ಇಂದು (ಸೆಪ್ಟೆಂಬರ್ 10) ಹೈಕೋರ್ಟ್​​ನಲ್ಲಿ ನಡೆಯಿತು. ಸಾಕಷ್ಟು ಹೊತ್ತು ನಡೆದ ವಿಚಾರಣೆಯಲ್ಲಿ ಖುದ್ದು ಹೈಕೋರ್ಟ್, ದರ್ಶನ್​​ಗೆ ಹಲವಾರು ಆಯ್ಕೆಗಳನ್ನು ನೀಡಿತು. ಏನದು ಆಯ್ಕೆಗಳು?

ವಿಚಾರಣೆ ವೇಳೆ ಖುದ್ದು ಹಾಜರಿರಬೇಕೆಂದ ದರ್ಶನ್, ಹಲವು ಆಯ್ಕೆ ಕೊಟ್ಟ ಹೈಕೋರ್ಟ್
Darshan

Updated on: Sep 10, 2026 | 4:06 PM

ಮುಖ್ಯಾಂಶಗಳು

  • ವಿಚಾರಣೆ ವೇಳೆ ಖುದ್ದು ಹಾಜರಿಗೆ ಅನುಮತಿ ಕೋರಿ ದರ್ಶನ್ ಅರ್ಜಿ
  • ಹೈಕೋರ್ಟ್​​ನಲ್ಲಿ ಅರ್ಜಿಯ ವಿಚಾರಣೆ, ದರ್ಶನ್ ಪರ ವಕೀಲರ ವಾದ
  • ವಾದ ಆಲಿಸಿದ ಹೈಕೋರ್ಟ್, ದರ್ಶನ್​ಗೆ ಹಲವು ಆಯ್ಕೆಗಳನ್ನು ನೀಡಿದೆ

ರೇಣುಕಾ ಸ್ವಾಮಿ ಕೊಲೆ ಪ್ರಕರಣದ ವಿಚಾರಣೆ ಚಾಲ್ತಿಯಲ್ಲಿದ್ದು, ಹಲವು ಮಹತ್ವದ ಸಾಕ್ಷ್ಯಗಳನ್ನು ವಿಚಾರಣೆಗೆ ಒಳಪಡಿಸಲಾಗುತ್ತಿದೆ. ಇದರ ನಡುವೆ ಪ್ರದೋಶ್, ತಾನು ಮಾಫಿ ಸಾಕ್ಷಿ ಆಗುವುದಾಗಿ ಅರ್ಜಿ ಸಹ ಹಾಕಿದ್ದಾರೆ. ಇದರ ನಡುವೆ, ವಿಚಾರಣೆ ವೇಳೆ ತಾವು ಖುದ್ದು ಹಾಜರಿರಬೇಕು ಎಂದು ದರ್ಶನ್ ಆಗ್ರಹಿಸಿದ್ದು, ಇದಕ್ಕಾಗಿ ಪತ್ನಿಯ ಮೂಲಕ ಅರ್ಜಿ ಹಾಕಿಸಿದ್ದರು. ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಾಲಯವು ದರ್ಶನ್​​ಗೆ ಹಾಗೂ ಅವರ ವಕೀಲರಿಗೆ ಹಲವು ಆಯ್ಕೆಗಳನ್ನು ನೀಡಿದೆ. ಆದರೆ ಖುದ್ದು ಹಾಜರಿ ಅಸಾಧ್ಯ ಎಂದಿದೆ ನ್ಯಾಯಾಲಯ.

ನ್ಯಾಯಮೂರ್ತಿ ವಿ ಶ್ರೀಶಾನಂದ ಅವರಿರುವ ಹೈಕೋರ್ಟ್ ಪೀಠದಲ್ಲಿ ದರ್ಶನ್​​ ಅವರು ಖುದ್ದು ಹಾಜರಿ ಕೋರಿ ಹೂಡಿದ್ದ ಅರ್ಜಿಯ ವಿಚಾರಣೆ ಇಂದು (ಸೆಪ್ಟೆಂಬರ್ 10) ನಡೆಯಿತು. ವಿಚಾರಣೆ ವೇಳೆ ದರ್ಶನ್ ಹಾಜರಿ ಅಗತ್ಯವಿದೆ ಎಂದು ದರ್ಶನ್ ಪರ ವಕೀಲ ಹಷ್ಮತ್ ಪಾಷಾ ವಾದ ಮಂಡಿಸಿದರು. ಈಗ ವಿಡಿಯೋ ಕಾನ್ಫರೆನ್ಸ್ ಮೂಲಕ ವಿಚಾರಣೆ ನಡೆಯುತ್ತಿದ್ದು, ಈ ವೇಳೆ ಕಕ್ಷಿದಾರರೊಂದಿಗೆ (ದರ್ಶನ್) ಚರ್ಚೆ ಅಸಾಧ್ಯವಾಗಿದೆ, ನಾನು ಕಕ್ಷಿದಾರರ (ದರ್ಶನ್) ಜೊತೆ ಮಾತನಾಡಿದ್ದು ಇತರೆ ಆರೋಪಿಗಳು, ಸಾಕ್ಷಿಗಳು ಎಲ್ಲರಿಗೂ ಕೇಳುತ್ತದೆ. ಗೌಪ್ಯತೆ ಇರುವುದಿಲ್ಲ ಎಂದು ಹಷ್ಮತ್ ವಾದ ಮಂಡಿಸಿದರು. ಅವರ ಸಮಸ್ಯೆಗೆ ಪರಿಹಾರ ಸೂಚಿಸಿದ ನ್ಯಾಯಮೂರ್ತಿಗಳು, ‘ನಿಮ್ಮ ಕಕ್ಷಿದಾರರೊಂದಿಗೆ ಮಾತನಾಡುವುದು ಎಲ್ಲರಿಗೂ ಕೇಳುತ್ತದೆಂಬುದು ನಿಮ್ಮ ಆಕ್ಷೇಪ ಆಗಿದ್ದಾದಲ್ಲಿ, ವಿಡಿಯೋ ಕಾನ್ಫರೆನ್ಸ್​ನಲ್ಲೇ ಖಾಸಗಿತನದ ಮಾತುಕತೆಗೆ ವ್ಯವಸ್ಥೆ ಮಾಡಿಕೊಡುತ್ತೇವೆ, ಕೋರ್ಟ್ ಕಲಾಪಕ್ಕೆ 15 ನಿಮಿಷ ಮುನ್ನ ನಿಮ್ಮ ಕಕ್ಷಿದಾರರ ಜೊತೆಗೆ ಮಾತನಾಡಿಕೊಂಡು ಕಲಾಪ ಆರಂಭಿಸಿ’ ಎಂದು ಸಲಹೆ ನೀಡಿದರು.

ದರ್ಶನ್ ಅನ್ನು ಕೋರ್ಟ್​ಗೇ ಕರೆತರಬೇಕೆಂದರೆ ಪೊಲೀಸರ ಭದ್ರತೆ ಕೊಡಬೇಕು, ಜನದಟ್ಟಣೆ ಆಗದಂತೆ ತಡೆಯುವುದು ಕಷ್ಟ, ಬೇಕಿದ್ದರೆ ಪರಪ್ಪನ ಅಗ್ರಹಾರದಲ್ಲೇ ಕೋರ್ಟ್ ವ್ಯವಸ್ಥೆ ಮಾಡಬಹುದು, ಬೇಕಿದ್ದರೆ ಅಲ್ಲೇ ವಿಚಾರಣೆ ಮಾಡಲು ಸೂಚನೆ ಕೊಡಬಹುದು ಎಂದು ಸಹ ನ್ಯಾಯಮೂರ್ತಿ ಶ್ರೀಶಾನಂದ ಅವರಿದ್ದ ಪೀಠ ಸಲಹೆ ನೀಡಿತು. ಆದರೆ ಇದಕ್ಕೆ ದರ್ಶನ್ ಪರ ಮತ್ತು ವಿರೋಧ ಎರಡೂ ಕಡೆಯ ವಕೀಲರು ಆಕ್ಷೇಪ ವ್ಯಕ್ತಪಡಿಸಿದರು.

ಇದನ್ನೂ ಓದಿ: ಪಟ್ಟೆ ತಲೆ ಹೆಬ್ಬಾತು ಪ್ರಕರಣ: ಸಮನ್ಸ್ ಪ್ರಶ್ನಿಸಿ ಹೈಕೋರ್ಟ್ ಮೆಟ್ಟಿಲೇರಿದ ದರ್ಶನ್, ವಿಜಯಲಕ್ಷ್ಮೀ

ಪರಪ್ಪನ ಅಗ್ರಹಾರ ಜೈಲಿನಲ್ಲೇ ಕಲಾಪ ನಡೆದರೆ ಎರಡೂ ಕಡೆಯ ವಕೀಲರಿಗೆ ಸಮಸ್ಯೆ ಆಗುತ್ತದೆ ಎಂದು ಎಸ್​​ಪಿಪಿ ಪ್ರಸನ್ನ ಹೇಳಿದರು. ಅದಕ್ಕೆ ಪ್ರತಿಯಾಗಿ ನ್ಯಾಯಾಲಯವು, ನಾಳಿನ ಸಾಕ್ಷಿಗಳ ವಿಚಾರಣೆಗೆ ಇಂದೇ ಚರ್ಚಿಸಲು ಅವಕಾಶ ನೀಡಬಹುದು, ಬೇಕಿದ್ದರೆ ಹೆಡ್​ಫೋನ್ ವ್ಯವಸ್ಥೆ ಮಾಡಿಕೊಡುತ್ತೇವೆ, ಖಾಸಗಿತನ ಇರಲೆಂದು ಲ್ಯಾಪ್​ಟಾಪ್​ನಲ್ಲೇ ವಿಡಿಯೋ ಕಾನ್ಫರೆನ್ಸ್​ಗೆ ಅವಕಾಶ ಕೊಡಬಹುದು ದರ್ಶನ್ ಪರ ವಕೀಲರಿಗೆ ಹಲವು ಆಯ್ಕೆಗಳನ್ನು ಹೈಕೋರ್ಟ್ ನೀಡಿತು. ಮಾತ್ರಲ್ಲದೆ, ಅಷ್ಟಾಗಿಯೂ ಖುದ್ದಾಗೇ ಹಾಜರಾಗಬೇಕೆಂದಾದರೆ ಪರಪ್ಪನ ಅಗ್ರಹಾರದಲ್ಲೇ ವಿಚಾರಣೆ ನಡೆಯಲಿ, ಯಾವುದೇ ತೊಂದರೆ ಆಗದಂತೆ ವ್ಯವಸ್ಥೆ ಮಾಡಬಹುದು, ಜಯಲಲಿತಾ ಪ್ರಕರಣದ ವಿಚಾರಣೆ ನಡೆದ ಕೋರ್ಟ್​ನಲ್ಲೇ ಪ್ರಕ್ರಿಯೆ ನಡೆಸಬಹುದು, ಸಂಬಂಧಪಟ್ಟವರನ್ನು ಬಿಟ್ಟು ಬೇರೆ ಯಾರಿಗೂ ಅವಕಾಶ ನೀಡುವುದಿಲ್ಲ ಎಂದು ನ್ಯಾಯಮೂರ್ತಿಗಳು ದರ್ಶನ್ ಪರ ವಕೀಲರಿಗೆ ಆಯ್ಕೆ ನೀಡಿದರು.

‘ನಿಮ್ಮ ಕಕ್ಷಿದಾರರಿಗೆ (ದರ್ಶನ್) ಒಳ್ಳೆಯ ಸಂಖ್ಯೆಯ ಅಭಿಮಾನಿಗಳಿದ್ದಾರೆ, ಅವರಿಗೂ ಏನಾಗುತ್ತಿದೆ ಎಂದು ತಿಳಿಯುವ ಕುತೂಹಲವಿರುತ್ತದೆ, ಅಂದಿನ ವಿಚಾರಣೆ ಮುಗಿದ ಬಳಿಕ ಬೇಕಿದ್ದರೆ ಮಾಧ್ಯಮದೊಂದಿಗೂ ಮಾತನಾಡಬಹುದು’ ಎಂದರು ತಂತ್ರಜ್ಞಾನದ ವಿಷಯ ಬಂದಾಗ ಮಾತನಾಡಿದ ನ್ಯಾಯಮೂರ್ತಿಗಳು, ‘ನಮ್ಮ ತಂದೆಗೆ 91 ವರ್ಷ ವಯಸ್ಸಾಗಿದೆ, ಸ್ಕೈಪ್, ಜೂಮ್, ಗೂಗಲ್ ಮೀಟ್ ಬಳಸುತ್ತಾರೆ, ತ್ರಜ್ಞಾನವನ್ನು ಬಳಸಿಕೊಂಡರೆ ಸಾಕಷ್ಟು ಅನುಕೂಲವಿದೆ, ಕೂತ ಕಡೆಯೇ ಬ್ಯಾಂಕ್ ವ್ಯವಹಾರವನ್ನು ಮಾಡಬಹುದು, 91 ವರ್ಷದ ನಮ್ಮ ತಂದೆಯೇ ತಂತ್ರಜ್ಞಾನ ಬಳಸಿಕೊಂಡಿದ್ದಾರೆ’ ಎಂದರು.

ಅಂತಿಮವಾಗಿ, ದರ್ಶನ್ ಖುದ್ದು ಹಾಜರಿಗೆ ಅವಕಾಶ ನಿರಾಕರಿಸಿದ ನ್ಯಾಯಮೂರ್ತಿಗಳು ಎರಡೂ ಕಡೆಯ ವಕೀಲರು ಈ ಬಗ್ಗೆ ಚರ್ಚಿಸಿ ನಿರ್ಣಯ ತೆಗೆದುಕೊಳ್ಳಿ, ಬೇಕಾದರೆ ಜೈಲಿನಲ್ಲೇ ಕೋರ್ಟ್ ವ್ಯವಸ್ಥೆ ಮಾಡಬಹುದು, ಈಗ ಸೂಚಿಸಲಾಗಿರುವ ಆಯ್ಕೆಗಳಲ್ಲಿ ಯಾವುದನ್ನಾದೂ ಪರಿಗಣಿಸಬಹುದು. ಸೆಪ್ಟೆಂಬರ್ 16ಕ್ಕೆ ಅಭಿಪ್ರಾಯ ತಿಳಿಸಿ ಎಂದು ನ್ಯಾಯಮೂರ್ತಿಗಳು ಪ್ರಕರಣದ ವಿಚಾರಣೆಯನ್ನು ಮುಂದೂಡಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 4:00 pm, Thu, 10 September 26

Loading...
Unable to load recommendations.
Follow Us