
ಬೆಂಗಳೂರು, ಸೆಪ್ಟೆಂಬರ್ 29: ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಮಹತ್ವದ ಕಾನೂನು ಬೆಳವಣಿಗೆಯಾಗಿದೆ. ಪ್ರಕರಣದ ಆರೋಪಿ ಆಗಿರುವ ಪ್ರದೋಶ್ ಮಾಫಿ ಸಾಕ್ಷಿಯಾಗಿ ಬದಲಾಗಿದ್ದು, ಬೆಂಗಳೂರಿನ 59ನೇ ಸೆಷನ್ಸ್ ನ್ಯಾಯಾಲಯದ ಮುಂದೆ ಸಾಕ್ಷಿ ದಾಖಲಿಸಿದ್ದಾರೆ. ಪ್ರದೋಶ್ ಅವರ ಸಾಕ್ಷಿ ಹೇಳಿಕೆಯನ್ನು ತಡೆಯಲು ದರ್ಶನ್ ತೂಗುದೀಪ ಪರ ವಕೀಲರು ಇನ್ನಿಲ್ಲದ ಪ್ರಯತ್ನ ಮಾಡಿದರಾದರೂ ಸಾಧ್ಯವಾಗಿಲ್ಲ, ನಿನ್ನೆ (ಸೆಪ್ಟೆಂಬರ್ 28) ನ್ಯಾಯಾಲಯದಲ್ಲಿ ಸುಮಾರು ಮೂರು ಗಂಟೆಗಳ ಕಾಲ ಸಾಕ್ಷ್ಯ ನುಡಿದಿದ್ದು, ಪ್ರಕರಣದ ಭೀಕರತೆಯನ್ನು ವಿವರಿಸಿದ್ದಾರೆ. ಜೊತೆಗೆ ದರ್ಶನ್, ಹೇಗೆ ರೇಣುಕಾಸ್ವಾಮಿ ಮೇಲೆ ಅಟ್ಟಹಾಸ ಮೆರೆದ ಎಂಬುದನ್ನು ಸಹ ವಿವರಿಸಿದ್ದಾರೆ.
ಆರ್ಆರ್ ನಗರದ ಸ್ಟೋನಿ ಬ್ರೂಕ್‌ನಲ್ಲಿ ಪ್ರದೋಶ್, ವಿನಯ್, ದರ್ಶನ್, ಚಿಕ್ಕಣ್ಣ ಇನ್ನಿತರರ ನಡುವೆ ನಡೆದ ಸಭೆಯಿಂದ ಆರಂಭಗೊಂಡು, ಪಟ್ಟಣಗೆರೆ ಶೆಡ್‌ನಲ್ಲಿ ನಡೆದ ಘಟನೆಗಳ ವರೆಗೆ ಅಂದು ನಡೆದ ಪ್ರತಿಯೊಂದು ಕೃತ್ಯವನ್ನು ಪ್ರದೋಷ್ ನ್ಯಾಯಾಲಯದ ಮುಂದೆ ಎಳೆಎಳೆಯಾಗಿ ಬಿಚ್ಚಿಟ್ಟಿದ್ದಾರೆ. ವಿಶೇಷವಾಗಿ ದರ್ಶನ್ ಹಾಗೂ ಇನ್ನೂ ಕೆಲವರು ರೇಣುಕಾ ಸ್ವಾಮಿ ಮೇಲೆ ಎಸಗಿದ ಅಮಾನವೀಯ ಹಲ್ಲೆ, ರೇಣುಕಾಸ್ವಾಮಿಯನ್ನು ನಡೆಸಿಕೊಂಡ ರೀತಿಯ ಬಗ್ಗೆ ಸಂಪೂರ್ಣವಾಗಿ ವಿವರಿಸಿದ್ದಾರೆ.
ರೇಣುಕಾಸ್ವಾಮಿ, ಪವಿತ್ರಾ ಗೌಡಗೆ ಮಾಡಿದ ಸಂದೇಶದಿಂದಾಗಿ ತೀವ್ರ ಸಿಟ್ಟಿನಲ್ಲಿದ್ದ ದರ್ಶನ್, ಪಟ್ಟಣಗೆರೆ ಶೆಡ್‌ನಲ್ಲಿ ಹಲವಾರು ಬಾರಿ ರೇಣುಕಾಸ್ವಾಮಿ ಮೇಲೆ ಹಲ್ಲೆ ಮಾಡಿರುವುದಾಗಿ ಪ್ರತ್ಯಕ್ಷದರ್ಶಿ ಪ್ರದೋಶ್ ಹೇಳಿದ್ದಾರೆ. ಪವಿತ್ರಾ ಗೌಡ ಸಹ ಚಪ್ಪಲಿಯಲ್ಲಿ ರೇಣುಕಾಸ್ವಾಮಿ ಕೆನ್ನೆಗೆ ಹೊಡೆದ ವಿಷಯ. ರೇಣುಕಾಸ್ವಾಮಿ ಪವಿತ್ರಾ ಗೌಡ ಮತ್ತು ದರ್ಶನ್ ಕಾಲಿಗೆ ಬಿದ್ದು ಕ್ಷಮೆ ಕೇಳಿದ ವಿಷಯಗಳನ್ನು ಅಂದು ನಡೆದಂತೆ ನ್ಯಾಯಾಲಯದ ಮುಂದೆ ಪ್ರದೋಶ್ ವಿವರಿಸಿದ್ದಾರೆ.
ಇದನ್ನೂ ಓದಿ:ರೇಣುಕಾ ಸ್ವಾಮಿ ಪ್ರಕರಣ: ನಟ ದರ್ಶನ್ ಖುದ್ದು ಹಾಜರಿ ಕೋರಿ ವಕೀಲರ ಅರ್ಜಿ
ರೇಣುಕಾಸ್ವಾಮಿಯ ಬಟ್ಟೆ ಬಿಚ್ಚಿಸಿ ನಗ್ನಗೊಳಿಸಿ, ಅವನ ಮೇಲೆ ಉಗುಳಿ, ಅವನ ಮರ್ಮಾಂಗಕ್ಕೆ ದರ್ಶನ್ ಒದ್ದಿದ್ದಾಗಿ ಪ್ರದೋಶ್ ಹೇಳಿದ್ದಾರೆ. ದರ್ಶನ್ ಮಾತ್ರವೇ ಅಲ್ಲದೆ ಪವನ್, ನಂದೀಶ್, ರಾಘವೇಂದ್ರ, ವಿನಯ್ ಇನ್ನೂ ಹಲವರು ರೇಣುಕಾಸ್ವಾಮಿ ಮೇಲೆ ವಿಧ-ವಿಧವಾಗಿ ಹಲ್ಲೆ ಮಾಡಿದ್ದನ್ನು ಪ್ರದೋಶ್ ಅತ್ಯಂತ ವಿವರವಾಗಿ ನ್ಯಾಯಾಲಯದ ಮುಂದೆ ಹೇಳಿದ್ದಾರೆ. ನಿನ್ನೆ ಸುಮಾರು ಮೂರು ಗಂಟೆಗಳ ಕಾಲ ಪ್ರದೋಶ್ ಸಾಕ್ಷ್ಯ ಹೇಳಿದ್ದು, ಇಂದು ಸಹ ಪ್ರದೋಶ್ ಅವರ ಸಾಕ್ಷ್ಯ ಹೇಳಿಕೆ ಮುಂದುವರೆಯಲಿದೆ.
ನಟ ದರ್ಶನ್, ಪವಿತ್ರಾ ಗೌಡ ಹಾಗೂ ಇತರ ಸಹಚರರ ಸಮ್ಮುಖದಲ್ಲಿ ನಡೆದ ಕೃತ್ಯಗಳ ಬಗ್ಗೆ ಪ್ರದೋಷ್ ಸಾಕ್ಷ್ಯ ನುಡಿದಿದ್ದು, ವೀಡಿಯೊ ಕಾನ್ಫರೆನ್ಸ್ ಮೂಲಕ ನಟ ದರ್ಶನ್ ಹಾಗೂ ಪವಿತ್ರಾ ಗೌಡ ವಿಚಾರಣೆಯನ್ನು ವೀಕ್ಷಿಸಿದರು. ಪ್ರದೋಶ್ ಅವರ ಮಾಫಿ ಸಾಕ್ಷಿಯು ರೇಣುಕಾಸ್ವಾಮಿ ಕೊಲೆ ಪ್ರಕರಣದ ಮೇಲೆ ದೊಡ್ಡ ಮಟ್ಟಿಗಿನ ಪ್ರಭಾವ ಬೀರುವ ಸಾಧ್ಯತೆ ಇದೆ. ಈ ವರೆಗೆ ಪ್ರದೋಶ್ ನುಡಿದಿರುವ ಸಾಕ್ಷ್ಯದಲ್ಲಿ ದರ್ಶನ್ ಅಮಾನವೀಯ ಕೃತ್ಯ ನಡೆದಿರುವುದು ಸ್ಪಷ್ಟವಾಗಿ ತಿಳಿಯುತ್ತಿದೆ. ಜೊತೆಗೆ ಪ್ರದೋಶ್ ಹಾಗೂ ಇತರರು ತಡೆದರೂ ಸಹ ದರ್ಶನ ಸುಮ್ಮನಾಗದೆ ಹಲ್ಲೆ ಮಾಡಿದರು ಎಂಬುದು ಸಹ ತಿಳಿಯುತ್ತಿದೆ.
ಸಾಮನ್ಯವಾಗಿ ಕೇಳಲಾಗುವ ಪ್ರಶ್ನೆ ಉತ್ತರಗಳು
ಪ್ರಶ್ನೆ: ರೇಣುಕಾಸ್ವಾಮಿ ಕೊಲೆ ನಡೆದಿದ್ದು ಯಾವಾಗ?
ಉತ್ತರ: ರೇಣುಕಾಸ್ವಾಮಿ ಕೊಲೆ ನಡೆದಿದ್ದು 2024ರ ಜೂನ್ 8 ರಂದು
ಪ್ರಶ್ನೆ: ರೇಣುಕಾಸ್ವಾಮಿ ಯಾರು?
ಉತ್ತರ: ರೇಣುಕಾಸ್ವಾಮಿ ಅವರು ಜೂನ್ 2024ರಲ್ಲಿ ಬೆಂಗಳೂರಿನಲ್ಲಿ ಹತ್ಯೆಗೀಡಾದ ಚಿತ್ರದುರ್ಗದ 33 ವರ್ಷದ ವ್ಯಕ್ತಿ
ಪ್ರಶ್ನೆ: ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಯರ್ಯಾರು ಶಾಮೀಲಾಗಿದ್ದಾರೆ?
ಉತ್ತರ: ಕನ್ನಡದ ಖ್ಯಾತ ಚಿತ್ರ ನಟ ದರ್ಶನ್ ತೂಗುದೀಪ ಮತ್ತು ಇತರರ ಮೇಲೆ ರೇಣುಕಾಸ್ವಾಮಿ ಕೊಲೆ ಆರೋಪವಿದೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 11:19 am, Tue, 29 September 26