ರೇಣುಕಾಸ್ವಾಮಿ ಕೇಸ್: ಪ್ರತಿ ದಿನ ವಿಚಾರಣೆಗೆ ಕೋರ್ಟ್ ಸೂಚನೆ; ದರ್ಶನ್ ಪರ ವಕೀಲರ ಮನವಿ ತಿರಸ್ಕಾರ

ದರ್ಶನ್ ಹಾಗೂ ಉಳಿದ ಆರೋಪಿಗಳನ್ನು ನ್ಯಾಯಾಲಯಕ್ಕೆ ಖುದ್ದಾಗಿ ಹಾಜರುಪಡಿಸಬೇಕು ಎಂದು ಆರೋಪಿಗಳ ಪರ ವಕೀಲರು ಅರ್ಜಿ ಸಲ್ಲಿಸಿದ್ದರು. ಆದರೆ, ಈ ಅರ್ಜಿಗೆ ಪ್ರಾಸಿಕ್ಯೂಷನ್ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದು, ವಿಚಾರಣೆಯನ್ನು ಜೂನ್ 16ಕ್ಕೆ ಮುಂದೂಡಲಾಗಿದೆ. ಇನ್ನಿಬ್ಬರು ಸಾಕ್ಷಿಗಳಿಗೆ ಸಮನ್ಸ್ ಜಾರಿಗೊಳಿಸಿ ವಿಚಾರಣೆ ನಡೆಸಲು ಕೋರ್ಟ್ ನಿರ್ಧರಿಸಿದೆ.

ರೇಣುಕಾಸ್ವಾಮಿ ಕೇಸ್: ಪ್ರತಿ ದಿನ ವಿಚಾರಣೆಗೆ ಕೋರ್ಟ್ ಸೂಚನೆ; ದರ್ಶನ್ ಪರ ವಕೀಲರ ಮನವಿ ತಿರಸ್ಕಾರ
Darshan Thoogudeepa
Edited By:

Updated on: Jun 15, 2026 | 9:16 PM

ಸ್ಯಾಂಡಲ್‌ವುಡ್ ನಟ ದರ್ಶನ್ (Darshan) ಮತ್ತು ಗ್ಯಾಂಗ್ ಒಳಗೊಂಡಿರುವ ರೇಣುಕಾಸ್ವಾಮಿ ಕೊಲೆ ಪ್ರಕರಣದ ವಿಚಾರಣೆಯು ವೇಗ ಪಡೆದುಕೊಂಡಿದೆ. ಬೆಂಗಳೂರಿನ 59ನೇ ಸಿಸಿಹೆಚ್ ನ್ಯಾಯಾಲಯದಲ್ಲಿ ಇಂದು (ಜೂನ್ 15) ಸಾಕ್ಷ್ಯ ವಿಚಾರಣೆ ಮುಂದುವರಿದಿದ್ದು, ಹಲವು ಪ್ರಮುಖ ಬೆಳವಣಿಗೆಗಳು ಸಂಭವಿಸಿವೆ. ಇಂದು ನ್ಯಾಯಾಲಯದಲ್ಲಿ ಪ್ರಕರಣದ 13ನೇ ಸಾಕ್ಷಿಯ ಹೇಳಿಕೆಯನ್ನು ದಾಖಲಿಸಿಕೊಳ್ಳಲಾಯಿತು. ಇದೇ ವೇಳೆ, ಸಾಕ್ಷಿಗಳ ಪಾಟೀಸವಾಲು ನಡೆಸುವುದನ್ನು ಮುಂದೂಡಬೇಕೆಂದು ಆರೋಪಿಗಳ ಪರ ವಕೀಲರು ಸಲ್ಲಿಸಿದ್ದ ಮನವಿಯನ್ನು ನ್ಯಾಯಾಧೀಶರಾದ ಸುಜಾತಾ ಮಡಿವಾಳಪ್ಪ ಸಾಂಬ್ರಾಣಿ ಅವರು ತಿರಸ್ಕರಿಸಿದರು.

ಸುಪ್ರೀಂಕೋರ್ಟ್ ಈಗಾಗಲೇ ಈ ಪ್ರಕರಣದ ತ್ವರಿತ ವಿಚಾರಣೆಗೆ ಸೂಚನೆ ನೀಡಿರುವ ಹಿನ್ನೆಲೆಯಲ್ಲಿ, ಯಾವುದೇ ವಿಳಂಬಕ್ಕೆ ಆಸ್ಪದ ನೀಡದಂತೆ ನ್ಯಾಯಾಲಯ ಕಟ್ಟುನಿಟ್ಟಿನ ಸೂಚನೆ ನೀಡಿದೆ. ಪ್ರಾಸಿಕ್ಯೂಷನ್ ಪರ ಎಸ್‌ಪಿಪಿ ಪ್ರಸನ್ನಕುಮಾರ್ ಅವರು, ಪ್ರಕರಣದ ಗಂಭೀರತೆಯನ್ನು ಪರಿಗಣಿಸಿ ಪ್ರತಿದಿನ ಸಾಕ್ಷ್ಯ ವಿಚಾರಣೆ ನಡೆಸುವಂತೆ ಮನವಿ ಮಾಡಿದ್ದರು.

ಈ ಮನವಿಯನ್ನು ಪುರಸ್ಕರಿಸಿದ ನ್ಯಾಯಾಲಯವು, ಇನ್ಮುಂದೆ ಪ್ರತಿ ವಾರದಲ್ಲಿ 4ರಿಂದ 5 ದಿನಗಳ ಕಾಲ ಸಾಕ್ಷ್ಯ ವಿಚಾರಣೆ ನಡೆಸುವುದಾಗಿ ತಿಳಿಸಿದೆ. ಅಲ್ಲದೇ, ತ್ವರಿತ ವಿಚಾರಣೆಗೆ ಪೂರಕವಾಗಿ ಸಹಕರಿಸುವಂತೆ ಎರಡೂ ಕಡೆಯ ವಕೀಲರಿಗೆ ನ್ಯಾಯಾಧೀಶರು ನಿರ್ದೇಶನ ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ, ಆದಷ್ಟು ಬೇಗ ರೇಣುಕಾಸ್ವಾಮಿ ಕೊಲೆ ಪ್ರಕರಣದ ತೀರ್ಪು ಬರಬಹುದು ಎಂಬ ನಿರೀಕ್ಷೆ ಮೂಡಿದೆ.

ಇದೇ ಸಂದರ್ಭದಲ್ಲಿ, ನಟ ದರ್ಶನ್ ಸೇರಿದಂತೆ ಉಳಿದ ಆರೋಪಿಗಳನ್ನು ನ್ಯಾಯಾಲಯಕ್ಕೆ ಖುದ್ದಾಗಿ ಹಾಜರುಪಡಿಸಬೇಕು ಎಂದು ದರ್ಶನ್ ಪರ ವಕೀಲರು ಅರ್ಜಿ ಸಲ್ಲಿಸಿದ್ದರು. ಆದರೆ, ಈ ಅರ್ಜಿಗೆ ಪ್ರಾಸಿಕ್ಯೂಷನ್ ತೀವ್ರ ಆಕ್ಷೇಪ ವ್ಯಕ್ತಪಡಿಸಿದೆ. ಸದ್ಯಕ್ಕೆ ವಿಚಾರಣೆಯನ್ನು ನಾಳೆಗೆ ಮುಂದೂಡಲಾಗಿದ್ದು, ನಾಳೆ (ಜೂನ್ 16) ಇನ್ನಿಬ್ಬರು ಸಾಕ್ಷಿಗಳಿಗೆ ಸಮನ್ಸ್ ಜಾರಿಗೊಳಿಸಿ ವಿಚಾರಣೆ ನಡೆಸಲು ನ್ಯಾಯಾಲಯ ನಿರ್ಧರಿಸಿದೆ.

ಇದನ್ನೂ ಓದಿ: ಜೈಲಿನಲ್ಲಿ ನಟ ದರ್ಶನ್ ಮೌನ; ಆತ್ಮಚರಿತ್ರೆ ಬರೆಯಲು ಆರಂಭಿಸಿದ ಪವಿತ್ರಾ ಗೌಡ

ದರ್ಶನ್ ಅವರು ಜಾಮೀನು ಪಡೆಯಲು ಮಾಡಿದ ಎಲ್ಲ ಪ್ರಯತ್ನಗಳು ವಿಫಲ ಆಗಿವೆ. ವಿಚಾರಣೆ ವಿಳಂಬ ಆಗುತ್ತಿರುವುದರಿಂದ ವೃತ್ತಿಜೀವನಕ್ಕೆ ತೊಂದರೆ ಆಗಿದೆ ಎಂದು ಅವರು ಸುಪ್ರೀಂ ಕೋರ್ಟ್​​ನ ಮೊರೆ ಹೋಗಿದ್ದರು. ಆದರೆ ಅಲ್ಲಿ ಅವರ ಜಾಮೀನು ಅರ್ಜಿ ವಜಾಗೊಂಡಿತು. ಹಾಗಾಗಿ ಇನ್ನಷ್ಟು ತಿಂಗಳ ಕಾಲ ಅವರು ಜೈಲುವಾಸ ಅನುಭವಿಸುವುದು ಅನಿವಾರ್ಯ ಆಗಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Ramesha M
Follow Us