ರಿಷಬ್ ಶೆಟ್ಟಿ ಸಂಸಾರದ ಬಗ್ಗೆ ದೈವ ಹೇಳಿದ್ದೇನು? ಸಂಸಾರ ಪದಕ್ಕೆ ಇದೆ ಬೇರೆ ಅರ್ಥ

ರಿಷಬ್ ಶೆಟ್ಟಿ ಅವರು ವಾರಾಹಿ ಪಂಜುರ್ಲಿ ದೈವದ ಎದುರು ಪ್ರಾರ್ಥನೆ ಮಾಡಿಕೊಂಡಿದ್ದಾರೆ. ಈ ವೇಳೆ ದೈವ ಹೇಳಿದ ಮಾತುಗಳ ಬಗ್ಗೆ ಕೆಲವರಿಗೆ ಗೊಂದಲ ಮೂಡಿದೆ. ರಿಷಬ್ ಶೆಟ್ಟಿ ಸಂಸಾರದ ಬಗ್ಗೆ ದೈವ ನುಡಿದಿದೆ. ಆದರೆ ಇಲ್ಲಿ ಸಂಸಾರ ಎಂದರೆ ಬೇರೆಯೇ ಅರ್ಥ ಇದೆ.

ರಿಷಬ್ ಶೆಟ್ಟಿ ಸಂಸಾರದ ಬಗ್ಗೆ ದೈವ ಹೇಳಿದ್ದೇನು? ಸಂಸಾರ ಪದಕ್ಕೆ ಇದೆ ಬೇರೆ ಅರ್ಥ
Rishab Shetty
Edited By:

Updated on: Apr 07, 2025 | 6:22 PM

ಮಂಗಳೂರಿನ ಬಾರೆಬೈಲ್ ವಾರಾಹಿ ಪಂಜುರ್ಲಿ (Varahi Panjurli) ದೈವಸ್ಥಾನಕ್ಕೆ ರಿಷಬ್ ಶೆಟ್ಟಿ ಅವರು ಭೇಟಿ ನೀಡಿದ್ದಾರೆ. ಈ ವೇಳೆ ಪತ್ನಿ ಮತ್ತು ಮಕ್ಕಳು ಕೂಡ ಇದ್ದರು. ನೇಮೋತ್ಸವದಲ್ಲಿ ಭಾಗಿಯಾದ ರಿಷಬ್ ಶೆಟ್ಟಿ ಅವರಿಗೆ ಪಂಜುರ್ಲಿ ದೈವ ಕೆಲವು ಮಾತುಗಳನ್ನು ಹೇಳಿದೆ. ಈ ವೇಳೆ ಸಂಸಾರ ಎಂಬ ಪದ ಕೂಡ ಬಳಕೆ ಆಗಿದೆ. ಹಾಗಾದರೆ ದೈವ ಮಾತಾಡಿರುವುದು ರಿಷಬ್ ಶೆಟ್ಟಿ (Rishab Shetty) ಅವರ ಕುಟುಂಬದ ಬಗ್ಗೆ ಇರಬಹುದಾ ಎಂಬುದು ಕೆಲವರ ಪ್ರಶ್ನೆ. ಈ ಬಗ್ಗೆ ದೈವಸ್ಥಾನದ ಗೌರವಾಧ್ಯಕ್ಷರು ಸ್ಪಷ್ಟನೆ ನೀಡಿದ್ದಾರೆ. ದೈವದ ನುಡಿಯಲ್ಲಿ ಸಂಸಾರ ಎಂದರೆ ಇನ್ನೊಂದು ಅರ್ಥವಿದೆ ಎಂಬುದನ್ನು ಅವರು ವಿವರಿಸಿದ್ದಾರೆ.

ವಾರಾಹಿ ಪಂಜುರ್ಲಿ ದೈವಸ್ಥಾನದ ಗೌರವಾಧ್ಯಕ್ಷರಾದ ರವಿ ಪ್ರಸನ್ನ ಅವರು ‘ಟಿವಿ9’ ಜೊತೆ ಮಾತನಾಡಿದ್ದಾರೆ. ದೈವದ ಮಾತನ್ನು ಅವರು ವಿವರಿಸಿ ಹೇಳಿದ್ದಾರೆ. ‘ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಒಂದೊಂದು ಪದಕ್ಕೆ ಒಂದೊಂದು ಅರ್ಥ ಇದೆ. ದೈವಗಳು ಗಂಡ-ಹೆಂಡತಿ ಎಂಬ ಪದವನ್ನು ಉಪಯೋಗಿಸಲ್ಲ. ನಿಮ್ಮ ಹೆಸರನ್ನು ಕೂಡ ಹೇಳುವುದಿಲ್ಲ. ನಮಗೆಲ್ಲ ಬ್ರಹ್ಮವರ್ಗ ಎಂದು ಹೇಳುತ್ತಾರೆ. ಉಳಿದವರಿಗೆ ಕಟ್ಟಳೆಯ ಪ್ರಕಾರ ಒಬ್ಬೊಬ್ಬರ ಹೆಸರನ್ನು ಕರೆಯುತ್ತಾರೆ. ಆಗ ನಾವು ಪ್ರಸಾದವನ್ನು ಸ್ವೀಕಾರ ಮಾಡುತ್ತೇವೆ. ಮೊದಲಿಗೆ ಬಂದ ಕೂಡಲೇ ನಂಬಿ ಸಂಸಾರ ಅಂತ ಹೇಳುವಂಥದ್ದು. ನನ್ನನ್ನು ನಂಬುವಂತಹ ಸಂಸಾರ ಅಂತ. ನಾನು ಗೌರವಾಧ್ಯಕ್ಷನಾಗಿದ್ದರೆ, ಆಗ ನಂಬಿ ಸಂಸಾರ ಎಂದರೆ ನನ್ನ ಇಡೀ ತಂಡ ಅಂತ ಅರ್ಥ’ ಎಂದು ಅವರು ಹೇಳಿದ್ದಾರೆ.

‘ಅದೇ ರೀತಿ, ರಿಷಬ್ ಶೆಟ್ಟಿ ಅವರಿಗೆ ನಂಬಿ ಸಂಸಾರ ಎಂದು ಹೇಳಿದರೆ ಅವರ ಚಲನಚಿತ್ರದ ಒಂದು ತಂಡ. ಅದರಲ್ಲಿ ಸ್ವಲ್ಪ ಜಾಗ್ರತೆ ಇರಬೇಕು. 5 ತಿಂಗಳಲ್ಲಿ ಎಲ್ಲವನ್ನೂ ಸರಿ ಮಾಡಿಕೊಡುತ್ತೇನೆ ಅಂತ ದೈವ ಉತ್ತರ ನೀಡಿದೆ. ಈಗ ಟಿವಿಯಲ್ಲಿ ದುಷ್ಮನ್ ಎಂಬ ಒಂದು ಪದ ಬರುತ್ತಿದೆ. ಪ್ರತಿಯೊಬ್ಬರ ಏಳಿಗೆಗೂ ಯಾರಾದರೂ ಒಬ್ಬ ಅಡ್ಡ ಇರುತ್ತಾನೆ. ಏನೂ ಮಾಡದೇ ಇರುವ ಭಿಕ್ಷುಕನಿಗೂ ಕಲ್ಲು ಹೊಡೆಯುವವರು ಇದ್ದಾರೆ. ಕಾರಿನಲ್ಲಿ ಹೋಗುವವರಿಗೂ ಕಲ್ಲು ಹೊಡೆಯುವವರು ಇದ್ದಾರೆ. ಆದ್ದರಿಂದ ತಾಯಿ ಆದವಳು ಮಕ್ಕಳಿಗೆ ಜಾಗ್ರತೆಯಲ್ಲಿ ಹೋಗು ಅಂತ ಹೇಳುತ್ತಾಳೆ. ತಾಯಿ ಸ್ಥಾನದಲ್ಲಿ ನಿಂತುಕೊಂಡು ವಾರಾಹಿ ಪಂಜುರ್ಲಿ ಈ ರೀತಿ ಹೇಳಿದೆ’ ಎಂದಿದ್ದಾರೆ ಗೌರವಾಧ್ಯಕ್ಷ ರವಿ ಪ್ರಸನ್ನ.

ಇದನ್ನೂ ಓದಿ
ವಾರಾಹಿ ಪಂಜುರ್ಲಿ ಕ್ಷೇತ್ರಕ್ಕೆ ರಿಷಬ್ ಶೆಟ್ಟಿ ಬಂದಾಗ ಏನೆಲ್ಲ ನಡೆಯಿತು?
ನಿನ್ನ ಕೆಲಸ ಹಾಳು ಮಾಡಲು ಸಂಚು ನಡೆದಿದೆ; ರಿಷಬ್ ಶೆಟ್ಟಿ​ಗೆ ದೈವದ ಎಚ್ಚರಿಕೆ
ರಿಷಬ್ ಶೆಟ್ಟಿ ನಟನೆಯ ಬಾಲಿವುಡ್ ಸಿನಿಮಾದ ಪೋಸ್ಟರ್ ಬಿಡುಗಡೆ
ರಿಷಬ್ ಶೆಟ್ಟಿ ಮೊದಲ ಹೆಸರೇನು? ನಾಮ ಬದಲಿಸಿಕೊಳ್ಳಲು ಕಾರಣವಾಯಿತು ಆ ಘಟನೆ

ಇದನ್ನೂ ಓದಿ: ರಿಷಬ್ ಶೆಟ್ಟಿ ಶಿವಾಜಿ ಪಾತ್ರ ಮಾಡುವುದು ಬೇಡ: ವಾಟಾಳ್ ನಾಗರಾಜ್

‘ದೈವಗಳ ಎದುರು ನಾವು ಹೋಗಿ ನಿಂತಾಗ, ನಮ್ಮ ಮಾಸಗಳ ಲೆಕ್ಕದಲ್ಲಿ ಸರಿಮಾಡಿ ಕೊಡುತ್ತೇನೆ ಅಂತ ಹೇಳುವುದುಂಟು. ಅದು ಒಂದು ವಾಡಿಕೆ. ಕಟ್ಟಳೆಗಳನ್ನು ಮುರಿಯದ ರೀತಿಯಲ್ಲಿ ದೈವ ಉತ್ತರ ನೀಡಿದೆ. ರಿಷಬ್ ಶೆಟ್ಟಿ ಹಾಗೂ ಅವರ ಹೆಂಡತಿ ಸಂತೋಷದಲ್ಲಿ ಪ್ರಸಾದವನ್ನು ಸ್ವೀಕರಿಸಿದ್ದಾರೆ. ಮಕ್ಕಳು ಕೂಡ ಸಂತೋಷದಲ್ಲಿ ಇದ್ದರು. ಅದರಲ್ಲಿ ಯಾವುದೇ ರೀತಿಯ ಸಂಶಯ ನಮಗೆ ಬರಲಿಲ್ಲ. ಏನಾದರೂ ತೊಂದರೆ ಇದ್ದಿದ್ದರೆ ಅವರು ಒಬ್ಬೊಬ್ಬರೇ ಬರುತ್ತಿದ್ದರು. ಇಬ್ಬರೂ ಒಟ್ಟಾಗಿ ಬಂದಿದ್ದಾರೆ’ ಎಂದು ರವಿ ಪ್ರಸನ್ನ ಹೇಳಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published On - 6:15 pm, Mon, 7 April 25