ಬೆಂಗಳೂರಿನ ನಂದಿ ಲಿಂಕ್ ಗ್ರೌಂಡ್ನಲ್ಲಿ ಅದ್ದೂರಿಯಾಗಿ ಇಂದು ರಿಷಬ್ ಶೆಟ್ಟಿ (Rishab Shetty) ಹುಟ್ಟುಹಬ್ಬ ಆಚರಿಸಲಾಗಿದೆ. ವಾರದ ಮೊದಲೇ ಈ ಬಗ್ಗೆ ವಿಡಿಯೋ ಮಾಡಿ ಅಭಿಮಾನಿಗಳಿಗೆ ಆಹ್ವಾನ ನೀಡಿದ್ದ ರಿಷಬ್, ಕಾಂತಾರದ (Kanthara) ಬಳಿಕ ಹಲವರು ಮನೆಯ ಹತ್ತಿರ ಬಂದು ಭೇಟಿಗೆ ಯತ್ನಿಸಿದ್ದೀರಿ, ಹಲವು ಕಾರ್ಯಕ್ರಮಗಳಲ್ಲಿ ಭೇಟಿಗೆ ಕಾದಿದ್ದೀರಿ ಆದರೆ ಸರಿಯಾಗಿ ನಿಮ್ಮನ್ನು ಭೇಟಿ ಆಗಲು ಆಗಿರಲಿಲ್ಲ, ಹಾಗಾಗಿ ಈ ಬಾರಿ ನನ್ನ ಹುಟ್ಟುಹಬ್ಬದಂದು ಎಲ್ಲರನ್ನೂ ಭೇಟಿ ಆಗುತ್ತೀನಿ ಎಂದಿದ್ದರು. ಅಂತೆಯೇ ಇಂದು (ಜುಲೈ 7) ಅಭಿಮಾನಿಗಳನ್ನು (Fan) ಭೇಟಿಯಾಗಿ ಅವರೊಟ್ಟಿಗೆ ಹುಟ್ಟುಹಬ್ಬ ಆಚರಿಸಿಕೊಂಡಿದ್ದಾರೆ ರಿಷಬ್.
ರಿಷಬ್ರ ಹುಟ್ಟುಹಬ್ಬ ಆಚರಣೆಗೆ ಕಳೆದೆರಡು ದಿನಗಳಿಂದಲೂ ನಂದಿ ಲಿಂಕ್ ಗ್ರೌಂಡ್ನಲ್ಲಿ ತಯಾರಿ ನಡೆದಿತ್ತು, ರಿಷಬ್ರ ಆತ್ಮೀಯ ಗೆಳೆಯ ಪ್ರಮೋದ್ ಶೆಟ್ಟಿ ಹಾಗೂ ಇನ್ನಿತರರು ಕಾರ್ಯಕ್ರಮ ಆಯೋಜನೆಯ ಮುಂದಾಳತ್ವ ವಹಿಸಿ ಅಭಿಮಾನಿಗಳಿಗೆ ಸಮಸ್ಯೆ ಆಗದಂತೆ ವ್ಯವಸ್ಥೆಗಳನ್ನು ಮಾಡಿದ್ದರು, ವೇದಿಕೆ ನಿರ್ಮಿಸಿದ್ದರು. ಜೊತೆಗೆ ದೂರ ದೂರಗಳಿಂದ ಬರುವ ರಿಷಬ್ರ ಅಭಿಮಾನಿಗಳಿಗೆ ಊಟದ ವ್ಯವಸ್ಥೆಯನ್ನು ಸಹ ಮಾಡಿಸಿದ್ದರು.
ರಿಷಬ್ರ ಅಭಿಮಾನಗಳಿಗಾಗಿ ಪುಲಾವ್, ಮೊಸರು ಬಜ್ಜಿ, ಮೊಸರನ್ನ, ಉಪ್ಪಿನ ಕಾಯಿ, ಅನ್ನ, ರಸಂ, ಮದ್ದೂರು ವಡೆ, ಬರ್ಫಿ, ಹಪ್ಪಳಗಳನ್ನು ಮಾಡಿಸಲಾಗಿತ್ತು. ಸುಮಾರು ಎಂಟು ಸಾವಿರ ಜನಕ್ಕೆ ಊಟದ ತಯಾರಿಯನ್ನು ಮಾಡಿಸಲಾಗಿತ್ತು. ರಿಷಬ್ರ ಹುಟ್ಟುಹಬ್ಬಕ್ಕೆ ಬರುವವರು ಹಸಿದುಕೊಂಡು ಹೋಗಬಾರದೆಂಬ ಉದ್ದೇಶದಿಂದ ಊಟದ ವ್ಯವಸ್ಥೆಯನ್ನು ಮಾಡಿಸಿದ್ದಾಗಿ ರಿಷಬ್ ಆಪ್ತರ ತಂಡ ಹೇಳಿತ್ತು. ರಿಷಬ್ರ ಪಕ್ಕದ ಊರಾದ ಉಪ್ಪಿನ ಕುದುರುವಿನ ಅಡುಗೆ ಕಾಂಟ್ರ್ಯಾಕ್ಟರ್ ಗೋಪಾಲ್ ಮೆಲಾಡಿ ಅವರನ್ನು ಕರೆಯಿಸಿ ಅಡುಗೆ ಮಾಡುವ ಜವಾಬ್ದಾರಿಯನ್ನು ವಹಿಸಲಾಗಿತ್ತು.
ಇದನ್ನೂ ಓದಿ:ನಿಮ್ಮ ಋಣ ತೀರಿಸುವ ಕಾರ್ಯವನ್ನು ಮಾಡುತ್ತಲೇ ಇರ್ತೀನಿ: ಬರ್ತ್ಡೇಯಲ್ಲಿ ರಿಷಬ್ ಶೆಟ್ಟಿ ಭಾವುಕ
ರಿಷಬ್ ಶೆಟ್ಟಿಯವರ ಹುಟ್ಟುಹಬ್ಬ ಆಚರಿಸಲು ಅಭಿಮಾನಿಗಳು ಮಧ್ಯಾಹ್ನದಿಂದಲೇ ಕಾಯುತ್ತಿದ್ದರು. ಕಾರ್ಯಕ್ರಮವನ್ನು ಐದು ಗಂಟೆಗೆ ಆಯೋಜನೆ ಮಾಡಲಾಗಿತ್ತು, ಆದರೆ ಇಂದು ಮಧ್ಯಾಹ್ನದ ನಂತರ ಬೆಂಗಳೂರಿನಲ್ಲಿ ಮಳೆ ಪ್ರಾರಂಭವಾದ ಕಾರಣ ಇಂದು ಕಾರ್ಯಕ್ರಮ ಸುಸೂತ್ರವಾಗಿ ನಡೆಯುವುದು ಅನುಮಾನ ಎಂಬಂತಾಗಿತ್ತು. ಮಳೆಯ ನಡುವೆಯೂ ಅಭಿಮಾನಿಗಳು ಕಾಯುತ್ತಲೇ ಇದ್ದರು. ಸುಮಾರು 6 ರ ಸುಮಾರಿಗೆ ಪತ್ನಿ ಪ್ರಗತಿ ಶೆಟ್ಟಿಯೊಂದಿಗೆ ವೇದಿಕೆಗೆ ಆಗಮಿಸಿದ ರಿಷಬ್ ಶೆಟ್ಟಿ, ಅಭಿಮಾನಿಗಳಿಗೆ ವಂದಿಸಿ ಧನ್ಯವಾದ ಹೇಳಿದರು.
ಈ ರೀತಿ ದೊಡ್ಡ ಸಂಖ್ಯೆಯ ಅಭಿಮಾನಿಗಳೊಟ್ಟಿಗೆ ರಿಷಬ್ ಶೆಟ್ಟಿ ತಮ್ಮ ಹುಟ್ಟುಹಬ್ಬ ಆಚರಸಿಕೊಳ್ಳುತ್ತಿರುವುದು ಇದೇ ಮೊದಲು. ಸ್ವತಃ ಅವರೇ ಇಂದಿನ ಭಾಷಣದಲ್ಲಿ ಹೇಳಿದಂತೆ, ”ಕಾಂತಾರಗೆ ಮುಂಚೆ ಇದನ್ನೆಲ್ಲ ನನಗೆ ಹೇಗೆ ನಿಭಾಯಿಸಬೇಕು ಎಂಬುದು ಸಹ ನನಗೆ ಗೊತ್ತಿರಲಿಲ್ಲ. ಆದರೆ ನಿಮ್ಮನ್ನು ಭೇಟಿ ಆಗುವ ಬಹಳ ಆಸೆಯಿತ್ತು. ನನ್ನ ಪತ್ನಿ ಪ್ರಗತಿ, ಪ್ರಮೋದ್ ಶೆಟ್ಟಿ ಹಾಗೂ ಇತರರು ಒತ್ತಾಯ ಮಾಡಿ ಈ ಕಾರ್ಯಕ್ರಮವನ್ನು ಮಾಡಲೇ ಬೇಕು, ಅಭಿಮಾನಿಗಳಿಗೆ ಧನ್ಯವಾದ ಹೇಳಲೇ ಬೇಕು ಎಂದರು. ಹಾಗಾಗಿ ಕಾರ್ಯಕ್ರಮ ಆಯೋಜಿಸಿದ್ದೇವೆ” ಎಂದರು ರಿಷಬ್ ಶೆಟ್ಟಿ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ