
‘ಹೊಂಬಾಳೆ ಫಿಲ್ಮ್ಸ್’ ನಿರ್ಮಾಣ ಮಾಡಿರುವ ‘ಕಾಂತಾರ: ಚಾಪ್ಟರ್ 1’ (Kantara Chapter 1) ಸಿನಿಮಾ ಅಕ್ಟೋಬರ್ 2ರಂದು ಬಿಡುಗಡೆ ಆಗಲಿದೆ. ಭಾರಿ ಬಜೆಟ್ನಲ್ಲಿ ಈ ಸಿನಿಮಾ ನಿರ್ಮಾಣ ಆಗಿದೆ. ಜನರಿಗೆ ಈ ಚಿತ್ರದ ಮೇಲೆ ಸಖತ್ ನಿರೀಕ್ಷೆ ಇದೆ. ಮೊದಲ ದಿನ ಎಷ್ಟು ಕಲೆಕ್ಷನ್ ಮಾಡಬಹುದು ಎಂಬುದನ್ನು ತಿಳಿಯುವ ಕೌತುಕ ಮೂಡಿದೆ. ಬಿಡುಗಡೆಗೂ ಮುನ್ನ ಎಷ್ಟು ಟಿಕೆಟ್ ಬುಕ್ ಆಗುತ್ತವೆ ಎಂಬುದರ ಮೇಲೆ ಸಿನಿಮಾದ ಓಪನಿಂಗ್ ನಿರ್ಧಾರ ಆಗಿರುತ್ತದೆ. ಸೆಪ್ಟೆಂಬರ್ 26ರಂದು ‘ಕಾಂತಾರ: ಚಾಪ್ಟರ್ 1’ ಸಿನಿಮಾದ ಟಿಕೆಟ್ ಬುಕಿಂಗ್ (Kantara Chapter 1 Ticket Booking) ಶುರು ಆಗಲಿದೆ. ಟಿಕೆಟ್ ದರ ಮುಗಿಲು ಮುಟ್ಟುವ ಸಾಧ್ಯತೆ ಇದೆ.
ಕರ್ನಾಟಕದಲ್ಲಿ ಸಿನಿಮಾ ಟಿಕೆಟ್ ದರ 200 ರೂಪಾಯಿ ಮೀರಬಾರದು ಎಂದು ಇತ್ತೀಚೆಗೆ ಸರ್ಕಾರ ಆದೇಶ ಹೊರಡಿಸಿತ್ತು. ಆದರೆ ಅದರ ವಿರುದ್ಧ ಮಲ್ಟಿಪ್ಲೆಕ್ಸ್ ಅಸೋಸಿಯೇಷನ್ ಮತ್ತು ‘ಹೊಂಬಾಳೆ ಫಿಲ್ಮ್ಸ್’ ಸಂಸ್ಥೆ ಹೈಕೋರ್ಟ್ ಮೆಟ್ಟಿಲೇರಿದ್ದವು. ಆದ್ದರಿಂದ ಚಿತ್ರದ ಆದೇಶಕ್ಕೆ ಹೈಕೋರ್ಟ್ ಮಧ್ಯಂತರ ತಡೆ ನೀಡಿದೆ. ಹಾಗಾಗಿ ‘ಕಾಂತಾರ: ಚಾಪ್ಟರ್ 1’ ಟಿಕೆಟ್ ಬೆಲೆ ಸಹಜವಾಗಿಯೇ ದುಬಾರಿ ಆಗಲಿದೆ.
ಕರ್ನಾಟಕದಲ್ಲಿ ಸೆಪ್ಟೆಂಬರ್ 26ರ ಮಧ್ಯಾಹ್ನ 12.29ಕ್ಕೆ ‘ಕಾಂತಾರ: ಚಾಪ್ಟರ್ 1’ ಸಿನಿಮಾದ ಬುಕ್ಕಿಂಗ್ ಆರಂಭ ಆಗಲಿದೆ. ಸೆಟ್ಟೇರಿದ ದಿನದಿಂದಲೂ ಈ ಸಿನಿಮಾ ಸಾಕಷ್ಟು ನಿರೀಕ್ಷೆ ಮೂಡಿಸಿದೆ. ವಿಜಯ್ ಕಿರಗಂದೂರು ಅವರು ಈ ಸಿನಿಮಾ ನಿರ್ಮಾಣ ಮಾಡಿದ್ದಾರೆ. ರಿಷಬ್ ಶೆಟ್ಟಿ ಅವರು ನಿರ್ದೇಶನ ಮಾಡುವುದರ ಜೊತೆಗೆ ಮುಖ್ಯ ಪಾತ್ರದಲ್ಲೂ ನಟಿಸಿದ್ದಾರೆ. ಈಗಾಗಲೇ ಟ್ರೇಲರ್ ಧೂಳೆಬ್ಬಿಸಿದೆ.
ಬಹುದೊಡ್ಡ ಮಟ್ಟದಲ್ಲಿ ‘ಕಾಂತಾರ: ಚಾಪ್ಟರ್ 1’ ಸಿನಿಮಾ ತೆರೆಕಾಣಲಿದೆ. ಭಾರತದಾದ್ಯಂತ 7000ಕ್ಕೂ ಹೆಚ್ಚು ಸ್ಕ್ರೀನ್ಗಳಲ್ಲಿ ಬಿಡುಗಡೆ ಆಗಲಿದೆ. ಕನ್ನಡ ಮಾತ್ರವಲ್ಲದೇ ಒಟ್ಟು 7 ಭಾಷೆಗಳಲ್ಲಿ ಈ ಸಿನಿಮಾ ರಿಲೀಸ್ ಆಗುತ್ತಿರುವುದು ವಿಶೇಷ. 2022ರಲ್ಲಿ ಬಂದಿದ್ದ ‘ಕಾಂತಾರ’ ಸಿನಿಮಾ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಹಿಟ್ ಆಗಿತ್ತು. ಈಗ ಅದರ ಪ್ರೀಕ್ವೆಲ್ ‘ಕಾಂತಾರ: ಚಾಪ್ಟರ್ 1’ ಕೂಡ ಧೂಳೆಬ್ಬಿಸಲು ಸಜ್ಜಾಗಿದೆ.
ಇದನ್ನೂ ಓದಿ: ‘ಕಾಂತಾರ ಚಾಪ್ಟರ್ 1’ ನೋಡಲು ಹೋದರೆ ‘ರಾಜಾ ಸಾಬ್’ ದರ್ಶನ ಪಕ್ಕಾ
ಕಾಡಿನಲ್ಲಿ ‘ಕಾಂತಾರ: ಚಾಪ್ಟರ್ 1’ ಸಿನಿಮಾದ ಬಹುತೇಕ ಚಿತ್ರೀಕರಣ ಮಾಡಲಾಗಿದೆ. ಟ್ರೇಲರ್ನಲ್ಲಿ ಅದ್ದೂರಿತನ ಕಾಣಿಸಿದೆ. ಪರಭಾಷೆ ಮಂದಿ ಕೂಡ ಈ ಸಿನಿಮಾ ಬಗ್ಗೆ ಮಾತನಾಡಲು ಆರಂಭಿಸಿದ್ದಾರೆ. ಅಕ್ಟೋಬರ್ 1ರಂದು ಪ್ರೀಮಿಯರ್ ಶೋ ಇರಲಿದೆ. ಒಂದು ವಾರ ಮುಂಚೆಯೇ ಬುಕಿಂಗ್ ಓಪನ್ ಆಗುತ್ತಿದೆ. ರಿಷಬ್ ಶೆಟ್ಟಿ, ರುಕ್ಮಿಣಿ ವಸಂತ್, ಗುಲ್ಶನ್ ದೇವಯ್ಯ ಮುಂತಾದವರು ಪ್ರಮುಖ ಪಾತ್ರಗಳನ್ನು ಮಾಡಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.