‘ಮಾರುತ’ ಚಿತ್ರದಿಂದ ನವರಾತ್ರಿ ಪ್ರಯುಕ್ತ ‘ನಮ್ಮಮ್ಮ ಸವದತ್ತಿ ಎಲ್ಲಮ್ಮ’ ಹಾಡು ರಿಲೀಸ್
ಅಕ್ಟೋಬರ್ 31ಕ್ಕೆ ‘ಮಾರುತ’ ಸಿನಿಮಾ ಬಿಡುಗಡೆ ಆಗಲಿದೆ. ಈಗ ಹೊಸ ಹಾಡು ರಿಲೀಸ್ ಆಗಿದೆ. ‘ನಮ್ಮಮ್ಮ ಸವದತ್ತಿ ಎಲ್ಲಮ್ಮ’ ಎಂಬ ಈ ಹಾಡು ನವರಾತ್ರಿ ಹಬ್ಬದ ಪ್ರಯುಕ್ತ ಬಿಡುಗಡೆ ಆಗಿದೆ. ಅನನ್ಯಾ ಭಟ್ ಅವರ ಕಂಠದಲ್ಲಿ ಈ ಗೀತೆ ಮೂಡಿಬಂದಿದೆ. ಇತ್ತೀಚೆಗೆ ಚಿತ್ರತಂಡ ಸುದ್ದಿಗೋಷ್ಠಿ ನಡೆಸಿತು.

ನವರಾತ್ರಿಯನ್ನು ಭಕ್ತಿ ಭಾವದಿಂದ ಆಚರಿಸಲಾಗುತ್ತಿದೆ. ಈ ಪ್ರಯುಕ್ತ ‘ಮಾರುತ’ (Maarutha) ಸಿನಿಮಾದಿಂದ ನವರಾತ್ರಿ ಪ್ರಯುಕ್ತ ‘ನಮ್ಮಮ್ಮ ಸವದತ್ತಿ ಎಲ್ಲಮ್ಮ’ (Nammamma Savadatti Yellamma) ಹಾಡು ಬಿಡುಗಡೆ ಆಗಿದೆ. ಇದು ಎಸ್. ನಾರಾಯಣ್ ನಿರ್ದೇಶನದ ಸಿನಿಮಾ. ಈ ಚಿತ್ರದಲ್ಲಿ ದುನಿಯಾ ವಿಜಯ್, ಶ್ರೇಯಸ್ ಮಂಜು, ಬೃಂದಾ ಆಚಾರ್ಯ ಮುಂತಾದವರು ನಟಿಸಿದ್ದಾರೆ. ‘ಈಶಾ ಪ್ರೊಡಕ್ಷನ್ಸ್’ ಮೂಲಕ ರಮೇಶ್ ಯಾದವ್ ಮತ್ತು ಕೆ. ಮಂಜು ಅವರು ‘ಮಾರುತ’ ಸಿನಿಮಾವನ್ನು ನಿರ್ಮಾಣ ಮಾಡಿದ್ದಾರೆ. ‘ಜಂಕಾರ್ ಮ್ಯೂಸಿಕ್’ ಮೂಲಕ ‘ನಮ್ಮಮ್ಮ ಸವದತ್ತಿ ಎಲ್ಲಮ್ಮ’ ಹಾಡು ರಿಲೀಸ್ ಆಗಿದೆ. ಈ ಗೀತೆಗೆ ಅನನ್ಯಾ ಭಟ್ ಅವರು ಧ್ವನಿ ನೀಡಿದ್ದಾರೆ. ಹಾಡಿನಲ್ಲಿ ಬೃಂದಾ ಆಚಾರ್ಯ (Brinda Acharya) ಅವರು ನಟಿಸಿದ್ದಾರೆ.
‘ನಮ್ಮಮ್ಮ ಸವದತ್ತಿ ಎಲ್ಲಮ್ಮ’ ಹಾಡಿನ ಬಿಡುಗಡೆಗಾಗಿ ‘ಮಾರುತ’ ಚಿತ್ರತಂಡದವರು ಸುದ್ದಿಗೋಷ್ಠಿ ನಡೆಸಿದರು. ಈ ವೇಳೆ ಸಿನಿಮಾ ಬಗ್ಗೆ ಮತ್ತು ಹಾಡಿನ ಬಗ್ಗೆ ಮಾಹಿತಿ ಹಂಚಿಕೊಂಡರು. ‘ಇಂದು ಬಿಡುಗಡೆ ಆಗಿರುವ ಹಾಡು ಬಹಳ ಚೆನ್ನಾಗಿದೆ. ನವರಾತ್ರಿ ಸಂದರ್ಭದಲ್ಲಿ ಈ ಗೀತೆ ಅನಾವರಣ ಆಗಿದೆ. ಅಕ್ಟೋಬರ್ 31ಕ್ಕೆ ಸಿನಿಮಾ ತೆರೆಗೆ ಬರಲಿದೆ’ ಎಂದು ನಿರ್ದೇಶಕ ಎಸ್. ನಾರಾಯಣ್ ತಿಳಿಸಿದರು.
‘ದುನಿಯಾ ವಿಜಯ್ ಅವರು ಉತ್ತಮವಾಗಿ ನಟಿಸಿದ್ದಾರೆ. ಶ್ರೇಯಸ್ ಮಂಜು, ಬೃಂದಾ ಆಚಾರ್ಯ ಅವರ ಅಭಿನಯ ಸಹ ಚೆನ್ನಾಗಿದೆ. ತಾರಾ, ಸಾಧುಕೋಕಿಲ, ರಂಗಾಯಣ ರಘು, ಶರತ್ ಲೋಹಿತಾಶ್ವ, ಕಲ್ಯಾಣಿ, ಪ್ರಮೋದ್ ಶೆಟ್ಟಿ, ಸುಜಯ್ ಶಾಸ್ತ್ರಿ ಮುಂತಾದವರು ಪಾತ್ರವರ್ಗದಲ್ಲಿ ಇದ್ದಾರೆ. ರವಿಚಂದ್ರನ್ ಅವರು ಅತಿಥಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಮಾರುತ ಒಂದು ಕೌಟುಂಬಿಕ ಸಿನಿಮಾ’ ಎಂದಿದ್ದಾರೆ ಎಸ್. ನಾರಾಯಣ್.
‘ನಮ್ಮಮ್ಮ ಸವದತ್ತಿ ಎಲ್ಲಮ್ಮ’ ಹಾಡು:
‘ಈ ಸಿನಿಮಾದಲ್ಲಿ ಯುವಜನತೆಯನ್ನು ಎಚ್ಚರಿಸುವ ಉತ್ತಮವಾದ ಸಂದೇಶ ಕೂಡ ಇದೆ. ಸಾಮಾಜಿಕ ಜಾಲತಾಣಗಳಿಂದ ಎಷ್ಟು ಉಪಯೋಗ ಇದೆಯೋ ಅಷ್ಟೇ ಅಪಾಯ ಕೂಡ ಇದೆ. ಈ ಬಗ್ಗೆ ಪೋಷಕರು ಹೆಚ್ಚು ಗಮನ ನೀಡಬೇಕು ಎಂಬ ಸಂದೇಶವನ್ನು ಈ ಸಿನಿಮಾ ಮೂಲಕ ನೀಡುತ್ತಿದ್ದೇವೆ’ ಎಂದು ಎಸ್. ನಾರಾಯಣ್ ಹೇಳಿದ್ದಾರೆ. ಶ್ರೇಯಸ್ ಮಂಜು ಮಾತನಾಡಿ, ‘ನವರಾತ್ರಿಯ ಸಂದರ್ಭದಲ್ಲಿ ನಾಡಿನ ಜನತೆಗೆ ಒಂದೊಳ್ಳೆ ಭಕ್ತಿಗೀತೆಯನ್ನು ನಿರ್ದೇಶಕರು ನೀಡಿದ್ದಾರೆ’ ಎಂದರು.
ಇದನ್ನೂ ಓದಿ: ‘ಸಾವಿರ ಗುಂಗಲ್ಲಿ’ ಆಲ್ಬಂ ಹಾಡಿನಲ್ಲಿ ಮಿಂಚಿದ ನಟಿ ಬೃಂದಾ ಆಚಾರ್ಯ
ಸುಮಾರು 65 ಲಕ್ಷ ರೂಪಾಯಿ ರೂಪಾಯಿ ಬಜೆಟ್ನಲ್ಲಿ ‘ನಮ್ಮಮ್ಮ ಸವದತ್ತಿ ಎಲ್ಲಮ್ಮ’ ಹಾಡಿನ ಚಿತ್ರೀಕರಣ ಮಾಡಲಾಗಿದೆ ಎಂದು ಕೆ. ಮಂಜು ತಿಳಿಸಿದ್ದಾರೆ. ಉತ್ತಮ ಸಂದೇಶ ನೀಡುವಂತಹ ಸಿನಿಮಾ ಮಾಡಿದ ಖುಷಿಯಲ್ಲಿದ್ದಾರೆ ನಿರ್ಮಾಪಕ ರಮೇಶ್ ಯಾದವ್. ಅಕ್ಟೋಬರ್ 31ರಂದು ‘ಮಾರುತ’ ಸಿನಿಮಾ ನೋಡಲು ತಾವು ಕೂಡ ಕಾತರದಿಂದ ಕಾದಿರುವುದಾಗಿ ಬೃಂದಾ ಆಚಾರ್ಯ ಹೇಳಿದರು.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.




