ಕನ್ನಡದ ‘ಕಾಂತಾರ’ (Kantara Movie) ಸಿನಿಮಾ ಮಾಡಿರುವ ದಾಖಲೆಗಳು ಒಂದೆರಡಲ್ಲ. ಈ ಚಿತ್ರದಿಂದ ಸ್ಯಾಂಡಲ್ವುಡ್ ಮೇಲೆ ಪರಭಾಷೆ ಮಂದಿಗೆ ಇದ್ದ ಭರವಸೆ ಜಾಸ್ತಿ ಆಗಿದೆ. ನಟ, ನಿರ್ದೇಶಕ ರಿಷಬ್ ಶೆಟ್ಟಿ ಅವರು ದೇಶಾದ್ಯಂತ ಫೇಮಸ್ ಆಗಿದ್ದಾರೆ. ಬಂಡವಾಳ ಹೂಡಿದ ‘ಹೊಂಬಾಳೆ ಫಿಲ್ಮ್ಸ್’ (Hombale Films) ಸಂಸ್ಥೆ ಸಖತ್ ಲಾಭ ಮಾಡಿದೆ. ಸಿನಿಮಾಗಳು ರಿಲೀಸ್ ಆಗಿ ಮೂರು-ನಾಲ್ಕು ದಿನಕ್ಕೆ ಬಿಸ್ನೆಸ್ ಮುಗಿಸಿ ಮನೆಗೆ ಹೋಗುವ ಈ ಕಾಲದಲ್ಲಿ ‘ಕಾಂತಾರ’ ಚಿತ್ರ ಯಶಸ್ವಿಯಾಗಿ 50 ದಿನಗಳನ್ನು ಪೂರೈಸಿದೆ ಎಂಬುದು ವಿಶೇಷ. ಗಲ್ಲಾಪೆಟ್ಟಿಗೆಯಲ್ಲಿ 350 ಕೋಟಿ ರೂಪಾಯಿಗೂ ಹೆಚ್ಚು ಕಲೆಕ್ಷನ್ ಮಾಡಿರುವುದು ಈ ಚಿತ್ರದ ಹೆಚ್ಚುಗಾರಿಗೆ. ‘ಕಾಂತಾರ ಯಶಸ್ಸಿನಿಂದ ರಿಷಬ್ ಶೆಟ್ಟಿ (Rishab Shetty) ಅವರ ಡಿಮ್ಯಾಂಡ್ ಹೆಚ್ಚಾಗಿದೆ.
ಸೆ.30ರಂದು ಕನ್ನಡದಲ್ಲಿ ಬಿಡುಗಡೆಯಾದ ‘ಕಾಂತಾರ’ ಚಿತ್ರವು ರಾಜ್ಯದ 300ಕ್ಕೂ ಅಧಿಕ ಚಿತ್ರಮಂದಿರಗಳಲ್ಲಿ ಹಾಗೂ ವಿದೇಶದ ಹಲವು ಚಿತ್ರಮಂದಿರಗಳಲ್ಲಿ 50 ದಿನಗಳನ್ನು ಪೂರೈಸಿದೆ. 100ನೇ ದಿನದತ್ತ ದಾಪುಗಾಲಿಟ್ಟಿದೆ. ಬರೀ ಕನ್ನಡವಷ್ಟೇ ಅಲ್ಲದೇ ತೆಲುಗು, ತಮಿಳು, ಹಿಂದಿ ಮತ್ತು ಮಲಯಾಳಂಗೆ ಡಬ್ ಆಗಿರುವ ಈ ಚಿತ್ರ ಅಲ್ಲಿಯೂ ಯಶಸ್ವಿಯಾಗಿ ಪ್ರದರ್ಶನಗೊಳ್ಳುತ್ತಿದ್ದು, ಸದ್ಯದಲ್ಲೇ ಪರಭಾಷೆಯಲ್ಲೂ 50 ದಿನಗಳನ್ನು ಪೂರ್ಣಗೊಳಿಸಲಿದೆ.
ಪ್ರೇಕ್ಷಕರ ನೆಚ್ಚಿನ ‘ಕಾಂತಾರ’ಕ್ಕೆ ಇಂದು 50ದಿನ ?
ಪಂಜುರ್ಲಿ, ಗುಳಿಗ ದೈವದ ಆಶೀರ್ವಾದ ಎಂದಿಗೂ ಎಲ್ಲರ ಮೇಲಿರಲಿ. ನಿಮ್ಮೆಲ್ಲರ ಪ್ರೀತಿ, ಅಭಿಮಾನಕ್ಕೆ ನಾವು ಆಭಾರಿ. ಧನ್ಯವಾದಗಳು.#Kantara #50DaysOfKantara@shetty_rishab @VKiragandur @hombalefilms@HombaleGroup @gowda_sapthami @AJANEESHB@actorkishore pic.twitter.com/aTrGLKtMfD
— Hombale Films (@hombalefilms) November 18, 2022
‘ಕೆಜಿಎಫ್’ ರೀತಿಯ ಅದ್ದೂರಿ ಸಿನಿಮಾವನ್ನು ನಿರ್ಮಾಣ ಮಾಡಿದ ‘ಹೊಂಬಾಳೆ ಫಿಲ್ಮ್ಸ್’ ಬ್ಯಾನರ್ನಿಂದ ವಿಶೇಷ ಚಿತ್ರಗಳು ಮೂಡಿಬರುತ್ತಿವೆ. ಕೇವಲ ಅದ್ದೂರಿತನಕ್ಕೆ ಮಹತ್ವ ನೀಡಿದೇ ವಿಶೇಷ ಕಥಾಹಂದರವನ್ನೂ ಗಮನದಲ್ಲಿ ಇಟ್ಟುಕೊಂಡು ನಿರ್ಮಾಪಕ ವಿಜಯ್ ಕಿರಗಂದೂರು ಅವರು ಬಂಡವಾಳ ಹೂಡುತ್ತಿದ್ದಾರೆ. ‘ಕಾಂತಾರ’ ಚಿತ್ರದ ಗೆಲುವಿನಿಂದ ಈ ಸಂಸ್ಥೆಯ ಖ್ಯಾತಿ ಇನ್ನಷ್ಟು ಹೆಚ್ಚಾಗಿದೆ.
ಐದು ಪ್ರಮುಖ ಭಾಷೆಗಳ ಸಿನಿಮಾಗಳನ್ನು ‘ಹೊಂಬಾಳೆ ಫಿಲ್ಮ್ಸ್’ ಸಂಸ್ಥೆ ನಿರ್ಮಿಸುತ್ತಿದೆ. ಜಗ್ಗೇಶ್ ಅಭಿನಯದ ‘ರಾಘವೇಂದ್ರ ಸ್ಟೋರ್ಸ್’ ಚಿತ್ರ ಬಿಡುಗಡೆಗೆ ಸಜ್ಜಾಗಿದೆ. ಶ್ರೀಮುರಳಿ ನಟನೆಯ ‘ಬಘೀರ’ ಚಿತ್ರಕ್ಕೆ ಶೂಟಿಂಗ್ ನಡೆಯುತ್ತಿದೆ. ರಕ್ಷಿತ್ ಅಭಿನಯದ ಮತ್ತು ನಿರ್ದೇಶನದ ‘ರಿಚರ್ಡ್ ಆಂಟೋನಿ’ ಮತ್ತು ಯುವ ರಾಜ್ಕುಮಾರ್ ಅಭಿನಯದ ಹೊಸ ಸಿನಿಮಾ ಸದ್ಯದಲ್ಲೇ ಶುರುವಾಗಲಿವೆ. ಇವಿಷ್ಟು ಸದ್ಯಕ್ಕಿರುವ ಕನ್ನಡ ಚಿತ್ರಗಳು.
ಪರಭಾಷೆಯ ಸಿನಿಮಾ ಬಗ್ಗೆ ಹೇಳೋದಾದರೆ ತೆಲುಗಿನಲ್ಲಿ ಪ್ರಭಾಸ್ ಅಭಿನಯದ ‘ಸಲಾರ್’ ಚಿತ್ರೀಕರಣ ನಡೆಯುತ್ತಿದೆ. ತಮಿಳಿನಲ್ಲಿ 2 ಚಿತ್ರಗಳನ್ನು ‘ಹೊಂಬಾಳೆ ಫಿಲ್ಮ್ಸ್’ ನಿರ್ಮಿಸುತ್ತಿದೆ. ಅದರಲ್ಲಿ ಒಂದು ಚಿತ್ರಕ್ಕೆ ‘ಸೂರರೈ ಪೊಟ್ರು’ ಖ್ಯಾತಿಯ ಸುಧಾ ಕೊಂಗರಾ ನಿರ್ದೇಶನ ಮಾಡುತ್ತಿದ್ದಾರೆ. ಇನ್ನೊಂದರ ಘೋಷಣೆ ಶೀಘ್ರದಲ್ಲೇ ಆಗಲಿದೆ. ಮಲಯಾಳಂನಲ್ಲಿ 2 ಚಿತ್ರ ನಿರ್ಮಾಣ ಆಗುತ್ತಿವೆ. ಫಹಾದ್ ಫಾಸಿಲ್ ಅಭಿನಯದ ‘ಧೂಮಂ’ ಚಿತ್ರಕ್ಕೆ ಶೂಟಿಂಗ್ ಆರಂಭ ಆಗಿದೆ. ಪೃಥ್ವಿರಾಜ್ ಸುಕುಮಾರನ್ ನಟಿಸಿ-ನಿರ್ದೇಶಿಸಲಿರುವ ‘ಟೈಸನ್’ ಚಿತ್ರವು ಮುಂದಿನ ವರ್ಷ ಪ್ರಾರಂಭವಾಗಲಿದೆ. ಹಿಂದಿ ಚಿತ್ರದ ಬಗ್ಗೆ ಶೀಘ್ರದಲ್ಲೇ ಮಾಹಿತಿ ಹೊರಬೀಳಲಿದೆ.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.