ಮಾಡಿದ ಆ ಒಂದು ತಪ್ಪಿಗೆ ವೇದಿಕೆ ಮೇಲೆ ಅನುಶ್ರೀಗೆ ಕ್ಷಮೆ ಕೇಳಿದ ರಿಷಬ್ ಶೆಟ್ಟಿ
Anchor Anushree: 'ಕಾಂತಾರ: ಚಾಪ್ಟರ್ 1' ಟ್ರೇಲರ್ ಲಾಂಚ್‌ನಲ್ಲಿ ಅನುಶ್ರೀಗೆ ರಿಷಬ್ ಕ್ಷಮೆ ಕೇಳಿದ್ದಾರೆ. ಅನುಶ್ರೀ ಅವರು ಈವೆಂಟ್ ನಿರೂಪಣೆ ಮಾಡಿದ್ದರು. ರಿಷಬ್ ಅವರ ಬ್ಯುಸಿ ವೇಳಾಪಟ್ಟಿಯಿಂದಾಗಿ ಮದುವೆಗೆ ಹಾಜರಾಗಲು ಸಾಧ್ಯವಾಗಿರಲಿಲ್ಲ ಎಂದು ಅವರು ವಿವರಿಸಿದರು. ಈ ಕ್ಷಮಾಪಣೆಯಿಂದ ಅನುಶ್ರೀ ಅವರು ಸಂತೋಷಪಟ್ಟರು.

ರಿಷಬ್ ಶೆಟ್ಟಿ ಅವರು ‘ಕಾಂತಾರ: ಚಾಪ್ಟರ್ 1’ ಸಿನಿಮಾ ಮೂಲಕ ಪ್ರೇಕ್ಷಕರ ಎದುರು ಬರಲು ಸಿದ್ಧರಾಗಿದ್ದಾರೆ. ಅಕ್ಟೋಬರ್ 2ರಂದು ಸಿನಿಮಾ ರಿಲೀಸ್ ಆಗಲಿದೆ. ಇದಕ್ಕಾಗಿ ಅದ್ದೂರಿ ತಯಾರಿ ನಡೆದಿದೆ. ಸೆಪ್ಟೆಂಬರ್ 22ರಂದು ಚಿತ್ರದ ಟ್ರೇಲರ್ ರಿಲೀಸ್ ಆಯಿತು. ಸಂಜೆ ವೇಳೆ ಬೆಂಗಳೂರಿನ ಖಾಸಗಿ ಹೊಟೆಲ್ನಲ್ಲಿ ಕಾರ್ಯಕ್ರಮ ಆಯೋಜನೆ ಮಾಡಲಾಯಿತು. ಈ ವೇಳೆ ರಿಷಬ್ ಅವರು ಅನುಶ್ರೀ (Anushree) ಬಳಿ ಕ್ಷಮೆ ಕೇಳಿದ್ದಾರೆ.
ಯಾವುದೇ ವಿಶೇಷ ಕಾರ್ಯಕ್ರಮ ಇದ್ದರೂ ಅದರ ನಿರೂಪಣೆಯನ್ನು ಅನುಶ್ರೀ ಅವರು ಮಾಡುತ್ತಾರೆ. ಅದೇ ರೀತಿ ‘ಕಾಂತಾರ: ಚಾಪ್ಟರ್ 1’ ಟ್ರೇಲರ್ ಲಾಂಚ್ ಈವೆಂಟ್ನ ನಿರೂಪಣೆಯ ಜವಾಬ್ದಾರಿಯನ್ನು ಅವರೇ ಹೊತ್ತಿದ್ದರು. ಅವರು ತಮ್ಮ ಚೆಂದದ ಮಾತಿನಿಂದ ಎಲ್ಲರನ್ನೂ ಸ್ವಾಗತಿಸಿದರು. ರಿಷಬ್ ಅವರನ್ನು ‘ಡಿವೈನ್ ಸ್ಟಾರ್’ ಎಂದು ಕೊಂಡಾಡಿದರು. ವೇದಿಕೆ ಮೇಲೆ ಮಾತನಾಡಿ ಹೋಗುವಾಗ ರಿಷಬ್ ಅವರು ಅನುಶ್ರೀಗೆ ಸಾರಿ ಎಂದಿದ್ದಾರೆ.
ಅನುಶ್ರೀ ಆಗಸ್ಟ್ 28ರಂದು ಬೆಂಗಳೂರಿನ ಹೊರ ವಲಯದಲ್ಲಿ ಅದ್ದೂರಿಯಾಗಿ ವಿವಾಹ ಆದರು. ಈ ವೇಳೆ ಅನೇಕ ಸೆಲೆಬ್ರಿಟಿಗಳು ಮದುವೆಗೆ ಹಾಜರಿ ಹಾಕಿದ್ದರು. ಆದರೆ, ರಿಷಬ್ ಶೆಟ್ಟಿ ಬಂದಿರಲಿಲ್ಲ. ಅನುಶ್ರೀ ಕಡೆಯಿಂದ ರಿಷಬ್ಗೆ ಆಮಂತ್ರಣ ಪತ್ರಿಕೆಯೇನೋ ಹೋಗಿತ್ತು. ಆದರೆ, ‘ಕಾಂತಾರ: ಚಾಪ್ಟರ್ 1’ ಸಿನಿಮಾದ ಕೊನೆಯ ಹಂತದ ಕೆಲಸಗಳಲ್ಲಿ ಅವರು ಬ್ಯುಸಿ ಇದ್ದಿದ್ದರಿಂದ ಅವರಿಗೆ ಬರೋಕೆ ಸಾಧ್ಯವೇ ಆಗಿಲ್ಲ.
ವೇದಿಕೆ ಮೇಲೆ ಮಾತು ಮುಗಿಸುವಾಗ, ‘ಕಳೆದ ಮೂರು ವರ್ಷಗಳಿಂದ ನಾನು ಹೊರ ಜಗತ್ತಿನ ಎಲ್ಲಾ ವಿಚಾರಗಳಿಂದ ದೂರ ಇದ್ದೆ. ಹೀಗಾಗಿ ಸಾಮಾನ್ಯ ಜ್ಞಾನವೇ ಕಡಿಮೆ ಆಗಿದೆ. ಅನುಶ್ರೀ ಅವರೇ ನಿಮ್ಮ ಮದುವೆಗೂ ಬರೋಕೆ ಆಗಿಲ್ಲ, ಸಾರಿ. ಹ್ಯಾಪಿ ಮ್ಯಾರೀಡ್ ಲೈಫ್’ ಎಂದು ಅನುಶ್ರೀಗೆ ಹೇಳಿದರು.
ಇದನ್ನೂ ಓದಿ: ಮದುವೆ ಬಳಿಕ ಗುಡ್ ನ್ಯೂಸ್ ನೀಡಿದ ನಿರೂಪಕಿ ಅನುಶ್ರೀ
ಇದರಿಂದ ಅನುಶ್ರೀ ಅವರಿಗೆ ಖುಷಿ ಆಯಿತು. ‘ಇಷ್ಟು ದೊಡ್ಡ ವೇದಿಕೆ ಮೇಲೆ ನನಗೆ ರಿಷಬ್ ಅವರಿಂದ ವಿಶ್ ಸಿಕ್ಕಿದೆ’ ಎಂದು ಹೆಮ್ಮೆಯಿಂದ ಅನುಶ್ರೀ ಅವರು ಹೇಳಿಕೊಂಡರು.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Published On - 6:58 am, Tue, 23 September 25








