‘ಕಾಂತಾರ’ (Kantara) ಸಿನಿಮಾ ರಿಷಬ್ ಶೆಟ್ಟಿಯನ್ನು ಪ್ಯಾನ್ ಇಂಡಿಯಾ ಸ್ಟಾರ್ ಅನ್ನಾಗಿ ಮಾಡಿದೆ. ಊಹಿಸದಷ್ಟು ಜನಪ್ರಿಯತೆ, ಗೌರವವನ್ನು ‘ಕಾಂತಾರ’ ಸಿನಿಮಾ ರಿಷಬ್ ಶೆಟ್ಟಿಗೆ ಬಗೆದು ಕೊಟ್ಟಿದೆ. ‘ಕಾಂತಾರ’ ಸಿನಿಮಾ ಬ್ಲಾಕ್ ಬಸ್ಟರ್ ಹಿಟ್ ಆಗಿದ್ದು, ಇದೀಗ ‘ಕಾಂತಾರ’ ಕತೆಯನ್ನು ಮತ್ತಷ್ಟು ಬೆಳೆಸಿ ಇನ್ನೊಂದು ಸಿನಿಮಾ ಮಾಡುವ ತಯಾರಿಯಲ್ಲಿದ್ದಾರೆ ರಿಷಬ್ ಶೆಟ್ಟಿ. ‘ಕಾಂತಾರ’ ಸಿನಿಮಾದ ಪ್ರೀಕ್ವೆಲ್ ಅನ್ನು ರಿಷಬ್ ಶೆಟ್ಟಿ ಬರೆದಿದ್ದು, ಚಿತ್ರೀಕರಣವನ್ನೂ ಪ್ರಾರಂಭಿಸಿದ್ದಾರೆ ಎನ್ನಲಾಗುತ್ತಿದೆ. ಈ ಸಿನಿಮಾದಲ್ಲಿ ರಿಷಬ್ ಶೆಟ್ಟಿ ಎರಡು ಪಾತ್ರಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎನ್ನಲಾಗುತ್ತಿದ್ದು, ಎರಡು ಭಿನ್ನ ಗೆಟಪ್ನಲ್ಲಿ ರಿಷಬ್ ಕಾಣಿಸಿಕೊಳ್ಳಲಿದ್ದಾರೆ.
‘ಕಾಂತಾರ 2’ ಸಿನಿಮಾದ ಚಿತ್ರೀಕರಣವನ್ನು ರಿಷಬ್ ಶೆಟ್ಟಿ ಬಹಳ ಗುಟ್ಟಾಗಿ ಮಾಡುತ್ತಿದ್ದಾರೆ ಎನ್ನಲಾಗುತ್ತಿದೆ. ಸಿನಿಮಾದ ಬಗ್ಗೆ ಸಿನಿಮಾದ ಕತೆಯ ಬಗ್ಗೆ ಗುಟ್ಟನ್ನು ಬಿಟ್ಟುಕೊಡದೆ ಚಿತ್ರೀಕರಣ ಮಾಡುತ್ತಿದ್ದಾರೆ ರಿಷಬ್. ಆದರೆ ಇದೀಗ ರಿಷಬ್ರ ಹೊಸ ಲುಕ್ ಬಹಿರಂಗಗೊಂಡಿದ್ದು, ಆ ಲುಕ್ ‘ಕಾಂತಾರ 2’ ಗಾಗಿಯೇ ಮಾಡಲಾಗಿದೆ ಎನ್ನಲಾಗುತ್ತಿದೆ. ‘ಕಾಂತಾರ’ ಸೇರಿದಂತೆ ಹಲವು ಸಿನಿಮಾಗಳಲ್ಲಿ ತೆಳ್ಳನೆ ಗಡ್ಡ ಬಿಟ್ಟಿದ್ದ ರಿಷಬ್ ಶೆಟ್ಟಿ ಇದೀಗ ಋಷಿಗಳ ಮಾದರಿಯಲ್ಲಿ ಉದ್ದನೆಯ ಗಡ್ಡ ಬಿಟ್ಟಿದ್ದಾರೆ. ರಿಷಬ್ರ ಈ ಲುಕ್ ‘ಕಾಂತಾರ 2’ ಸಿನಿಮಾದ್ದು ಎನ್ನಲಾಗುತ್ತಿದೆ.
ಇದನ್ನೂ ಓದಿ:‘ಕಾಂತಾರ’ ನಟಿ ಸಪ್ತಮಿ ಗೌಡ ದಸರಾಕ್ಕೆ ಶುಭಾಶಯ ತಿಳಿಸಿದ್ದು ಹೀಗೆ
ರಿಷಬ್ ಶೆಟ್ಟಿ, ಅಜನೀಶ್ ಲೋಕನಾಥ್ ಹಾಗೂ ಗಾಯಕ ವಿಜಯ ಪ್ರಕಾಶ್ ಅವರುಗಳು ಇತ್ತೀಚೆಗಷ್ಟೆ ಸಂಗೀತ ದಿಗ್ಗಜ ಎಆರ್ ರೆಹಮಾನ್ ಜೊತೆಗೆ ವಿಡಿಯೋ ಕರೆಯಲ್ಲಿ ‘ಕಾಂತಾರ’ ಸಿನಿಮಾದ ಬಗ್ಗೆ ಸಂವಾದ ನಡೆಸಿದ್ದರು. ವಿಡಿಯೋ ಕಾಲ್ನ ಸ್ಕ್ರೀನ್ ಶಾಟ್ ಅನ್ನು ಅಜನೀಶ್ ಲೋಕನಾಥ್ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದರು. ಆ ಚಿತ್ರದಲ್ಲಿ ರಿಷಬ್ರ ಹೊಸ ಲುಕ್ ರಿವೀಲ್ ಆಗಿದೆ. ಉದ್ದನೆಯ ಗಡ್ಡ ಬಿಟ್ಟಿರುವ ರಿಷಬ್ ಶೆಟ್ಟಿ, ತುಸು ಸಣ್ಣಗಾದಂತೆಯೂ ಕಾಣುತ್ತಿದ್ದಾರೆ.
‘ಕಾಂತಾರ’ ಸಿನಿಮಾದ ಕತೆ ನಡೆದ ಕಾಲಘಟ್ಟಕ್ಕಿಂತಲೂ ಹಿಂದಿನ ಕಾಲಘಟ್ಟದಲ್ಲಿ ‘ಕಾಂತಾರ 2’ ಸಿನಿಮಾದ ಕತೆ ನಡೆಯಲಿದೆ. ಹಾಗಾಗಿ ಇದನ್ನು ಪ್ರೀಕ್ವೆಲ್ ಎಂದು ಕರೆಯಲಾಗಿದೆ. ‘ಕಾಂತಾರ 2’ ಸಿನಿಮಾದಲ್ಲಿ ರಾಜರ ಕಾಲದ ಕತೆ ಮೊದಲ ಭಾಗಕ್ಕಿಂತಲೂ ತುಸು ಹೆಚ್ಚಿಗೆ ಇರಲಿದೆ ಎನ್ನಲಾಗುತ್ತಿದೆ. ಜೊತೆಗೆ ‘ಕಾಂತಾರ’ ಸಿನಿಮಾದಲ್ಲಿ ಕಾಡಿಗೆ ಓಡಿ ಹೋಗಿ ಕಾಣೆಯಾದ ರಿಷಬ್ (ಕಾಡುಬೆಟ್ಟು ಶಿವ)ನ ತಂದೆಯ ಕತೆಯೂ ಇರಲಿದೆ ಎನ್ನಲಾಗುತ್ತಿದೆ. ಈ ಸಿನಿಮಾವನ್ನೂ ಸಹ ಹೊಂಬಾಳೆ ಫಿಲಮ್ಸ್ನವರೇ ನಿರ್ಮಾಣ ಮಾಡುತ್ತಿದ್ದು, ‘ಕಾಂತಾರ’ ಸಿನಿಮಾಕ್ಕೆ ಕೆಲಸ ಮಾಡಿದ ಬಹುತೇಕ ತಂತ್ರಜ್ಞರು ‘ಕಾಂತಾರ 2’ ಸಿನಿಮಾಕ್ಕೂ ಕೆಲಸ ಮಾಡುತ್ತಿದ್ದಾರೆ.
‘ಕಾಂತಾರ’ ಸಿನಿಮಾಕ್ಕೆ ಹೂಡಲಾಗಿದ್ದ ಬಂಡವಾಳದ ಮೂರು ಪಟ್ಟು ಬಂಡವಾಳವನ್ನು ‘ಕಾಂತಾರ 2’ ಸಿನಿಮಾಕ್ಕೆ ಹೊಂಬಾಳೆ ಫಿಲಮ್ಸ್ ಹೂಡುತ್ತಿದೆ. ‘ಕಾಂತಾರ 2’ ಸಿನಿಮಾ ಪ್ರೀಕ್ವೆಲ್ ಆದ್ದರಿಂದ ‘ಕಾಂತಾರ’ ಸಿನಿಮಾದಲ್ಲಿ ನಟಿಸಿದ್ದ ಹಲವರು ‘ಕಾಂತಾರ 2’ನಲ್ಲಿ ನಟಿಸುವುದಿಲ್ಲ ಎಂಬ ಮಾತುಗಳ ಸಹ ಕೇಳಿ ಬರುತ್ತಿದೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ