Roberrt: ಪ್ರೇಕ್ಷಕರು ‘ರಾಬರ್ಟ್​’ ಸಿನಿಮಾ ಯಾಕೆ ನೋಡಬೇಕು? ಇಲ್ಲಿದೆ 5 ಪ್ರಮುಖ ಕಾರಣಗಳು!

‘ಚಾಲೆಂಜಿಂಗ್​ ಸ್ಟಾರ್​’ ದರ್ಶನ್​ ಅಭಿನಯದ ‘ರಾಬರ್ಟ್​’ ಚಿತ್ರ ಮಾ.11ರಂದು ಅದ್ದೂರಿಯಾಗಿ ಬಿಡುಗಡೆ ಆಗುತ್ತಿದೆ. 5 ಪ್ರಮುಖ ಕಾರಣಗಳಿಗಾಗಿ ಈ ಸಿನಿಮಾವನ್ನು ನೋಡಬೇಕು ಎಂದು ಕಾದಿದ್ದಾರೆ ಅಭಿಮಾನಿಗಳು.

Roberrt: ಪ್ರೇಕ್ಷಕರು ‘ರಾಬರ್ಟ್​’ ಸಿನಿಮಾ ಯಾಕೆ ನೋಡಬೇಕು? ಇಲ್ಲಿದೆ 5 ಪ್ರಮುಖ ಕಾರಣಗಳು!
ರಾಬರ್ಟ್​ ಸಿನಿಮಾದಲ್ಲಿ ದರ್ಶನ್​
Edited By: ಸಾಧು ಶ್ರೀನಾಥ್​

Updated on: Mar 08, 2021 | 12:00 PM

ದರ್ಶನ್​ ನಟನೆಯ ಯಾವುದೇ ಸಿನಿಮಾ ಬಿಡುಗಡೆ ಆದರೂ ಅವರ ಅಭಿಮಾನಿಗಳಿಗೆ ಹಬ್ಬವೇ ಸರಿ. ಎಲ್ಲ ಚಿತ್ರಮಂದಿರಗಳಲ್ಲೂ ಜಾತ್ರೆಯ ವಾತಾವರಣ ನಿರ್ಮಾಣ ಆಗಿರುತ್ತದೆ. ಈಗ ‘ರಾಬರ್ಟ್​’ ತೆರೆಕಾಣುತ್ತಿದ್ದು, ಸಿನಿಮಾ ನೋಡಲು ಫ್ಯಾನ್ಸ್​ ತುದಿಗಾಲಿನಲ್ಲಿ ನಿಂತಿದ್ದಾರೆ. ಸಿನಿಪ್ರಿಯರ ವಲಯದಲ್ಲಿ ‘ರಾಬರ್ಟ್’​ ಬಗ್ಗೆ ನಿರೀಕ್ಷೆ ಮೂಡಲು ಕಾರಣವಾದ 5 ಅಂಶಗಳು ಹೀಗಿವೆ…

ಕಾರಣ 1: ದರ್ಶನ್-ತರುಣ್​​ ಕಾಂಬಿನೇಷನ್​
ಈ ಹಿಂದೆ ತರುಣ್​ ಸುಧೀರ್​ ನಿರ್ದೇಶನ ಮಾಡಿದ್ದ ‘ಚೌಕ’ ಸಿನಿಮಾದಲ್ಲಿ ದರ್ಶನ್​ ಅವರು ರಾಬರ್ಟ್​ ಎಂಬ ಅತಿಥಿ ಪಾತ್ರವನ್ನು ಮಾಡಿದ್ದರು. ಅದಕ್ಕೆ ಜನರಿಂದ ಸಿಕ್ಕಾಪಟ್ಟೆ ಶಿಳ್ಳೆ, ಚೆಪ್ಪಾಳೆ ಸಿಕ್ಕಿತ್ತು. ಈಗ ಅದೇ ಪಾತ್ರವನ್ನು ಮುಖ್ಯವಾಗಿ ಇಟ್ಟುಕೊಂಡು ತರುಣ್​ ಅವರು ಹೊಸ ಕಥೆ ಬರೆದು ‘ರಾಬರ್ಟ್​’ ಸಿನಿಮಾ ಮಾಡಿದ್ದಾರೆ. ಈ ನಟ-ನಿರ್ದೇಶಕನ ಕಾಂಬಿನೇಷನ್​ ಬಗ್ಗೆ ಪ್ರೇಕ್ಷಕರಿಗೆ ದೊಡ್ಡಮಟ್ಟದ ನಿರೀಕ್ಷೆ ಇದೆ.

ಕಾರಣ 2: ಬಹುದಿನಗಳ ಬಳಿಕ ಬರುತ್ತಿರುವ ದರ್ಶನ್​ ಸಿನಿಮಾ
ಅಭಿಮಾನಿಗಳು ‘ಚಾಲೆಂಜಿಂಗ್​ ಸ್ಟಾರ್​’ ದರ್ಶನ್​ ಅವರನ್ನು ಬೆಳ್ಳಿಪರದೆ ಮೇಲೆ ನೋಡಿ ತುಂಬ ದಿನಗಳಾಗಿವೆ. 2019ರ ಡಿಸೆಂಬರ್​ನಲ್ಲಿ ‘ಒಡೆಯ’ ಚಿತ್ರ ತೆರೆಕಂಡಿತ್ತು. ನಂತರ ಲಾಕ್​ಡೌನ್​ ಆರಂಭ ಆಗಿದ್ದರಿಂದ ‘ರಾಬರ್ಟ್​’ ಆಗಮನ ತಡವಾಯಿತು. ಒಂದು ವರ್ಷಕ್ಕಿಂತಲೂ ದೀರ್ಘವಾದ ಗ್ಯಾಪ್​ ಬಳಿಕ ದರ್ಶನ್​ ಅವರು ಅಭಿಮಾನಿಗಳನ್ನು ರಂಜಿಸಲು ಬರುತ್ತಿರುವುದರಿಂದ ತಮ್ಮ ನೆಚ್ಚಿನ ನಟನನ್ನು ದೊಡ್ಡ ಪರದೆಯಲ್ಲಿ ನೋಡಲು ಫ್ಯಾನ್ಸ್ ಕಾದಿದ್ದಾರೆ.

ಕಾರಣ 3: ಟಾಲಿವುಡ್​ನಲ್ಲೂ ಸೃಷ್ಟಿಯಾದ ಹೈಪ್​
ಕರ್ನಾಟಕ ಮಾತ್ರವಲ್ಲದೆ ತೆಲುಗು ನೆಲದಲ್ಲೂ ‘ರಾಬರ್ಟ್​’ ಸಿನಿಮಾ ಧೂಳೆಬ್ಬಿಸಲು ಸಜ್ಜಾಗಿದೆ. ಅಲ್ಲಿಯೂ ದರ್ಶನ್​ ಅವರಿಗೆ ಅಭಿಮಾನಿಗಳಿದ್ದಾರೆ. ಆಂಧ್ರ ಮತ್ತು ತೆಲಂಗಾಣದಲ್ಲಿ ಈಗಾಗಲೇ ‘ರಾಬರ್ಟ್​’ ಕಟೌಟ್​ಗಳು ರಾರಾಜಿಸುತ್ತಿವೆ. ತೆಲುಗು ವರ್ಷನ್​ನ ಟೀಸರ್​, ಟ್ರೇಲರ್ ಮತ್ತು ಹಾಡುಗಳಿ​ಗೆ ಒಳ್ಳೆಯ ಪ್ರತಿಕ್ರಿಯೆ ಸಿಕ್ಕಿದೆ. ಟಾಲಿವುಡ್​ ಮಂದಿ ಈ ಸಿನಿಮಾವನ್ನು ಹೇಗೆ ಸ್ವೀಕರಿಸುತ್ತಾರೆ ಎಂಬ ಕೌತುಕ ನಿರ್ಮಾಣ ಆಗಿದೆ. ಮಾಸ್​ ಸಿನಿಮಾಗಳನ್ನು ತೆಲುಗು ಸಿನಿಪ್ರಿಯರು ಹೆಚ್ಚು ಇಷ್ಟಪಡುತ್ತಾರೆ.

ಕಾರಣ 4: ಹರಿಕೃಷ್ಣ-ಅರ್ಜುನ್​ ಜನ್ಯ ಜುಗಲ್​ಬಂದಿ
ಪ್ರಸ್ತುತ ಕನ್ನಡ ಚಿತ್ರರಂಗದ ಟಾಪ್​ ಸಂಗೀತ ನಿರ್ದೇಶಕರಲ್ಲಿ ಅರ್ಜುನ್​ ಜನ್ಯ ಮತ್ತು ವಿ. ಹರಿಕೃಷ್ಣ ಅವರ ಹೆಸರು ಮುಂಚೂಣಿಯಲ್ಲಿ ಕೇಳಿಬರುತ್ತದೆ. ಈ ಇಬ್ಬರು ಘಟಾನುಘಟಿಗಳು ಜೊತೆಯಾಗಿ ‘ರಾಬರ್ಟ್​’ ಚಿತ್ರಕ್ಕೆ ಕೆಲಸ ಮಾಡಿದ್ದಾರೆ. ಹಾಡುಗಳಿಗೆ ಅರ್ಜುನ್​ ಜನ್ಯ ಸಂಗೀತ ನೀಡಿದ್ದರೆ, ಹಿನ್ನೆಲೆ ಸಂಗೀತದ ಜವಾಬ್ದಾರಿಯನ್ನು ವಿ. ಹರಿಕೃಷ್ಣ ನಿಭಾಯಿಸಿದ್ದಾರೆ. ಹಾಡುಗಳು ಈಗಾಗಲೇ ನಿರೀಕ್ಷೆಗೂ ಮೀರಿ ಯಶಸ್ಸು ಕಂಡಿವೆ. ‘ಜೈ ಶ್ರೀರಾಮ್​…’ ಮತ್ತು ‘ಕಣ್ಣು ಹೊಡೆಯಾಕ…’ ಗೀತೆಗಳು ಎಲ್ಲರ ಫೇವರಿಟ್​ ಆಗಿವೆ.

ಕಾರಣ 5: ಘಟಾನುಘಟಿ ಕಲಾವಿದರ ಸಂಗಮ
‘ರಾಬರ್ಟ್​’ ಸಿನಿಮಾದ ಕ್ಯಾನ್ವಾಸ್​ ದೊಡ್ಡದಾಗಿದೆ. ಬಹುಕೋಟಿ ವೆಚ್ಚದಲ್ಲಿ ಈ ಚಿತ್ರ ನಿರ್ಮಾಣ ಆಗಿದೆ. ಅದಕ್ಕೆ ತಕ್ಕಂತೆ ಅನೇಕ ಖ್ಯಾತ ಕಲಾವಿದರು ನಟಿಸಿದ್ದಾರೆ. ಬಾಲಿವುಡ್​ ಮೂಲಕ ಸಿನಿಪಯಣ ಆರಂಭಿಸಿದ್ದ ನಟಿ ಆಶಾ ಭಟ್​ ಅವರಿಗೆ ಕನ್ನಡದಲ್ಲಿ ಇದು ಮೊದಲ ಸಿನಿಮಾ. ಬಹುಭಾಷೆಯಲ್ಲಿ ಮಿಂಚಿದ ಜಗಪತಿ ಬಾಬು, ರವಿ ಕಿಶನ್​ ಅವರು ‘ರಾಬರ್ಟ್​’ನಲ್ಲಿ ವಿಲನ್​ ಆಗಿ ಅಬ್ಬರಿಸಲಿದ್ದಾರೆ. ವಿನೋದ್​​ ಪ್ರಭಾಕರ್​, ರವಿಶಂಕರ್​, ಸೋನಲ್​ ಮಂಥೆರೋ, ಚಿಕ್ಕಣ್ಣ, ಅವಿನಾಶ್​, ದೇವರಾಜ್​, ಶಿವರಾಜ್​ ಕೆ.ಆರ್​. ಪೇಟೆ, ಐಶ್ವರ್ಯಾ ಪ್ರಸಾದ್​ ಮುಂತಾದವರು ನಟಿಸಿದ್ದಾರೆ.

ಇದನ್ನೂ ಓದಿ: Darshan: ‘ರಾಬರ್ಟ್​’ ರಿಲೀಸ್​ಗೂ ಮುನ್ನ ದರ್ಶನ್​ ಅಭಿಮಾನಿಗಳಿಗೆ 3 ದಿನ ಬ್ಯಾಕ್​ ಟು ಬ್ಯಾಕ್​ ಹಬ್ಬವೋ ಹಬ್ಬ!

Bigg Boss Kannada : ಬಿಗ್​ ಬಾಸ್​ ಮನೆಯಲ್ಲಿ ದರ್ಶನ್​ ಹಾಡು ಯಾಕೆ ಪ್ಲೇ ಆಗಲ್ಲ? ಸುದೀಪ್​ಗೆ ಪ್ರಶ್ನೆ ಎಸೆದ ‘ಡಿ ಬಾಸ್’​ ಫ್ಯಾನ್ಸ್​!

ರಾಜೇಶ್ ದುಗ್ಗುಮನೆ

ರಾಜೇಶ್ ದುಗ್ಗುಮನೆಯವರು ಮೂಲತಃ ಉತ್ತರ ಕನ್ನಡದ ಶಿರಸಿಯವರು. ಇವರು ಪತ್ರಿಕಾ ರಂಗಕ್ಕೆ ಕಾಲಿಟ್ಟು 10 ವರ್ಷಗಳಾಗಿವೆ. ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. ಈಗ ಟಿವಿ9 ಕನ್ನಡ ಡಿಜಿಟಲ್ನಲ್ಲಿ ಬರಹ ಕೃಷಿ ಮುಂದುವರಿಸಿದ್ದಾರೆ. ಸಿನಿಮಾ ರಂಗದ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಅದರ ಜೊತೆ ಬರವಣಿಗೆಯೂ ಸೇರಿತು. ಈಗ ಅದುವೇ ಕಾಯಕ. ಸಿನಿಮಾ ವಿಮರ್ಶೆ, ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ಇವರ ಕಡೆಯಿಂದ. ಟ್ರಾವೆಲಿಂಗ್ ಕಡೆ ಹೆಚ್ಚು ಆಸಕ್ತಿ. ಓದುವುದು ಎಂದರೆ ಹುಚ್ಚು. ಸಿನಿಮಾ ನೋಡುವುದೂ ಆಸಕ್ತಿಗಳಲ್ಲಿ ಒಂದು. ಹಲವು ಸಿನಿಮಾ ನೋಡಿ ಈಗಾಗಲೇ ವಿಮರ್ಶೆ ಮಾಡಿ ನಿಮ್ಮ ಮುಂದಿಟ್ಟಿದ್ದಾರೆ.

Read More
Loading...
Unable to load recommendations.
Follow Us