ಬಾಲಿ ನಿಧನ: ರಿದಂ ಕಿಂಗ್ ಬಾಲಸುಬ್ರಹ್ಮಣ್ಯಂ ಅಗಲಿಕೆಗೆ ಕೆಎಫ್​ಎಂಎ ಸಂತಾಪ

|

Updated on: Jan 02, 2025 | 7:47 PM

‘ಜೀ ಕನ್ನಡ’ ಚಾನೆಲ್​ನ ಸರಿಗಮಪ ಕಾರ್ಯಕ್ರಮದ ಜ್ಯೂರಿ ಆಗಿದ್ದ ಬಾಲಿ (ಎಸ್​. ಬಾಲಸುಬ್ರಹ್ಮಣ್ಯಂ) ಅವರು ಮೃತರಾಗಿದ್ದಾರೆ. ಸಂಗೀತ ಕ್ಷೇತ್ರದಲ್ಲಿ ಅನೇಕರಿಗೆ ಅವರು ಮಾರ್ಗದರ್ಶಕರಾಗಿದ್ದರು. ಸಿನಿಮಾ ಸಂಗೀತ, ಸುಗಮ ಸಂಗೀತ ಕ್ಷೇತ್ರಕ್ಕೆ ಅವರು ಅಪಾರ ಕೊಡುಗೆ ನೀಡಿದ್ದರು. ಅವರ ನಿಧನಕ್ಕೆ ಕರ್ನಾಟಕ ಫಿಲ್ಮ್​ ಮ್ಯುಸಿಷಿಯನ್ ಅಸೋಸಿಯೇಷನ್ ಸಂತಾಪ ಸೂಚಿಸಿದೆ.

ಬಾಲಿ ನಿಧನ: ರಿದಂ ಕಿಂಗ್ ಬಾಲಸುಬ್ರಹ್ಮಣ್ಯಂ ಅಗಲಿಕೆಗೆ ಕೆಎಫ್​ಎಂಎ ಸಂತಾಪ
S Bali, Sadhu Kokila
Follow us on

ಜನಪ್ರಿಯ ಮೃದಂಗ ವಾದಕ ಎಸ್​. ಬಾಲಸುಬ್ರಹ್ಮಣ್ಯಂ ನಿಧನರಾಗಿದ್ದಾರೆ. ಬಾಲಿ ಎಂದೇ ಅವರು ಸಂಗೀತ ಕ್ಷೇತ್ರದಲ್ಲಿ ಪರಿಚಿತರಾಗಿದ್ದರು. ಇಂದು (ಜನವರಿ 02) ಬೆಂಗಳೂರಿನಲ್ಲಿ ಅವರು ಕೊನೆಯುಸಿರು ಎಳೆದರು. ಬಾಲಿ ಅವರಿಗೆ 80 ವರ್ಷ ವಯಸ್ಸಾಗಿತ್ತು. ಬಾಲಿ ಅವರ ಅಗಲಿಕೆಗೆ ಹಲವರು ಕಂಬನಿ ಮಿಡಿದಿದ್ದಾರೆ. ಕೆ.ಎಫ್.ಎಂ.ಎ. (ಕರ್ನಾಟಕ ಫಿಲ್ಮ್​ ಮ್ಯುಸಿಷಿಯನ್ ಅಸೋಸಿಯೇಷನ್) ತೀವ್ರ ಸಂತಾಪ ವ್ಯಕ್ತಪಡಿಸಿದೆ. ಬಾಲ್ಯದಲ್ಲಿಯೇ ಮೃದಂಗ ಕಲಿಕೆ ಆರಂಭಿಸಿದ್ದ ಬಾಲಿ ಅವರು ಡೋಲಕ್, ಮೃದಂಗ, ತಬಲಾ ಮುಂತಾದ ವಾದ್ಯಗಳನ್ನು ನುಡಿಸುವಲ್ಲಿ ಪರಿಣಿತರಾಗಿದ್ದರು. ‘ಜೀ ಕನ್ನಡ’ ವಾಹಿನಿಯ ‘ಸರಿಗಮಪ’ ಕಾರ್ಯಕ್ರಮದ ತೀರ್ಪುಗಾರರ ಮಂಡಳಿಯಲ್ಲೂ ಬಾಲಿ ಕೆಲಸ ಮಾಡಿದ್ದರು.

‘ಬಾಲಿ ಅವರು ನನ್ನಂತಹ ನೂರಾರು ಕಲಾವಿದರನ್ನು ಸಾಕಿ ಬೆಳಸಿದವರು. ಕಲೆಯನ್ನೇ ಅವರು ಉಸಿರಾಗಿ ಇಟ್ಟುಕೊಂಡಿದ್ದವರು. ಅವರ ಸಾವು ನನಗೆ ಬಹಳ ದುಃಖ ತಂದಿದೆ. ದೇವರು ಅವರ ಆತ್ಮಕ್ಕೆ ಶಾಂತಿ ನೀಡಲಿ’ ಎಂದು ‘ಕರ್ನಾಟಕ ಫಿಲ್ಮ್​ ಮ್ಯುಸಿಷಿಯನ್ ಅಸೋಸಿಯೇಷನ್’ ಅಧ್ಯಕ್ಷರಾದ ಸಂಗೀತ ನಿರ್ದೇಶಕ, ನಟ, ಗಾಯಕ ಸಾಧು ಕೋಕಿಲ ಅವರು ಸಂತಾಪ ಸೂಚಿಸಿದ್ದಾರೆ.

‘ನಮ್ಮೆಲ್ಲರಿಗೂ ಬಾಲಿ ಅವರು ಮಾರ್ಗದರ್ಶಕರಾಗಿದ್ದರು. ಜಾತಿ-ಬೇಧ, ಮೇಲು-ಕೀಳು ನೋಡದೇ ಕಲೆಯನ್ನು ಗುರುತಿಸಿ ನಮ್ಮನ್ನು ಪ್ರೋತ್ಸಾಹಿಸಿದ ಮಹಾನ್ ವ್ಯಕ್ತಿ ಅವರು. ನಾವು ಸಿನಿಮಾರಂಗದಲ್ಲಿ ಅಥವಾ ಬೇರೆ ಬೇರೆ ಕ್ಷೇತ್ರದಲ್ಲಿ ಕೆಲಸ ಮಾಡಿ ಊಟ ಮಾಡುತ್ತಿರುವುದಕ್ಕೆ ಅವರು ಕೂಡ ಕಾರಣ. ಇಡೀ ಕನ್ನಡ ಚಿತ್ರರಂಗವನ್ನು ತಮಿಳುನಾಡಿನಿಂದ ಕರ್ನಾಟಕಕ್ಕೆ ತಂದಾಗ ಎಲ್ಲ ಕಲಾವಿದರನ್ನು ಸೇರಿಸಿ, ಪ್ರೋತ್ಸಾಹ ನೀಡಿ ಬೆಳೆಸಿದವರಲ್ಲಿ ಬಾಲಿ ಅವರು ಮುಖ್ಯ ಪಾತ್ರ ವಹಿಸಿದ್ದರು. ಅವರನ್ನು ಕಳೆದುಕೊಂಡಿರುವುದು ನಮಗೆ ಶೋಕದ ದಿನ. ಅವರ ಅಗಲಿಕೆ ನಮಗೆ ದೊಡ್ಡ ನಷ್ಟ’ ಎಂದು ಸಾಧುಕೋಕಿಲ ಹೇಳಿದ್ದಾರೆ.

ಮೃದಂಗ, ಡೋಲಕ್, ತಬಲಾ ವಾದ್ಯ ಮಾತ್ರವಲ್ಲದೇ ಡ್ರಮ್ಸ್, ಬ್ಯಾಂಗೋ, ಕಾಂಗೋಸ್​ಗಳಲ್ಲಿ ಕೂಡ ಬಾಲಿ ಅವರಿಗೆ ಅಸಾಧಾರಣ ಪರಿಣಿತಿ ಇತ್ತು. ಸುಗಮ ಸಂಗೀತ ಕ್ಷೇತ್ರದ ಹಿರಿಯ ಕಲಾವಿದರಾದ ಪಿ. ಕಾಳಿಂಗ ರಾವ್, ಬಾಳಪ್ಪ ಹುಕ್ಕೇರಿ, ಸಿ. ಅಶ್ವತ್ಥ್, ಮೈಸೂರು ಅನಂತ ಸ್ವಾಮಿ ಮೊದಲಾದವರ ಸಂಯೋಜನೆಯ ವಾದ್ಯಗೋಷ್ಠಿಗಳನ್ನು ಬಾಲಿ ಅವರು ನಿರ್ವಹಿಸಿದ್ದರು. ಹಿನ್ನೆಲೆ ಸಂಗೀತದ ಬಗ್ಗೆ ಬಾಲಿ ಅವರು 3 ಆಯಾಮದ ಪುಸ್ತಕ ಬರೆದಿದ್ದರು. ‘ರಮ್ಯ ಕಲ್ಚರಲ್ ಅಕಾಡೆಮಿ’ ಮೂಲಕ ನೂರಾರು ಹೊಸ ಸಂಗೀತ ಕಲಾವಿದರಿಗೆ ಅವರು ಮಾರ್ಗದರ್ಶನ ನೀಡಿದ್ದರು.

ಇದನ್ನೂ ಓದಿ: ಗುರುಪ್ರಸಾದ್ ರೀತಿಯೇ ಹೋಟೆಲ್​ ರೂಮ್​ನಲ್ಲಿ ಖ್ಯಾತ ನಟನ ಶವ ಪತ್ತೆ

ಕನ್ನಡದ ಮೊದಲ ಭಾವಗೀತೆಗಳ ಧ್ವನಿಮುದ್ರಿಕೆ ‘ನಿತ್ಯೋತ್ಸವ’ ಕಾಲದಿಂದಲೂ ಬಾಲಿ ಅವರು ಸಕ್ರಿಯರಾಗಿದ್ದರು. ಜಿ.ಕೆ. ವೆಂಕಟೇಶ್, ಎಂ. ರಂಗರಾವ್, ವಿಜಯಭಾಸ್ಕರ್, ಡಾ. ರಾಜೀವ ತಾರಾನಾಥ್, ಅಶ್ವತ್ಥ್-ವೈದಿಯವರು ಸಂಗೀತ ನಿರ್ದೇಶನ ಮಾಡಿದ್ದ ಸಿನಿಮಾ ಗೀತೆಗಳಿಗೆ ಬಾಲಿ ಅವರು ಕೆಲಸ ಮಾಡಿದ್ದರು. ಶಂಕರ್ ನಾಗ್ ಅವರು ಸಂಕೇತ್ ಸ್ಟುಡಿಯೋ ನಿರ್ಮಾಣ ಮಾಡುವಾಗ ಕೂಡ ಬಾಲಿ ಅವರು ಮಹತ್ವದ ಪಾತ್ರ ವಹಿಸಿದ್ದರು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.