ಗುರುಪ್ರಸಾದ್ ರೀತಿಯೇ ಹೋಟೆಲ್ ರೂಮ್ನಲ್ಲಿ ಖ್ಯಾತ ನಟನ ಶವ ಪತ್ತೆ
ನಿರ್ದೇಶಕ ಗುರುಪ್ರಸಾದ್ ಅವರ ಸಾವಿನ ಸುದ್ದಿ ಮರೆಯಾಗುವುದಕ್ಕೂ ಮುನ್ನವೇ ಮತ್ತೊಂದು ಶಾಕಿಂಗ್ ಘಟನೆ ಬೆಳಕಿಗೆ ಬಂದಿದೆ. ನಟ ದಿಲೀಪ್ ಶಂಕರ್ ಮೃತ ದೇಹ ಹೋಟೆಲ್ ರೂಮ್ನಲ್ಲಿ ಪತ್ತೆ ಆಗಿದೆ. ಮಲಯಾಳಂ ಚಿತ್ರರಂಗದಲ್ಲಿ ದಿಲೀಪ್ ಶಂಕರ್ ಅವರು ಫೇಮಸ್ ಆಗಿದ್ದರು. ಅವರ ನಿಧನದ ಸುದ್ದಿ ತಿಳಿದು ಅಭಿಮಾನಿಗಳಿಗೆ ಮತ್ತು ಚಿತ್ರರಂಗಕ್ಕೆ ಆಘಾತ ಆಗಿದೆ.
ಹಲವು ವರ್ಷಗಳಿಂದ ಮಲಯಾಳಂ ಸಿನಿಮಾ ಮತ್ತು ಕಿರುತೆರೆಯಲ್ಲಿ ಸಕ್ರಿಯವಾಗಿದ್ದ ನಟ ದಿಲೀಪ್ ಶಂಕರ್ ಅವರು ನಿಧನರಾಗಿದ್ದಾರೆ. ಶೂಟಿಂಗ್ ಸಲುವಾಗಿ ಅವರು ಹೋಟೆಲ್ನಲ್ಲಿ ಉಳಿದುಕೊಂಡಿದ್ದರು. ಅದೇ ಹೋಟೆಲ್ ರೂಮ್ನಲ್ಲಿ ಅವರ ಶವ ಪತ್ತೆ ಆಗಿದೆ. ಎರಡು ದಿನದ ಹಿಂದೆಯೇ ದಿಲೀಪ್ ಶಂಕರ್ ನಿಧನರಾಗಿರಬಹುದು ಎಂಬ ಶಂಕೆ ಇದೆ. ಅವರು ಉಳಿದುಕೊಂಡಿದ್ದ ರೂಮ್ನಿಂದ ಕೆಟ್ಟ ವಾಸನೆ ಬರುತ್ತಿತ್ತು. ಅನುಮಾನ ಬಂದು ಬಾಗಿಲು ತೆಗೆದು ನೋಡಿದಾಗ ಅವರ ಮೃತ ದೇಹ ಕಾಣಿಸಿದೆ. ಬಳಿಕ ಹೋಟೆಲ್ ಸಿಬ್ಬಂದಿಗಳು ಪೊಲೀಸರಿಗೆ ಮಾಹಿತಿ ನೀಡಿದರು ಎಂದು ಮಾಧ್ಯಮಗಳಲ್ಲಿ ವರದಿ ಆಗಿದೆ.
ತಿರುವನಂತಪುರಂನಲ್ಲಿ ಈ ಘಟನೆ ನಡೆದಿದೆ. ಮಲಯಾಳಂನ ‘ಪಂಚಾಗ್ನಿ’ ಧಾರಾವಾಹಿಯಲ್ಲಿ ದಿಲೀಪ್ ಶಂಕರ್ ಅವರು ನಟಿಸುತ್ತಿದ್ದರು. ಶೂಟಿಂಗ್ ಸಲುವಾಗಿ ಅವರು ನಾಲ್ಕು ದಿನದ ಹಿಂದೆ ಹೋಟೆಲ್ಗೆ ಬಂದಿದ್ದರು. ಆದರೆ ಕಳೆದ ಎರಡು ದಿನಗಳಿಂದ ಅವರು ರೂಮ್ನಿಂದ ಹೊರಗೆ ಬಂದಿರಲಿಲ್ಲ. ಹಾಗಾಗಿ ಹೋಟೆಲ್ ಸಿಬ್ಬಂದಿಗೆ ಅನುಮಾನ ಮೂಡಿತು.
ವಿಧಿ ವಿಜ್ಞಾನ ಪ್ರಯೋಗಾಲಯದ ತಂಡದವರು ಬಂದು ಹೋಟೆಲ್ ರೂಮ್ನ ತಪಾಸಣೆ ಮಾಡಿದ್ದಾರೆ. ಕೊಲೆ ಶಂಕೆ ವ್ಯಕ್ತವಾಗಿಲ್ಲ. ಆದರೆ ಮರಣೋತ್ತರ ಪರೀಕ್ಷೆಯ ನಂತರವೇ ಹೆಚ್ಚಿನ ಮಾಹಿತಿ ಲಭ್ಯವಾಗಲಿದೆ. ದಿಲೀಪ್ ಶಂಕರ್ ಅವರಿಗೆ ಅನಾರೋಗ್ಯ ಇತ್ತು ಎನ್ನಲಾಗಿದೆ. ಆದರೆ ಆ ಬಗ್ಗೆ ಯಾರಿಗೂ ನಿಖರ ಮಾಹಿತಿ ಇರಲಿಲ್ಲ. ‘ಪಂಚಾಗ್ನಿ’ ಚಿತ್ರೀಕರಣಕ್ಕೆ ಎರಡು ದಿನ ಬ್ರೇಕ್ ನೀಡಲಾಗಿತ್ತು. ಈ ಸಂದರ್ಭದಲ್ಲಿ ಸೀರಿಯಲ್ ತಂಡದ ಯಾರ ಕರೆಗಳನ್ನೂ ದಿಲೀಪ್ ಶಂಕರ್ ಅವರು ಸ್ವೀಕರಿಸಿರಲಿಲ್ಲ.
ಇದನ್ನೂ ಓದಿ: ರಮ್ಮಿ, ಸಾಲ, ಖಿನ್ನತೆ, ಕಾಯಿಲೆ ಬಗ್ಗೆ ನಿರ್ದೇಶಕ ಗುರುಪ್ರಸಾದ್ ಪತ್ನಿ ಸುಮಿತ್ರಾ ಸ್ಪಷ್ಟನೆ
ದಿಲೀಪ್ ಶಂಕರ್ ಅವರ ನಿಧನಕ್ಕೆ ಮಲಯಾಳಂ ಚಿತ್ರರಂಗದ ಅನೇಕರು ಕಂಬನಿ ಮಿಡಿದ್ದಾರೆ. ಅನೇಕ ಸೀರಿಯಲ್ ಮತ್ತು ಸಿನಿಮಾಗಳಲ್ಲಿ ನಟಿಸಿ ದಿಲೀಪ್ ಶಂಕರ್ ಅವರು ಮನೆಮಾತಾಗಿದ್ದರು. ಅವರ ಸಾವಿಗೆ ಕಾರಣ ಏನು ಎಂಬುದು ಇನ್ನೂ ತಿಳಿದು ಬಂದಿಲ್ಲ. ತನಿಖೆ ಬಳಿಕ ಸತ್ಯ ಹೊರಬರಬೇಕಿದೆ. ಕೆಲವು ದಿನಗಳ ಹಿಂದೆ ಕನ್ನಡ ಸಿನಿಮಾ ನಿರ್ದೇಶಕ ಗುರು ಪ್ರಸಾದ್ ಕೂಡ ಶವವಾಗಿ ಪತ್ತೆ ಆಗಿದ್ದು ನೋವಿನ ಸಂಗತಿ. ಆ ಘಟನೆ ಮಾಸುವ ಮುನ್ನವೇ ದಿಲೀಪ್ ಶಂಕರ್ ಅವರ ಸಾವಿನ ಸುದ್ದಿಯಿಂದ ಚಿತ್ರರಂಗಕ್ಕೆ ಶಾಕ್ ಆಗಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.