ದುನಿಯಾ ವಿಜಯ್ ನಿರ್ದೇಶನ ಮಾಡಿದ್ದ ‘ಸಲಗ’ ಸಿನಿಮಾ ಸೂಪರ್ ಹಿಟ್ ಆಗಿದ್ದು ಗೊತ್ತೇ ಇದೆ. ಆ ಚಿತ್ರದಲ್ಲಿ ವಿಜಯ್ ಮಾತ್ರವಲ್ಲದೇ ಅನೇಕ ನಟರು ಹೈಲೈಟ್ ಆಗಿದ್ದರು. ಹಲವು ಹೊಸ ಕಲಾವಿದರಿಗೆ ಅವಕಾಶ ನೀಡಲಾಗಿತ್ತು. ಆ ಪೈಕಿ ಸೂರಿಯಣ್ಣ ಪಾತ್ರ ಕೂಡ ಪ್ರಮುಖವಾಗಿದೆ. ತೆರೆಮೇಲೆ ಹೆಚ್ಚು ಹೊತ್ತು ಕಾಣಿಸಿಕೊಳ್ಳದೇ ಇದ್ದರೂ ಕೂಡ ಆ ಪಾತ್ರವು ಜನಮನ ಗೆದ್ದಿತ್ತು. ಸೂರಿಯಣ್ಣ ಆಗಿ ಕಾಣಿಸಿಕೊಂಡಿದ್ದು ನಟ ದಿನೇಶ್ (Salaga Actor Dinesh). ಆ ಪಾತ್ರಕ್ಕಾಗಿ ಒಂದು ಪ್ರತ್ಯೇಕ ಸಾಂಗ್ (Suri Anna Song) ಕೂಡ ಇಡಲಾಗಿತ್ತು. ಆ ಕಾರಣದಿಂದಲೇ ಜನರಿಗೆ ಸೂರಿಯಣ್ಣ ಎಂದ ತಕ್ಷಣ ‘ಸಲಗ’ ಸಿನಿಮಾ ನೆನಪಾಗುತ್ತದೆ. ಆ ಪಾತ್ರದಲ್ಲಿ ನಟಿಸಿದ್ದ ದಿನೇಶ್ ಅವರು ಈಗ ಹೊಸ ಸಿನಿಮಾದಲ್ಲಿ ಮುಖ್ಯ ಭೂಮಿಕೆ ನಿಭಾಯಿಸುತ್ತಿದ್ದಾರೆ. ಈ ಚಿತ್ರಕ್ಕೆ ‘ಮಾರಿಗುಡ್ಡದ ಗಡ್ಡಧಾರಿಗಳು’ (Mariguddada Gaddadharigalu) ಎಂದು ಶೀರ್ಷಿಕೆ ಇಡಲಾಗಿದೆ. ಈ ಸಿನಿಮಾವನ್ನು ದಿನೇಶ್ ಅವರೇ ನಿರ್ಮಾಣ ಮಾಡುತ್ತಿದ್ದಾರೆ ಎಂಬುದು ವಿಶೇಷ.
‘ಮಾರಿಗುಡ್ಡದ ಗಡ್ಡಧಾರಿಗಳು’ ಸಿನಿಮಾಗೆ ಇತ್ತೀಚೆಗೆ ಮುಹೂರ್ತ ನೆರವೇರಿತು. ಬೆಂಗಳೂರಿನ ಬಂಡೆ ಮಹಾಕಾಳಿ ದೇವಸ್ಥಾನದಲ್ಲಿ ನಡೆದ ಮುಹೂರ್ತ ಸಮಾರಂಭಕ್ಕೆ ಅನೇಕ ಗಣ್ಯರು ಆಗಮಿಸಿ ಶುಭ ಕೋರಿದರು. ‘ಟಗರು’ ಮತ್ತು ‘ಸಲಗ’ ಸಿನಿಮಾಗಳ ಮುಹೂರ್ತ ಇದೇ ದೇವಾಲಯದಲ್ಲಿ ನಡೆದಿತ್ತು. ಆ ಎರಡು ಚಿತ್ರಗಳು ಸೂಪರ್ ಹಿಟ್ ಆದವು. ಈಗ ‘ಮಾರಿಗುಡ್ಡದ ಗಡ್ಡಧಾರಿಗಳು’ ಕೂಡ ಯಶಸ್ಸು ಕಾಣಲಿ ಎಂದು ಹಾರೈಸಿದ್ದಾರೆ ಖ್ಯಾತ ನಿರ್ಮಾಪಕ ಕೆ.ಪಿ. ಶ್ರೀಕಾಂತ್.
ಹೀರೋಗಳನ್ನು ತಲೆಯಲ್ಲಿ ಇಟ್ಟುಕೊಂಡು ಕಥೆ ಬರೆಯುವುದು ಸಹಜ. ಆದರೆ ನಿರ್ದೇಶಕ ರಾಜೀವ್ ಚಂದ್ರಕಾಂತ್ ಅವರು ವಿಲನ್ ಪಾತ್ರದ ಮೇಲೆ ಕಥೆ ಬರೆದಿದ್ದಾರೆ. ಅದರಲ್ಲಿ ಮುಖ್ಯ ಪಾತ್ರ ಮಾಡುವುದರ ಜೊತೆಗೆ ನಿರ್ಮಾಣವನ್ನೂ ಮಾಡಲು ದಿನೇಶ್ ಒಪ್ಪಿಕೊಂಡಿದ್ದಾರೆ. ಈ ಮೊದಲು ಕೆಲವು ಧಾರಾವಾಹಿಗಳಿಗೆ ನಿರ್ದೇಶನ ಮಾಡಿದ ಅನುಭವ ರಾಜೀವ್ ಚಂದ್ರಕಾಂತ್ ಅವರಿಗೆ ಇದೆ. 75ಕ್ಕೂ ಅಧಿಕ ಸಿನಿಮಾಗಳಿಗೆ ಪೋಸ್ಟರ್ ಡಿಸೈನರ್ ಆಗಿಯೂ ಅವರು ಕೆಲಸ ಮಾಡಿದ್ದಾರೆ.
ಈ ಸಿನಿಮಾದಲ್ಲಿ ಪ್ರವೀಣ್, ನಂಜುಂಡ, ಅವಿನಾಶ್, ರಮೇಶ್ ಭಟ್, ಗಣೇಶ್ ರಾವ್, ಬೆನಕ ನಂಜಪ್ಪ, ಪ್ರಶಾಂತ್ ಸಿದ್ದಿ ಮುಂತಾದವರು ಅಭಿನಯಿಸುತ್ತಿದ್ದಾರೆ. ನಾಯಕಿಯ ಆಯ್ಕೆ ಸದ್ಯದಲ್ಲೇ ಆಗಲಿದೆ. ಚಿತ್ರದ ನಾಲ್ಕು ಹಾಡುಗಳಿಗೆ ಕೆ.ಎಂ. ಇಂದ್ರ ಸಂಗೀತ ನಿರ್ದೇಶನ ಮಾಡುತ್ತಿದ್ದಾರೆ. ವೀರೇಶ್ ಛಾಯಾಗ್ರಹಣ, ಪಳನಿ ಸಾಹಸ, ಮೋಹನ್ ನೃತ್ಯ ನಿರ್ದೇಶನ ಮಾಡುತ್ತಿದ್ದಾರೆ. ಈಗಾಗಲೇ ಶೂಟಿಂಗ್ ಆರಂಭ ಆಗಿದ್ದು ಕೋಲಾರ, ಕೆಜಿಎಫ್ ಮುಂತಾದ ಸ್ಥಳಗಳಲ್ಲಿ 35 ದಿನಗಳ ಕಾಲ ಒಂದೇ ಹಂತದಲ್ಲಿ ಚಿತ್ರೀಕರಣ ನಡೆಸಲು ಪ್ಲ್ಯಾನ್ ಮಾಡಿಕೊಳ್ಳಲಾಗಿದೆ.
1990ರ ಕಾಲಘಟ್ಟದಲ್ಲಿ ನಡೆಯುವ ಒಂದು ಕಾಲ್ಪನಿಕ ಕಥೆಯನ್ನು ಈ ಸಿನಿಮಾದಲ್ಲಿ ಹೇಳಿದ್ದಾರೆ ನಿರ್ದೇಶಕರು. ಈಗಾಗಲೇ ಪೋಸ್ಟರ್ ಮೂಲಕ ‘ಮಾರಿಗುಡ್ಡದ ಗಡ್ಡಧಾರಿಗಳು’ ಚಿತ್ರ ಗಮನ ಸೆಳೆಯುತ್ತಿದೆ. ಹುಲಿಯಾ ಎಂಬ ನೆಗೆಟಿವ್ ಶೇಡ್ನ ಪಾತ್ರದಲ್ಲಿ ದಿನೇಶ್ ಕಾಣಿಸಿಕೊಳ್ಳಲಿದ್ದಾರೆ.
ಇದನ್ನೂ ಓದಿ:
‘ಸಲಗ’ ಯಶಸ್ಸಿನ ಬಳಿಕ ಮತ್ತೆ ನಿರ್ದೇಶನಕ್ಕೆ ಇಳಿದ ದುನಿಯಾ ವಿಜಯ್
‘ಕೆಜಿಎಫ್: ಚಾಪ್ಟರ್ 2’ ಬಗ್ಗೆ ಉಪೇಂದ್ರ ಮೆಚ್ಚುಗೆ; ಇನ್ನುಳಿದವರ ಮೌನಕ್ಕೆ ಯಶ್ ಫ್ಯಾನ್ಸ್ ತಕರಾರು