ಸೆಟ್ಟೇರಿತು ‘ಸಮರ್ಥ ಸದ್ಗುರು ಶ್ರೀಸಂಗಮೇಶ್ವರ ಮಹಾರಾಜರು’ ಸಿನಿಮಾ; ಶುಭಕೋರಿದ ಗಣ್ಯರು

‘ಸಮರ್ಥ ಸದ್ಗುರು ಶ್ರೀಸಂಗಮೇಶ್ವರ ಮಹಾರಾಜರು’ ಸಿನಿಮಾಗೆ ರಾಜಾ ರವಿಶಂಕರ್ ನಿರ್ದೇಶನ ಮಾಡುತ್ತಿದ್ದಾರೆ. ಮುಹೂರ್ತ ಸಮಾರಂಭಕ್ಕೆ ಹಲವು ಗಣ್ಯರು ಆಗಮಿಸಿದ್ದಾರೆ. ನಟ ರವಿ ನಾರಾಯಣ್ ಅವರು ಶ್ರೀಸಂಗಮೇಶ್ವರರ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಮಾಧವಾನಂದ ಯೋಗಪ್ಪ ಶೇಗುಣಸಿ ಅವರು ಈ ಸಿನಿಮಾಗೆ ಬಂಡವಾಳ ಹೂಡುತ್ತಿದ್ದಾರೆ.

ಸೆಟ್ಟೇರಿತು ‘ಸಮರ್ಥ ಸದ್ಗುರು ಶ್ರೀಸಂಗಮೇಶ್ವರ ಮಹಾರಾಜರು’ ಸಿನಿಮಾ; ಶುಭಕೋರಿದ ಗಣ್ಯರು
‘ಸಮರ್ಥ ಸದ್ಗುರು ಶ್ರೀ ಸಂಗಮೇಶ್ವರ ಮಹಾರಾಜರು’ ಸಿನಿಮಾ ಮುಹೂರ್ತ
Follow us
ಮದನ್​ ಕುಮಾರ್​
|

Updated on: Apr 15, 2024 | 8:38 PM

ಕನ್ನಡದಲ್ಲಿ ಅಲ್ಲೊಂದು ಇಲ್ಲೊಂದು ಬಯೋಪಿಕ್​ (Biopic) ಪ್ರಯತ್ನಗಳು ನಡೆಯುತ್ತವೆ. ಈಗ ಜಮಖಂಡಿ ತಾಲ್ಲೂಕು ಹಿಪ್ಪರಗಿಯ ಇಂಚಗೇರಿ ಮಠದ ಶ್ರೀಸಂಗಮೇಶ್ವರ ಮಹಾರಾಜರ ಜೀವನದ ಕುರಿತು ಸಿನಿಮಾ ಬರುತ್ತಿದೆ. ‘ಸಮರ್ಥ ಸದ್ಗುರು ಶ್ರೀಸಂಗಮೇಶ್ವರ ಮಹಾರಾಜರು’ (Samartha Sadguru Sri Sangameshwar Maharajaru) ಎಂಬುದು ಈ ಸಿನಿಮಾದ ಶೀರ್ಷಿಕೆ. ಇತ್ತೀಚೆಗೆ ಬೆಂಗಳೂರಿನಲ್ಲಿ ಚಿತ್ರಕ್ಕೆ ಮುಹೂರ್ತ ಮಾಡಲಾಯಿತು. ಇಂಚಗೇರಿಯ ಪ್ರಭುಜೀ ಮಹಾರಾಜರ ಸಾನಿಧ್ಯದಲ್ಲಿ ಗಿರೀಶ್ ಕಾಸರವಳ್ಳಿ (Girish Kasaravalli) ಅವರು ಸಿನಿಮಾದ ಮೊದಲ ದೃಶ್ಯಕ್ಕೆ ಆರಂಭ ಫಲಕ ತೋರಿದರು. ಆ ಮೂಲಕ ಅವರು ಚಾಲನೆ ನೀಡಿ ಶುಭ ಕೋರಿದರು. ರಾಜಾ ರವಿಶಂಕರ್ ಅವರು ಈ ಸಿನಿಮಾಗೆ ನಿರ್ದೇಶನ ಮಾಡುತ್ತಿದ್ದಾರೆ.

ಈ ವೇಳೆ ಪ್ರಭುಜೀ ಮಹಾರಾಜರು ಮಾತನಾಡಿ, ‘ಇಂಚಗೇರಿಯ ಶ್ರೀಸಂಗಮೇಶ್ವರ ಮಹಾರಾಜರ ಜೀವನದ ಬಗ್ಗೆ ಸಿನಿಮಾ ಮಾಡಿ ಅಂತ ನಾನು 2 ವರ್ಷಗಳ ಹಿಂದೆ ನಿರ್ಮಾಪಕ ಮಾಧವಾನಂದರಿಗೆ ತಿಳಿಸಿದ್ದೆ. ಈಗ ಅದು ಕಾರ್ಯರೂಪಕ್ಕೆ ಬಂದಿದೆ. ರಾಜ್ಯದ ಎಲ್ಲ ಕಡೆಗಳಲ್ಲಿ ಇಂಚಗೇರಿ ಸಂಪ್ರದಾಯಕ್ಕೆ ಅದರದ್ದೇ ಆದ ಮಹತ್ವವಿದೆ‌. ಇದನ್ನು ಶ್ರೀಸಂಗಮೇಶ್ವರ ಮಹಾರಾಜರು ಪಾಲಿಸಿಕೊಂಡು ಬರುತ್ತಿದ್ದರು. ಕಲಿಯುಗದ ಕಲ್ಪತರುವೆಂದೇ ಖ್ಯಾತರಾದ ಶ್ರೀಸಂಗಮೇಶ್ವರರ ಈ ಸಿನಿಮಾ ದೊಡ್ಡ ಯಶಸ್ಸು ಕಾಣಲಿ’ ಎಂದು ಅವರು ಹಾರೈಸಿದರು.

ಚಿತ್ರತಂಡಕ್ಕೆ ಗಿರೀಶ್ ಕಾಸರವಳ್ಳಿ ಒಂದು ಸಲಹೆ ನೀಡಿದರು. ‘ನಾನು ಈ ಸಿನಿಮಾದ ಮುಹೂರ್ತ ಸಮಾರಂಭಕ್ಕೆ ಬರಲು ನಿರ್ಮಾಪಕ ಮತ್ತು ನಿರ್ದೇಶಕರು ಕಾರಣ. ಯಾಕೆಂದರೆ, ನನ್ನ ‘ತಾಯಿಸಾಹೇಬ’ ಸಿನಿಮಾದ ಸಮಯದಲ್ಲಿ ಅವರಿಬ್ಬರು ಸಹಾಯ ಮಾಡಿದ್ದರು. ಶ್ರೀಸಂಗಮೇಶ್ವರ ಮಹಾರಾಜರ ಚರಿತ್ರೆ ಕೇಳಿದಾಗ ಆಶ್ಚರ್ಯ ಆಯಿತು. ನೀವು ತೆರೆಮೇಲೆ ಅವರನ್ನು ಪವಾಡ ಪುರುಷರಂತೆ ತೋರಿಸದೇ, ಮಹಾನ್ ಸಾಧಕರ ರೀತಿ ತೋರಿಸಿ. ಚಿತ್ರತಂಡಕ್ಕೆ ಒಳ್ಳೆಯದಾಗಲಿ’ ಎಂದು ಗಿರೀಶ್ ಕಾಸರವಳ್ಳಿ ಹೇಳಿದರು.

ಇದನ್ನೂ ಓದಿ: ದಾಸವರೇಣ್ಯ ಶ್ರೀ ವಿಜಯ ದಾಸರು ಸಿನಿಮಾ ಆಡಿಯೋ ಲಾಂಚ್ ಮಾಡಿದ ಕೇಂದ್ರ ಸಚಿವ

ನಿರ್ಮಾಪಕರಾದ ಮಾಧವಾನಂದ ಯೋಗಪ್ಪ ಶೇಗುಣಸಿ ಮಾತನಾಡಿ, ‘ನಾನು ಈ ಮೊದಲು 2 ಸಿನಿಮಾಗಳನ್ನು ನಿರ್ಮಿಸಿದ್ದೆ. ಇದು 3ನೇ ಸಿನಿಮಾ. ಶ್ರೀಸಂಗಮೇಶ್ವರ ಮಹಾರಾಜರ ಸಾಧನೆಗಳು ಹಲವು. ಆ ಸಾಧನೆಗಳನ್ನು ಸಿನಿಮಾದ ಮೂಲಕ ಜನರಿಗೆ ತಲುಪಿಸುವ ಪ್ರಯತ್ನ ಮಾಡುತ್ತಿದ್ದೇವೆ’ ಎಂದರು. ‘ಒಟ್ಟು 4 ಹಂತಗಳಲ್ಲಿ ಶೂಟಿಂಗ್​ ನಡೆಯಲಿದೆ. ಹೊಸ ಪ್ರತಿಭೆ ರವಿ ನಾರಾಯಣ್ ಅವರು ಶ್ರೀಸಂಗಮೇಶ್ವರರ ಪಾತ್ರದಲ್ಲಿ ನಟಿಸಲಿದ್ದಾರೆ. ರಾಮಕೃಷ್ಣ, ವಿನಯ ಪ್ರಸಾದ್, ವಿಜಯಕಾಶಿ, ನಾರಾಯಣ ಸ್ವಾಮಿ, ಸಂದೀಪ್ ಮಲಾನಿ ಮುಂತಾದವರು ಪಾತ್ರವರ್ಗದಲ್ಲಿ ಇದ್ದಾರೆ’ ಎಂದು ನಿರ್ದೇಶಕ ರಾಜಾ ರವಿಶಂಕರ್ ಮಾಹಿತಿ ನೀಡಿದ್ದಾರೆ. ಎ.ಟಿ. ರವೀಶ್ ಅವರು ಈ ಚಿತ್ರಕ್ಕೆ ಸಂಗೀತ ನೀಡುತ್ತಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.