Sanchari Vijay: ಸಂಚಾರಿ ವಿಜಯ್​ಗೆ ರಾಷ್ಟ್ರ ಪ್ರಶಸ್ತಿ ತಂದುಕೊಟ್ಟ ‘ನಾನು ಅವನಲ್ಲ ಅವಳು’ ಚಿತ್ರದ ತೆರೆ ಹಿಂದಿನ ಇಂಟರೆಸ್ಟಿಂಗ್​ ಕಥೆ

|

Updated on: Jun 15, 2021 | 9:58 AM

Sanchari Vijay Death: ಯಾವುದೇ ಪುರುಷ ನಟರಿಂದ ಈ ಪಾತ್ರ ಮಾಡಿಸಬಾರದು. ಯಾರಾದರೂ ನಿಜವಾದ ಮಂಗಳಮುಖಿಯೇ ನಟಿಸಬೇಕು ಎಂದು ವಿದ್ಯಾ ಅವರು ಷರತ್ತು ಹಾಕಿದ್ದರು. ಹಾಗಾದರೆ ಸಂಚಾರಿ ವಿಜಯ್​ ಆಯ್ಕೆ ಆಗಿದ್ದು ಹೇಗೆ?

Sanchari Vijay: ಸಂಚಾರಿ ವಿಜಯ್​ಗೆ ರಾಷ್ಟ್ರ ಪ್ರಶಸ್ತಿ ತಂದುಕೊಟ್ಟ ‘ನಾನು ಅವನಲ್ಲ ಅವಳು’ ಚಿತ್ರದ ತೆರೆ ಹಿಂದಿನ ಇಂಟರೆಸ್ಟಿಂಗ್​ ಕಥೆ
ಸಂಚಾರಿ ವಿಜಯ್​, ನಾನು ಅವನಲ್ಲ ಅವಳು ಸಿನಿಮಾದ ಪಾತ್ರ
Follow us on

ನಟ ಸಂಚಾರಿ ವಿಜಯ್​ ಅವರಿಗೆ ದೊಡ್ಡ ಮಟ್ಟದಲ್ಲಿ ಜನಪ್ರಿಯತೆ ತಂದುಕೊಟ್ಟ ಸಿನಿಮಾ ‘ನಾನು ಅವನಲ್ಲ ಅವಳು’. ಆ ಚಿತ್ರಕ್ಕೆ ಬಿ.ಎಸ್​. ಲಿಂಗದೇವರು ನಿರ್ದೇಶನ ಮಾಡಿದ್ದರು. ಮಂಗಳಮುಖಿ ಪಾತ್ರದಲ್ಲಿ ಸಂಚಾರಿ ವಿಜಯ್​ ಅವರ ನಟನೆ ಅದ್ಭುತವಾಗಿತ್ತು. ಅದಕ್ಕಾಗಿ ಅವರಿಗೆ ಅತ್ಯುತ್ತಮ ನಟ ರಾಷ್ಟ್ರ ಪ್ರಶಸ್ತಿ ಮತ್ತು ರಾಜ್ಯ ಪ್ರಶಸ್ತಿ ಸಿಕ್ಕಿತು. ಫಿಲ್ಮ್​ ಫೇರ್​ ಪ್ರಶಸ್ತಿ ಕೂಡ ಒಲಿದುಬಂತು. ಮೊದಲು ಹುಡುಗನಾಗಿದ್ದು, ನಂತರ ಲಿಂಗ ಪರಿವರ್ತನೆಗೆ ಒಳಗಾಗುವ ಓರ್ವ ಮಂಗಳಮುಖಿಯ ಪಾತ್ರ ಮಾಡುವುದು ನಿಜಕ್ಕೂ ಸವಾಲಿನ ಕೆಲಸವಾಗಿತ್ತು. ಆ ಘಟನೆಗಳನ್ನು ನಿರ್ದೇಶಕ ಲಿಂಗದೇವರು ನೆನಪಿಸಿಕೊಂಡಿದ್ದಾರೆ.

ಮಂಗಳಮುಖಿ ವಿದ್ಯಾ ಅವರ ನಿಜಜೀವನದ ಘಟನೆಗಳನ್ನು ಆಧರಿಸಿ ಈ ಸಿನಿಮಾ ತಯಾರಾಗಿತ್ತು. ಯಾವುದೇ ಪುರುಷ ನಟರಿಂದ ಈ ಪಾತ್ರ ಮಾಡಿಸಬಾರದು. ಯಾರಾದರೂ ಒಬ್ಬರು ನಿಜವಾದ ಮಂಗಳಮುಖಿಯೇ ನಟಿಸಬೇಕು ಎಂದು ವಿದ್ಯಾ ಅವರು ಷರತ್ತು ಹಾಕಿದ್ದರು. ಹಾಗಾಗಿ ಕೆಲವು ಮಂಗಳಮುಖಿಯರಿಗೆ ಆಡಿಷನ್​ ಕೂಡ ಮಾಡಲಾಗಿತ್ತು. ಆದರೆ ಎರಡು ಶೇಡ್​ನ ಆ ಪಾತ್ರದಲ್ಲಿ ಮಾದೇಶ ಎಂಬ ಶೇಡ್​ ನಿಭಾಯಿಸಲು ಯಾರಿಗೂ ಸಾಧ್ಯವಾಗಲಿಲ್ಲ. ಆಗ ವಿದ್ಯಾ ಅವರಿಂದ ಒಪ್ಪಿಗೆ ಪಡೆದು, ಮಂಗಳಮುಖಿ ಬದಲು ಬೇರೆ ನಟನನ್ನು ಆಯ್ಕೆ ಮಾಡುವ ಕೆಲಸ ಶುರುವಾಯಿತು. ಹಾಗೆ ಆಯ್ಕೆ ಆದವರೇ ಸಂಚಾರಿ ವಿಜಯ್​.

‘ಒಗ್ಗರಣೆ’ ಸಿನಿಮಾದಲ್ಲಿ ಸಂಚಾರಿ ವಿಜಯ್​ ಮಾಡಿದ ಒಂದು ದೃಶ್ಯವನ್ನು ನೋಡಿ ಲಿಂಗದೇವರು ಇಂಪ್ರೆಸ್​ ಆದರು. ವಿಜಯ್​ ಅವರನ್ನು ಕರೆದು ಮಾತನಾಡಿಸಿದಾಗ ಅವರಿಗೆ ಸಂಚಾರಿ ನಾಟಕ ತಂಡದಲ್ಲಿ ಕೆಲಸ ಮಾಡಿದ ಅನುಭವ ಇದೆ ಎಂಬುದು ತಿಳಿಯಿತು. ಆರಂಭದಲ್ಲಿಯೇ ಸಂಚಾರಿ ವಿಜಯ್​ ಈ ಪಾತ್ರ ಮಾಡಲು ಒಪ್ಪಿಕೊಳ್ಳಲಿಲ್ಲ. ಎಲ್ಲಿ ತಮ್ಮನ್ನು ಇದೇ ರೀತಿಯ ಪಾತ್ರಕ್ಕೆ ಬ್ರ್ಯಾಂಡ್​ ಮಾಡಿ ಬಿಡುತ್ತಾರೋ ಎಂಬ ಆತಂಕ ಅವರಿಗೆ ಇತ್ತು. ನಂತರ ನಿರ್ದೇಶಕರು ಅವರ ಮನವೊಲಿಸಿದರು. ಚಿತ್ರೀಕರಣ ಶುರು ಆದ ಬಳಿಕ ನಮ್ಮೆಲ್ಲರಿಗೂ ಒಳ್ಳೆಯದಾಗುತ್ತದೆ ಎಂಬ ಭಾವ ಇಡೀ ಚಿತ್ರತಂಡಕ್ಕೆ ಮೂಡಿತ್ತು.

ಚಿತ್ರದಲ್ಲಿ ಸಂಚಾರಿ ವಿಜಯ್​ ಅವರ ನಟನೆ ನೋಡಿದ ಎಲ್ಲರೂ ಫಿದಾ ಆಗಿದ್ದರು. ಅವರಿಗೆ ಖಂಡಿತ ಪ್ರಶಸ್ತಿ ಬರುತ್ತದೆ ಎಂದು ಅನೇಕರು ಭಾವಿಸಿದ್ದರು. ಅದು ನಿಜವಾಯಿತು ಕೂಡ. ರಾಷ್ಟ್ರ ಪ್ರಶಸ್ತಿ ಬಂದ ಬಳಿಕ ಸಂಚಾರಿ ವಿಜಯ್​ ಅವರ ಜನಪ್ರಿಯತೆ ದಿಢೀರ್​ ಹೆಚ್ಚಾಯಿತು. ನಟ ಪ್ರಕಾಶ್​ ರೈ ಅವರು ತಮ್ಮ ಸಿನಿಮಾ ಕೆಲಸಗಳಿಗೆ ಬಿಡುವು ಮಾಡಿಕೊಂಡು ಬಂದು ವಿಜಯ್​ಗೆ ಸನ್ಮಾನ ಮಾಡಿದರು. ಆ ಬಳಿಕ ಸಾಲು ಸಾಲು ಪ್ರಶಸ್ತಿ ಮತ್ತು ಅವಕಾಶಗಳು ಹರಿದುಬಂದರೂ ಕೂಡ ವಿಜಯ್​ ಅವರು ತಮ್ಮ ವಿನಯವಂತಿಕೆ ಮರೆತಿರಲಿಲ್ಲ.

ಇದನ್ನೂ ಓದಿ:

Sanchari Vijay Death: ಕಣ್ಣೀರು ಹಾಕುತ್ತ ನಟ ಸಂಚಾರಿ ವಿಜಯ್ ಬಗ್ಗೆ ಏನು ಹೇಳುತ್ತಿದೆ ಇಡೀ ಸ್ಯಾಂಡಲ್​ವುಡ್​?

Sanchari Vijay Death: ‘ಕನ್ನಡಿಗರು ಸಂಚಾರಿ ವಿಜಯ್​ ಅವರನ್ನು ಕಡೆಗಣಿಸಿದರು’; ನೋವಿನಿಂದ ಮಾತನಾಡಿದ್ದ ದರ್ಶನ್​