Sanchari Vijay: ಹುಟ್ಟೂರಿನತ್ತ ಸಂಚಾರಿ ವಿಜಯ್ ಮೃತದೇಹ ರವಾನೆ; ಸಕಲ ಸರ್ಕಾರಿ ಗೌರವಗಳೊಂದಿಗೆ ಸಂಜೆ ಅಂತ್ಯಕ್ರಿಯೆ
Sanchari Vijay Last Sight: ಮೃತ ದೇಹವನ್ನು ನೇರವಾಗಿ ಪಂಚನಹಳ್ಳಿಗೆ ತೆಗೆದುಕೊಂಡು ಹೋಗುವ ಸಾಧ್ಯತೆ ಹೆಚ್ಚಾಗಿರುವುದರಿಂದ ಹುಳಿಯೂರಿನಲ್ಲಿ ಸಾರ್ವಜನಿಕರ ದರ್ಶನಕ್ಕೆ ವ್ಯವಸ್ಥೆ ಸಾಧ್ಯತೆ ಇಲ್ಲ ಎನ್ನುವ ಮಾಹಿತಿ ಆಪ್ತರ ವಲಯದಿಂದ ಲಭ್ಯವಾಗಿದೆ.
ಬೆಂಗಳೂರು: ರವೀಂದ್ರ ಕಲಾಕ್ಷೇತ್ರದಲ್ಲಿ ಅಂತಿಮ ದರ್ಶನಕ್ಕಿರಿಸಲಾಗಿದ್ದ ನಟ ಸಂಚಾರಿ ವಿಜಯ್ ಪಾರ್ಥಿವ ಶರೀರವನ್ನು ಹುಟ್ಟೂರಿನಿತ್ತ ತೆಗೆದುಕೊಂಡು ಹೋಗಲಾಗುತ್ತಿದೆ. ಸಂಚಾರಿ ವಿಜಯ್ ಹುಟ್ಟೂರಾದ ಚಿಕ್ಕಮಗಳೂರು ಜಿಲ್ಲೆಯ ಕಡೂರು ತಾಲೂಕಿನ ಪಂಚನಹಳ್ಳಿಗೆ ಮೃತದೇಹವನ್ನು ಸಾಗಿಸಲಾಗುತ್ತಿದ್ದು, ಹುಳಿಯೂರಿನಲ್ಲಿ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡುವ ಬಗ್ಗೆ ಯಾವುದೇ ಸ್ಪಷ್ಟ ನಿರ್ಧಾರ ತೆಗೆದುಕೊಂಡಿಲ್ಲ. ಮೃತ ದೇಹವನ್ನು ನೇರವಾಗಿ ಪಂಚನಹಳ್ಳಿಗೆ ತೆಗೆದುಕೊಂಡು ಹೋಗುವ ಸಾಧ್ಯತೆ ಹೆಚ್ಚಾಗಿರುವುದರಿಂದ ಹುಳಿಯೂರಿನಲ್ಲಿ ಸಾರ್ವಜನಿಕರ ದರ್ಶನಕ್ಕೆ ವ್ಯವಸ್ಥೆ ಸಾಧ್ಯತೆ ಇಲ್ಲ ಎನ್ನುವ ಮಾಹಿತಿ ಆಪ್ತರ ವಲಯದಿಂದ ಲಭ್ಯವಾಗಿದೆ.
ಎರಡು ದಿನಗಳ ಹಿಂದೆ ನಡೆದ ಭೀಕರ ಅಪಘಾತದಿಂದ ಗಂಭೀರವಾಗಿ ಗಾಯಗೊಂಡಿದ್ದ ನಟ ಸಂಚಾರಿ ವಿಜಯ್(38) ತಮ್ಮ ವಿಭಿನ್ನ ಅಭಿನಯದ ಮೂಲಕ ಚಂದನವನ ಮಾತ್ರವಲ್ಲದೇ ರಾಷ್ಟ್ರಮಟ್ಟದಲ್ಲೇ ಗುರುತಿಸಿಕೊಂಡಿದ್ದ ಕಲಾವಿದರಾಗಿದ್ದರು. ಸಂಕಷ್ಟಕ್ಕೊಳಗಾದವರ ಸೇವೆಯೇ ಸರ್ವಸ್ವ ಅಂದುಕೊಂಡು ಬದುಕುತ್ತಿದ್ದ ನಟ ಸಂಚಾರಿ ವಿಜಯ್ ಜೀವನದ ಕೊನೆಯವರೆಗೂ ನೊಂದವರ ಬೆನ್ನಿಗೆ ನಿಂತಿದ್ದರು. ಮಧ್ಯರಾತ್ರಿವರೆಗೂ ಒಂದಷ್ಟು ಜನರ ಕಣ್ಣೀರು ಒರೆಸಿ ಇನ್ನೇನು ಮನೆ ಸೇರಬೇಕು ಅನ್ನುವಷ್ಟರಲ್ಲಿ ವಿಜಯ್ ಬಾಳಲ್ಲಿ ವಿಧಿ ಕ್ರೂರ ಆಟ ಆಡಿಬಿಟ್ಟಿದೆ. ಬೈಕ್ ಅಪಘಾತದ ತೀವ್ರತೆಗೆ ಕೋಮಾದಲ್ಲಿದ್ದ ನಟ ವಿಜಯ್ ಶಾಶ್ವತವಾಗಿ ಕಣ್ಣುಮುಚ್ಚಿದ್ದಾರೆ. ಇಂದು ಬೆಳಗ್ಗೆ 3.34ಕ್ಕೆ ಜೀವನ್ಮರಣ ಹೋರಾಟ ಅಂತ್ಯಗೊಂಡಿದೆ. ರವೀಂದ್ರ ಕಲಾಕ್ಷೇತ್ರದಲ್ಲಿ ಅಂತಿಮ ದರ್ಶನಕ್ಕೆ ಇರಿಸಲಾಗಿದ್ದ ಸಂಚಾರಿ ವಿಜಯ್ ಪಾರ್ಥಿವ ಶರೀರವನ್ನು ಕಡೆಯ ಬಾರಿಗೆ ನೋಡಲು ಅನೇಕ ಗಣ್ಯರು ಆಗಮಿಸಿ ಕಣ್ಣೀರು ಸುರಿಸಿದರು.
ಇಂದು ಮುಂಜಾನೆ ಅಂಗಾಂಗ ಕಸಿ ಕಾರ್ಯ ಮುಗಿದ ನಂತರ ಮರಣೋತ್ತರ ಪರೀಕ್ಷೆ ನಡೆಸಲಾಗಿದೆ. ವಿಕ್ಟೋರಿಯಾ ಆಸ್ಪತ್ರೆಯ ವೈದ್ಯರಿಂದ ಅಪೋಲೊ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆದಿದೆ. ಬಳಿಕ ವಿಜಯ್ ಮೃತದೇಹವನ್ನು ಕುಟುಂಬಕ್ಕೆ ಹಸ್ತಾಂತರಿಸಲಾಗಿದೆ. ಈಗ ಸಂಚಾರಿ ವಿಜಯ್ ಪಾರ್ಥಿವ ಶರೀರ ರವೀಂದ್ರ ಕಲಾಕ್ಷೇತ್ರದಿಂದ ಹುಟ್ಟೂರಿನತ್ತ ತೆರಳುತ್ತಿದೆ. ಸಂಜೆ ಸಕಲ ಸರ್ಕಾರಿ ಗೌರವಗಳೊಂದಿಗೆ ನಟ ವಿಜಯ್ ಹುಟ್ಟೂರು ಚಿಕ್ಕಮಗಳೂರು ಜಿಲ್ಲೆಯ ಕಡೂರು ತಾಲೂಕಿನ ಪಂಚನಹಳ್ಳಿಯಲ್ಲಿ ಅಂತ್ಯಕ್ರಿಯೆ ಮಾಡಲಾಗುತ್ತದೆ.
ಇದನ್ನೂ ಓದಿ: ಸಂಚಾರಿ ವಿಜಯ್ ಅಂತಿಮ ದರ್ಶನ ಪಡೆದು ಕಣ್ಣೀರ ವಿದಾಯ ಹೇಳಿದ ಗಣ್ಯರು, ಹಣೆಗೆ ಮುತ್ತಿಟ್ಟು ಬಿಕ್ಕಿ ಬಿಕ್ಕಿ ಅತ್ತ ಕುಟುಂಬಸ್ಥರು
Sanchari Vijay Death: ಕಣ್ಣೀರು ಹಾಕುತ್ತ ನಟ ಸಂಚಾರಿ ವಿಜಯ್ ಬಗ್ಗೆ ಏನು ಹೇಳುತ್ತಿದೆ ಇಡೀ ಸ್ಯಾಂಡಲ್ವುಡ್?