ಎಲ್ಲರನ್ನೂ ಕಾಡುತ್ತಿರುವ ಕೊರೊನಾ ವೈರಸ್ಗೆ ಬಡವರು-ಶ್ರೀಮಂತರೆಂಬ ಭೇದ ಇಲ್ಲ. ಸೆಲೆಬ್ರಿಟಿಗಳಿಗೂ ಇದರ ಹಾವಳಿ ತಪ್ಪಿದ್ದಿಲ್ಲ. ಈ ನಡುವೆ ಅನೇಕ ಸೆಲೆಬ್ರಿಟಿಗಳಿಗೆ ಈ ಮಾಹಾಮಾರಿಯ ಸೋಂಕು ತಗುಲಿದೆ. ಕೊವಿಡ್-19 ನಿರ್ವಹಣೆ ಮಾಡುವಲ್ಲಿ ಸರ್ಕಾರ ವಿಫಲ ಆಗುತ್ತಿರುವುದಕ್ಕೆ ಅನೇಕರು ಬೇಸರ ವ್ಯಕ್ತಪಡಿಸುತ್ತಿದ್ದಾರೆ. ಇದರ ಬಗ್ಗೆ ಕೆಲವು ಸೆಲೆಬ್ರಿಟಿಗಳು ಧ್ವನಿ ಎತ್ತುತ್ತಿದ್ದಾರೆ. ಇತ್ತೀಚೆಗೆ ಕೊವಿಡ್ ಪಾಸಿಟಿವ್ ಆಗಿರುವ ನಟಿ ಅನು ಪ್ರಭಾಕರ್ ಕೂಡ ಈ ಬಗ್ಗೆ ಅಸಮಾಧಾನ ಹೊರಹಾಕಿದ್ದಾರೆ.
ಏ.17ರಂದು ಅನು ಪ್ರಭಾಕರ್ ಅವರಿಗೆ ಕೊವಿಡ್ ಪಾಸಿಟಿವ್ ಆಗಿತ್ತು. ಇಷ್ಟು ದಿನ ಕಳೆದರೂ ಬಿಬಿಎಂಪಿ ಕಡೆಯಿಂದ ಸೂಕ್ತ ಪ್ರತಿಕ್ರಿಯೆ ಬಾರದ ಕಾರಣ ಅವರು ಬೇಸರ ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ಅವರು ಟ್ವಿಟರ್ನಲ್ಲಿ ಬರೆದುಕೊಂಡಿದ್ದಾರೆ. ‘ನನಗೆ ಕೊರೊನಾ ಸೋಂಕು ದೃಢವಾಗಿ 6 ದಿನ ಆಗಿದೆ. 6 ದಿನದಿಂದ ನಾನು ಮನೆಯಲ್ಲೇ ಐಸೋಲೇಟ್ ಆಗಿದ್ದೇನೆ. ಆದರೂ ಈವರೆಗೆ ಬಿಬಿಎಂಪಿಯಿಂದ ಫೋನ್ ಬಂದಿಲ್ಲ. ಕೊವಿಡ್ ರಿಪೋರ್ಟ್ ವೆಬ್‌ಸೈಟ್‌ನಲ್ಲಿ ಅಪ್ಡೇಟ್ ಆಗಿಲ್ಲ. ನನಗೆ ಇನ್ನೂ BU ನಂಬರ್ ಸಿಕ್ಕಿಲ್ಲ. ಇದನ್ನು ಆರೋಗ್ಯ ಸಚಿವ ಸುಧಾಕರ್ ಅವರ ಗಮನಕ್ಕೆ ತರಲು ಬಯಸುತ್ತೇನೆ ’ ಎಂದು ಅನು ಪ್ರಭಾಕರ್ ಬೇಸರ ವ್ಯಕ್ತಪಡಿಸಿದ್ದಾರೆ.
ಇಂಥ ಪರಿಸ್ಥಿತಿಯಲ್ಲಿ ಗಟ್ಟಿಯಾಗಿ ಇರಬೇಕು ಎಂದು ಅನೇಕರು ಕಮೆಂಟ್ ಮೂಲಕ ನಟಿಗೆ ಧೈರ್ಯ ತುಂಬುತ್ತಿದ್ದಾರೆ. ಮನೆಯಲ್ಲಿ ಮಾಡಿಕೊಳ್ಳಬಹುದಾದ ಔಷಧಿಗಳ ಬಗ್ಗೆ ಮಾಹಿತಿ ನೀಡುತ್ತಿದ್ದಾರೆ. ಅದೇನೇ ಇರಲಿ, ಕೊವಿಡ್ ನಿರ್ವಹಣೆಯಲ್ಲಿ ಸರ್ಕಾರ ಎಡವುತ್ತಿರುವುದಕ್ಕೆ ಅನೇಕರಿಂದ ಆಕ್ರೋಶ ವ್ಯಕ್ತವಾಗುತ್ತಿದೆ. ಇತ್ತೀಚೆಗಷ್ಟೇ ಖ್ಯಾತ ನಿರ್ದೇಶಕ ಗುರುಪ್ರಸಾದ್ ಅವರು ಫೇಸ್ಬುಕ್ ಲೈವ್ ಮೂಲಕ ಸರ್ಕಾರದ ವಿರುದ್ಧ ಗುಡುಗಿದ್ದರು. ಸೆಲೆಬ್ರಿಟಿಗಳಿಗೇ ಈ ರೀತಿ ಆದರೆ ಇನ್ನು ಜನಸಾಮಾನ್ಯರ ಗತಿ ಏನು ಎಂಬ ಪ್ರಶ್ನೆ ಮೂಡಿದೆ.
Respected Sir @mla_sudhakar , I tested positive on 17/4/21 & received my SRF ID. But my report has still not been uploaded on the COVID war website and I haven’t received my BU number yet or any call from #BBMP staff. I wanted to bring it to your notice. @DHFWKA @drashwathcn pic.twitter.com/LdFGpaKRvd
— Anu Prabhakar Mukherjee (@AnuPrabhakar9) April 21, 2021
ಚಿತ್ರರಂಗದ ಅನೇಕರಿಗೆ ಕೊರೊನಾ ಕಾಟ ಕೊಡುತ್ತಿದೆ. ಅಕ್ಷಯ್ ಕುಮಾರ್, ಪವನ್ ಕಲ್ಯಾಣ್, ಸೋನು ಸೂದ್, ನಿಖಿಲ್ ಕುಮಾರಸ್ವಾಮಿ, ಪ್ರಜ್ವಲ್ ದೇವರಾಜ್, ರಾಗಿಣಿ ಪ್ರಜ್ವಲ್, ಸಂಜನಾ ಗಲ್ರಾನಿ ಮಂತಾದವರು ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ. ಕೆಲವೇ ದಿನಗಳ ಹಿಂದೆ ಸ್ಯಾಂಡಲ್ವುಡ್ನ ಯುವ ನಟ-ನಿರ್ಮಾಪಕ ಡಾ. ಡಿ.ಎಸ್. ಮಂಜುನಾಥ್ ನಿಧನರಾದರು. ಹಲವು ವರ್ಷಗಳ ಕಾಲ ಪೋಸ್ಟರ್ ಡಿಸೈರ್ ಆಗಿ ಕೆಲಸ ಮಾಡಿದ್ದ ಮಸ್ತಾನ್ ಅವರು ಏ.20ರಂದು ಇಹಲೋಕ ತ್ಯಜಿಸಿರುವುದು ಬೇಸರದ ಸಂಗತಿ. ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇದೆ.
ಇದನ್ನೂ ಓದಿ: ಚಿರಂಜೀವಿ ಕ್ಯಾರವಾನ್ ಚಾಲಕ ಕೊರೊನಾದಿಂದ ನಿಧನ; ಮೆಗಾಸ್ಟಾರ್ ಅಭಿಮಾನಿಗಳಲ್ಲಿ ಆತಂಕ