ಸೆಲೆಬ್ರಿಟಿಗಳು ಆಗಾಗ ತಮ್ಮ ಹಳೇ ಫೋಟೋಗಳನ್ನು ಶೇರ್ ಮಾಡಿಕೊಳ್ಳುತ್ತಾರೆ. ಆ ಫೋಟೋಗಳನ್ನು ಕಂಡಾಗ ನೆನಪಿನ ಪುಟ ತೆರೆಯುತ್ತದೆ. ಅಪರೂಪದ ಚಿತ್ರಪಟವನ್ನು ನೋಡಿ ಅಭಿಮಾನಿಗಳೂ ಖುಷಿ ಪಡುತ್ತಾರೆ. ನಟಿ ರಮ್ಯಾ (Ramya Divya Spandana) ಅವರು ಈಗೊಂದು ಫೋಟೋ ಹಂಚಿಕೊಂಡಿದ್ದಾರೆ. ಕಾಲೇಜು ದಿನಗಳಲ್ಲಿ ತೆಗೆದ ಫೋಟೋ ಅದು. ಅದರಲ್ಲಿ ತುಂಬ ಕ್ಯೂಟ್ ಆಗಿ ಕಾಣುತ್ತಿರುವ ಅವರನ್ನು ಫ್ಯಾನ್ಸ್ ಕಣ್ತುಂಬಿಕೊಂಡಿದ್ದಾರೆ. ಸದ್ಯ ಈ ಫೋಟೋ (Ramya Viral Photo) ರಮ್ಯಾ ಅಭಿಮಾನಿಗಳ ವಲಯದಲ್ಲಿ ವೈರಲ್ ಆಗಿದೆ. ಇದು 2000ನೇ ಇಸವಿಯಲ್ಲಿ ಕ್ಲಿಕ್ಕಿಸಿದ ಫೋಟೋ. ಆಗ ರಮ್ಯಾ ಇನ್ನೂ ‘ಸ್ಯಾಂಡಲ್ವುಡ್ ಕ್ವೀನ್’ (Sandalwood Queen) ಆಗಿರಲಿಲ್ಲ. ಚಿತ್ರರಂಗಕ್ಕೂ ಕಾಲಿಟ್ಟಿರಲಿಲ್ಲ. ಅವರಿಗೆ ಆಗ 18ರ ಪ್ರಾಯ. ‘18ನೇ ವಯಸ್ಸಿನಲ್ಲಿ ನಾನು’ ಎಂಬ ಕ್ಯಾಪ್ಷನ್ನೊಂದಿಗೆ ಅವರು ಇನ್ಸ್ಟಾಗ್ರಾಮ್ ಸ್ಟೋರಿಯಲ್ಲಿ ಇದನ್ನು ಹಂಚಿಕೊಂಡಿದ್ದಾರೆ.
21ನೇ ವಯಸ್ಸಿಗೆ ರಮ್ಯಾ ಅವರು ಚಿತ್ರರಂಗಕ್ಕೆ ಕಾಲಿಟ್ಟರು. 2003ರಲ್ಲಿ ಅವರ ಮೊದಲ ಸಿನಿಮಾ ‘ಅಭಿ’ ತೆರೆಕಂಡಿತು. ಚೊಚ್ಚಲ ಚಿತ್ರದಲ್ಲಿ ಪುನೀತ್ ರಾಜ್ಕುಮಾರ್ ಜೊತೆ ನಟಿಸುವ ಅವಕಾಶ ಅವರಿಗೆ ಸಿಕ್ಕಿತು. ಭರ್ಜರಿ ಗೆಲುವು ಪಡೆದ ಅವರು ಮತ್ತೆ ಹಿಂದಿರುಗಿ ನೋಡಲೇ ಇಲ್ಲ. ಎರಡನೇ ಸಿನಿಮಾ ‘ಎಕ್ಸ್ ಕ್ಯೂಸ್ ಮೀ’ ಕೂಡ ಸೂಪರ್ ಹಿಟ್ ಆಯಿತು. ಆ ಮೂಲಕ ಕರುನಾಡಿನಲ್ಲಿ ರಮ್ಯಾ ಮನೆಮಾತಾದರು. ‘ಸ್ಯಾಂಡಲ್ವುಡ್ ಕ್ವೀನ್’ ಎಂಬ ಬಿರುದು ಪಡೆಯುವ ಮಟ್ಟಕ್ಕೆ ಅವರು ಬೆಳೆದು ನಿಂತರು.
ಕನ್ನಡ ಮಾತ್ರವಲ್ಲದೇ ತಮಿಳು ಮತ್ತು ತೆಲುಗಿನಿಂದಲೂ ರಮ್ಯಾ ಅವರಿಗೆ ಹೇರಳ ಅವಕಾಶಗಳು ಹರಿದು ಬಂದವು. ಅಲ್ಲಿನ ಸ್ಟಾರ್ ನಟರ ಜೊತೆಗೆ ಅಭಿನಯಿಸಿ ಅವರು ಸೈ ಎನಿಸಿಕೊಂಡರು. ಚಿತ್ರರಂಗದಲ್ಲಿ ಬೇಡಿಕೆ ಇರುವಾಗಲೇ ಅವರು ರಾಜಕೀಯದ ಕಡೆಗೆ ಮುಖ ಮಾಡಿದರು. ಈಗ ಮತ್ತೆ ಚಿತ್ರರಂಗದ ಬಗ್ಗೆ ಆಸಕ್ತಿ ತೋರಿಸುತ್ತಿದ್ದಾರೆ. ಅವರು ಆದಷ್ಟು ಬೇಗ ಕಮ್ಬ್ಯಾಕ್ ಮಾಡಲಿ ಎಂದು ಅಭಿಮಾನಿಗಳು ಬಯಸುತ್ತಿದ್ದಾರೆ.
ನಟನೆಯಿಂದ ರಮ್ಯಾ ದೂರ ಉಳಿದುಕೊಂಡಿದ್ದರೂ ಕೂಡ ಅವರು ಚಿತ್ರರಂಗದ ಜೊತೆಗಿನ ನಂಟು ಕಡಿದುಕೊಂಡಿಲ್ಲ. ಅವರ ಮೇಲೆ ಅಭಿಮಾನಿಗಳು ಹೊಂದಿರುವ ಕ್ರೇಜ್ ಕೂಡ ತಗ್ಗಿಲ್ಲ. ‘ಎಂದೆಂದಿಗೂ ನೀವೇ ನಮ್ಮ ಸ್ಯಾಂಡಲ್ವುಡ್ ಕ್ವೀನ್’ ಎಂದು ಅಭಿಮಾನಿಗಳು ಈಗಲೂ ಕಮೆಂಟ್ ಮಾಡುತ್ತಾರೆ. ಇನ್ನು, ರಮ್ಯಾ ಜನಪ್ರಿಯತೆ ಕೂಡ ಕಡಿಮೆ ಆಗಿಲ್ಲ. ಕನ್ನಡದ ಟಾಪ್ 5 ಪ್ರಸಿದ್ಧ ನಟಿಯರು ಯಾರು ಎಂಬುದನ್ನು ತಿಳಿಯಲು ಇತ್ತೀಚೆಗೆ Ormax Media ನಡೆಸಿದ ಸಮೀಕ್ಷೆಯಲ್ಲಿ ರಮ್ಯಾ ಅವರು 4ನೇ ಸ್ಥಾನ ಪಡೆದಿದ್ದರು ಎಂಬುದು ವಿಶೇಷ.