‘ಸಪ್ತ ಸಾಗರದಾಚೆ ಎಲ್ಲೋ: ಸೈಡ್​ ಬಿ’ ರಿಲೀಸ್​ ದಿನಾಂಕದಲ್ಲಿ ಬದಲಾವಣೆ; ಇಲ್ಲಿದೆ ಹೊಸ ಡೇಟ್​

|

Updated on: Sep 29, 2023 | 12:28 PM

ನಟ ರಕ್ಷಿತ್​ ಶೆಟ್ಟಿ ಮತ್ತು ನಿರ್ದೇಶಕ ಹೇಮಂತ್​ ಎಂ. ರಾವ್​ ಅವರ ಕಾಂಬಿನೇಷನ್​ನಲ್ಲಿ ಮೂಡಿಬಂದಿರುವ ‘ಸಪ್ತ ಸಾಗರದಾಚೆ ಎಲ್ಲೋ’ ಸಿನಿಮಾಗೆ ಜನಮೆಚ್ಚುಗೆ ಸಿಕ್ಕಿದೆ. ‘ಸೈಡ್​ ಬಿ’ ನೋಡಲು ಕಾದಿರುವ ಅಭಿಮಾನಿಗಳಿಗೆ ಹೊಸ ರಿಲೀಸ್​ ಡೇಟ್​ ಬಗ್ಗೆ ಮಾಹಿತಿ ನೀಡಲಾಗಿದೆ. ಒಂದು ವಾರ ತಡವಾಗಿ ಈ ಚಿತ್ರ ಬಿಡುಗಡೆ ಆಗಲಿದೆ.

‘ಸಪ್ತ ಸಾಗರದಾಚೆ ಎಲ್ಲೋ: ಸೈಡ್​ ಬಿ’ ರಿಲೀಸ್​ ದಿನಾಂಕದಲ್ಲಿ ಬದಲಾವಣೆ; ಇಲ್ಲಿದೆ ಹೊಸ ಡೇಟ್​
ರಕ್ಷಿತ್​ ಶೆಟ್ಟಿ
Follow us on

‘ಸಿಂಪಲ್​ ಸ್ಟಾರ್​’ ರಕ್ಷಿತ್​ ಶೆಟ್ಟಿ (Rakshit Shetty) ನಟಿಸಿದ ‘ಸಪ್ತ ಸಾಗರದಾಚೆ ಎಲ್ಲೋ’ ಸಿನಿಮಾಗೆ ಪಾಸಿಟಿವ್​ ಪ್ರತಿಕ್ರಿಯೆ ಸಿಕ್ಕಿತು. ಸೈಡ್​ ಎ ಮತ್ತು ಸೈಡ್​ ಬಿ ಎಂದು ಎರಡು ಭಾಗಗಳಲ್ಲಿ ಈ ಸಿನಿಮಾ ಮೂಡಿಬಂದಿದೆ. ಸೆಪ್ಟೆಂಬರ್​ 1ರಂದು ‘ಸಪ್ತ ಸಾಗರದಾಚೆ ಎಲ್ಲೋ: ಸೈಡ್​ ಎ’ (SSE Side A) ಬಿಡುಗಡೆ ಆಯಿತು. ಅಕ್ಟೋಬರ್​ 20ರಂದು ಸೈಡ್​ ಬಿ ಬಿಡುಗಡೆ ಮಾಡಲು ಚಿತ್ರತಂಡ ಆಲೋಚಿಸಿತ್ತು. ಆದರೆ ಈಗ ಆ ಪ್ಲ್ಯಾನ್​ನಲ್ಲಿ ಬದಲಾವಣೆ ಆಗಿದೆ. ಒಂದು ವಾರ ತಡವಾಗಿ ರಿಲೀಸ್​ ಮಾಡಲು ನಿರ್ಧರಿಸಲಾಗಿದೆ. ಅಂದರೆ, ಅಕ್ಟೋಬರ್​ 20ರ ಬದಲಿಗೆ ಅಕ್ಟೋಬರ್​ 27ರಂದು ‘ಸಪ್ತ ಸಾಗರದಾಚೆ ಎಲ್ಲೋ: ಸೈಡ್​ ಬಿ’ (Sapta Sagaradaache Ello Side B) ರಿಲೀಸ್​ ಆಗಲಿದೆ. ಈ ಬಗ್ಗೆ ರಕ್ಷಿತ್​ ಶೆಟ್ಟಿ ಅವರು ಪೋಸ್ಟ್​ ಮಾಡಿದ್ದಾರೆ. ಈ ಸಿನಿಮಾದಲ್ಲಿ ಅವರಿಗೆ ಜೋಡಿಯಾಗಿ ರುಕ್ಮಿಣಿ ವಸಂತ್​ ನಟಿಸಿದ್ದಾರೆ.

ರಿಲೀಸ್​ ಡೇಟ್​ ಬದಲಾವಣೆ ಬಗ್ಗೆ ನಿರ್ದೇಶಕ ಹೇಮಂತ್​ ರಾವ್​ ಅವರು ‘ಟಿವಿ9 ಕನ್ನಡ ಡಿಜಿಟಲ್​’ಗೆ ಪ್ರತಿಕ್ರಿಯೆ ನೀಡಿದ್ದಾರೆ. ‘ದಸರಾ ಹಬ್ಬದ ಸಂದರ್ಭದಲ್ಲಿ ಅನೇಕ ಸಿನಿಮಾಗಳು ರಿಲೀಸ್​ ಆಗುತ್ತಿವೆ. ಶಿವಣ್ಣ ನಟಿಸಿರುವ ‘ಘೋಸ್ಟ್​’ ಬಿಡುಗಡೆ ಆಗುತ್ತಿದೆ. ಹಾಗಾಗಿ ರಶ್​ ಬೇಡ ಎನಿಸಿತು. ಅಲ್ಲದೇ ತೆಲುಗಿನಲ್ಲಿ ‘ಸೈಡ್​ ಎ’ ಇತ್ತೀಚೆಗೆಷ್ಟೇ ಬಿಡುಗಡೆ ಆಗಿದೆ. ಒಟಿಟಿಯಲ್ಲೂ ಈಗತಾನೆ ಬಂದಿದೆ. ‘ಸೈಡ್​ ಎ’ ನೋಡಲು ಆ ಪ್ರೇಕ್ಷಕರಿಗೂ ಸಮಯ ನೀಡಬೇಕು. ಸ್ವಲ್ಪ ಗ್ಯಾಪ್​ ಇರಲಿ ಎಂಬ ಕಾರಣಕ್ಕೆ ಒಂದು ವಾರ ಮುಂದೂಡಿದ್ದೇವೆ’ ಎಂದಿದ್ದಾರೆ ಹೇಮಂತ್​ ಎಂ. ರಾವ್​.

ಇದನ್ನೂ ಓದಿ: ‘ಸಪ್ತ ಸಾಗರದಾಚೆ ಎಲ್ಲೋ’ ಸಿನಿಮಾ ನೋಡಿ ಮರುಳಾದ ನಟಿ ಸಮಂತಾ; ತಂಡದ ಬಗ್ಗೆ ಮೆಚ್ಚುಗೆ

‘ನಮ್ಮ ಪಯಣದ ಹಾದಿಯಲ್ಲಿ ಸಣ್ಣ ಬದಲಾವಣೆ ಆಗಿದೆ. ಆದರೆ ತಲುಪುವ ಗುರಿ ಬದಲಾಗಿಲ್ಲ. ಅಕ್ಟೋಬರ್​ 27ರಂದು ‘ಸಪ್ತ ಸಾಗರದಾಚೆ ಎಲ್ಲೋ: ಸೈಡ್​ ಬಿ’ ಸಿನಿಮಾ ನಿಮ್ಮದಾಗಲಿದೆ. ಪ್ರೀತಿ ಮತ್ತು ಬೆಂಬಲದೊಂದಿಗೆ ಎರಡನೇ ಚಾಪ್ಟರ್​ ಅನ್ನು ನೀವು ಸ್ವೀಕರಿಸುತ್ತೀರಿ ಎಂಬ ಭರವಸೆ ಇದೆ’ ಎಂದು ಸೋಶಿಯಲ್​ ಮೀಡಿಯಾದಲ್ಲಿ ಪೋಸ್ಟ್​ ಮಾಡುವ ಮೂಲಕ ಅಭಿಮಾನಿಗಳಿಗೆ ರಿಲೀಸ್​ ದಿನಾಂಕದ ಬದಲಾವಣೆ ಬಗ್ಗೆ ರಕ್ಷಿತ್​ ಶೆಟ್ಟಿ ಅವರು ಮಾಹಿತಿ ನೀಡಿದ್ದಾರೆ.

ಒಂದೇ ಕಥೆಯನ್ನು ಎರಡು ಪಾರ್ಟ್​ಗಳಲ್ಲಿ ಹೇಳುವ ಟ್ರೆಂಡ್​ ನಡೆಯುತ್ತಿದೆ. ‘ಬಾಹುಬಲಿ’, ‘ಕೆಜಿಎಫ್​’, ‘ಪುಷ್ಪ’ ಮುಂತಾದ ಸಿನಿಮಾಗಳು ಈ ಟ್ರೆಂಡ್​ ಫಾಲೋ ಮಾಡಿವೆ. ಅದೇ ರೀತಿ ‘ಸಪ್ತ ಸಾಗರದಾಚೆ ಎಲ್ಲೋ’ ಸಿನಿಮಾದ ಕಥೆಯನ್ನು ಕೂಡ ಎರಡು ಭಾಗಗಳಲ್ಲಿ ಹೇಳಲಾಗುತ್ತಿದೆ. ‘ಸೈಡ್​ ಎ’ ಚಿತ್ರದಲ್ಲಿ ಅರ್ಧ ಕಥೆ ಬಯಲಾಗಿದೆ. ‘ಸೈಡ್​ ಬಿ’ ಚಿತ್ರದಲ್ಲಿ ಇನ್ನುಳಿದ ಕಥೆಯನ್ನು ತೋರಿಸಲಾಗುತ್ತದೆ. ಅದಕ್ಕಾಗಿ ಫ್ಯಾನ್ಸ್​ ಕಾದಿದ್ದಾರೆ.

ಇದನ್ನೂ ಓದಿ: ‘ಸಪ್ತ ಸಾಗರದಾಚೆ ಎಲ್ಲೋ; ಸೈಡ್​ ಎ’ ವಿಮರ್ಶೆ: ಪಾತ್ರ ಪರಿಚಯವೇ ಸುದೀರ್ಘ; ಭಾವ ತೀವ್ರತೆ ಅಮೋಘ

ರಕ್ಷಿತ್​ ಶೆಟ್ಟಿ ಅವರ ಪ್ರತಿ ಸಿನಿಮಾ ಕೂಡ ಡಿಫರೆಂಟ್​ ಆಗಿರುತ್ತದೆ. ಹಾಗೆಯೇ ನಿರ್ದೇಶಕ ಹೇಮಂತ್​ ಎಂ. ರಾವ್​ ಅವರು ತಮ್ಮದೇ ಛಾಪು ಮೂಡಿಸಿದ್ದಾರೆ. ಇಬ್ಬರ ಕಾಂಬಿನೇಷನ್​ನಲ್ಲಿ ಮೂಡಿಬಂದಿರುವ ‘ಸಪ್ತ ಸಾಗರದಾಚೆ ಎಲ್ಲೋ’ ಸಿನಿಮಾಗೆ ಜನಮೆಚ್ಚುಗೆ ಸಿಕ್ಕಿದೆ. ಜನರಿಗೆ ನಟಿ ರುಕ್ಮಿಣಿ ವಸಂತ್​ ಮತ್ತು ರಕ್ಷಿತ್​ ಶೆಟ್ಟಿ ಅವರ ಕೆಮಿಸ್ಟ್ರಿ ಇಷ್ಟ ಆಗಿದೆ. ‘ಸೈಡ್​ ಬಿ’ನಲ್ಲಿ ಚೈತ್ರಾ ಆಚಾರ್​ ಕೂಡ ನಟಿಸಿದ್ದಾರೆ. ಆ ಕಾರಣದಿಂದಲೂ ಸಿನಿಮಾ ಮೇಲಿನ ನಿರೀಕ್ಷೆ ಹೆಚ್ಚಿದೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.