ತಮಿಳಿನಲ್ಲಿ ಜನಪ್ರಿಯತೆ ಪಡೆದ ಸರ್ದಾರ್ ಸತ್ಯ; ‘ವಿಡುದಲೈ’ ಚಿತ್ರದಲ್ಲಿ ಪೊಲೀಸ್ ಅಧಿಕಾರಿ ಪಾತ್ರ

| Updated By: ರಾಜೇಶ್ ದುಗ್ಗುಮನೆ

Updated on: Apr 25, 2023 | 6:30 AM

‘ಆ ದಿನಗಳು’ ಮೂಲಕ ಸತ್ಯ ಅವರು ಕನ್ನಡ ಚಿತ್ರರಂಗಕ್ಕೆ ಕಾಲಿಟ್ಟರು. ‘ಸ್ಲಂ ಬಾಲ’, ‘ರಾಜಧಾನಿ’, ‘ದ್ಯಾವ್ರೇ’, ‘ಚಂಬಲ್’ ಮುಂತಾದ ಚಿತ್ರಗಳಲ್ಲಿ ನಟಿಸಿ ಮೆಚ್ಚುಗೆ ಪಡೆದಿದ್ದಾರೆ.

ತಮಿಳಿನಲ್ಲಿ ಜನಪ್ರಿಯತೆ ಪಡೆದ ಸರ್ದಾರ್ ಸತ್ಯ; ‘ವಿಡುದಲೈ’ ಚಿತ್ರದಲ್ಲಿ ಪೊಲೀಸ್ ಅಧಿಕಾರಿ ಪಾತ್ರ
ಪೊಲೀಸ್ ಅಧಿಕಾರಿಯಾಗಿ ಸರ್ದಾರ್ ಸತ್ಯ
Follow us on

ವೆಟ್ರಿಮಾರನ್ ನಿರ್ದೇಶನದ ತಮಿಳಿನ ‘ವಿಡುದಲೈ’ ಸಿನಿಮಾ (Viduthalai Part 1) ಪ್ರೇಕ್ಷಕರಿಂದ ಮೆಚ್ಚುಗೆ ಪಡೆದಿದೆ. ವಿಜಯ್ ಸೇತುಪತಿ, ಸೂರಿ ಮೊದಲಾದವರು ಈ ಸಿನಿಮಾದಲ್ಲಿ ನಟಿಸಿದ್ದಾರೆ. ಕನ್ನಡದ ನಟ ಸರ್ದಾರ್ ಸತ್ಯ ಕೂಡ ಈ ಚಿತ್ರದಲ್ಲಿ ಮುಖ್ಯ ಪಾತ್ರ ಮಾಡಿದ್ದಾರೆ. ಅವರ ಪಾತ್ರಕ್ಕೆ ಎಲ್ಲ ಕಡೆಗಳಿಂದ ಮೆಚ್ಚುಗೆ ವ್ಯಕ್ತವಾಗಿದೆ. ತಮಿಳಿನಲ್ಲಿ ನಟಿಸಬೇಕು ಎಂಬ ಅವರ ಕನಸು ನನಸಾಗುವುದು ಮಾತ್ರವಲ್ಲ, ಪರಭಾಷೆಯಲ್ಲಿ ಸಾಕಷ್ಟು ಜನಪ್ರಿಯತೆ ಸಿಕ್ಕಿದೆ. ಅವರು ಮಾಡಿರುವ ವೇಲುಮುರುಗನ್ (Velmurugan) ಹೆಸರಿನ ಪೊಲೀಸ್ ಅಧಿಕಾರಿ ಪಾತ್ರ ಸಾಕಷ್ಟು ಗಮನ ಸೆಳೆಯುತ್ತಿದೆ.

‘ಆ ದಿನಗಳು’ ಮೂಲಕ ಸತ್ಯ ಅವರು ಕನ್ನಡ ಚಿತ್ರರಂಗಕ್ಕೆ ಕಾಲಿಟ್ಟರು. ‘ಸ್ಲಂ ಬಾಲ’, ‘ರಾಜಧಾನಿ’, ‘ದ್ಯಾವ್ರೇ’, ‘ಚಂಬಲ್’ ಮುಂತಾದ ಚಿತ್ರಗಳಲ್ಲಿ ನಟಿಸಿ ಮೆಚ್ಚುಗೆ ಪಡೆದಿದ್ದಾರೆ. ಇದರ ಜೊತೆಗೆ ಅವರು ತಮ್ಮದೇ ನಿರ್ಮಾಣ ಸಂಸ್ಥೆ ಅಡಿ ಕೆಲವು ರಿಯಾಲಿಟಿ ಶೋಗಳ ನಿರ್ಮಾಣ ಮಾಡಿದ್ದಾರೆ. ಈಗ ಅವರು ‘ವಿಡುದಲೈ’ ಸಿನಿಮಾ ಮೂಲಕ ಜನಪ್ರಿಯತೆ ಹೆಚ್ಚಿಸಿಕೊಂಡಿದ್ದಾರೆ.

ಸತ್ಯ ಅವರು ‘ವಿಡುದಲೈ’ ಚಿತ್ರದಲ್ಲಿ ನಟಿಸುವುದಕ್ಕೆ ಮುಖ್ಯ ಕಾರಣ ‘ಚಂಬಲ್’ ಚಿತ್ರದ ನಿರ್ದೇಶಕ ಜೇಕಬ್ ವರ್ಗೀಸ್ ಅಂತೆ. ಜೇಕಬ್ ಹಾಗೂ ವೆಟ್ರಿಮಾರನ್ ಒಳ್ಳೆಯ ಗೆಳೆಯರು. ಜೇಕಬ್ ಸಹಾಯದಿಂದ ವೆಟ್ರಿಮಾರನ್ ಭೇಟಿ ಮಾಡುವ ಅವಕಾಶ ಸತ್ಯ ಅವರಿಗೆ ಸಿಕ್ಕಿತ್ತು. ಈ ಭೇಟಿ ನಡೆದ ಮೂರು ತಿಂಗಳ ಬಳಿಕ ಅವರು ‘ವಿಡುದಲೈ’ ಚಿತ್ರದ ಭಾಗವಾಗಿದ್ದರು.

‘ನನ್ನ ಊರು ಚಾಮರಾಜ ನಗರ. ಕನ್ನಡದ ಜೊತೆಗೆ ನನಗೆ ತಮಿಳು ಭಾಷೆಯೂ ಬರುತ್ತದೆ. ನನಗೆ ಕನ್ನಡದಲ್ಲಿ ಸರಿಯಾಗಿ ಆಫರ್ ಸಿಗುತ್ತಿರಲಿಲ್ಲ. ಸಿಕ್ಕರೂ ಹಣ ಸಿಗುತ್ತಿರಲಿಲ್ಲ. ಆಗ ಹೆಂಡತಿ ನಿರ್ಮಲಾ ಆಸೆಯ ಮೇರೆಗೆ ‘ಸಾಯಿ ನಿರ್ಮಲಾ ಪ್ರೊಡಕ್ಷನ್ಸ್’ ಹೆಸರಿನ ನಿರ್ಮಾಣ ಸಂಸ್ಥೆ ಆರಂಭಿಸಿದೆ. ಅಲ್ಲಿ ಯಶಸ್ಸು ಸಿಕ್ಕಿತು. ನಾನು ತಮಿಳಿನಲ್ಲಿ ನಟಿಸಬೇಕು ಎಂಬುದು ತಾಯಿ ಆಸೆ ಆಗಿತ್ತು. ಆ ಆಸೆ ಈಡೇರಿದೆ’ ಎಂದಿದ್ದಾರೆ ಸತ್ಯ.

ಇದನ್ನೂ ಓದಿ: Vetrimaran: ಜೂ ಎನ್​ಟಿಆರ್ ಜೊತೆ ಸಿನಿಮಾ ಖಾತ್ರಿಗೊಳಿಸಿದ ವೆಟ್ರಿಮಾರನ್

ಈ ಸಿನಿಮಾಗೆ ಆಯ್ಕೆ ಆದಾಗ ಕೆಲವೇ ದಿನಗಳಲ್ಲಿ ಶೂಟಿಂಗ್ ಮುಗಿಯಬಹುದು ಎಂದು ಸತ್ಯ ಭಾವಿಸಿದ್ದರು. ಆದರೆ ಈ ಚಿತ್ರಕ್ಕಾಗಿ ಅವರು 120 ದಿನಗಳ ಕಾಲ ಕೆಲಸ ಮಾಡಿದ್ದರು. ವಿಜಯ್ ಸೇತುಪತಿ, ಸೂರಿ, ಗೌತಮ್ ಮೆನನ್, ರಾಜೀವ್ ಮೆನನ್ ಮುಂತಾದ ಪ್ರತಿಭಾವಂತ ಕಲಾವಿದರ ಜತೆಗೆ ನಟಿಸುವ ಅವಕಾಶ ಅವರಿಗೆ ಸಿಕ್ಕಿದೆ. ಈ ಚಿತ್ರದ ಸೀಕ್ವೆಲ್​ನಲ್ಲೂ ಅವರು ನಟಿಸುತ್ತಿದ್ದಾರೆ.

‘ವಿಡುದಲೈ’ ರಿಲೀಸ್ ಆದ ಬಳಿಕ ಸತ್ಯ ಅವರು ಮೂರು ಚಿತ್ರದ ಸ್ಕ್ರಿಪ್ಟ್ ಕೇಳಿದ್ದಾರೆ. ಒಂದು ಚಿತ್ರದ ಕೆಲಸವನ್ನು ಸದ್ದಿಲ್ಲದೆ ಮುಗಿಸಿದ್ದಾರೆ. ಪರಭಾಷೆಯಿಂದ ಎಷ್ಟೇ ಆಫರ್ ಬಂದರೂ ಅವರ ಮೊದಲ ಆದ್ಯತೆ ಕನ್ನಡಕ್ಕೆ ಎನ್ನುತ್ತಾರೆ ಅವರು.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ