‘ಸರ್ಸೆ ನಿನ್ನ ಸೆರಗ ಸರ್ಸೆ’ ಹಾಡಿಗೆ ದೇಶಾದ್ಯಂತ ವಿರೋಧ: ಹಿಂದಿ ವರ್ಷನ್ ಡಿಲೀಟ್

‘ಕೆಡಿ’ ಸಿನಿಮಾದ ವಿವಾದಾತ್ಮಕ ಹಾಡಿನ ಹಿಂದಿ ವರ್ಷನ್ ಅನ್ನು ಡಿಲೀಟ್ ಮಾಡಲಾಗಿದೆ. ಅಶ್ಲೀಲ ಸಾಹಿತ್ಯದ ಕಾರಣಕ್ಕೆ ದೇಶಾದ್ಯಂತ ಈ ಹಾಡಿಗೆ ಜನರಿಂದ ಭಾರಿ ಟೀಕೆ ವ್ಯಕ್ತವಾಗಿದೆ. ಈ ಎಲ್ಲ ವಿವಾದದ ಬಗ್ಗೆ ‘ಕೆಡಿ’ ಚಿತ್ರತಂಡ ಇದುವರೆಗೆ ಯಾವುದೇ ಅಧಿಕೃತ ಹೇಳಿಕೆ ನೀಡಿಲ್ಲ.

‘ಸರ್ಸೆ ನಿನ್ನ ಸೆರಗ ಸರ್ಸೆ’ ಹಾಡಿಗೆ ದೇಶಾದ್ಯಂತ ವಿರೋಧ: ಹಿಂದಿ ವರ್ಷನ್ ಡಿಲೀಟ್
Nora Fatehi, Sanjay Dutt

Updated on: Mar 17, 2026 | 7:03 PM

ಬಾಲಿವುಡ್ ನಟಿ ನೋರಾ ಫತೇಹಿ (Nora Fatehi) ಮತ್ತು ನಟ ಸಂಜಯ್ ದತ್ ಕಾಣಿಸಿಕೊಂಡಿರುವ ‘ಸರ್ಸೆ ನಿನ್ನ ಸೆರಗ ಸರ್ಸೆ’ ಹಾಡು ಭಾರಿ ವಿವಾದಕ್ಕೆ ಗುರಿಯಾಗಿದೆ. ಹಾಡಿನ ಸಾಹಿತ್ಯ ಮತ್ತು ದೃಶ್ಯಗಳು ಮಹಿಳೆಯರಿಗೆ ಅವಮಾನಕಾರಿಯಾಗಿವೆ ಎಂಬ ಆಕ್ರೋಶ ವ್ಯಕ್ತವಾದ ಬೆನ್ನಲ್ಲೇ, ಹಿಂದಿ ವರ್ಷನ್ (Sarke Chunar Teri) ಹಾಡನ್ನು ಅಧಿಕೃತ ಪ್ಲಾಟ್‌ಫಾರ್ಮ್‌ಗಳಿಂದ ತೆಗೆದುಹಾಕಲಾಗಿದೆ. ಅರ್ಜುನ್ ಜನ್ಯ ಸಂಗೀತ ಸಂಯೋಜಿಸಿರುವ, ಮಂಗ್ಲಿ ಹಾಡಿರುವ ಈ ಹಾಡಿನ ಸಾಲುಗಳು ಭಾರಿ ಟೀಕೆಗೆ ಒಳಗಾಗಿವೆ. ಸಾಹಿತ್ಯದಲ್ಲಿ ಬಳಸಲಾದ ಪದಗಳು ಮಹಿಳೆಯರನ್ನು ಕೆಟ್ಟದಾಗಿ ಬಿಂಬಿಸುತ್ತವೆ ಎಂದು ಅನೇಕರು ದೂರಿದ್ದಾರೆ.

‘ಸರ್ಸೆ ನಿನ್ನ ಸೆರಗ ಸರ್ಸೆ’ ಹಾಡಿನ ನೃತ್ಯ ಸಂಯೋಜನೆಯ ಬಗ್ಗೆಯೂ ನೆಟ್ಟಿಗರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ನೋರಾ ಫತೇಹಿ ಅವರು ಪದೇ ಪದೇ ಸೀರೆಯ ಸೆರಗನ್ನು ಕೆಳಗೆ ಹಾಕಿ ಮತ್ತೆ ಎತ್ತುವ ದೃಶ್ಯಗಳು ಅಸಭ್ಯವಾಗಿವೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಟೀಕೆ ಕೇಳಿಬಂದಿದೆ. ಈ ವಿವಾದ ಕೇವಲ ಸೋಷಿಯಲ್ ಮೀಡಿಯಾಗೆ ಸೀಮಿತವಾಗದೆ ಕಾನೂನು ಹಂತ ತಲುಪಿದೆ.

ವಕೀಲ ವಿನೀತ್ ಜಿಂದಾಲ್ ಅವರು ಸೆನ್ಸಾರ್ ಮಂಡಳಿ, ಮಾಹಿತಿ ಮತ್ತು ಪ್ರಸಾರ ಸಚಿವಾಲಯಕ್ಕೆ ದೂರು ನೀಡಿದ್ದಾರೆ. ದೆಹಲಿ ಪೊಲೀಸರ ಸೈಬರ್ ಸೆಲ್‌ಗೆ ಪ್ರತ್ಯೇಕ ದೂರು ನೀಡಲಾಗಿದ್ದು, ಅಪ್ರಾಪ್ತ ವಯಸ್ಕರಿಗೂ ಈ ಹಾಡು ಲಭ್ಯವಿರುವುದರಿಂದ ಭಾರತೀಯ ನ್ಯಾಯ ಸಂಹಿತೆ ಮತ್ತು ಪೋಕ್ಸೋ ಕಾಯ್ದೆಯಡಿ ಕ್ರಮಕ್ಕೆ ಒತ್ತಾಯಿಸಲಾಗಿದೆ. ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗವು ಈ ಬಗ್ಗೆ ಚಿತ್ರತಂಡಕ್ಕೆ ನೋಟಿಸ್ ಜಾರಿ ಮಾಡಿದೆ.

ಗಾಯಕ ಅರ್ಮಾನ್ ಮಲಿಕ್, ನಟಿ ಕಂಗನಾ ರಣಾವತ್ ಮತ್ತು ಕ್ರಿಕೆಟಿಗ ಹರ್ಭಜನ್ ಸಿಂಗ್ ಸೇರಿದಂತೆ ಹಲವು ಗಣ್ಯರು ‘ಸರ್ಸೆ ನಿನ್ನ ಸೆರಗ ಸರ್ಸೆ’ ಹಾಡಿನ ಸಾಹಿತ್ಯದ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ತೀವ್ರ ವಿರೋಧದ ಹಿನ್ನೆಲೆಯಲ್ಲಿ ಮಾರ್ಚ್ 17ರಂದು ಹಾಡಿನ ಹಿಂದಿ ಆವೃತ್ತಿಯನ್ನು ಯೂಟ್ಯೂಬ್‌ನಿಂದ ಡಿಲೀಟ್ ಮಾಡಲಾಗಿದೆ.

ಇದನ್ನೂ ಓದಿ: ಪ್ರೇಮ್ ಬರೆದ ‘ಕೆಡಿ’ ಹಾಡಿನ ಅಶ್ಲೀಲ ಸಾಹಿತ್ಯಕ್ಕೆ ಜನರ ಆಕ್ರೋಶ; ಸೆಲೆಬ್ರಿಟಿಗಳೂ ಗರಂ

ಹಿಂದಿ ವರ್ಷನ್ ಡಿಲೀಟ್ ಆಗಿದ್ದರೂ ಕೂಡ ಕನ್ನಡ ಸೇರಿದಂತೆ ಇತರ ದಕ್ಷಿಣ ಭಾರತದ ಭಾಷೆಗಳಲ್ಲಿನ ಈ ಹಾಡುಗಳು ಇನ್ನೂ ಲಭ್ಯವಿದೆ. ಅವುಗಳನ್ನೂ ಯಾವಾಗ ತೆಗೆದುಹಾಕಲಾಗುತ್ತದೆ ಎಂಬ ಕುತೂಹಲ ಮೂಡಿದೆ. ಹಿಂದಿ ವರ್ಷನ್ ಬಗ್ಗೆ ಪ್ರತಿಕ್ರಿಯಿಸಿರುವ ಗೀತರಚನೆಕಾರ ರಕೀಬ್ ಆಲಂ, ‘ನಾನು ಕೇವಲ ಮೂಲ ಕನ್ನಡ ಸಾಹಿತ್ಯವನ್ನು ಹಿಂದಿಗೆ ಅನುವಾದ ಮಾಡಿದ್ದೇನೆ ಅಷ್ಟೇ, ಇದರಲ್ಲಿ ನನ್ನದೇನೂ ತಪ್ಪಿಲ್ಲ’ ಎಂದು ಹೇಳಿಕೊಂಡಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Loading...
Unable to load recommendations.
Follow Us