ಚಿತ್ರರಂಗ ಎಂದರೆ ಬರೀ ಕಮರ್ಷಿಯಲ್ ಸಿನಿಮಾಗಳಿಗೆ ಮಾತ್ರ ಸೀಮಿತ ಅಲ್ಲ. ಅದರಲ್ಲಿ ಎಲ್ಲ ಬಗೆಯ ಸಿನಿಮಾಗಳೂ ಇರುತ್ತವೆ. ಆಗೊಮ್ಮೆ ಈಗೊಮ್ಮೆ ಮಕ್ಕಳ ಚಿತ್ರಗಳು (Children Movies) ಕೂಡ ಬರುತ್ತವೆ. ಆದರೆ ಇಂಥ ಕೆಲವು ಸಿನಿಮಾಗಳು ಸೂಕ್ತ ರೀತಿಯ ಪ್ರಚಾರ ಸಿಗದೇ ಕಳೆದುಹೋಗಿಬಿಡುತ್ತವೆ. ಟಿವಿಯಲ್ಲಿ ಮಕ್ಕಳ ಶೋಗಳು ಸಖತ್ ಫೇಮಸ್ ಆಗುತ್ತವೆ. ಆದರೆ ದೊಡ್ಡಪರದೆಯಲ್ಲಿ ಚಿಣ್ಣರ ಸಿನಿಮಾಗಳು ಸದ್ದು ಮಾಡುವುದು ಬಲು ಅಪರೂಪ. ಈಗೊಂದು ಹೊಸ ತಂಡ ‘ಸ್ಕೂಲ್ ಲವ್ ಸ್ಟೋರಿ’ ಸಿನಿಮಾ (School Love Story Movie) ಮಾಡಿದೆ. ಈ ಚಿತ್ರತಂಡದಲ್ಲಿ ಚಂದನವನದ ಅನುಭವಿ ತಂತ್ರಜ್ಞರು ಕೆಲಸ ಮಾಡಿದ್ದಾರೆ. ಈ ಸಿನಿಮಾದ ಶೀರ್ಷಿಕೆ ಕೇಳಿದರೆ ಇದು ಬಾಲಕರ ಪ್ರೇಮ್ ಕಹಾನಿ ಇರಬಹುದು ಎನಿಸುವುದು ಸಹಜ. ಆದರೆ ಚಿತ್ರತಂಡ ಹೇಳುವ ಪ್ರಕಾರ ‘ಸ್ಕೂಲ್ ಲವ್ ಸ್ಟೋರಿ’ ಚಿತ್ರದಲ್ಲಿ ಬೇರೆಯದೇ ಕಥೆ ಇದೆ. ಆದಷ್ಟು ಬೇಗ ಸಿನಿಮಾವನ್ನು ತೆರೆಗೆ ತರಲು ತಂಡ ಪ್ರಯತ್ನಿಸುತ್ತಿದೆ. ಮಕ್ಕಳ ಜೊತೆಗೆ ಹಿರಿಯ ನಟ ಎಂ.ಎಸ್. ಉಮೇಶ್ (Senior Actor M S Umesh) ಕೂಡ ಈ ಚಿತ್ರದಲ್ಲಿ ಒಂದು ಪಾತ್ರ ಮಾಡಿದ್ದಾರೆ. ಈ ಸಿನಿಮಾ ಬಗ್ಗೆ ಒಂದಷ್ಟು ಮಾಹಿತಿ ಇಲ್ಲಿದೆ..
ಮೊದಲೇ ಹೇಳಿದಂತೆ ‘ಸ್ಕೂಲ್ ಲವ್ ಸ್ಟೋರಿ’ ಚಿತ್ರದ ಹೆಸರು ಕೇಳಿದರೆ ಇದು ಪ್ರೀತಿ-ಪ್ರೇಮದ ಕಥೆ ಎನಿಸುತ್ತದೆ. ಬಾಲ್ಯದಲ್ಲಿ ಚಿಗುರಿದ ಪ್ರೀತಿಯ ಬಗ್ಗೆ ಈಗಾಗಲೇ ಅನೇಕ ಸಿನಿಮಾಗಳು ಬಂದು ಹೋಗಿವೆ. ಆದರೆ ‘ಸ್ಕೂಲ್ ಲವ್ ಸ್ಟೋರಿ’ ಸಿನಿಮಾದಲ್ಲಿ ಇರುವ ಕಹಾನಿಯೇ ಬೇರೆ. ಇದರಲ್ಲಿ ತಂದೆ-ತಾಯಿಯ ಪ್ರೀತಿಯನ್ನು ತೋರಿಸಲಾಗಿದೆ ಎನ್ನುತ್ತಿದೆ ಚಿತ್ರತಂಡ. ಹಳ್ಳಿ ಮಕ್ಕಳು ಶಾಲೆಯಲ್ಲಿ ಓದುತ್ತಿರುವಾಗ ಶ್ರೀಮಂತರು ಮತ್ತು ಬಡವರ ನಡುವೆ ಒಂದು ರೀತಿಯ ತಾರತಮ್ಯ ಇರುತ್ತದೆ. ಬಡವರು ನಿಂದನೆಗೆ ಒಳಗಾಗುತ್ತಾರೆ. ಆದರೆ ಅವರು ಅದನ್ನೆಲ್ಲ ಎದುರಿಸಿ ಹೇಗೆ ಬೆಳೆಯುತ್ತಾರೆ? ನಂತರ ಪೋಷಕರ ಸಹಾಯದಿಂದ ಐಎಎಸ್ ಅಧಿಕಾರಿ ಆಗುವುದು ಹೇಗೆ ಎಂಬ ಕಥೆಯನ್ನು ಈ ಸಿನಿಮಾ ಹೊಂದಿದೆ.
ಟಾಲಿವುಡ್ನಲ್ಲಿ ಹಲವು ಸಿನಿಮಾಗಳ ತೆರೆ ಹಿಂದೆ ತಂತ್ರಜ್ಞರಾಗಿ ಕೆಲಸ ಮಾಡಿ ಅನುಭವ ಪಡೆದುಕೊಂಡಿರುವ ತುಮಕೂರಿನ ಚಿರಂಜೀವಿ ನಾಯ್ಕ್ ಪಿ. ಅವರು ‘ಸ್ಕೂಲ್ ಲವ್ ಸ್ಟೋರಿ’ ಸಿನಿಮಾ ಮಾಡಿದ್ದಾರೆ. ಕಥೆ, ಚಿತ್ರಕಥೆ, ಸಂಭಾಷಣೆ, ಸಂಕಲನದ ಜೊತೆಗೆ ನಿರ್ದೇಶನವನ್ನು ಅವರು ಮಾಡಿದ್ದಾರೆ. ಅಷ್ಟೇ ಅಲ್ಲ, ಚಿರಂಜೀವಿ ಸಿನಿ ಕ್ರಿಯೇಶನ್ಸ್ ಅಡಿಯಲ್ಲಿ ಈ ಸಿನಿಮಾವನ್ನು ಸ್ವತಃ ನಿರ್ಮಾಣ ಮಾಡಿದ್ದಾರೆ. ಸಹ ನಿರ್ಮಾಪಕರಾಗಿ ಶಿವಕುಮಾರ್ ಅವರು ಚಿರಂಜೀವಿಗೆ ಸಾಥ್ ನೀಡಿದ್ದಾರೆ.
‘ಸ್ಕೂಲ್ ಲವ್ ಸ್ಟೋರಿ’ ಸಿನಿಮಾದ ಪ್ರಮುಖ ಪಾತ್ರಗಳಲ್ಲಿ ಬಾಲನಟರಾದ ಸೃಷ್ಟಿ, ಸಿದ್ದಾರ್ಥ್, ಪ್ರತೀಕ್ ನಟಿಸಿದ್ದಾರೆ. ಮಕ್ಕಳಿಗೆ ಬುದ್ಧಿಮಾತು ಹೇಳುವ ಪಾತ್ರದಲ್ಲಿ ಹಿರಿಯ ಕಲಾವಿದ ಎಂ.ಎಸ್. ಉಮೇಶ್ ಅಭಿನಯಿಸಿದ್ದಾರೆ. ಶಿಕ್ಷಕಿಯ ಪಾತ್ರಕ್ಕೆ ನಟಿ ಅನುಷಾ ಬಣ್ಣ ಹಚ್ಚಿದ್ದಾರೆ. ಇನ್ನುಳಿದ ಪಾತ್ರಗಳಲ್ಲಿ ರವಿಶಂಕರ್, ಶಿವಕುಮಾರ್ ಮುಂತಾದವರ ಅಭಿನಯಿದ್ದಾರೆ.
ಕನ್ನಡದ ಹಲವು ಸಿನಿಮಾಗಳಿಗೆ ಸಂಗೀತ ನೀಡಿರುವ ಎ.ಟಿ. ರವೀಶ್ ಅವರು ‘ಸ್ಕೂಲ್ ಲವ್ ಸ್ಟೋರಿ’ ಸಿನಿಮಾಗೆ ಸಂಗೀತ ನಿರ್ದೇಶನ ಮಾಡಿದ್ದಾರೆ. ಅವರ ಸಂಗೀತ ಸಂಯೋಜನೆಯಲ್ಲಿ ಮೂಡಿಬಂದಿರುವ ಹಾಡುಗಳಿಗೆ ರಾಜೇಶ್ ಕೃಷ್ಣನ್, ವಿಜಯ್ ಪ್ರಕಾಶ್, ಇಂದೂ ನಾಗರಾಜ್ ಮತ್ತು ಮೆಹಬೂಬ್ ಸಾಬ್ ಅವರು ಧ್ವನಿ ನೀಡಿದ್ದಾರೆ. ಸಕಲೇಶಪುರ, ಮಡಿಕೇರಿ ಮತ್ತು ಚಿಕ್ಕಮಗಳೂರು ಮುಂತಾದ ಕಡೆಗಳಲ್ಲಿ ಈ ಸಿನಿಮಾದ ಶೂಟಿಂಗ್ ನಡೆದಿದೆ. ವಿತರಕ ಎಂ. ರಮೇಶ್ ಅವರು ಈ ಸಿನಿಮಾವನ್ನು ರಿಲೀಸ್ ಮಾಡುತ್ತಿದ್ದಾರೆ.
ಏಪ್ರಿಲ್ ತಿಂಗಳಲ್ಲಿ ಚಿತ್ರವನ್ನು ತೆರೆಕಾಣಿಸಲು ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ. ರವಿ-ಪ್ರಮೋದ್ ಛಾಯಾಗ್ರಹಣ, ಕಿಶೋರ್ ರಾಜ್-ಚಂದ್ರಿಕಾ ನೃತ್ಯ ನಿರ್ದೇಶನ ಈ ಚಿತ್ರಕ್ಕಿದೆ.
ಇದನ್ನೂ ಓದಿ:
‘ನಿಜವಾದ ದೇಶಪ್ರೇಮಿಗಳು ದುಡ್ಡು ಕೊಟ್ಟು RRR ಚಿತ್ರ ನೋಡ್ಬೇಕು’: ಸಿಎಂ ಬೊಮ್ಮಾಯಿ ಬಹಿರಂಗ ಮನವಿ
ಪುನೀತ್ ನಾಮಫಲಕ, ಕನ್ನಡ ಭಾವುಟಕ್ಕೆ ಅವಮಾನ; ಕಿಡಿಗೇಡಿಗಳ ಕೃತ್ಯಕ್ಕೆ ಸಿಸಿಟಿವಿ ದೃಶ್ಯವೇ ಸಾಕ್ಷಿ