ಪುನೀತ್ ನಾಮಫಲಕ, ಕನ್ನಡ ಭಾವುಟಕ್ಕೆ ಅವಮಾನ; ಕಿಡಿಗೇಡಿಗಳ ಕೃತ್ಯಕ್ಕೆ ಸಿಸಿಟಿವಿ ದೃಶ್ಯವೇ ಸಾಕ್ಷಿ
Puneeth Rajkumar: ಕಿಡಿಗೇಡಿಗಳು ಪುನೀತ್ ರಾಜ್ಕುಮಾರ್ ಅವರ ನಾಮಫಲಕವನ್ನು ತೆಗೆದುಕೊಂಡು ಹೋಗಿ ಕೆರೆಯಲ್ಲಿ ಎಸೆದಿದ್ದಾರೆ. ಆ ದೃಶ್ಯ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.
ನಟ ಪುನೀತ್ ರಾಜ್ಕುಮಾರ್ (Puneeth Rajkumar) ಬಗ್ಗೆ ಅಭಿಮಾನಿಗಳು ಅಪಾರವಾದ ಗೌರವ ಇಟ್ಟುಕೊಂಡಿದ್ದಾರೆ. ಅವರು ಮಾಡಿದ ಸಾಮಾಜಿಕ ಕೆಲಸಗಳು ಅನೇಕರಿಗೆ ಮಾದರಿ ಆಗಿದೆ. ಜನಪರ ಕಾರ್ಯಗಳ ಕಾರಣದಿಂದ ಪುನೀತ್ಗೆ ಹಲವರು ದೇವರ ಸ್ಥಾನವನ್ನೇ ನೀಡಿದ್ದಾರೆ. ಮನೆಯಲ್ಲಿ ದೇವರ ಫೋಟೋ ಜೊತೆಗೆ ಪುನೀತ್ ರಾಜ್ಕುಮಾರ್ ಫೋಟೋ (Puneeth Rajkumar Photo) ಇಟ್ಟು ಪೂಜೆ ಮಾಡಿದ ಎಷ್ಟೋ ಉದಾಹರಣೆಗಳು ಇವೆ. ವಿವಿಧ ಊರುಗಳ ಜಾತ್ರೆ, ದೇವರ ಉತ್ಸವಗಳಲ್ಲೂ ಅಪ್ಪು ಫೋಟೋ ರಾರಾಜಿಸುತ್ತದೆ. ಆದರೆ ಕೆಲವು ಕಿಡಿಗೇಡಿಗಳು ಅವರಿಗೆ ಅವಮಾನ ಮಾಡಿದ್ದಾರೆ. ಇದು ಅಪ್ಪು ಅಭಿಮಾನಿಗಳ ಆಕ್ರೋಶಕ್ಕೆ ಕಾರಣ ಆಗಿದೆ. ಕೊಪ್ಪಳ ತಾಲೂಕಿನ ಹುವಿನಾಳ ಗ್ರಾಮದಲ್ಲಿ ಈ ಘಟನೆ ನಡೆದಿದೆ. ‘ಪವರ್ ಸ್ಟಾರ್’ ಪುನೀತ್ ರಾಜ್ಕುಮಾರ್ ಅವರ ಜನ್ಮದಿನದ ಪ್ರಯುಕ್ತ ಗ್ರಾಮದಲ್ಲಿ ಅಪ್ಪು ನಾಮಫಲಕ ಮತ್ತು ಕನ್ನಡ ಭಾವುಟವನ್ನು (Karnataka Flag) ಹಾಕಲಾಗಿತ್ತು. ಕೆಲವು ಕಿಡಿಗೇಡಿಗಳು ಅದನ್ನು ಕಿತ್ತು ಹಾಕಿದ್ದಾರೆ. ಆ ಮೂಲಕ ಕನ್ನಡ ಭಾವುಟಕ್ಕೆ ಮತ್ತು ಪುನೀತ್ ರಾಜ್ಕುಮಾರ್ ಅವರಿಗೆ ಅವಮಾನ ಮಾಡಲಾಗಿದೆ. ಈ ದೃಶ್ಯ ಸಿಸಿಟಿವಿಯಲ್ಲೂ ಸೆರೆಯಾಗಿದೆ.
ಹೂವಿನಾಳ ಗ್ರಾಮದಲ್ಲಿ ಶುಕ್ರವಾರ (ಮಾ.18) ತಡರಾತ್ರಿ ಈ ಘಟನೆ ನಡೆದಿದೆ. ಕಿಡಿಗೇಡಿಗಳು ಪುನೀತ್ ರಾಜ್ಕುಮಾರ್ ಅವರ ನಾಮಫಲಕವನ್ನು ತಗೆದುಕೊಂಡು ಹೋಗಿ ಕೆರೆಯಲ್ಲಿ ಎಸೆದಿದ್ದಾರೆ ಎನ್ನಲಾಗಿದೆ. ನಾಮಫಲಕ ತೆಗೆದುಕೊಂಡು ಹೋಗುತ್ತಿರುವ ದೃಶ್ಯ ಸಿ.ಸಿ. ಕ್ಯಾಮೆರಾದಲ್ಲಿ ಸೆರೆಯಾಗಿದೆ. ಅದನ್ನು ಆಧರಿಸಿ ಪೊಲೀಸರು ತನಿಖೆ ಆರಂಭಿಸಿದ್ದಾರೆ. ಗ್ರಾಪಂ ಸದಸ್ಯ ಪತ್ರಯ್ಯ ಶಾಂತವೀರಯ್ಯ ಸೇರಿ ಇಬ್ಬರ ಬಂಧನ ಮಾಡಲಾಗಿದೆ. ಪುನೀತ್ ರಾಜ್ಕುಮಾರ್ ಅವರಿಗೆ ಅವಮಾನ ಮಾಡಿದ್ದಕ್ಕಾಗಿ ಅಭಿಮಾನಿಗಳು ಗ್ರಾಮದಲ್ಲಿ ಟೈರ್ಗೆ ಬೆಂಕಿ ಹಚ್ಚಿ ಪ್ರತಿಭಟನೆ ನಡೆಸಿದ್ದಾರೆ.
ಘಟನೆ ಸ್ಥಳಕ್ಕೆ ಕೊಪ್ಪಳ ಗ್ರಾಮೀಣ ಪೊಲೀಸರು ಆಗಮಿಸಿದ್ದಾರೆ. ‘ಅಭಿಮಾನಿಗಳು ಉದ್ವೇಗಕ್ಕೆ ಒಳಗಾಗಬಾರದು. ಈ ಕೃತ್ಯವನ್ನು ಎಷ್ಟೇ ಜನರು ಮಾಡಿದ್ದರೂ ಕೂಡ ಅವರನ್ನು ಕಾನೂನಿನ ಪ್ರಕಾರ ಕೆಲವೇ ಗಂಟೆಗಳಲ್ಲಿ ಬಂಧಿಸಲಾಗುವುದು’ ಎಂದು ಪೊಲೀಸರು ಭರವಸೆ ನೀಡಿದ್ದಾರೆ.
ಅನೇಕ ಕಡೆಗಳಲ್ಲಿ ಪುನೀತ್ ರಾಜ್ಕುಮಾರ್ ಅವರ ಮೇಲಿನ ಭಕ್ತಿ-ಭಾವಕ್ಕಾಗಿ ಅಭಿಮಾನಿಗಳು ದೇವಸ್ಥಾನ ಕಟ್ಟಿದ್ದಾರೆ. ಪುನೀತ್ ಅವರ ಪ್ರತಿಭೆ, ಪುತ್ಥಳಿ ನಿರ್ಮಿಸಿ ನಮಿಸುತ್ತಿದ್ದಾರೆ. ಹಲವು ರಸ್ತೆ, ವೃತ್ತ, ಪಾರ್ಕ್ ಮುಂತಾದ ಸಾರ್ವಜನಿಕ ಸ್ಥಳಗಳಿಗೆ ಪುನೀತ್ ರಾಜ್ಕುಮಾರ್ ಅವರ ಹೆಸರು ಇಡಲಾಗಿದೆ. ಪುನೀತ್ ಅವರ ಹೆಸರಿನಲ್ಲಿ ನೂರಾರು ಸಮಾಜಮುಖಿ ಕೆಲಸಗಳು ನಡೆಯುತ್ತಿವೆ. ಕೆಲವೇ ದಿನಗಳ ಹಿಂದೆ ಅಯ್ಯಪ್ಪ ಸ್ವಾಮಿಯ ಅನೇಕ ಭಕ್ತರು ಪುನೀತ್ ರಾಜ್ಕುಮಾರ್ ಅವರ ಫೋಟೋ ಹಿಡಿದು ಶಬರಿಮಲೆ ಯಾತ್ರೆ ಮಾಡಿದ್ದರು. ಇರುಮುಡಿಯ ಜತೆಗೆ ಅಪ್ಪು ಅವರ ಫೋಟೋವನ್ನೂ ಹೊತ್ತುಕೊಂಡು ಅಯ್ಯಪ್ಪನ ದೇವಾಲಯದ 18 ಮೆಟ್ಟಿಲುಗಳನ್ನು ಭಕ್ತರು ಏರಿದ್ದರು. ಅನೇಕ ದಂಪತಿಗಳು ತಮ್ಮ ಮಕ್ಕಳಿಗೆ ಪುನೀತ್ ರಾಜ್ಕುಮಾರ್ ಎಂದು ನಾಮಕರಣ ಮಾಡಿ ಅಭಿಮಾನ ಮೆರೆದಿದ್ದಾರೆ. ಈ ಎಲ್ಲ ಘಟನೆಗಳೆಗಳನ್ನು ನೋಡಿದರೆ ಅಪ್ಪು ಬಗ್ಗೆ ಜನರಿಗೆ ಯಾವ ರೀತಿಯ ಎಮೋಷನ್ ಇದೆ ಎಂಬುದು ಗೊತ್ತಾಗುತ್ತದೆ. ಆದರೆ ಕೊಪ್ಪಳದಲ್ಲಿ ಕಿಡಿಗೇಡಿಗಳು ಪುನೀತ್ ನಾಮಫಲಕ ಮತ್ತು ಕನ್ನಡ ಧ್ವಜಕ್ಕೆ ಅವಮಾನ ಮಾಡಿದ್ದಾರೆ. ಇದರಿಂದ ಅಭಿಮಾನಿಗಳು ಕೋಪಗೊಂಡು ಪ್ರತಿಭಟನೆ ನಡೆಸಿದ್ದಾರೆ.
ಇದನ್ನೂ ಓದಿ:
ಜಗ್ಗೇಶ್ ಜನ್ಮದಿನ: ಪುನೀತ್ ವಿಶ್ ಮಾಡಿದ್ದ ಆ ವಿಡಿಯೋ ಮತ್ತೆ ವೈರಲ್; ಭಾವುಕರಾದ ‘ನವರಸ ನಾಯಕ’
ಶಿರಸಿ ಮಾರಿಕಾಂಬೆ ರಥದ ಬಳಿ ತಲುಪಿತು ಅಪ್ಪು ಫೋಟೋ; ಜಾತ್ರೆಯಲ್ಲಿ ಅಭಿಮಾನ ಮೆರೆದ ಪುನೀತ್ ಫ್ಯಾನ್ಸ್
Published On - 1:33 pm, Sat, 19 March 22