ಶಂಕರ್ ನಾಗ್ ಬಳಿ ಇದ್ದವು ಕರ್ನಾಟಕವನ್ನೇ ಬದಲಿಸಬಲ್ಲ ಐಡಿಯಾಗಳು, ಇಲ್ಲಿವೆ ಆ ಯೋಜನೆಗಳ ಪಟ್ಟಿ

Shankar Nag: ರಾಜ್ಯದ ಜನರ ಜೀವನವನ್ನು ಬದಲಾಯಿಸಬಲ್ಲ ಹಲವು ಯೋಜನೆಗಳು ಶಂಕರ್ ನಾಗ್ ಬಳಿ ಇದ್ದವು, ಅವುಗಳ ಅನುಷ್ಠಾನಕ್ಕೆ ಮುಂಚೆಯೇ ಅವರು ಕಾಲವಾದರು. ಅವರು ಹಾಕಿಕೊಂಡಿದ್ದ ಯೋಜನೆಗಳ ಪಟ್ಟಿ ಇಲ್ಲಿದೆ.

ಶಂಕರ್ ನಾಗ್ ಬಳಿ ಇದ್ದವು ಕರ್ನಾಟಕವನ್ನೇ ಬದಲಿಸಬಲ್ಲ ಐಡಿಯಾಗಳು, ಇಲ್ಲಿವೆ ಆ ಯೋಜನೆಗಳ ಪಟ್ಟಿ
ಶಂಕರ್ ನಾಗ್
Follow us
ಮಂಜುನಾಥ ಸಿ.
|

Updated on:May 26, 2023 | 7:23 PM

ಕನ್ನಡ ನಾಡು ಕಂಡ ಅದ್ಭುತ ಪ್ರತಿಭೆ, ಕ್ರಿಯಾಶೀಲ, ಸಮಾಜದ ಬಗ್ಗೆ ನಿಜ ಕಾಳಜಿ ಇದ್ದ ವ್ಯಕ್ತಿ ಶಂಕರ್ ನಾಗ್ (Shankar Nag). ತಾವಿದ್ದ ವೃತ್ತಿಯಲ್ಲಿ ಮೇರು ಸಾಧನೆ ಮಾಡುವ ಜೊತೆಗೆ ಇಡೀಯ ಸಮಾಜವನ್ನು ಮೇಲೆತ್ತುವ ಕನಸು ಕಂಡು, ಅದಕ್ಕಾಗಿ ಪ್ರಯತ್ನ ಪಟ್ಟಿದ್ದರು ಶಂಕರ್ ನಾಗ್. ಹೊಸ ರೀತಿಯ ಯೋಚನೆಗಳಿಂದ, ತಂತ್ರಜ್ಞಾನದಿಂದ (Technology) ಬದಲಾವಣೆ ಸಾಧ್ಯ ಎಂದು ಅರಿತಿದ್ದ ಶಂಕರ್ ನಾಗ್ ತಮ್ಮ ಸುತ್ತಲಿನ ಪ್ರಪಂಚವನ್ನು ಹತ್ತಿರದಿಂದ ಕಂಡು, ಕೊರತೆಗಳನ್ನು ಗುರುತಿಸಿ ಅದರ ಬದಲಾವಣೆಗೆ ತಂತ್ರಜ್ಞಾನ ಆಧರಿತ ಹಲವು ಯೋಜನೆಗಳನ್ನು ಹಾಕಿಕೊಂಡಿದ್ದರು. ಕೆಲವು ಯೋಜನೆಗಳ ಅನುಷ್ಠಾನ ಮಾಡಿದರು, ಇನ್ನೂ ಹಲವು ಯೋಜನೆಗಳು ಅವರೊಟ್ಟಿಗೆ ಮಣ್ಣಾದವು. ಶಂಕರ್ ನಾಗ್ ಇದ್ದಿದ್ದರೆ ಅಥವಾ ಅವರ ತಲೆಯಲ್ಲಿದ್ದ ಯೋಜನೆಗಳು ಅಂದೇ ಕಾರ್ಯರೂಪಕ್ಕೆ ಬಂದಿದ್ದರೆ ಕರ್ನಾಟಕದ ರೂಪವೇ ಬದಲಾಗಿಬಿಟ್ಟಿರುತ್ತಿತ್ತೇನೋ? ಹಾಗಿದ್ದರೆ ಶಂಕರ್​ನಾಗ್ ಬಳಿ ಅಂಥಹಾ ಐಡಿಯಾಗಳು ಏನಿದ್ದವು? ಇಲ್ಲಿದೆ ಪಟ್ಟಿ.

ಗಡ್ಡಕ್ಕೆ ಬೆಂಕಿ ಬಿದ್ದಾಗ ಬಾವಿ ತೋಡುವಂತೆ, ಬೆಂಗಳೂರಿನಲ್ಲಿ ಟ್ರಾಫಿಕ್ ಮಿತಿಮೀರುವ ಹೊತ್ತಿಗೆ ಮೆಟ್ರೋ ಯೋಜನೆಗಳು ಬಂದವು, ಈಗಲೂ ಹಲವು ಮೆಟ್ರೋ ಲೇನ್​ಗಳ ಕಾಮಗಾರಿ ಚಾಲ್ತಿಯಲ್ಲಿವೆ. ಆದರೆ 80ರ ದಶಕದಲ್ಲಿಯೇ ಶಂಕರ್ ನಾಗ್ ಮೆಟ್ರೋ ರೈಲುಗಳ ಬಗ್ಗೆ ಯೋಚಿಸಿದ್ದರು. ಅದೂ ಬೆಂಗಳೂರಿನಲ್ಲಿ ಅಂಡರ್​ಗ್ರೌಂಡ್​ನಲ್ಲಿ ಮೆಟ್ರೋ ಹಳಿಗಳನ್ನು ಹಾಕಬೇಕು ಎಂಬುದು ಅವರ ಯೋಚನೆಯಾಗಿತ್ತು. 80-90 ರ ದಶಕದಲ್ಲಿಯೇ ಬೆಂಗಳೂರಿಗೆ ಮೆಟ್ರೋ ಬಂದಿದ್ದರೆ ಬೆಂಗಳೂರು ಈಗಿನಿದ್ದಕ್ಕಿಂತಲೂ 10 ಪಟ್ಟು ಹೆಚ್ಚು ಅಭಿವೃದ್ಧಿ ಹೊಂದಿದ ನಗರವಾಗಿರುತ್ತಿತ್ತು ಎಂಬುದರಲ್ಲಿ ಅನುಮಾನವಿಲ್ಲ.

ಆರೋಗ್ಯ ಕ್ಷೇತ್ರದ ಬಗ್ಗೆ ಶಂಕರ್​ನಾಗ್​ಗೆ ಬಹಳ ಆಸಕ್ತಿ ಇತ್ತು. ಸ್ವತಃ ಮಧ್ಯಮವರ್ಗದ ಕುಟುಂಬದವರಾಗಿದ್ದ ಶಂಕರ್​ನಾಗ್​ಗೆ ಆರೋಗ್ಯದ ಮಹತ್ವ ಮತ್ತು ಬಡ-ಮಧ್ಯಮ ವರ್ಗಕ್ಕೆ ಉತ್ತಮ ಆರೋಗ್ಯ ಸೇವೆಗಳು ಮರೀಚಿಕೆ ಎಂಬುದರ ಅರಿವಿತ್ತು. ಹಾಗಾಗಿ ಪ್ರತಿ 50 ಕಿ.ಮೀ ದೂರದಲ್ಲಿ 100 ಬೆಡ್​ಗಳ ಆಸ್ಪತ್ರೆ ಸ್ಥಾಪನೆ ಆಗಬೇಕೆಂಬ ಕನಸು ಕಂಡಿದ್ದರು. ಮಾತ್ರವಲ್ಲದೆ ಪ್ರತಿ 50 ಕಿಮೀಗೆ ಯಾರು ಭೂಮಿ ಕೊಡುತ್ತಾರೆ, ಎಷ್ಟು ಬೆಲೆ ಆಗಬಹುದು, ಯೋಜನೆಯ ಒಟ್ಟು ಅಂದಾಜು ವೆಚ್ಚ ಎಷ್ಟು ಎಂದು ಅರಿಯಲು ಸರ್ವೆಗಾಗಿ ವ್ಯಕ್ತಿಯೊಬ್ಬರನ್ನು ನೇಮಿಸಿದ್ದರು. ಈ ವಿಷಯವನ್ನು ಅವರ ಆತ್ಮೀಯ ಗೆಳೆಯ ರಮೇಶ್ ಭಟ್ ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದಾರೆ.

ಇದನ್ನೂ ಓದಿ:‘ಪ್ಯಾನ್ ಇಂಡಿಯಾ ಸಿನಿಮಾ ಬಗ್ಗೆ ಶಂಕರ್ ನಾಗ್ ಆಗಲೇ ಆಲೋಚಿಸಿದ್ದರು’; ಮಾಸ್ಟರ್ ಮಂಜುನಾಥ್  

ಆರೋಗ್ಯ ಕ್ಷೇತ್ರದಲ್ಲಿ ವೇಗದ ಅವಶ್ಯಕತೆಯನ್ನು ಮೊದಲೇ ಅರಿತಿದ್ದ ಶಂಕರ್ ನಾಗ್ ಏರ್ ಆಂಬುಲೆನ್ಸ್​ಗಳ ಬಗ್ಗೆ 80ರ ದಶಕದಲ್ಲಿ ಮಾತನಾಡಿದ್ದರು. ನಗರದ ಆಸ್ಪತ್ರೆಗಳ ಮುಂದೆ ಏರ್ ಆಂಬುಲೆನ್ಸ್​ಗಳಿರಬೇಕು ಎಂದುಕೊಂಡಿದ್ದರು. ಮಾತ್ರವಲ್ಲದೆ ಮೆಡಿಕಲ್ ನೆಟ್​ವರ್ಕ್ ಸ್ಥಾಪಿಸಬೇಕು, ಯಾವುದೇ ರೋಗಿಯು ಚಿಕಿತ್ಸೆಗಾಗಿ ದೂರ ಪ್ರಯಾಣಿಸುವ ಅವಶ್ಯಕತೆ ಬಾರದಂತೆ ನೋಡಿಕೊಳ್ಳಬಹುದು ಎಂದು ಶಂಕರ್​ನಾಗ್ ಹೇಳುತ್ತಿದ್ದ ಮಾತುಗಳನ್ನು ಸಂದರ್ಶನವೊಂದರಲ್ಲಿ ನೆನಪು ಮಾಡಿಕೊಂಡಿದ್ದಾರೆ ಅವರ ಪತ್ನಿ ಅರುಂಧತಿ ನಾಗ್.

ಬಡವರು, ಮಧ್ಯಮವರ್ಗದವರಿಗೆ ಸ್ವಂತ ಮನೆ ಎಂಬುದು ಇಂದಿಗೂ ದೂರದ ಕನಸು. ಆದರೆ ರಾಜ್ಯದ ಕಡುಬಡವರೂ ಸ್ವಂತ ಸೂರು ಹೊಂದಬಹುದಾದ ಅದ್ಭುತ ಯೋಜನೆಯನ್ನು ಶಂಕರ್ ನಾಗ್ ಅಂದೇ ತಯಾರು ಮಾಡಿಕೊಟ್ಟುಕೊಂಡು ಅದರ ಪ್ರಾತ್ಯಕ್ಷಿತೆಯನ್ನು ನೀಡಿದ್ದರು. ಶಂಕರ್ ನಾಗ್ ಅವರ ಕಿರಿಯ ಮಿತ್ರ ಸಿಹಿ-ಕಹಿ ಚಂದ್ರು, ವೀಕೆಂಡ್ ವಿತ್ ರಮೇಶ್​ಗೆ ಬಂದಾಗ ಈ ಆಸಕ್ತಿಕರ ವಿಷಯ ಹಂಚಿಕೊಂಡಿದ್ದರು. ಜರ್ಮನ್​ ತಂತ್ರಜ್ಞಾನ ಬಳಸಿ ರೆಡಿಮೇಡ್ ಬ್ಲಾಕ್ ಮಾದರಿಯಲ್ಲಿ ಸಿಂಗಲ್ ಬೆಡ್​ರೂಂನ ಮನೆಯನ್ನು ಕೇವಲ 15,000 ರುಪಾಯಿಗಳಲ್ಲಿ ಎರಡೇ ದಿನದಲ್ಲಿ ನಿರ್ಮಿಸಿದ್ದರಂತೆ ಶಂಕರ್​ನಾಗ್. ಆ ರೀತಿಯ ಮನೆಗಳನ್ನು ನಿರ್ಮಿಸುವವರಿಗೆ ಸರ್ಕಾರದಿಂದ 10,000 ರೂಪಾಯಿ ಸಬ್ಸಿಡಿ ಕೊಡಿಸಲು ಪ್ರಯತ್ನಿಸುತ್ತಿದ್ದರಂತೆ. ಆದರೆ ಕನಸು ನನಸಾಗುವ ಮುನ್ನವೇ ಅವರೇ ಹೋಗಿಬಿಟ್ಟರು. ಆ ಮೂಲಕ ಕೋಟ್ಯಂತರ ಜನರಿಗೆ ಮನೆ ಹೊಂದುವ ಅವಕಾಶ ತಪ್ಪಿಹೋಯ್ತು.

ಶಂಕರ್​ನಾಗ್​ರ ಮತ್ತೊಂದು ಮಹತ್ವದ ಯೋಜನೆಯೆಂದರೆ ದೂಳಿನಿಂದ ಇಟ್ಟಿಗೆ ನಿರ್ಮಿಸುವುದು ಮತ್ತು ಅತ್ಯಂತ ಕಡಿಮೆ ಬೆಲೆಗೆ ಆ ಇಟ್ಟಿಗೆಗಳನ್ನು ಮಾರಾಟ ಮಾಡುವುದು. ಅವರ ಪತ್ನಿ ಅರುಂಧತಿ ನಾಗ್ ಹೇಳಿರುವಂತೆ, ಥರ್ಮಲ್​ ಪ್ಲಾಂಟ್​ಗಳಿಂದ ಬಹಳ ದೂಳು ಹೊರಬಂದು ಅದರಿಂದ ಬೇರೆಯವರಿಗೂ ಸಮಸ್ಯೆ ಆಗುತ್ತಿತ್ತಂತೆ. ಆಗ ಶಂಕರ್ ನಾಗ್, ಥರ್ಮಲ್​ ಪ್ಲಾಂಟ್​ ಪಕ್ಕದಲ್ಲಿಯೇ ಇಟ್ಟಿಗೆ ಕಾರ್ಖಾನೆ ಕಟ್ಟಿ, ಪ್ಲಾಂಟ್​ನಿಂದ ಹೊರಬರುವ ದೂಳನ್ನು ಸಂಗ್ರಹಿಸಿ ಅದರಿಂದ ಇಟ್ಟಿಗೆ ನಿರ್ಮಿಸುವ ಯೋಜನೆ ಹಾಕಿದ್ದರಂತೆ. ತ್ಯಾಜ್ಯದಿಂದ ನಿರ್ಮಾಣವಾದ ಆ ಇಟ್ಟಿಗೆಗಳನ್ನು ಕೇವಲ 40 ಪೈಸೆಗೆ ಒಂದರಂತೆ ಮಾರಾಟ ಮಾಡುವುದು ಶಂಕರ್ ನಾಗ್ ಯೋಜನೆಯಾಗಿತ್ತು. ಆದರೆ ಅದೂ ಸಹ ಈಡೇರಲಿಲ್ಲ.

ನಂದಿಬೆಟ್ಟಕ್ಕೆ ರೋಪ್​ ವೇ ಮಾಡುವುದು, ಕರ್ನಾಟಕದಲ್ಲಿ ಬೃಹತ್ ರಂಗಮಂದಿರ ನಿರ್ಮಾಣ ಮಾಡುವುದು, ಅತ್ಯಾಧುನಿಕ ತಂತ್ರಜ್ಞಾನ ಹೊಂದಿರುವ ಫಿಲಂ ಸಿಟಿ ನಿರ್ಮಾಣ ಮಾಡುವುದು, ಸಂಕೇತ್ ಎಲೆಟ್ರಿಕ್ಸ್ ಮೂಲಕ ಬಡವರ, ಕೃಷಿಕರ ದಿನನಿತ್ಯದ ಕಾರ್ಯಗಳಲ್ಲಿ ಶ್ರಮ ತಗ್ಗಿಸಲು ಯಂತ್ರಗಳನ್ನು ನಿರ್ಮಿಸುವುದು ಅವರ ಆಸೆಯಾಗಿತ್ತು. ಸಂಕೇತ್ ಮೂಲಕ ಸ್ಟುಡಿಯೋ ನಿರ್ಮಾಣ ಮಾಡಿ ರಾಜ್ಯದ ಸಂಗೀತಗಾರರು ಇಲ್ಲಿಯೇ ರೆಕಾರ್ಡಿಂಗ್ ಮಾಡುವಂತೆ ಮಾಡಿ ಸ್ಥಳೀಯ ಪ್ರತಿಭೆಗಳು ಬೆಳೆಯಲು ಅನುವು ಮಾಡಿಕೊಟ್ಟರು ಶಂಕರ್​ನಾಗ್. ರಾಜ್ಯದಲ್ಲಿ ಆರ್ಕೆಸ್ಟ್ರಾ ಸಂಸ್ಕೃತಿ ಆರಂಭವಾಗಲು ಶಂಕರ್ ನಾಗ್ ಅವರೇ ಕಾರಣ ಎಂಬ ಮಾತು ಸಹ ಇವೆ. ಕಂಟ್ರಿ ಕ್ಲಬ್ ಸ್ಥಾಪಿಸಿದರು. ಇನ್ನು ಚಿತ್ರರಂಗದಲ್ಲಿ ಅವರ ಸಾಧನೆಯ ಬಗ್ಗೆ ವಿಶೇಷವಾಗಿ ಹೇಳಬೇಕಾದ ಅವಶ್ಯಕತೆ ಇಲ್ಲ. ಅಂಥಹಾ ಮಹಾನ್ ಶಂಕರ್ ನಾಗ್ ಬಹುಬೇಗನೆ ಎಲ್ಲರನ್ನೂ ಬಿಟ್ಟು ಹೊರಟುಬಿಟ್ಟರು. ಅವರ ಜೊತೆಗೆ ಅವರ ಐಡಿಯಾಗಳು ಮಣ್ಣಾದವು, ಆ ಯೋಜನೆಗಳಿಂದ ಅದೆಷ್ಟು ಕೋಟಿ ಜನರ ಜೀವನ ಬೆಳಕಾಗಬಹುದಿತ್ತೊ ಏನೋ?

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 6:57 pm, Fri, 26 May 23

ಹಿಮಾಲಯದಲ್ಲಿ ಸಿಕ್ಕಿ ಬಿದ್ದ ಕಂದು ಕರಡಿಯನ್ನು ರಕ್ಷಿಸಿದ ಭಾರತೀಯ ಸೈನಿಕರು
ಹಿಮಾಲಯದಲ್ಲಿ ಸಿಕ್ಕಿ ಬಿದ್ದ ಕಂದು ಕರಡಿಯನ್ನು ರಕ್ಷಿಸಿದ ಭಾರತೀಯ ಸೈನಿಕರು
ಮಾತಿಗೆ ಅಡ್ಡಿಪಡಿಸುತ್ತಿದ್ದ ರಾಯರೆಡ್ಡಿಯವರಿಗೆ ಸುಮ್ಮನಿರಲು ಹೇಳಿದ ಯತ್ನಾಳ್
ಮಾತಿಗೆ ಅಡ್ಡಿಪಡಿಸುತ್ತಿದ್ದ ರಾಯರೆಡ್ಡಿಯವರಿಗೆ ಸುಮ್ಮನಿರಲು ಹೇಳಿದ ಯತ್ನಾಳ್
ಮಂತ್ರಿಗಳಿಗೆ ಪ್ರಶ್ನೆ ಕೇಳಿದರೆ ಕಾಂಗ್ರೆಸ್ ಶಾಸಕರು ನಿಲ್ಲೋದ್ಯಾಕೆ? ಯತ್ನಾ
ಮಂತ್ರಿಗಳಿಗೆ ಪ್ರಶ್ನೆ ಕೇಳಿದರೆ ಕಾಂಗ್ರೆಸ್ ಶಾಸಕರು ನಿಲ್ಲೋದ್ಯಾಕೆ? ಯತ್ನಾ
ವಿರೋಧಫಕ್ಷದವರು ಸಭಾತ್ಯಾಗ ಮಾಡೋದು ವಾಡಿಕೆ, ಆದರೆ ಇಲ್ಲಿ ಸಿಎಂ!
ವಿರೋಧಫಕ್ಷದವರು ಸಭಾತ್ಯಾಗ ಮಾಡೋದು ವಾಡಿಕೆ, ಆದರೆ ಇಲ್ಲಿ ಸಿಎಂ!
ಎಲ್ಲರ ಆಟಕ್ಕೆ ಅಡ್ಡಗಾಲು ಹಾಕಿದ ಮಂಜು, ಗೌತಮಿ ಫುಲ್ ಗರಂ
ಎಲ್ಲರ ಆಟಕ್ಕೆ ಅಡ್ಡಗಾಲು ಹಾಕಿದ ಮಂಜು, ಗೌತಮಿ ಫುಲ್ ಗರಂ
ಸಿಎಂ ಕರೆದಿರುವ ವಿಷಯ ಹೇಳಿದಾಗ ಸಿಸಿ ಪಾಟೀಲ್ ಕುಂಟುನೆಪ ಹೇಳಿದರು: ಸಚಿವೆ
ಸಿಎಂ ಕರೆದಿರುವ ವಿಷಯ ಹೇಳಿದಾಗ ಸಿಸಿ ಪಾಟೀಲ್ ಕುಂಟುನೆಪ ಹೇಳಿದರು: ಸಚಿವೆ
ಸ್ವಾಮೀಜಿ ಬಿಜೆಪಿಯವರಾ ಅಂತ ಕೇಳುತ್ತಿರೋದು ಹಾಸ್ಯಾಸ್ಪದ: ಅಶೋಕ
ಸ್ವಾಮೀಜಿ ಬಿಜೆಪಿಯವರಾ ಅಂತ ಕೇಳುತ್ತಿರೋದು ಹಾಸ್ಯಾಸ್ಪದ: ಅಶೋಕ
ಸಾಕಿದ ಮಾವುತ ಬಿಟ್ಟು ಹೊರಟಾಗ ಓಡೋಡಿ ಹೋಗಿ ಎಳೆದು ತಂದ ಆನೆ ಮರಿ
ಸಾಕಿದ ಮಾವುತ ಬಿಟ್ಟು ಹೊರಟಾಗ ಓಡೋಡಿ ಹೋಗಿ ಎಳೆದು ತಂದ ಆನೆ ಮರಿ
ಕೃಷ್ಣ ಅವರ ಅಂತ್ಯಕ್ರಿಯೆ ಸರ್ಕಾರ ನಡೆಸಿಕೊಟ್ಟ ರೀತಿ ಅಭಿನಂದನೀಯ: ವಿಶ್ವನಾಥ್
ಕೃಷ್ಣ ಅವರ ಅಂತ್ಯಕ್ರಿಯೆ ಸರ್ಕಾರ ನಡೆಸಿಕೊಟ್ಟ ರೀತಿ ಅಭಿನಂದನೀಯ: ವಿಶ್ವನಾಥ್
Video: ಹೆದ್ದಾರಿಯಲ್ಲಿ ವಾಹನಗಳ ಮೇಲೆ ಅಪ್ಪಳಿಸಿದ ವಿಮಾನ
Video: ಹೆದ್ದಾರಿಯಲ್ಲಿ ವಾಹನಗಳ ಮೇಲೆ ಅಪ್ಪಳಿಸಿದ ವಿಮಾನ