Shankar Nag Birthday: 23ನೇ ವಯಸ್ಸಿಗೆ ಬಣ್ಣದ ಲೋಕದ ನಂಟು; ಶಂಕರ್ ನಾಗ್ ಬದುಕಿದ ರೀತಿಯೇ ವಿಸ್ಮಯ
ಕೆಲವು ಚಿತ್ರಗಳಲ್ಲಿ ನಟಿಸಿದ ನಂತರ ಶಂಕರ್ ನಾಗ್ ಅವರು ನಿರ್ದೇಶನ ಹಾಗೂ ನಿರ್ಮಾಣದತ್ತ ವಾಲಿದರು. ‘ಮಿಂಚಿನ ಓಟ’ ಸಿನಿಮಾವನ್ನು ಅವರು ಮೊದಲ ಬಾರಿಗೆ ನಿರ್ದೇಶನ, ನಿರ್ಮಾಣ ಮಾಡಿದರು. ಈ ಚಿತ್ರ ಸೂಪರ್ ಹಿಟ್ ಆಯಿತು.
ಶಂಕರ್ ನಾಗ್ (Shankar Nag) ಅವರು ಬದುಕಿದ್ದರೆ ಇಂದು (ನವೆಂಬರ್ 9) 68ನೇ ವರ್ಷದ ಜನ್ಮ ದಿನ ಆಚರಿಸಿಕೊಳ್ಳುತ್ತಿದ್ದರು. ಸಣ್ಣ ವಯಸ್ಸಿಗೆ ಬಣ್ಣದ ಲೋಕದ ನಂಟು ಬೆಳೆಸಿಕೊಂಡ ಅವರು ಕೆಲವೇ ವರ್ಷಗಳಲ್ಲಿ ಸಾಕಷ್ಟು ಸಾಧನೆ ಮಾಡಿ ಹೋದರು. ನಟನೆ, ನಿರ್ದೇಶನದ ಜತೆಗೆ ಚಿತ್ರರಂಗದ ಏಳ್ಗೆ ಹಾಗೂ ಕರ್ನಾಟಕದ (Karntaka) ಅಭಿವೃದ್ಧಿ ಬಗ್ಗೆ ಅವರು ಕನಸು ಕಂಡಿದ್ದರು. ಅವರನ್ನು ಕರ್ನಾಟಕದ ಜನತೆ ಈಗಲೂ ಮಿಸ್ ಮಾಡಿಕೊಳ್ಳುತ್ತಿದೆ. ಕನ್ನಡ ನಾಡಿನ ಜನತೆಗೆ ಶಂಕ್ರಣ್ಣ ಸಾಕಷ್ಟು ವಿಚಾರಗಳಿಂದ ಇಷ್ಟ ಆಗುತ್ತಾರೆ.
ಶಂಕರ್ ನಾಗ್ ಜನಿಸಿದ್ದು 1954ರಲ್ಲಿ. ಉತ್ತರ ಕನ್ನಡದ ಹೊನ್ನಾವರದಲ್ಲಿ ಅವರ ಜನನವಾಯಿತು. ಮರಾಠಿ ನಾಟಕಗಳಿಂದ ಶಂಕರ್ನಾಗ್ ಪ್ರಭಾವಕ್ಕೆ ಒಳಗಾಗಿದ್ದರು. ‘ಒಂದಾನೊಂದು ಕಾಲದಲ್ಲಿ’ ಸಿನಿಮಾ ಮೂಲಕ ಕನ್ನಡ ಚಿತ್ರರಂಗಕ್ಕೆ ಕಾಲಿಟ್ಟು, ಮುಂದೆ ಹಲವು ಪ್ರಯೋಗಗಳನ್ನು ಮಾಡಿದರು.
ಕೆಲವು ಚಿತ್ರಗಳಲ್ಲಿ ನಟಿಸಿದ ನಂತರ ಶಂಕರ್ ನಾಗ್ ಅವರು ನಿರ್ದೇಶನ ಹಾಗೂ ನಿರ್ಮಾಣದತ್ತ ವಾಲಿದರು. ‘ಮಿಂಚಿನ ಓಟ’ ಸಿನಿಮಾವನ್ನು ಅವರು ಮೊದಲ ಬಾರಿಗೆ ನಿರ್ದೇಶನ, ನಿರ್ಮಾಣ ಮಾಡಿದರು. ಈ ಚಿತ್ರ ಸೂಪರ್ ಹಿಟ್ ಆಯಿತು. ‘ಜನ್ಮ ಜನ್ಮದ ಅನುಬಂಧ’, ‘ಗೀತಾ’ ಮೊದಲಾದ ಚಿತ್ರಗಳನ್ನು ಅವರು ನಿರ್ದೇಶನ ಮಾಡಿ ಸೈ ಎನಿಸಿಕೊಂಡರು. ನಿರ್ಮಾಣದಲ್ಲೂ ಅವರು ತೊಡಗಿಕೊಂಡಿದ್ದರು.
‘ಒಂದು ಮುತ್ತಿನ ಕಥೆ’ ಸಿನಿಮಾದಲ್ಲಿ ಅಂಡರ್ವಾಟರ್ ಶೂಟ್ ಮಾಡಲಾಗಿತ್ತು. ಇದಕ್ಕಾಗಿ ಶಂಕರ್ ನಾಗ್ ಸಾಕಷ್ಟು ಶ್ರಮ ಹಾಕಿದ್ದರು. 1990ರ ಸಮಯದಲ್ಲಿ ವಿದೇಶಿ ಸಿನಿಮಾಗಳನ್ನು ನೋಡಿ ಅಲ್ಲಿನ ತಂತ್ರಜ್ಞಾನವನ್ನು ಕನ್ನಡ ಸಿನಿಮಾಗೆ ತರಬೇಕು ಎಂದು ಶಂಕರ್ನಾಗ್ ಆಲೋಚಿಸಿದ್ದರು. ಇಟಲಿಗೆ ತೆರಳಿ ಸಿನಿಮೋತ್ಸವದಲ್ಲಿ ಭಾಗಿ ಆಗಿದ್ದರು. ನಂತರ ಇಂಗ್ಲೆಂಡ್ಗೆ ತೆರಳಿ ಟೆಕ್ನಾಲಜಿ ಬಗ್ಗೆ ಅಲ್ಲಿನ ಕಂಪನಿಗಳ ಜತೆ ಮಾತನಾಡಿದ್ದರು. ಪ್ಯಾನ್ ಇಂಡಿಯಾ ಸಿನಿಮಾ ಬಗ್ಗೆ ಅವರು ಆಗಲೇ ಆಲೋಚಿಸಿದ್ದರು. ಶಂಕರ್ ನಾಗ್ ಅವರು ಮೆಟ್ರೋವನ್ನು ಕರ್ನಾಟಕಕ್ಕೆ ತರಬೇಕು ಎಂದು ಆಗಲೇ ಆಲೋಚಿಸಿದ್ದರು.
ಇದನ್ನೂ ಓದಿ: ‘ಪ್ಯಾನ್ ಇಂಡಿಯಾ ಸಿನಿಮಾ ಬಗ್ಗೆ ಶಂಕರ್ ನಾಗ್ ಆಗಲೇ ಆಲೋಚಿಸಿದ್ದರು’; ಮಾಸ್ಟರ್ ಮಂಜುನಾಥ್
‘ಮಾಲ್ಗುಡಿ ಡೇಸ್’ ಹೆಸರಿನ ಟಿವಿ ಸೀರೀಸ್ ಅನ್ನು ಶಂಕರ್ ನಾಗ್ ನಿರ್ದೇಶನ ಮಾಡಿದರು. ನಾಲ್ಕು ಸೀಸನ್ಗಳ ಪೈಕಿ ಮೊದಲ ಮೂರು ಸೀಸನ್ಗೆ ಅವರೇ ನೇತೃತ್ವ ವಹಿಸಿದ್ದರು. ಈ ಸೀರಿಸ್ ಸೂಪರ್ ಹಿಟ್ ಆಯಿತು. ಇದು ಶಂಕರ್ ನಾಗ್ ಅವರ ನಿರ್ದೇಶನದಲ್ಲಿ ಮೂಡಿ ಬಂದ ಮೊದಲ ಹಾಗೂ ಕೊನೆಯ ಧಾರಾವಾಹಿ. ಶಂಕರ್ ನಾಗ್ ಅವರನ್ನು ಅರಸಿ ಸಾಕಷ್ಟು ಪ್ರಶಸ್ತಿಗಳು ಬಂದಿವೆ.