‘ಕಾಂತಾರ’ ಶೂಟಿಂಗ್ ವೇಳೆ ಅವಘಡ, ಚಿತ್ರತಂಡಕ್ಕೆ ನೊಟೀಸ್
Kantara Chapter 1: ರಿಷಬ್ ಶೆಟ್ಟಿ ನಟಿಸಿ, ನಿರ್ದೇಶನ ಮಾಡುತ್ತಿರುವ ಕಾಂತಾರ: ಚಾಪ್ಟರ್ 1 ಸಿನಿಮಾ ಶೂಟಿಂಗ್ ಸೆಟ್ನಲ್ಲಿ ಭಾರಿ ಅವಘಡ ಸಂಭವಿಸಿದೆ. ಆದರೆ ಯಾವುದೇ ಪ್ರಾಣಹಾನಿ ಆಗಿಲ್ಲ ಎನ್ನಲಾಗುತ್ತಿದೆ. ಶೂಟಿಂಗ್ ವೇಳೆ ದೋಣಿಯೊಂದು ಮುಗುಚಿಕೊಂಡಿದೆ. ಘಟನೆಯನ್ನು ಪೊಲೀಸರು ಹಾಗೂ ಜಿಲ್ಲಾಡಳಿತ ಗಂಭೀರವಾಗಿ ಪರಿಗಣಿಸಿದ್ದು, ಇದೀಗ ಚಿತ್ರತಂಡಕ್ಕೆ ನೊಟೀಸ್ ನೀಡಲು ಮುಂದಾಗಿದೆ.

ರಿಷಬ್ ಶೆಟ್ಟಿ ನಟಿಸಿ, ನಿರ್ದೇಶನ ಮಾಡುತ್ತಿರುವ ‘ಕಾಂತಾರ: ಚಾಪ್ಟರ್ 1’ ಸಿನಿಮಾದ ಚಿತ್ರೀಕರಣದ ವೇಳೆ ಭಾರಿ ಅವಘಡ ಸಂಭವಿಸಿದೆ. ಶೂಟಿಂಗ್ ನಡೆಯುತ್ತಿದ್ದ ದೋಣಿ ನೀರಿನಲ್ಲಿ ಮುಗುಚಿಕೊಂಡಿದೆ. ಆದರೆ ಅದೃಷ್ಟವಶಾತ್ ಯಾವುದೇ ಪ್ರಾಣ ಹಾನಿ ಸಂಭಿವಿಸಿಲ್ಲ ಎಂದು ಚಿತ್ರತಂಡ ಹೇಳಿದೆ. ದೋಣಿ ಮುಗಿಚುವುದು ಸಾಮಾನ್ಯ ಅವಘಡ ಅಲ್ಲ. ಸ್ವಲ್ಪ ಅದೃಷ್ಟ ಕೈಕೊಟ್ಟಿದ್ದರೂ ಹತ್ತಾರು ಮಂದಿ ಜೀವ ಕಳೆದುಕೊಳ್ಳಬಹುದಾಗಿತ್ತು. ಆದರೆ ಅದೃಷ್ಟವಶಾತ್ ಅಂತಹದ್ದು ನಡೆದಂತಿಲ್ಲ. ಆದರೆ ಈ ವಿಷಯವನ್ನು ಜಿಲ್ಲಾಡಳಿತ ಗಂಭೀರವಾಗಿ ಪರಿಗಣಿಸಿದ್ದು, ಚಿತ್ರತಂಡಕ್ಕೆ ನೊಟೀಸ್ ನೀಡಲು ಮುಂದಾಗಿದೆ.
ನಿನ್ನೆ (ಜೂನ್ 14)ರ ಸಂಜೆ ಶಿವಮೊಗ್ಗ ಜಿಲ್ಲೆಯ ಮಾಣಿ ಜಲಾಶಯದ ಬಳಿ ಚಿತ್ರೀಕರಣ ನಡೆಸುವಾಗ ದೋಣಿ ಮುಗುಚಿದೆ ಎನ್ನಲಾಗುತ್ತಿದೆ. ದೋಣಿ ಮುಗುಚಿದ ವೇಳೆ ದೋಣಿಯಲ್ಲಿ 30 ಮಂದಿ ಇದ್ದರಂತೆ. ಎಲ್ಲರೂ ಈಜಿಕೊಂಡು ದಡ ಸೇರಿದ್ದಾರೆ. ಕೆಲವರಿಗೆ ಗಾಯಗಳಾಗಿದ್ದು, ಗಾಯಗೊಂಡವರನ್ನು ಶಿಕಾರಿಪುರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಘಟನೆ ಬೆಳಕಿಗೆ ಬಂದ ಬಳಿಕ ಸ್ಪಷ್ಟನೆ ನೀಡಿರುವ ನಿರ್ಮಾಣ ಸಂಸ್ಥೆ ಹೊಂಬಾಳೆಯ ಎಕ್ಸಿಕ್ಯೂಟಿವ್ ನಿರ್ಮಾಪಕ ಆದರ್ಶ್, ಯಾವುದೇ ಸಾವು-ನೋವು ಸಂಭವಿಸಿಲ್ಲ, ನಾವು ಎಲ್ಲ ಎಚ್ಚರಿಕೆ ತೆಗೆದುಕೊಂಡಿದ್ದೇವು ಎಂದಿದ್ದಾರೆ.
ಇದೀಗ ಶಿವಮೊಗ್ಗ ಜಿಲ್ಲಾಧಿಕಾರಿ, ಘಟನೆಯನ್ನು ಗಂಭೀರವಾಗಿ ಪರಿಗಣಿಸಿದ್ದು, ಚಿತ್ರತಂಡ, ಶೂಟಿಂಗ್ಗೆ ಎಲ್ಲ ರೀತಿಯ ಪರವಾನಗಿಗಳನ್ನು ತೆಗೆದುಕೊಂಡಿದೆಯೇ, ಚಿತ್ರೀಕರಣದ ವೇಳೆ ಅಗತ್ಯ ಭದ್ರತಾ ಎಚ್ಚರಿಕೆಗಳನ್ನು ವಹಿಸಿದೆಯೇ ಎಂದು ಪರೀಕ್ಷಿಸಲು ಮುಂದಾಗಿದ್ದಾರೆ. ಈ ಕುರಿತು ಟಿವಿ9 ಗೆ ಮಾಹಿತಿ ನೀಡಿದ ಜಿಲ್ಲಾಧಿಕಾರಿ ಡಾ.ಗುರುದತ್ತ ಹೆಗಡೆ,‘ಸ್ಥಳೀಯ ಆಡಳಿತದಿಂದ ಕಾಂತರ ಶೂಟಿಂಗ್ ಅನುಮತಿ ಪಡೆದಿಲ್ಲ, ಎಲ್ಲಾ ಅನುಮತಿಯನ್ನ ಬೆಂಗಳೂರಿನಿಂದಲೇ ಪಡೆದಿರುವುದಾಗಿ ಪಡೆದಿರುವುದಾಗಿ ಚಿತ್ರ ತಂಡ ಹೇಳಿದೆ. ಈ ಹಿನ್ನಲೆಯಲ್ಲಿ ಚಿತ್ರತಂಡಕ್ಕೆ ನೋಟೀಸ್ ಜಾರಿ ಮಾಡಿ ಶೂಟಿಂಗ್ ನ ಅನುಮತಿಯ ಪರವಾನಗಿಯನ್ನ ಪರಿಶೀಲಿಸಲಾಗುವುದು’ ಎಂದಿದ್ದಾರೆ.
ಇದನ್ನೂ ಓದಿ:‘ಕಾಂತಾರ’ ದೋಣಿ ಅವಘಡ, ಹೊಂಬಾಳೆ ಕಾರ್ಯಕಾರಿ ನಿರ್ಮಾಪಕ ಸ್ಪಷ್ಟನೆ
‘ಘಟನೆ ಕುರಿತು ಈಗಾಗಲೇ ನಗರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ. ಶೂಟಿಂಗ್ ಮಾಡುವುದಕ್ಕೆ ನಮ್ಮದು ಯಾವುದೇ ಅಭ್ಯಂತರವಿಲ್ಲ, ಶಿವಮೊಗ್ಗ ಪ್ರವಾಸೋದ್ಯಮ ಕ್ಕೆ ಶೂಟಿಂಗ್ ನಿಂದ ಅನುಕೂಲ ಆಗುತ್ತದೆ. ಆದರೆ ಶೂಟಿಂಗ್ ಮಾಡುವ ಸಂದರ್ಭದಲ್ಲಿ ಎಲ್ಲ ಸುರಕ್ಷಿತ ಕ್ರಮ ತೆಗೆದುಕೊಳ್ಳಬೇಕಿದೆ. ‘ಕಾಂತಾರ’ ಚಿತ್ರತಂಡ ಎಲ್ಲ ಸುರಕ್ಷಿತ ಕ್ರಮಗಳನ್ನು ತೆಗೆದುಕೊಂಡಿತ್ತೆ ಎಂಬುದನ್ನು ಪರಿಶೀಲಿಸಬೇಕಿದ್ದು, ಇದೀಗ ಹೊಸನಗರ ತಹಸೀಲ್ದಾರ ರಶ್ಮಿ ಮೂಲಕ ನೋಟೀಸ್ ನೀಡುವಂತೆ ಸೂಚನೆ ನೀಡಿರುವುದಾಗಿ ಜಿಲ್ಲಾಧಿಕಾರಿಗಳು ಹೇಳಿದ್ದಾರೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ




