Shiva Rajkumar: ಶಿವರಾಜ್ ಕುಮಾರ್​ಗಾಗಿ ಕರ್ನಾಟಕಕ್ಕೆ ಬಂದ ತಮಿಳು ನಿರ್ದೇಶಕ

|

Updated on: Jul 25, 2024 | 12:08 PM

Shiva Rajkumar: ಶಿವರಾಜ್ ಕುಮಾರ್ ಈಗಾಗಲೇ ಹಲವಾರು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಇದರ ನಡುವೆ ತಮಿಳು ನಿರ್ದೇಶಕರೊಬ್ಬರು ಶಿವಣ್ಣನಿಗಾಗಿ ಹೊಸ ಕತೆಯೊಂದನ್ನು ತಂದಿದ್ದು, ಸಿನಿಮಾದ ಚಿತ್ರೀಕರಣ ಶೀಘ್ರವೇ ಪ್ರಾರಂಭ ಆಗಲಿದೆ.

Shiva Rajkumar: ಶಿವರಾಜ್ ಕುಮಾರ್​ಗಾಗಿ ಕರ್ನಾಟಕಕ್ಕೆ ಬಂದ ತಮಿಳು ನಿರ್ದೇಶಕ
ಶಿವರಾಜ್ ಕುಮಾರ್
Follow us on

ವೈನ್​ ಹಳೆಯದಾದಷ್ಟು ರುಚಿ ಹೆಚ್ಚು ಮೌಲ್ಯವೂ ಹೆಚ್ಚು ಎಂಬ ಗಾದೆಯಿದೆ, ಶಿವರಾಜ್ ಕುಮಾರ್ ವಿಷಯದಲ್ಲಿಯೂ ಹೀಗೆಯೇ ಆಗಿದೆ. ವರ್ಷಗಳು ಕಳೆದಂತೆ ಶಿವರಾಜ್ ಕುಮಾರ್ ಅವರಿಗೆ ಬೇಡಿಕೆ ಹೆಚ್ಚಾಗುತ್ತಿದೆ. ಅವರಿಗಾಗಿ ಭಿನ್ನ-ಭಿನ್ನ ಕತೆಗಳನ್ನು ಮಾಡಿಕೊಂಡು ಹೊಸ ನಿರ್ದೇಶಕರು ಕಾಲ್​ಶೀಟ್​ಗಾಗಿ ಕಾಯುತ್ತಿದ್ದಾರೆ. ಹಲವು ಹೊಸ ತಲೆಮಾರಿನ ನಿರ್ದೇಶಕರು ಸಹ ಶಿವಣ್ಣನೊಂದಿಗೆ ಕೆಲಸ ಮಾಡಲು ಕಾಯುತ್ತಿರುವುದು ಶಿವಣ್ಣನಿಗಿರುವ ಒಗ್ಗಿಕೊಳ್ಳುವ ಗುಣ, ಅವರ ನಟನೆಯಲ್ಲಿನ ಭಿನ್ನತೆಗೆ ಸಾಕ್ಷಿ. ಇದೀಗ ಶಿವಣ್ಣನಿಗಾಗಿ ತಮಿಳಿನ ನಿರ್ದೇಶಕರೊಬ್ಬರು ಹೊಸ ಕತೆ ಮಾಡಿಕೊಂಡು ಬಂದಿದ್ದಾರೆ. ಸಿನಿಮಾದ ಶೂಟಿಂಗ್ ಶೀಘ್ರವೇ ಪ್ರಾರಂಭ ಆಗಲಿದೆ.

‘ಪಾಯುಂ ಒಲಿ ನೀ ಎನಕ್ಕು’ ಸಿನಿಮಾ ನಿರ್ದೇಶನ ಮಾಡಿರುವ ಕಾರ್ತಿಕ್ ಅದ್ವೈತ್ ಶಿವಣ್ಣನಿಗಾಗಿ ಹೊಸ ಸಿನಿಮಾ ನಿರ್ದೇಶನ ಮಾಡಲಿದ್ದು, ಸಿನಿಮಾಕ್ಕೆ ಇನ್ನೂ ಹೆಸರಿಟ್ಟಿಲ್ಲ. ಸಿನಿಮಾದ ಮೊದಲ ಭಾಗದ ಚಿತ್ರೀಕರಣ ಶೀಘ್ರವೇ ಪ್ರಾರಂಭವಾಗಲಿದೆಯಂತೆ. ಅಂದಹಾಗೆ ಈ ಸಿನಿಮಾಕ್ಕಾಗಿ ಈ ಹಿಂದೆಯೇ ಡೇಟ್ಸ್ ನೀಡಿದ್ದರಂತೆ ಶಿವಣ್ಣ. ಆದರೆ ಸಿನಿಮಾ ಪ್ರಾರಂಭವಾಗಿರಲಿಲ್ಲ. ಹಾಗಾಗಿ ಈಗ ಚಿತ್ರೀಕರಣ ಪ್ರಾರಂಭಿಸಿ ಮೊದಲ ಹಂತ ಮುಗಿಸಿ ಬಳಿಕ ಬ್ರೇಕ್ ತೆಗೆದುಕೊಳ್ಳುವ ಆಲೋಚನೆಯಲ್ಲಿದೆ ಚಿತ್ರತಂಡ.

ಇದನ್ನೂ ಓದಿ:ಶಿವರಾಜ್ ಕುಮಾರ್ ಸಿನಿಮಾದ ಕ್ಯಾರೆಕ್ಟರ್ ಟೀಸರ್ ಬಿಡುಗಡೆ ಮಾಡಿದ ರಿಷಬ್ ಶೆಟ್ಟಿ

ಕಾರ್ತಿಕ್ ಅದ್ವೈತ್ ನಿರ್ದೇಶನ ಮಾಡಿರುವ ‘ಪಾಯುಂ ಒಲಿ ನೀ ಎನಕ್ಕು’ ಸಿನಿಮಾನಲ್ಲಿ ವಿಕ್ರಂ ಪ್ರಭು ನಾಯಕರಾಗಿ ನಟಿಸಿದ್ದರು. ಆ ಸಿನಿಮಾದಲ್ಲಿ ಕನ್ನಡದ ಡಾಲಿ ಧನಂಜಯ್ ಸಹ ನಟಿಸಿದ್ದರು. ಕಾರ್ತಿಕ್ ಅದ್ವೈತ್, ಶಿವಣ್ಣನಿಗೆ ನಿರ್ದೇಶನ ಮಾಡುತ್ತಿರುವ ಸಿನಿಮಾಕ್ಕೆ ಎಸ್​ಎನ್ ರೆಡ್ಡಿ, ಸುಧೀರ್ ಪಿ ನಿರ್ಮಾಣ ಮಾಡಿದ್ದಾರೆ. ಭುವನೇಶ್ವರಿ ಪ್ರೊಡಕ್ಷನ್ ಅಡಿಯಲ್ಲಿ ಸಿನಿಮಾ ನಿರ್ಮಾಣ ಆಗುತ್ತಿದೆ. ‘ವಿಕ್ರಂ ವೇದ’ ಸಿನಿಮಾಕ್ಕೆ ಸಂಗೀತ ನೀಡಿದ್ದ ಸ್ಯಾಮ್ ಸಿಎಸ್ ಸಂಗೀತ ನೀಡಲಿದ್ದಾರೆ. ಇದೊಂದು ಆಕ್ಷನ್ ಥ್ರಿಲ್ಲರ್ ಸಿನಿಮಾ ಆಗಿದ್ದು, ಸಿನಿಮಾದಲ್ಲಿ ಭಿನ್ನ ಗೆಟಪ್​ನಲ್ಲಿ ಶಿವಣ್ಣ ಕಾಣಿಸಿಕೊಳ್ಳಲಿದ್ದಾರೆ.

ಶಿವರಾಜ್ ಕುಮಾರ್ ಪ್ರಸ್ತುತ ಹಲವಾರು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಅರ್ಜುನ್ ಜನ್ಯ ನಿರ್ದೇಶನದ ‘45’ ಸಿನಿಮಾದಲ್ಲಿ ಶಿವಣ್ಣ, ಉಪೇಂದ್ರ ಮತ್ತು ರಾಜ್ ಬಿ ಶೆಟ್ಟಿ ಜೊತೆ ನಟಿಸುತ್ತಿದ್ದಾರೆ. ಅದರ ಜೊತೆಗೆ ಡಾಲಿ ಧನಂಜಯ್ ಜೊತೆಗೆ ‘ಉತ್ತರಕಾಂಡ’ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ‘ಸಪ್ತ ಸಾಗರದಾಚೆ ಎಲ್ಲೋ’ ಸಿನಿಮಾದ ನಿರ್ದೇಶಕ ಹೇಮಂತ್ ರಾವ್ ನಿರ್ದೇಶನದಲ್ಲಿ ‘ಭೈರವನ ಕೊನೆ ಪಾಠ’ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ‘ಘೋಸ್ಟ್ 2’ ನಲ್ಲಿ ನಟಿಸಲಿದ್ದಾರೆ. ಇನ್ನು ದಿನಕರ್ ತೂಗುದೀಪ, ಶಿವಣ್ಣನಿಗೆ ಒಂದು ಸಿನಿಮಾ ಮಾಡುವುದಾಗಿ ಘೋಷಿಸಿದ್ದರು. ನಿರ್ದೇಶಕ ಲೋಹಿತ್ ಸಹ ಶಿವಣ್ಣನಿಗೆ ಒಂದು ಕತೆ ಹೇಳಿದ್ದರು. ಆ ಸಿನಿಮಾಗಳು ಇನ್ನೂ ಪ್ರಾರಂಭವಾಗಿಲ್ಲ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 12:07 pm, Thu, 25 July 24