Toxic Movie: ಅನಧಿಕೃತವಾಗಿ ಸೆಟ್ ನಿರ್ಮಾಣ ಆರೋಪ, ‘ಟಾಕ್ಸಿಕ್’ ಸಿನಿಮಾ ವಿರುದ್ಧ ದೂರು
ಯಶ್ ನಟಿಸುತ್ತಿರುವ ಕನ್ನಡದ ಮಾತ್ರವಲ್ಲ ಭಾರತದ ನಿರೀಕ್ಷೆಯ ಸಿನಿಮಾ ‘ಟಾಕ್ಸಿಕ್’ಗೆ ಸಂಕಷ್ಟ ಎದುರಾಗಿದೆ. ಸಿನಿಮಾದ ಚಿತ್ರೀಕರಣಕ್ಕಾಗಿ ನಿರ್ಮಿಸಲಾಗಿರುವ ಸೆಟ್ ಅನ್ನು ಅಕ್ರಮವಾಗಿ ನಿರ್ಮಿಸಲಾಗಿದ್ದು, ಸೆಟ್ ಅನ್ನು ತೆರವುಗೊಳಿಸಬೇಕೆಂದು ಒತ್ತಾಯಿಸಿ ದೂರು ನೀಡಲಾಗಿದೆ.
ಯಶ್ ನಟಿಸುತ್ತಿರುವ ‘ಟಾಕ್ಸಿಕ್’ ಸಿನಿಮಾ ಕನ್ನಡ ಚಿತ್ರರಂಗದ ಅತ್ಯಂತ ನಿರೀಕ್ಷೆಯ ಸಿನಿಮಾ. ಸಿನಿಮಾದ ಚಿತ್ರೀಕರಣವನ್ನು ಗುಟ್ಟಾಗಿಯೇ ಚಿತ್ರತಂಡ ನಡೆಸುತ್ತಿದೆ. ಸಿನಿಮಾದ ಬಗ್ಗೆ ಹೆಚ್ಚಿನ ಅಪ್ಡೇಟ್ ಅನ್ನಾಗಲಿ, ಶೂಟಿಂಗ್ ಸ್ಪಾಟ್ ಚಿತ್ರಗಳಾಗಲಿ ಹೊರಬಂದಿಲ್ಲ. ಆದರೆ ಇದೀಗ ಏಕಾ ಏಕಿ ‘ಟಾಕ್ಸಿಕ್’ ಸಿನಿಮಾ ತಂಡದ ವಿರುದ್ಧ ನ್ಯಾಯಾಲಯದಲ್ಲಿ ಪ್ರಕರಣ ದಾಖಲಾಗಿದೆ. ‘ಟಾಕ್ಸಿಕ್’ ಸಿನಿಮಾಕ್ಕಾಗಿ ನಿರ್ಮಿಸಲಾಗಿರುವ ಬೃಹತ್ ಸೆಟ್ನಿಂದ ಸಮಸ್ಯೆ ಎದುರಾಗಿದೆ.
ಪೀಣ್ಯ ಪ್ಲಾಂಟೇಶನ್ ಜಮೀನಿನ ಬಳಿ ಸುಮಾರು 20 ಎಕರೆ ಜಾಗದಲ್ಲಿ ‘ಟಾಕ್ಸಿಕ್’ ಸಿನಿಮಾಕ್ಕಾಗಿ ಬೃಹತ್ ಸೆಟ್ ಹಾಕಲಾಗಿದೆ. ಆದರೆ ಈ ಸೆಟ್ ಅರಣ್ಯ ಭೂಮಿಯಲ್ಲಿ ಅಕ್ರಮವಾಗಿ ಹಾಕಲಾಗಿದೆ ಎಂದು ಆರೋಪಿಸಿ ವಕೀಲ ಜಿ.ಬಾಲಾಜಿ ನಾಯ್ಡುರಿಂದ ಹೈಕೋರ್ಟ್ಗೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಹಾಕಿದ್ದಾರೆ. ಅಕ್ರಮವಾಗಿ ನಿರ್ಮಿಸಲಾಗಿರುವ ಈ ಸೆಟ್ ಅನ್ನು ಕೂಡಲೇ ತೆರವುಗೊಳಿಸಬೇಕು ಎಂದು ಒತ್ತಾಯಿಸಿದ್ದಾರೆ. ಅರ್ಜಿ ವಿಚಾರಣೆಗೆ ಅರ್ಹವೆಂದು ಪರಿಗಣಿಸಿರುವ ಹೈಕೋರ್ಟ್ ‘ಟಾಕ್ಸಿಕ್’ ಸಿನಿಮಾದ ನಿರ್ಮಾಣ ಸಂಸ್ಥೆ ಕೆವಿಎನ್ ಪ್ರೊಡಕ್ಷನ್ಸ್ ಮತ್ತು ಎಚ್ಎಂಟಿ ಸಂಸ್ಥೆಗೆ ನೊಟೀಸ್ ನೀಡಿದೆ.
ಈಗ ಸೆಟ್ ನಿರ್ಮಾಣ ಮಾಡಲಾಗಿರುವ ಜಾಗವು ವಿವಾದದಿಂದ ಕೂಡಿದ್ದಾಗಿದೆ. ಕೆಲವು ದಾಖಲೆಗಳ ಪ್ರಕಾರ, ಎಚ್ಎಂಟಿ ಸಂಸ್ಥೆಯು ಈ ಜಮೀನನ್ನು ಕೆನರಾ ಬ್ಯಾಂಕ್ಗೆ ನೀಡಿತ್ತು. ಬಳಿಕ ಕೆನರಾ ಬ್ಯಾಂಕ್, ಕೆವಿಎನ್ಗೆ ನೀಡಿತ್ತು. ಇದೀಗ ಕೆವಿಎನ್ ನವರು 20.07 ಎಕರೆ ಜಾಗವನ್ನು ಸಿನಿಮಾ ಸೆಟ್ ನಿರ್ಮಾಣಕ್ಕೆ ಬಳಸಿಕೊಂಡಿದ್ದಾರೆ. ಆದರೆ ಇದು ಅರಣ್ಯ ಪ್ರದೇಶ ಎಂದು ಅರ್ಜಿದಾರರು ವಾದಿಸಿದ್ದಾರೆ. ವಿಚಾರಣೆ ಬಳಿಕವೇ ಸತ್ಯಾಂಶ ಹೊರಬರಲಿದೆ.
ಇದನ್ನೂ ಓದಿ:‘ಟಾಕ್ಸಿಕ್’ ಸಿನಿಮಾದಲ್ಲಿ ಯಶ್ ಎದುರು ವಿಲನ್ ಆಗ್ತಾರಾ ಈ ಸುಂದರಿ?
ಪ್ರಕರಣದ ಬಗ್ಗೆ ಟಿವಿ9ಗೆ ಮಾಹಿತಿ ನೀಡಿರುವ ಕೆವಿಎನ್ ಸಂಸ್ಥೆಯ ಅಸೋಸಿಯೇಟ್ ಪ್ರೋಡ್ಯುಸರ್ ಸುಪ್ರೀತ್,‘ ನಾವು ಸೆಟ್ ಹಾಕಿರೋದು ಎಚ್ಎಂಟಿ ಗೆ ಸೇರಿದ ಜಾಗದ ಪಕ್ಕದಲ್ಲಿರೋ ಜಾಗದಲ್ಲಿ. ಶೂಟಿಂಗ್ ಶುರುವಾಗಿಲ್ಲ ಸೆಟ್ ಹಾಕುವ ಕೆಲಸಗಳು ನಡೀತಿದೆ. ಈಗ ನಾವು ಸೆಟ್ ಹಾಕುತ್ತಿರುವ ಜಾಗ ನಮ್ಮ ಆತ್ಮೀಯರದ್ದೆ. ನೋಟಿಸ್ ಆಫೀಸ್ ಗೆ ಬಂದಿರಬಹುದು ಅಥವಾ ಪ್ರಾಪರ್ಟಿ ನಮ್ಮದಲ್ಲ ಓನರ್ ಗೆ ಹೋಗಿರಬಹುದು’ ಎಂದಿದ್ದಾರೆ.
‘ಟಾಕ್ಸಿಕ್’ ಸಿನಿಮಾದ ಬಹುತೇಕ ಭಾಗವನ್ನು ಸೆಟ್ಗಳಲ್ಲಿಯೇ ಚಿತ್ರೀಕರಣ ಮಾಡಲಾಗುತ್ತಿದೆ ಎನ್ನಲಾಗಿದೆ. ಸಿನಿಮಾವು 70-80ರ ಕಾಲದಲ್ಲಿ ನಡೆಯಲಿದೆ ಎಂಬ ಸುದ್ದಿಯೂ ಹರಿದಾಡುತ್ತಿದೆ. ಇದೇ ಕಾರಣಕ್ಕೆ ಸಿನಿಮಾವನ್ನು ಸೆಟ್ಗಳಲ್ಲಿ ಚಿತ್ರೀಕರಣ ಮಾಡಲಾಗುತ್ತಿದೆ. ಹಾಗಾಗಿ ಸಿನಿಮಾಕ್ಕಾಗಿ ಬೃಹತ್ ಸೆಟ್ ಅನ್ನು ನಿರ್ಮಿಸಲಾಗಿದೆ. ಸಿನಿಮಾದ ಹಲವು ಭಾಗಗಳ ಚಿತ್ರೀಕರಣ ಇನ್ನೂ ಬಾಕಿ ಇದೆ. ಅಷ್ಟರಲ್ಲಾಗಲೆ ಸೆಟ್ ನಿರ್ಮಾಣದ ಮೇಲೆ ಸಮಸ್ಯೆ ಬಂದು ಕೂತಿದೆ. ಹಲವು ಕೋಟಿಗಳನ್ನು ವೆಚ್ಚ ಮಾಡಿ ಸೆಟ್ ನಿರ್ಮಾಣ ಮಾಡಲಾಗಿದ್ದು, ಒಂದೊಮ್ಮೆ ಸೆಟ್ ತೆರವು ಮಾಡಬೇಕು ಎಂದಾದರೆ ಚಿತ್ರತಂಡಕ್ಕೆ ಭಾರಿ ನಷ್ಟವಾಗಲಿದೆ.
‘ಟಾಕ್ಸಿಕ್’ ಸಿನಿಮಾದ ಕೆಲವು ಸುದ್ದಿಗಳು ಇತ್ತೀಚೆಗೆ ಹರಿದಾಡುತ್ತಿವೆ. ‘ಟಾಕ್ಸಿಕ್’ ಸಿನಿಮಾದಲ್ಲಿ ಯಶ್ ಜೊತೆಗೆ ನಯನತಾರಾ, ಹುಮಾ ಖುರೇಷಿ, ಕರೀನಾ ಕಪೂರ್ ಅವರುಗಳು ನಟಿಸುತ್ತಿದ್ದಾರೆ. ಇದರ ಜೊತೆಗೆ ಬಾಲಿವುಡ್ ಬೆಡಗಿ ಕಿಯಾರಾ ಅಡ್ವಾಣಿ ನಾಯಕಿಯಾಗಿ ನಟಿಸಲಿದ್ದಾರಂತೆ. ಸಿನಿಮಾವನ್ನು ಮಲಯಾಳಿ ನಿರ್ದೇಶಕಿ ಗೀತು ಮೋಹನ್ದಾಸ್ ನಿರ್ದೇಶನ ಮಾಡುತ್ತಿದ್ದಾರೆ. ಸಿನಿಮಾಕ್ಕೆ ಕೆವಿಎನ್ ಬಂಡವಾಳ ತೊಡಗಿಸಿದೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 2:52 pm, Thu, 25 July 24