ಎರಡು ತಿಂಗಳ ಬಳಿಕ ನಟನೆಗೆ ಮರಳಿದ ಶಿವಣ್ಣ; ವಿಗ್ ಹಾಕಿ ಶೂಟ್
ಶಿವರಾಜ್ ಕುಮಾರ್ ಅವರು ಕ್ಯಾನ್ಸರ್ನಿಂದ ಸಂಪೂರ್ಣವಾಗಿ ಚೇತರಿಸಿಕೊಂಡಿದ್ದಾರೆ. ಮಿಯಾಮಿಯಲ್ಲಿ ಚಿಕಿತ್ಸೆ ಪಡೆದ ನಂತರ, ಅವರು ಹೊಸ ಚಿತ್ರದ ಶೂಟಿಂಗ್ ಆರಂಭಿಸಿದ್ದಾರೆ. ಇದು ರಾಮ್ ಚರಣ್ ನಟನೆಯ "ಆರ್‌ಸಿ 16" ಎಂದು ಹೇಳಲಾಗುತ್ತಿದೆ. ವಿಗ್ ಧರಿಸಿ ಶೂಟಿಂಗ್ ಮಾಡುತ್ತಿರುವ ಶಿವಣ್ಣ ಅವರ ಹೊಸ ಲುಕ್ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

ನಟ ಶಿವರಾಜ್ಕುಮಾರ್ ಅವರು ಕ್ಯಾನ್ಸರ್ ಕಾರಣಕ್ಕೆ ದೊಡ್ಡ ಬ್ರೇಕ್ ಪಡೆದಿದ್ದರು. ಅವರು ಯಾವುದೇ ಸಿನಿಮಾ ಶೂಟ್ನಲ್ಲೂ ಭಾಗಿ ಆಗಿರಲಿಲ್ಲ. ಅಮೆರಿಕಕ್ಕೆ ತೆರಳಿ ಚಿಕಿತ್ಸೆ ಪಡೆದು ಬಂದರು. ಈಗ ಶಿವರಾಜ್ಕುಮಾರ್ ಸಂಪೂರ್ಣ ಕ್ಯಾನ್ಸರ್ ಮುಕ್ತರಾಗಿದ್ದಾರೆ ಎಂಬುದು ಎಲ್ಲರಿಗೂ ಖುಷಿ ಕೊಟ್ಟ ಸುದ್ದಿ. ಈಗ ಅವರ ಕಡೆಯಿಂದ ಮತ್ತೊಂದು ಗುಡ್ ನ್ಯೂಸ್ ಸಿಕ್ಕಿದೆ. ಶಿವಣ್ಣ ಸೈಲೆಂಟ್ ಆಗಿ ಚಿತ್ರೀಕರಣ ಆರಂಭಿಸಿದ್ದಾರೆ. ಈ ವಿಚಾರ ಅವರ ಅಭಿಮಾನಿಗಳಿಗೆ ಖುಷಿ ಕೊಟ್ಟಿದೆ.
ಶಿವರಾಜ್ಕುಮಾರ್ ಅವರು ಕಿಮೋ ಥೆರೆಪಿ ಕಾರಣದಿಂದ ಕೂದಲು ತೆಗೆಸಿಕೊಳ್ಳಬೇಕಿತ್ತು. ಇದೇ ಸಂದರ್ಭದಲ್ಲಿ ಅವರು ತಿರುಪತಿಗೆ ತೆರಳಿದ್ದರಿಂದ ಅಲ್ಲಿ ಅವರು ಮುಡಿಕೊಟ್ಟರು. ಆ ಬಳಿಕ ಅವರ ತಲೆಯಲ್ಲಿ ನಿಧಾನವಾಗಿ ಕೂದಲು ಬೆಳೆಯುತ್ತಿದೆ. ಆದರೆ, ಈಗಿರುವ ಕೂದಲು ಇಟ್ಟುಕೊಂಡು ಶೂಟಿಂಗ್ ಮಾಡೋಕೆ ಸಾಧ್ಯವಿಲ್ಲ. ಹೀಗಾಗಿ, ವಿಗ್ ಹಾಕಿ ಕಾಣಿಸಿಕೊಂಡಿದ್ದಾರೆ.
ಶಿವರಾಜ್ಕುಮಾರ್ ಲುಕ್ ಗಮನ ಸೆಳೆದಿದೆ. ಅವರು ಗಡ್ಡ ಮೀಸೆಯನ್ನು ತೆಗೆದಿದ್ದು, ಸಂಪೂರ್ಣವಾಗಿ ಭಿನ್ನವಾಗಿ ಗಮನ ಸೆಳೆದಿದ್ದಾರೆ. ಈ ಸಂದರ್ಭದ ವಿಡಿಯೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿವೆ. ಇದರಿಂದ ಫ್ಯಾನ್ಸ್ ಸಂಭ್ರಮಿಸಿದ್ದಾರೆ.
ಶಿವರಾಜ್ಕುಮಾರ್ ಅವರು ಶೂಟ್ ಮಾಡ್ತಿರೋದು ಯಾವ ಸಿನಿಮಾ? ಈ ಪ್ರಶ್ನೆಗೆ ಸ್ಪಷ್ಟ ಮಾಹಿತಿ ಸಿಕ್ಕಿಲ್ಲ. ಆದರೆ, ಕೆಲವು ವರದಿಗಳ ಪ್ರಕಾರ ಅವರು ಆರಂಭಿಸಿರೋದು ರಾಮ್ ಚರಣ್ ನಟನೆಯ, ಬುಚ್ಚಿ ಬಾಬು ನಿರ್ದೇಶನದ ‘ಆರ್‌ಸಿ 16’ ಎಂದು ಹೇಳಲಾಗುತ್ತಿದೆ. ಈ ಚಿತ್ರದಲ್ಲಿ ಶಿವರಾಜ್ಕುಮಾರ್ ಮುಖ್ಯಭೂಮಿಕೆಯಲ್ಲಿ ಕಾಣಿಸಿಕೊಳ್ಳಲಿದ್ದಾರೆ.
ರಾಮ್ ಚರಣ್ ಚಿತ್ರದ ಶೂಟಿಂಗ್ನಲ್ಲಿ ಭಾಗಿ ಆಗೋದಾಗಿ ಈ ಮೊದಲು ಶಿವಣ್ಣ ಹೇಳಿಕೊಂಡಿದ್ದರು. ಅಷ್ಟೇ ಅಲ್ಲ, ಇತ್ತೀಚೆಗೆ ಅವರು ಶೂಟಿಂಗ್ನಲ್ಲಿ ಭಾಗಿ ಆಗಲಿದ್ದಾರೆ ಎಂದು ತೆಲುಗು ಚಿತ್ರರಂಗದಿಂದ ವರದಿಗಳು ಕೂಡ ಆಗಿದ್ದವು. ಹೀಗಾಗಿ, ಅವರು ಇದೇ ಸಿನಿಮಾದ ಶೂಟ್ನಲ್ಲಿ ಭಾಗಿ ಆಗುತ್ತಿದ್ದಾರೆ ಎನ್ನಲಾಗಿದೆ.
ಇದನ್ನೂ ಓದಿ: ರಾಮ್ ಚರಣ್ ಮನೆಯಲ್ಲಿ ಇದೆ ಬರೋಬ್ಬರಿ 15 ಕುದುರೆ; ಕಾರಣ ಏನು?
ಶಿವಣ್ಣನಿಗೆ ಈ ಮೊದಲು ಮೂತ್ರಕೋಶದಲ್ಲಿ ಕ್ಯಾನ್ಸರ್ ಕಾಣಿಸಿಕೊಂಡಿತ್ತು. ಇದಕ್ಕಾಗಿ ಅವರು ಮಿಯಾಮಿಗೆ ತೆರಳಿ ಶಸ್ತ್ರಚಿಕಿತ್ಸೆ ಮಾಡಿಸಿಕೊಂಡರು. ಈಗ ಅವರು ಕ್ಯಾನ್ಸರ್ ಮುಕ್ತರಾಗಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.