ದಳಪತಿ ವಿಜಯ್ ಹಾದಿಯಲ್ಲಿ ಮುಂದುವರೆಯುತ್ತಾರಾ ಶಿವಣ್ಣ? ರಾಜಕೀಯ ನಿಲುವಿನ ಬಗ್ಗೆ ಸಿಕ್ತು ಉತ್ತರ
ದಳಪತಿ ವಿಜಯ್ ರಾಜಕೀಯ ಯಶಸ್ಸಿನ ನಡುವೆಯೂ, ಕರುನಾಡ ಚಕ್ರವರ್ತಿ ಡಾ. ಶಿವರಾಜ್‌ಕುಮಾರ್ ರಾಜಕೀಯ ಪ್ರವೇಶದ ಆಫರ್‌ಗಳನ್ನು ವಿನಮ್ರವಾಗಿ ನಿರಾಕರಿಸಿದ್ದಾರೆ. ತಮ್ಮ ತಂದೆ ನೀಡಿದ ಬಳುವಳಿ ಸಿನಿಮಾ ಎಂದು ಹೇಳುವ ಶಿವಣ್ಣ, ಬಣ್ಣ ಹಚ್ಚಿ ಅಭಿಮಾನಿಗಳನ್ನು ರಂಜಿಸುವುದಕ್ಕೆ ಆದ್ಯತೆ ನೀಡಿದ್ದಾರೆ. ಉಪಮುಖ್ಯಮಂತ್ರಿ ಡಿಕೆಶಿ ಆಹ್ವಾನವನ್ನೂ ತಿರಸ್ಕರಿಸಿ, ಸದ್ಯಕ್ಕೆ ಚಿತ್ರರಂಗದಲ್ಲೇ ಸಕ್ರಿಯವಾಗಿರಲು ನಿರ್ಧರಿಸಿದ್ದಾರೆ. ಅವರ ಪತ್ನಿ ಗೀತಾ ಶಿವರಾಜ್‌ಕುಮಾರ್ ಈಗಾಗಲೇ ರಾಜಕೀಯದಲ್ಲಿದ್ದಾರೆ.

ದಕ್ಷಿಣ ಭಾರತದ ಚಿತ್ರರಂಗದಲ್ಲಿ ಸ್ಟಾರ್ ನಟರು ರಾಜಕೀಯಕ್ಕೆ ಬರುವುದು ಹೊಸದೇನಲ್ಲ. ತಮಿಳುನಾಡಿನಲ್ಲಿ ದಳಪತಿ ವಿಜಯ್ ತಮ್ಮದೇ ಆದ ‘ಟಿವಿಕೆ’ (TVK) ಪಕ್ಷವನ್ನು ಸ್ಥಾಪಿಸಿ, ರಾಜಕೀಯದಲ್ಲಿ ಹೊಸ ಸುನಾಮಿ ಎಬ್ಬಿಸಿದ್ದಾರೆ. ಅವರ ಪಕ್ಷ 108 ಸ್ಥಾನಗಳನ್ನು ಗೆದ್ದಿದೆ. ಈ ಬೆಳವಣಿಗೆಯ ಬೆನ್ನಲ್ಲೇ ಕರ್ನಾಟಕದಲ್ಲೂ ಕರುನಾಡ ಚಕ್ರವರ್ತಿ ಡಾ. ಶಿವರಾಜ್‌ಕುಮಾರ್ ಅವರು ಚುನಾವಣಾ ರಾಜಕೀಯಕ್ಕೆ ಬರಬೇಕು ಎಂಬ ಒತ್ತಾಯಗಳು ಮತ್ತೆ ಕೇಳಿಬರುತ್ತಿವೆ. ಆದರೆ, ಶಿವಣ್ಣ ಅವರು ಈ ವಿಷಯದಲ್ಲಿ ಈ ಮೊದಲೇ ತಮ್ಮ ಸ್ಪಷ್ಟ ನಿಲುವನ್ನು ತಿಳಿಸಿದ್ದರು.
ಆಂಧ್ರ ಪ್ರದೇಶದಲ್ಲಿ ಪವನ್ ಕಲ್ಯಾಣ್, ತಮಿಳುನಾಡಿನಲ್ಲಿ ದಳಪತಿ ವಿಜಯ್ ಗೆದ್ದಾಗಿದೆ. ಅದೇ ರೀತಿ ಕನ್ನಡದಲ್ಲಿ ಈ ರೀತಿ ರಾಜಕೀಯ ಪ್ರವೇಶ ಮಾಡಿ ಗೆಲ್ಲೋದು ಯಾರು ಎಂಬುದು ಅನೇಕರ ಪ್ರಶ್ನೆ ಅನೇಕರಿಗೆ ಮೂಡಿದೆ. ಅನೇಕರು ಶಿವಣ್ಣ ಹೆಸರನ್ನು ಹೇಳುತ್ತಿದ್ದಾರೆ. ಆದರೆ, ಕೆಲ ವರ್ಷಗಳ ಹಿಂದೆ ರಾಜಕೀಯಕ್ಕೆ ಬರುವುದಿಲ್ಲ ಎಂಬುದನ್ನು ಶಿವರಾಜ್‌ಕುಮಾರ್ ನೇರವಾಗಿ ಹೇಳಿದ್ದರು.
ಇತ್ತೀಚೆಗೆ ಸಾಮಾಜಿಕ ಜಾಲತಾಣಗಳಲ್ಲಿ ಹಳೆಯ ವಿಡಿಯೋ ಒಂದು ವೈರಲ್ ಆಗಿದೆ. ಈ ವಿಡಿಯೋದಲ್ಲಿ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಸಾರ್ವಜನಿಕ ವೇದಿಕೆಯಲ್ಲೇ ಶಿವಣ್ಣನಿಗೆ ರಾಜಕೀಯಕ್ಕೆ ಬರುವಂತೆ ಬಹಿರಂಗವಾಗಿ ಆಹ್ವಾನ ನೀಡಿದ್ದರು. ‘ಶಿವರಾಜ್‌ಕುಮಾರ್ ಅವರೇ, ನೀವು ಪಾರ್ಲಿಮೆಂಟ್ ಚುನಾವಣೆಗೆ ನಿಲ್ಲಲು ರೆಡಿಯಾಗಿ, ನಿಮಗೆ ಎಲ್ಲಿ ಬೇಕೋ ಅಲ್ಲಿ ಸೀಟ್ ಕೊಡುತ್ತೇನೆ’ ಎಂದು ಡಿಕೆಶಿ ಹೇಳಿದ್ದರು.
View this post on Instagram
ನೋ ಎಂದಿದ್ದ ನಟ:
ಅದಕ್ಕೆ ವೇದಿಕೆಯಲ್ಲೇ ಪ್ರತಿಕ್ರಿಯಿಸಿದ್ದ ಶಿವಣ್ಣ, ‘ನಮ್ಮ ತಂದೆ (ಡಾ. ರಾಜ್‌ಕುಮಾರ್) ನಮಗೆ ಕೊಟ್ಟಿರುವ ಬಳುವಳಿ ಒಂದೇ, ಅದು ಬಣ್ಣ ಹಚ್ಚುವುದು ಮತ್ತು ನಿಮ್ಮನ್ನು ರಂಜಿಸುವುದು. ನಾನು ಈಗಷ್ಟೇ ಐದಾರು ಸಿನಿಮಾಗಳನ್ನು ಒಪ್ಪಿಕೊಂಡಿದ್ದೇನೆ. ನನಗೆ ಸಿನಿಮಾ ಮಾಡುವುದೇ ಖುಷಿ’ ಎಂದು ವಿನಮ್ರವಾಗಿ ರಾಜಕೀಯ ಪ್ರವೇಶದ ಆಫರ್ ಅನ್ನು ನಿರಾಕರಿಸಿದ್ದರು.
ತಮಿಳುನಾಡಿನಲ್ಲಿ ವಿಜಯ್ ಅವರು ತಮ್ಮ ಮೊದಲ ರಾಜಕೀಯ ಸಮಾವೇಶದಲ್ಲೇ ಲಕ್ಷಾಂತರ ಜನರನ್ನು ಸೇರಿಸುವ ಮೂಲಕ ತಮ್ಮ ಶಕ್ತಿಯನ್ನು ಪ್ರದರ್ಶಿಸಿದ್ದಾರೆ. ಇದು ಕರ್ನಾಟಕದ ಅಭಿಮಾನಿಗಳಲ್ಲೂ ಹೊಸ ಆಸೆಯನ್ನು ಚಿಗುರಿಸಿದೆ. ಶಿವಣ್ಣನಂತಹ ಜನಪ್ರಿಯ ನಟರು ರಾಜಕೀಯಕ್ಕೆ ಬಂದರೆ ಬದಲಾವಣೆ ತರಬಹುದು ಎಂಬುದು ಅವರ ಅಭಿಪ್ರಾಯ. ಆದರೆ, ಶಿವಣ್ಣ ಸದ್ಯಕ್ಕೆ ತಾವು ಚಿತ್ರರಂಗಕ್ಕೆ ಮಾತ್ರ ಸೀಮಿತ ಎಂದು ಸ್ಪಷ್ಟಪಡಿಸಿದ್ದಾರೆ.
ಇದನ್ನೂ ಓದಿ: ‘ಧುರಂಧರ್ 2’ ಸಿನಿಮಾ ನೋಡಿ ‘ಬ್ರಿಲಿಯಂಟ್’ ಎಂದು ಹೊಗಳಿದ ಶಿವರಾಜ್‌ಕುಮಾರ್
ಶಿವಣ್ಣ ಅವರ ಪತ್ನಿ ಗೀತಾ ಶಿವರಾಜ್‌ಕುಮಾರ್ ಅವರು ಈಗಾಗಲೇ ರಾಜಕೀಯದಲ್ಲಿ ಸಕ್ರಿಯರಾಗಿದ್ದು, ಚುನಾವಣೆಗಳಲ್ಲಿ ಸ್ಪರ್ಧಿಸಿದ್ದಾರೆ. ಶಿವಣ್ಣ ಅವರೂ ಕೂಡ ಪತ್ನಿಯ ಪರವಾಗಿ ಪ್ರಚಾರ ಕಾರ್ಯಗಳಲ್ಲಿ ಭಾಗವಹಿಸಿದ್ದಾರೆ. ಆದರೆ, ವೈಯಕ್ತಿಕವಾಗಿ ತಾವು ಚುನಾವಣಾ ಕಣಕ್ಕೆ ಇಳಿಯುವ ಬಗ್ಗೆ ಶಿವಣ್ಣ ಎಂದಿಗೂ ಆಸಕ್ತಿ ತೋರಿಸಿಲ್ಲ. ‘ನಾನು ನಿಮ್ಮ ಪ್ರೀತಿಯ ಶಿವಣ್ಣನಾಗಿ ಉಳಿಯಲು ಬಯಸುತ್ತೇನೆ, ರಾಜಕೀಯ ನಾಯಕನಾಗಿ ಅಲ್ಲ’ ಎಂಬುದು ಅವರ ಖಡಕ್ ನಿಲುವು.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.




