‘ಡ್ಯಾಡ್’ ಸಿನಿಮಾಗೆ ಮೊದಲ ಹಂತದ ಶೂಟಿಂಗ್ ಮುಗಿಸಿದ ಶಿವರಾಜ್‍ಕುಮಾರ್
‘ಡ್ಯಾಡ್’ ಸಿನಿಮಾದಲ್ಲಿ ಶಿವರಾಜ್‍ಕುಮಾರ್ ಅವರು ಡಾಕ್ಟರ್ ಪಾತ್ರವನ್ನು ಮಾಡುತ್ತಿದ್ದಾರೆ. ಅವರ ಜೊತೆ ಶರ್ಮಿಳಾ ಮಾಂಡ್ರೆ, ನಕ್ಷತಾ ಮುಂತಾದವವರು ಕೂಡ ಪಾತ್ರವರ್ಗದಲ್ಲಿ ಇದ್ದಾರೆ. ಟಾಲಿವುಡ್ ಡೈರೆಕ್ಟರ್ ಅನಿಲ್ ಕನ್ನೆಗಂಟಿ ಅವರು ಈ ಸಿನಿಮಾಗೆ ನಿರ್ದೇಶನ ಮಾಡುತ್ತಿದ್ದಾರೆ. ಹರೀಶ್ ಪೆದ್ದಿ ಅವರು ನಿರ್ಮಾಣ ಮಾಡುತ್ತಿದ್ದಾರೆ.

ಅನಾರೋಗ್ಯದ ಬಳಿಕ ಚೇತರಿಸಿಕೊಂಡ ನಟ ಶಿವರಾಜ್‍ಕುಮಾರ್ (Shivarajkumar) ಅವರು ಬ್ಯಾಕ್ ಟು ಬ್ಯಾಕ್ ಸಿನಿಮಾಗಳನ್ನು ಒಪ್ಪಿಕೊಂಡು ನಟಿಸುತ್ತಿದ್ದಾರೆ. ಅವರು ನಟಿಸುತ್ತಿರುವ ‘ಡ್ಯಾಡ್’ ಸಿನಿಮಾ (Dad Movie) ಕೆಲಸಗಳು ಚುರುಕಿನಿಂದ ಸಾಗಿದೆ. ಶೀರ್ಷಿಕೆಯಲ್ಲೇ ಈ ಚಿತ್ರ ಕುತೂಹಲ ಮೂಡಿಸಿದೆ. ಇತ್ತೀಚೆಗಷ್ಟೇ ಈ ಸಿನಿಮಾದ ಮುಹೂರ್ತ ಸಮಾರಂಭ ಮೈಸೂರಿನ ಚಾಮುಂಡಿ ಬೆಟ್ಟದಲ್ಲಿರುವ ನಂದಿ ದೇವಸ್ಥಾನದಲ್ಲಿ ನೆರವೇರಿತ್ತು. ಈಗ ಅರಮನೆ ನಗರಿ ಮೈಸೂರಿನಲ್ಲಿ ‘ಡ್ಯಾಡ್’ ಸಿನಿಮಾದ ಮೊದಲ ಹಂತದ ಶೂಟಿಂಗ್ ಮುಕ್ತಾಯ ಆಗಿದೆ.
‘ಡ್ಯಾಡ್’ ಸಿನಿಮಾಗೆ ಸದ್ಯದಲ್ಲೇ 2ನೇ ಹಂತದ ಚಿತ್ರೀಕರಣ ಪ್ರಾರಂಭ ಆಗಲಿದೆ. ಹರೀಶ್ ಪೆದ್ದಿ ಅವರು ‘ಮೈರಾ ಕ್ರಿಯೇಷನ್ಸ್’ ಲಾಂಛನದ ಮೂಲಕ ಈ ಸಿನಿಮಾವನ್ನು ನಿರ್ಮಾಣ ಮಾಡುತ್ತಿದ್ದಾರೆ. ತೆಲುಗಿನ ಖ್ಯಾತ ನಿರ್ದೇಶಕ ಅನಿಲ್ ಕನ್ನೆಗಂಟಿ ಈ ಸಿನಿಮಾಗೆ ಕಥೆ, ಚಿತ್ರಕಥೆ ಬರೆದು ನಿರ್ದೇಶನ ಮಾಡುತ್ತಿದ್ದಾರೆ. ನಿರ್ಮಾಪಕರಿಗೆ ಹಾಗೂ ನಿರ್ದೇಶಕರಿಗೆ ಇದು ಕನ್ನಡದಲ್ಲಿ ಮೊದಲ ಸಿನಿಮಾ ಎಂಬುದು ವಿಶೇಷ.
ಬಿ.ಎಸ್. ಸುಧೀಂದ್ರ ಅವರು ‘ಡ್ಯಾಡ್’ ಸಿನಿಮಾಗೆ ಕಾರ್ಯಕಾರಿ ನಿರ್ಮಾಪಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಶಿವರಾಜ್‍ಕುಮಾರ್ ಅವರು ಹಲವು ವರ್ಷಗಳ ಬಳಿಕ ಈ ಸಿನಿಮಾದಲ್ಲಿ ವೈದ್ಯನ ಪಾತ್ರ ಮಾಡುತ್ತಿರುವುದು ವಿಶೇಷ. ಶರ್ಮಿಳಾ ಮಾಂಡ್ರೆ, ಬೇಬಿ ನಕ್ಷತ್ರಾ, ಬಾಬು, ಮಲಯಾಳಂ ನಟ ಸೂರಜ್ ವೆಂಜರಮೂಡು ಮುಂತಾದವರು ಈ ಸಿನಿಮಾದಲ್ಲಿ ನಟಿಸುತ್ತಿದ್ದಾರೆ.
‘ಡ್ಯಾಡ್’ ಸಿನಿಮಾಗೆ ಅರ್ಜುನ್ ಜನ್ಯ ಅವರು ಸಂಗೀತ ನಿರ್ದೇಶನ ಮಾಡುತ್ತಿದ್ದಾರೆ. ಬಿ. ರಾಜಶೇಖರ್ ಅವರು ಛಾಯಾಗ್ರಹಣ ಮಾಡುತ್ತಿದ್ದಾರೆ. ಕನ್ನಡ, ತೆಲುಗು ಮತ್ತು ಮಲಯಾಳಂನಲ್ಲಿ ಈ ಸಿನಿಮಾ ನಿರ್ಮಾಣ ಆಗುತ್ತಿರುವುದು ವಿಶೇಷ. ತೆಲುಗಿನ ‘ಭಗವಂತ್ ಕೇಸರಿ’, ‘ಟಕ್ ಜಗದೀಶ್’ ಮುಂತಾದ ಸಿನಿಮಾಗಳನ್ನು ನಿರ್ಮಿಸಿದ ಹರೀಶ್ ಪೆದ್ದಿ ಅವರು ಈ ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ.
ಇದನ್ನೂ ಓದಿ: ಭೂಗತ ಲೋಕದ ಕಥೆಯಲ್ಲಿ ಶಿವರಾಜ್‍ಕುಮಾರ್; ‘ಓಂ’ ರೀತಿಯಲ್ಲಿ ಹೊಸ ಸಿನಿಮಾ
32 ವರ್ಷಗಳ ಹಿಂದೆ ಶಿವರಾಜ್‍ಕುಮಾರ್ ಅಭಿನಯದ ‘ಜಗ ಮೆಚ್ಚಿದ ಹುಡುಗ’ ಸಿನಿಮಾ ಸಹ ಮೈಸೂರಿನ ನಂದಿ ವಿಗ್ರಹದ ಎದುರು ಆರಂಭ ಆಗಿತ್ತು. ಅದೇ ನಂದಿ ದೇವಸ್ಥಾನದಲ್ಲಿ ‘ಡ್ಯಾಡ್’ ಸಿನಿಮಾಗೆ ಚಾಲನೆ ಸಿಕ್ಕಿತ್ತು. ಚುರುಕಿನಿಂದ ಸಿನಿಮಾದ ಕೆಲಸಗಳನ್ನು ಚಿತ್ರತಂಡ ಮಾಡುತ್ತಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.




