ಗೌರಿ ಗಣೇಶ ಹಬ್ಬದ ಸಂಭ್ರಮದಲ್ಲಿ ‘ಅಂದೊಂದಿತ್ತು ಕಾಲ’ ಚಿತ್ರತಂಡ
Andondithu Kala movie: ವಿನಯ್ ರಾಜ್ಕುಮಾರ್, ಅದಿತಿ ಪ್ರಭುದೇವ ನಟನೆಯ ‘ಅಂದೊಂದಿತ್ತು ಕಾಲ’ ಸಿನಿಮಾ ಕೆಲವೇ ದಿನಗಳಲ್ಲಿ ಬಿಡುಗಡೆ ಆಗಲಿದೆ. ಸಿನಿಮಾದ ಎರಡು ಹಾಡುಗಳು ಈಗಾಗಲೇ ಬಿಡುಗಡೆ ಆಗಿದ್ದು, ಇದೀಗ ಮೂರನೇ ಹಾಡು ಬಿಡುಗಡೆ ಆಗಿದೆ. ಹಾಡು ಬಿಡುಗಡೆ ಕಾರ್ಯಕ್ರಮವನ್ನು ಚಿತ್ರತಂಡ ಇತ್ತೀಚೆಗಷ್ಟೆ ಆಯೋಜನೆ ಮಾಡಿತ್ತು.

ವಿನಯ್ ರಾಜ್ಕುಮಾರ್ (Vinay Rajkumar), ಅದಿತಿ ಪ್ರಭುದೇವ ನಟನೆಯ ‘ಅಂದೊಂದಿತ್ತು ಕಾಲ’ ಸಿನಿಮಾ ತಮ್ಮ ಹೆಸರಿನಿಂದಲೇ ಕುತೂಹಲ ಮೂಡಿಸಿದೆ. ಸಿನಿಮಾ ಬಿಡುಗಡೆ ದಿನಾಂಕ ಹತ್ತಿರವಾಗುತ್ತಿದ್ದಂತೆ ಸಿನಿಮಾದ ಪ್ರಚಾರ ಕಾರ್ಯ ಜೋರು ಪಡೆದುಕೊಂಡಿದೆ. ಇದೀಗ ಚಿತ್ರತಂಡ ‘ಗೌರಿ ಗಣೇಶ’ ಹಬ್ಬದ ಸಂಭ್ರಮದಲ್ಲಿ ಹಬ್ಬ ಆಚರಣೆ ಮಾಡಿ ಅದರ ಜೊತೆಗೆ ಸಿನಿಮಾದ ಸುಂದರ ಹಾಡೊಂದನ್ನು ಬಿಡುಗಡೆ ಮಾಡಿದೆ.
“ಅಂದೊಂದಿತ್ತು ಕಾಲ” ಚಿತ್ರದ ‘ ಮಹಾರಾಜ ಹಾಗೆಂದು.. ಮನಸಾರೆ ಹಾರೈಸಿದೆ ನೀನಮ್ಮ’… ಎಂಬ ತಾಯಿ ಮಗನ ಬಾಂಧವ್ಯದ ಮನಮುಟ್ಟುವ ಹಾಡು ಇದೀಗ ಬಿಡುಗಡೆಗೊಂಡಿದೆ. ‘ಕೆಜಿಎಫ್’ ಖ್ಯಾತಿಯ ಕಿನ್ನಾಲ್ ರಾಜ್ ಸಾಹಿತ್ಯ ಬರೆದಿರುವ ಈ ಹಾಡನ್ನು ಸುನಿಲ್ ಕಶ್ಯಪ್ ಹಾಡಿದ್ದಾರೆ. ಈಗಾಗಲೇ ಸಿನಿಮಾದ ಎರಡು ಹಾಡು ಬಿಡುಗಡೆ ಆಗಿದ್ದು ಎರಡೂ ಹಾಡುಗಳು ಗಮನ ಸೆಳೆದಿವೆ. ಇದೀಗ ಮೂರನೇ ಹಾಡು ಬಿಡುಗಡೆ ಆಗಿದೆ.
ಹಾಡು ಬಿಡುಗಡೆ ಕಾರ್ಯಕ್ರಮದಲ್ಲಿ ಮಾತನಾಡಿದ ನಟ ವಿನಯ್ ರಾಜಕುಮಾರ್, ‘ನನ್ನ ಈ ಹಿಂದಿನ ಸಿನಿಮಾಗಳಿಗಿಂತ ಈ ಸಿನಿಮಾ ಬಹಳ ವಿಶೇಷವಾದ ಸಿನಿಮಾ. ಈಗ ಬಿಡುಗಡೆ ಆಗಿರುವ ಅಮ್ಮ ಮಗನ ಸೆಂಟಿಮೆಂಟ್ ಹಾಡು ನನಗೆ ವೈಯಕ್ತಿಕವಾಗಿ ಇಷ್ಟ. ಸಿನಿಮಾದ ಕತೆ ನಿರ್ದೇಶಕನೊಬ್ಬನ ಜೀವನ ಪಯಣದ ಕತೆ. ನಿರ್ದೇಶಕ ಕೀರ್ತಿ ತಮ್ಮ ಲೈಫ್ ನಲ್ಲಿ ನಡೆದ ಘಟನೆಗಳನ್ನು ಇಟ್ಟುಕೊಂಡು ಸಿನಿಮಾ ಮಾಡಿದ್ದಾರೆ. ಭಿನ್ನ ಶೇಡ್ಗಳಲ್ಲಿ ನನ್ನ ಪಾತ್ರ ಇದೆ. ಮೂರು ವರ್ಷ ಕಷ್ಟಪಟ್ಟು ಮಾಡಿರುವ ಸಿನಿಮಾ ಇದು. ನನ್ನ ಅಮ್ಮನಾಗಿ ಅರುಣಾ ಬಾಲರಾಜ್ ಕಾಣಿಸಿಕೊಂಡಿದ್ದಾರೆ. ಮೂರನೇ ಸಿನಿಮಾನಲ್ಲಿ ಅವರು ನನ್ನ ತಾಯಿಯಾಗಿ ನಟಿಸಿದ್ದಾರೆ, ಇದೊಂದು ಫಿಲ್ ಗುಡ್ ಚಿತ್ರವಾಗಿದ್ದು , ಎಲ್ಲಾ ವರ್ಗದವರಿಗೂ ಇಷ್ಟವಾಗುವಂತ ಕಥೆ ಒಳಗೊಂಡಿದೆ’ ಎಂದರು.
ಇದನ್ನೂ ಓದಿ:ಅಪ್ಪು ಹೋದಮೇಲೆ ಏರಿಯಾನಲ್ಲಿ ಗಣೇಶ ಇಡುತ್ತಿಲ್ಲ: ವಿನಯ್ ರಾಜ್ಕುಮಾರ್
ನಟಿ ಅದಿತಿ ಪ್ರಭುದೇವ್ ಮಾತನಾಡಿ, ‘ಇಂದು ಬಿಡುಗಡೆಯಾಗಿರುವ ಅಮ್ಮ ಮಗನ ಈ ಹಾಡು ಬಹಳ ಅರ್ಥಗರ್ಭಿತವಾದ ಸಾಹಿತ್ಯ ಹೊಂದಿದೆ. ಈ ಹಿಂದೆ ಬಿಡುಗಡೆ ಆದ ಹಾಡುಗಳಿಗೆ ನೀಡಿದ ಪ್ರೀತಿ ಈ ಹಾಡಿಗೂ ನೀಡಿ. ನೈಜ ಜೀವನಕ್ಕೆ ಹತ್ತಿರವಾದ ಪಾತ್ರಗಳು ಈ ಸಿನಿಮಾನಲ್ಲಿ ಇವೆ. ಪ್ರತಿಯೊಬ್ಬ ಪ್ರೇಕ್ಷಕನಿಗೂ ಇಷ್ಟವಾಗುವ ಸಿನಿಮಾ ಇದಾಗಿದೆ. ಇದೆ 29ರಂದು ಗೌರಿ ಗಣೇಶ ಹಬ್ಬದ ಸಂಭ್ರಮದ ಸಮಯದಲ್ಲಿ ನಮ್ಮ ಚಿತ್ರ ಬರುತ್ತಿದೆ. ಎಲ್ಲರೂ ನಮ್ಮ ಚಿತ್ತವನ್ನು ನೋಡಿ ಹರಸಿ ಎಂದರು.
ನಿರ್ದೇಶಕ ಕೀರ್ತಿ ಕೃಷ್ಣಪ್ಪ ಮಾತನಾಡಿ, ಸಿನಿಮಾನಲ್ಲಿ ಲವ್ , ಫ್ರೆಂಡ್ಶಿಪ್ , ಸೆಂಟಿಮೆಂಟ್ ಎಲ್ಲವೂ ಇದೆ. ಇದು ನಂಗೆ ಬಹಳ ವಿಶೇಷವಾದ ಸಿನಿಮಾ , ಅಂದುಕೊಂಡಂತೆ ಸಿನಿಮಾ ಮಾಡಿದ್ದೇನೆ. ನಿರ್ಮಾಪಕರು ನನಗೆ ಬಹಳ ಸಹಕಾರ ನೀಡಿದ್ದಾರೆ. ಅದೇ ರೀತಿ ಕಲಾವಿದರು ಹಾಗೂ ತಂತ್ರಜ್ಞರ ಸಹಕಾರ ತುಂಬಾ ಸಿಕ್ಕಿದೆ. ತೀರ್ಥಹಳ್ಳಿ , ಬೆಂಗಳೂರು ಸುತ್ತ ಮುತ್ತ ಶೂಟಿಂಗ್ ಮಾಡಲಾಗಿದೆ. ಇದೇ 29ರಂದು ನಮ್ಮ ಚಿತ್ರ ಬಿಡುಗಡೆಯಾಗುತ್ತಿದೆ’ ಎಂದರು.
‘ಅಂದೊಂದಿತ್ತು ಕಾಲ’ ಸಿನಿಮಾ ಇದೆ 29ರಂದು ಸುಮಾರು 180ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ಬಿಡುಗಡೆ ಆಗಲಿದೆ. ಜಗದೀಶ್ ಫಿಲ್ಮ್ಸ್ ಮೂಲಕ ನಮ್ಮ ಚಿತ್ರವನ್ನು ಅದ್ದೂರಿಯಾಗಿ ಬಿಡುಗಡೆ ಮಾಡುತ್ತಿದ್ದೇವೆ ಎಂದರು ನಿರ್ಮಾಪಕ ಭುವನ್ ಸುರೇಶ್.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ




