ನಟ ಪುನೀತ್ ರಾಜ್ಕುಮಾರ್ ನಿಧನದಿಂದ ಇಡೀ ಕರುನಾಡು ಶೋಕಸಾಗರದಲ್ಲಿ ಮುಳುಗಿದೆ. ಅಪ್ಪು ಎಂದರೆ ಎಲ್ಲರಿಗೂ ಅಚ್ಚುಮೆಚ್ಚು. ಅವರ ಕುಟುಂಬದವರಿಗಂತೂ ಪುನೀತ್ ಮೇಲಿದ್ದ ಪ್ರೀತಿ, ಅಭಿಮಾನಕ್ಕೆ ಸಾಟಿಯೇ ಇಲ್ಲ. ಅದರಲ್ಲೂ ಸಹೋದರ ಶಿವರಾಜ್ಕುಮಾರ್ ಅವರು ಅಪ್ಪು ಬಗ್ಗೆ ತುಂಬ ಹೆಮ್ಮೆ ಪಡುತ್ತಿದ್ದರು. ಅದನ್ನು ಅವರು ಅನೇಕ ಸಂದರ್ಭಗಳಲ್ಲಿ ಹೇಳಿಕೊಂಡಿದ್ದರು. ಇತ್ತೀಚೆಗಷ್ಟೇ ‘ಸಲಗ’ ಸಿನಿಮಾದ ಪ್ರೀ-ರಿಲೀಸ್ ಕಾರ್ಯಕ್ರಮದಲ್ಲಿ ಪುನೀತ್ ಮತ್ತು ಶಿವಣ್ಣ ವೇದಿಕೆ ಹಂಚಿಕೊಂಡಿದ್ದರು. ಆಗ ತಮ್ಮನ ಬಗ್ಗೆ ಶಿವರಾಜ್ಕುಮಾರ್ ಅವರು ಪ್ರೀತಿಭರಿತ ಮಾತುಗಳನ್ನು ಆಡಿದ್ದರು.
‘ಅಪ್ಪು ಬಗ್ಗೆ ಶಿವಣ್ಣ ಪದೇಪದೇ ಹೊಗಳುತ್ತಿರುತ್ತಾರೆ ಅಂತ ನೀವು ಅಂದುಕೊಳ್ಳಬಹುದು. ಆದರೆ ನಾನು ಅಣ್ಣನಾಗಿ ಅವನ ಬಗ್ಗೆ ಮಾತನಾಡುವುದಿಲ್ಲ. ಒಬ್ಬ ಅಭಿಮಾನಿಯಾಗಿ ನಾನು ಅವನನ್ನು ಯಾವಾಗಲೂ ಹೊಗಳುತ್ತೇನೆ. ಮೂರು ವರ್ಷದ ಹುಡುಗನನ್ನು ಕ್ಯಾಮೆರಾ ಮುಂದೆ ತಂದು ನಿಲ್ಲಿಸಿ, ಹಾಡು ಎಂದರೆ ಅಷ್ಟು ಸುಲಭವಲ್ಲ. ‘ಬಾನ ದಾರಿಯಲ್ಲಿ ಸೂರ್ಯ ಜಾರಿ ಹೋದ..’ ಹಾಡನ್ನು ಕೇಳಿ ನಾವೆಲ್ಲ ಖುಷಿಪಟ್ಟಿದ್ದೆವು. ಇಂಥ ಒಬ್ಬ ತಮ್ಮ ನಮಗೆ ಇದ್ದಾನಲ್ಲ ಅಂತ ನಾವು ಖುಷಿಯಿಂದ ಭಾವುಕವಾಗಿ ಕಣ್ಣೀರು ಹಾಕಿದ್ದೆವು’ ಎಂದು ಶಿವಣ್ಣ ಹೇಳಿದ್ದರು.
‘ಅಪ್ಪು ಜೊತೆ ನನಗೆ ಎಮೋಷನಲ್ ಸಂಬಂಧ. ಅವನು ರಾಯಲ್ ಆಗಿ ಹುಟ್ಟಿದ. ರಾಯಲ್ ಆಗಿ ಬೆಳೆದ. ರಾಯಲ್ ಆಗಿಯೇ ಇರುತ್ತಾನೆ. ತುಂಬ ಪ್ರತಿಭಾವಂತ ಅವನು. ಅಂಥ ಒಬ್ಬ ತಮ್ಮನನ್ನು ಪಡೆದಿರುವುದಕ್ಕೆ ಹೆಮ್ಮೆ ಎನಿಸುತ್ತದೆ’ ಎಂದು ಶಿವರಾಜ್ಕುಮಾರ್ ಹೇಳಿದ್ದರು. ‘ಅಪ್ಪು ರಾಯಲ್ ಆಗಿಯೇ ಇರುತ್ತಾನೆ’ ಎಂದು ಅವರು ಹೇಳಿದ ಮಾತು ನಿಜವಾಗಲೇ ಇಲ್ಲ. ಶಿವಣ್ಣ ಹೇಳಿದ ಆ ಮಾತು ವಿಧಿಯ ಶಾಪದಿಂದ ಸುಳ್ಳಾಯಿತು.
ಶಿವರಾಜ್ಕುಮಾರ್ ನಟನೆಯ ಚಿತ್ರಕ್ಕೆ ನಿರ್ದೇಶನ ಮಾಡಬೇಕು ಎಂದು ಪುನೀತ್ ಆಸೆ ತೋಡಿಕೊಂಡಿದ್ದರು. ಆ ಆಸೆ ಕೂಡ ನೆರವೇರಲೇ ಇಲ್ಲ. ಪುನೀತ್ ನಿಧನದಿಂದ ಅಭಿಮಾನಿಗಳ ಪಾಲಿಗೆ ಈ ದಿನ ಕರಾಳ ಶುಕ್ರವಾರವಾಗಿ ಮಾರ್ಪಟ್ಟಿದೆ.
ಬೆಂಗಳೂರಿನ ಕಂಠೀರವ ಸ್ಟೇಡಿಯಂನಲ್ಲಿ ಪುನೀತ್ ರಾಜ್ಕುಮಾರ್ ಅವರ ಅಂತಿಮ ದರ್ಶನಕ್ಕೆ ಅವಕಾಶ ಮಾಡಿಕೊಡಲಾಗಿದೆ. ಅಪಾರ ಸಂಖ್ಯೆಯ ಅಭಿಮಾನಿಗಳು, ಸ್ನೇಹಿತರು, ಸೆಲೆಬ್ರಿಟಿಗಳು, ಆಪ್ತರು ಆಗಮಿಸಿ ಪುನೀತ್ಗೆ ಅಂತಿಮ ನಮನ ಸಲ್ಲಿಸುತ್ತಿದ್ದಾರೆ. ಭಾನುವಾರ (ಅ.31) ಅಂತ್ಯ ಸಂಸ್ಕಾರ ನಡೆಯಲಿದೆ. ಭಾರತೀಯ ಚಿತ್ರರಂಗದ ಅನೇಕರು ಅಪ್ಪು ಅಗಲಿಕೆಗೆ ಕಂಬನಿ ಮಿಡಿಯುತ್ತಿದ್ದಾರೆ.
ಇದನ್ನೂ ಓದಿ:
Puneeth Rajkumar: ಶಿವಣ್ಣನ ಎದುರು ಪುನೀತ್ ಹೇಳಿಕೊಂಡಿದ್ದ ಆಸೆ ಈಡೇರಲೇ ಇಲ್ಲ; ಅಭಿಮಾನಿಗಳ ಹೃದಯ ನುಚ್ಚುನೂರು
Puneeth Rajkumar Obituary: ಹೃದಯ ಬಡಿತ ನಿಲ್ಲಿಸುವುದಕ್ಕೂ ಮುನ್ನ ಕೋಟ್ಯಂತರ ಜನರ ಹೃದಯ ಗೆದ್ದಿದ್ದ ಪುನೀತ್