16 Years of Jogi: ದಾಖಲೆ ಮೇಲೆ ದಾಖಲೆ ಬರೆದ ‘ಜೋಗಿ’ ಜಾತ್ರೆಗೆ 16 ವರ್ಷಗಳ ಸಂಭ್ರಮ

| Updated By: ಮದನ್​ ಕುಮಾರ್​

Updated on: Aug 19, 2021 | 5:31 PM

ಶಿವರಾಜ್​ಕುಮಾರ್​ ಅವರ ವೃತ್ತಿಜೀವನದ ಅತಿ ಮುಖ್ಯ​ ಸಿನಿಮಾಗಳಲ್ಲಿ ‘ಜೋಗಿ’ ಚಿತ್ರಕ್ಕೆ ಪ್ರಮುಖ ಸ್ಥಾನವಿದೆ. ಈ ಸಿನಿಮಾ ನೋಡಿ ಡಾ. ರಾಜ್​ಕುಮಾರ್,​ ರಜನಿಕಾಂತ್​ ಮುಂತಾದ ದಿಗ್ಗಜರು ಮೆಚ್ಚಿಕೊಂಡಿದ್ದರು.

16 Years of Jogi: ದಾಖಲೆ ಮೇಲೆ ದಾಖಲೆ ಬರೆದ ‘ಜೋಗಿ’ ಜಾತ್ರೆಗೆ 16 ವರ್ಷಗಳ ಸಂಭ್ರಮ
16 Years of Jogi: ದಾಖಲೆ ಮೇಲೆ ದಾಖಲೆ ಬರೆದ ‘ಜೋಗಿ’ ಜಾತ್ರೆಗೆ 16 ವರ್ಷಗಳ ಸಂಭ್ರಮ
Follow us on

ಅದು 2005ರ ಆಗಸ್ಟ್​ ತಿಂಗಳು. ಇಡೀ ಕರ್ನಾಟಕವೇ ‘ಜೋಗಿ’ (Jogi) ಸಿನಿಮಾಗಾಗಿ ಕಾಯುತ್ತಿತ್ತು. ಅದಾಗಲೇ ಬಿಡುಗಡೆ ಆಗಿದ್ದ ಹಾಡುಗಳು ಧೂಳೆಬ್ಬಿಸಿದ್ದವು. ಶಿವರಾಜ್​ಕುಮಾರ್​ (Shivarajkumar) ಅವರ ವಿಭಿನ್ನ ಗೆಟಪ್​ಗಳು ಪೋಸ್ಟರ್​ಗಳಲ್ಲಿ ರಾರಾಜಿಸಿದ್ದವು. ಕರಿಯ, ಎಕ್ಸ್​ಕ್ಯೂಸ್​ಮೀ ಸಿನಿಮಾಗಳನ್ನು ನಿರ್ದೇಶಿಸಿದ್ದ ಪ್ರೇಮ್​ (Prem) ಅವರ ಚಿತ್ರ ಎಂಬ ಕಾರಣಕ್ಕೂ ‘ಜೋಗಿ’ ಸಿನಿಮಾ ಮೇಲೆ ಸಿಕ್ಕಾಪಟ್ಟೆ ನಿರೀಕ್ಷೆ ಮೂಡಿತ್ತು. ಆ.19ರಂದು ಅದ್ದೂರಿಯಾಗಿ ಚಿತ್ರ ತೆರೆಕಂಡಿತು. ಅಭಿಮಾನಿಗಳ ನಿರೀಕ್ಷೆ ಮಟ್ಟವನ್ನೂ ಮೀರಿ ಆ ಚಿತ್ರ ಯಶಸ್ಸು ಕಂಡಿತು. ಕಲೆಕ್ಷನ್​ ವಿಚಾರದಲ್ಲಿ ದಾಖಲೆ ಬರೆಯಿತು. ಆಗ ಜನರ ಕ್ರೇಜ್​ ಯಾವ ಮಟ್ಟಿಗೆ ಇತ್ತು ಎಂದರೆ, ಅದನ್ನು ‘ಜೋಗಿ ಜಾತ್ರೆ’ ಎಂದೇ ಕರೆಯಲಾಗುತ್ತಿತ್ತು. ಅಂಥ ಅಭೂತಪೂರ್ವ ಯಶಸ್ಸು ಕಂಡ ಸಿನಿಮಾ ಬಿಡುಗಡೆಯಾಗಿ ಇಂದಿಗೆ 16 ವರ್ಷ ಪೂರೈಸಿದೆ.

ಕನ್ನಡ ಚಿತ್ರರಂಗದ ಗಲ್ಲಾಪೆಟ್ಟಿಗೆ ಇತಿಹಾಸದಲ್ಲೇ ಜೋಗಿ ಸಿನಿಮಾ ಹೊಸ ದಾಖಲೆ ಬರೆಯಿತು. ಮೂಲಗಳ ಪ್ರಕಾರ, ಆ ಕಾಲಕ್ಕೆ ಆದ ಕಲೆಕ್ಷನ್​ ಬರೋಬ್ಬರಿ 25ರಿಂದ 30 ಕೋಟಿ ರೂ.! ಹಲವು ಚಿತ್ರಮಂದಿರಗಳಲ್ಲಿ ನೂರು ದಿನಗಳ ಕಾಲ ಯಶಸ್ವಿ ಪ್ರದರ್ಶನ ಕಂಡಿತು. ಮೊದಲ ಸಿನಿಮಾದಲ್ಲಿಯೇ ನಟಿ ಜೆನಿಫರ್​ ಕೊತ್ವಾಲ್​ ಮನೆಮಾತಾಗಿಬಿಟ್ಟರು. ನಿರ್ದೇಶಕ ಪ್ರೇಮ್​ ಸಿನಿಬದುಕಿಗೆ ಈ ಚಿತ್ರ ಭದ್ರ ಬುನಾದಿ ಹಾಕಿಕೊಟ್ಟಿತು.

ಈ ಚಿತ್ರದ ಯಶಸ್ಸಿನಲ್ಲಿ ಹಾಡುಗಳ ಕೊಡುಗೆ ದೊಡ್ಡದಿದೆ. ಗುರುಕಿರಣ್​ ಸಂಗೀತ ಸಂಯೋಜಿಸಿದ್ದ ಎಲ್ಲ ಗೀತೆಗಳು ಧೂಳೆಬ್ಬಿಸಿದವು. ಆ ಮೂಲಕ ಮ್ಯೂಸಿಕಲ್​ ಹಿಟ್​ ಎಂಬ ಕೀರ್ತಿಗೆ ‘ಜೋಗಿ’ ಸಿನಿಮಾ ಪಾತ್ರವಾಯಿತು. ‘ಬೇಡುವೆನು ವರವನ್ನು..’, ‘ಏಳು ಮಲೆ ಮೇಲೇರಿ..’, ‘ಹೊಡಿ ಮಗಾ ಹೊಡಿ ಮಗಾ…’ ಸೇರಿದಂತೆ ಇಡೀ ಆಲ್ಬಂ ಅದ್ಭುತ ಯಶಸ್ಸು ಪಡೆದುಕೊಂಡಿತು. ಇಂದಿಗೂ ಈ ಸಿನಿಮಾದ ಹಾಡುಗಳು ಕೇಳುಗರ ಫೇವರಿಟ್​​ ಪಟ್ಟಿಯಲ್ಲಿವೆ.

ಶಿವರಾಜ್​ಕುಮಾರ್​ ಅವರ ವೃತ್ತಿಜೀವನದ ಅತಿ ಮುಖ್ಯ​ ಸಿನಿಮಾಗಳಲ್ಲಿ ‘ಜೋಗಿ’ ಚಿತ್ರಕ್ಕೆ ಪ್ರಮುಖ ಸ್ಥಾನವಿದೆ. ಈ ಚಿತ್ರದಲ್ಲಿ ಅರುಂಧತಿ ನಾಗ್​ ನಟನೆಯನ್ನು ಎಂದಿಗೂ ಮರೆಯುವಂತಿಲ್ಲ. ಮಗನನ್ನು ಕಳೆದುಕೊಂಡು ಬೆಂಗಳೂರು ನಗರದಲ್ಲಿ ಅಲೆಯುವ ಅಮ್ಮನ ಪಾತ್ರದಲ್ಲಿ ಅವರು ವೀಕ್ಷಕರ ಕಣ್ಣುಗಳು ತೇವ ಆಗುವಂತೆ ನಟಿಸಿದ್ದರು. ಈ ಸಿನಿಮಾ ನೋಡಿ ಸ್ವತಃ ಡಾ. ರಾಜ್​ಕುಮಾರ್​ ಮೆಚ್ಚಿಕೊಂಡಿದ್ದರು. ಸೂಪರ್​ ಸ್ಟಾರ್​ ರಜನಿಕಾಂತ್​ ಅವರಿಗೂ ಈ ಚಿತ್ರ ಸಖತ್​ ಇಷ್ಟವಾಗಿತ್ತು. ಕೆಲವು ವರ್ಷಗಳ ಬಳಿಕ ಕಿರುತೆರೆಯಲ್ಲಿ ಮೊದಲ ಬಾರಿಗೆ ಪ್ರಸಾರವಾದಾಗಲೂ ‘ಜೋಗಿ’ ಸಖತ್​ ಸೌಂಡು ಮಾಡಿತ್ತು.

ಇಂದಿಗೆ (ಆ.19) ‘ಜೋಗಿ’ ತೆರೆಕಂಡು ಬರೋಬ್ಬರಿ 16 ವರ್ಷ ಕಳೆದಿದೆ. ಸೋಶಿಯಲ್​ ಮೀಡಿಯಾದಲ್ಲಿ ಸಿನಿಪ್ರಿಯರು ಈ ಚಿತ್ರದ ಕುರಿತ ತಮ್ಮ ನೆನಪುಗಳನ್ನು ಶೇರ್​ ಮಾಡಿಕೊಂಡು ಸಂಭ್ರಮಿಸುತ್ತಿದ್ದಾರೆ. ಇಂಥ ಸೂಪರ್​ಹಿಟ್​ ಚಿತ್ರ ನೀಡಿದ ಪ್ರೇಮ್​ ಹಾಗೂ ಶಿವರಾಜ್​ಕುಮಾರ್​ಗೆ ಫ್ಯಾನ್ಸ್​ ಜೈಕಾರ ಹಾಕುತ್ತಿದ್ದಾರೆ.

ಇದನ್ನೂ ಓದಿ:

Nee Sigovaregu: ಶಿವಣ್ಣನ ಹೊಸ ಚಿತ್ರ ‘ನೀ ಸಿಗೋವರೆಗೂ’ ಮುಹೂರ್ತ ಸಂಭ್ರಮ ಹೇಗಿತ್ತು? ಇಲ್ಲಿದೆ ವಿಡಿಯೋ

ಶಿವರಾಜ್​ಕುಮಾರ್​ 124ನೇ ಚಿತ್ರಕ್ಕೆ ಅಪ್ಪಟ ಕನ್ನಡ ಶೀರ್ಷಿಕೆ ‘ನೀ ಸಿಗೋವರೆಗೂ’; ಮುಹೂರ್ತಕ್ಕೆ ಕಿಚ್ಚ ಅತಿಥಿ